ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದು ಅಲ್ಲ, ವೀರಶೈವ ಲಿಂಗಾಯತರು. ಅವರು ವೀರಶೈವ ಲಿಂಗಾಯತರೇ ಆಗಿದ್ದರೆ ಹಿಂದು (Hindu) ಆಗಲು ಸಾಧ್ಯವಿಲ್ಲ. ಆದರೆ, ತಾವು ಹಿಂದು ಅಲ್ಲ ಎಂದು ಹೇಳಿಕೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಚಾರ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ವಿವಾದಾತ್ಮಕ ಹೇಳಿಕೆ ನೀಡಿದರು.
ವೀರಶೈವ-ಲಿಂಗಾಯತ ಮಹಾಸಭಾ ಸಮಾವೇಶದ ಪೂರ್ವ ತಯಾರಿ ಕುರಿತು ನಡೆಸಿದ ಸುದ್ದಿಗೊಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಟರಾಜ್, ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮವನ್ನು ಕೇಳುತ್ತೇವೆ. ಇನ್ನು ತಾವು ಹಿಂದು ಹೌದೋ ಅಲ್ಲವೋ ಎಂದು ಹೇಳಿಕೊಳ್ಳುವುದು ಬಿಡುವುದು ಯಡಿಯೂರಪ್ಪ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ನಮ್ಮಲ್ಲಿ 106 ಉಪ ಪಂಗಡಗಳಿವೆ. ಅವರೆಲ್ಲರೂ ವೀರಶೈವ ಲಿಂಗಾಯತರಾಗಿದ್ದಾರೆ. ಯಾರು ಲಿಂಗಧಾರಣೆ ಮಾಡುತ್ತಾರೋ ಅವರೆಲ್ಲರೂ ಲಿಂಗಾಯತರೇ ಆಗಿದ್ದಾರೆ. ನಮ್ಮ ಬೈಲಾವನ್ನೆಲ್ಲ ಒಪ್ಪಿಕೊಂಡು ಬರುವವರಿಗೆ ಸ್ವಾಗತ. ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ. ಹಿಂದು ಧರ್ಮಕ್ಕೂ, ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸ ಇದೆ. ನಮ್ಮದೇ ಪ್ರತ್ಯೇಕ ಧರ್ಮವಾಗಿದೆ. ಹೇಗೆ ಬೌದ್ಧ ಧರ್ಮ, ಸಿಖ್ ಧರ್ಮ ಅಂತ ಪ್ರತ್ಯೇಕ ಮಾಡಿದ್ದೀರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಬೇಕು. ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Swabhimani hindu | ಸತೀಶ್ ಜಾರಕಿಹೊಳಿಯದ್ದು ವಾಮಾಚಾರ ಫ್ಯಾಮಿಲಿ, ಇದೆಲ್ಲ ಅರ್ಥ ಆಗಲ್ಲ ಎಂದ ಜಗ್ಗೇಶ್
ನಮ್ಮಲ್ಲೂ ಆಚರಣೆಗಳು ವಿಭಿನ್ನವಾಗಿವೆ. ಕೆಲವರಿಗೆ ವಿಭೂತಿ ಧಾರಣೆ ಇಷ್ಟ ಇಲ್ಲದೇ ಇರಬಹುದು. ಇನ್ನು ಕೆಲವರಿಗೆ ರುದ್ರಾಕ್ಷಿ ಧಾರಣೆ ಇಷ್ಟ ಇಲ್ಲದಿರಬಹುದು. ಆದರೆ, ಈ ಎಲ್ಲರನ್ನೊಳಗೊಂಡು ವೀರಶೈವ ಲಿಂಗಾಯತ ಧರ್ಮವಿದೆ. ನಾವು ಸಹ ಹಿಂದು ಧರ್ಮದ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ನಮ್ಮ ಆಚರಣೆ , ಶಾಸ್ತ್ರ, ಸಂಸ್ಕೃತಿ ಬೇರೆ ಎಂದು ನಟರಾಜ್ ಹೇಳಿದರು.
ಪ್ರತ್ಯೇಕ ಧರ್ಮ ಕೇಳುತ್ತೇವೆ, ಆದರೆ ಈಗಲ್ಲ
ನಾವು ಹಿಂದುಗಳಲ್ಲ, ನಮಗೆ ಪ್ರತ್ಯೇಕ ಧರ್ಮ ಕೊಡಿ ಅಂತ ಕೇಳುತ್ತೇವೆ. ಸದ್ಯ ಸಮಾವೇಶದಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ನಟರಾಜ್ ತಿಳಿಸಿದರು.
ಇದನ್ನೂ ಓದಿ | Swabhimani hindu | ರಾಹುಲ್ ಮೌನ ಯಾಕೆ, ಸಿದ್ದು ನುಣುಚಿಕೊಳ್ಳೋದ್ಯಾಕೆ, ಮಾತಾಡ್ಲಿ: ಸವಾಲು ಹಾಕಿದ ಸಿಎಂ