ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆಯಂದು ಸ್ವರ್ಣಗೌರೀ ವ್ರತ (Gowri Habba) ಹಾಗೂ ಚತುರ್ಥಿಯಂದು ಗಣೇಶ ಹಬ್ಬ (ಶ್ರೀ ವಿನಾಯಕ ಚತುರ್ಥಿ ವ್ರತ) (Ganesh Chaturthi 2022) ಆಚರಿಸಲಾಗುತ್ತದೆ.
ಇದೇ ತಿಂಗಳ ಅಂದರೆ ಅಗಸ್ಟ್ 28 ರಿಂದ ಭಾದ್ರಪದಮಾಸ ಆರಂಭವಾಗಲಿದ್ದು, ಆಗಸ್ಟ್ 30 ಮಂಗಳವಾರದಂದು ತದಿಗೆ ತಿಥಿ ಇದೆ. ಅಂದು ಸ್ವರ್ಣಗೌರೀ ವ್ರತಾಚರಣೆ ನಡೆಯಲಿದೆ. ಆಗಸ್ಟ್ 31ರ ಬುಧವಾರದಂದು ಚತುರ್ಥಿ ತಿಥಿ ಇದ್ದು, ಅಂದು ಶ್ರೀ ವಿನಾಯಕ ಚತುರ್ಥಿ ವ್ರತಾಚರಣೆ ಮಾಡಲಾಗುತ್ತದೆ.
ಭಾದ್ರಪದ ಮಾಸದ ಶುಕ್ಲಪಕ್ಷ ತದಿಗೆಯಂದು ಗೌರಿಯು ಕೈಲಾಸದಿಂದ ಭೂಮಿಗೆ ಇಳಿದು ಬರುತ್ತಾಳೆ. ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮನಗೊಂದಿಗೆ ಕಳುಹಿಸಿಕೊಡುವುದೇ ಗೌರಿ ಹಬ್ಬದ ವೈಶಿಷ್ಟ್ಯ. ತದಿಗೆ ತಿಥಿಯು ಈ ಬಾರಿ 29 ಆಗಸ್ಟ್ 2022 ರಂದು ಮಧ್ಯಾಹ್ನ 03:20 ಕ್ಕೆ ಪ್ರಾರಂಭವಾಗುತ್ತದೆ. ಮತ್ತು ಇದು 30 ಆಗಸ್ಟ್ 2022ರಂದು ಮಧ್ಯಾಹ್ನ 03:32 ಕ್ಕೆ ಕೊನೆಗೊಳ್ಳುತ್ತದೆ.
ಗೌರಿ ಪೂಜೆಗೆ ಮುಹೂರ್ತ: ಬೆಳಿಗ್ಗೆ ಗೌರಿ ಪೂಜೆ ಮುಹೂರ್ತವು 5:22ಕ್ಕೆ ಪ್ರಾರಂಭವಾಗಿ 7:52 ರವರೆಗೆ ಇರುತ್ತದೆ. ಪೂಜೆಯ ಅವಧಿ 2 ಗಂಟೆ 29 ನಿಮಿಷಗಳು.
ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯ ದಿನ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಲಾಗುತ್ತದೆ. ಇದನ್ನೇ ವ್ರತಾಚರಣೆ ಎಂದೂ ಕರೆಯುತ್ತಾರೆ.
ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಂದ(ಚತುರ್ಥಿ) ಗಣೇಶ ಪ್ರತಿಷ್ಠಾಪನೆ ನಡೆದರೆ, ಅನಂತ ಚತುರ್ದಶಿಯಂದು ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ.
ಗಣೇಶನ ಪೂಜೆಗೆ ಮುಹೂರ್ತ: ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯು ಆಗಸ್ಟ್ 30 ರ ಮಧ್ಯಾಹ್ನದಿಂದ ಪ್ರಾರಂಭವಾಗಿ ಆಗಸ್ಟ್ 31 ರಂದು ಮಧ್ಯಾಹ್ನ 03:23 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಗಸ್ಟ್ 31ರ ಮಧ್ಯಾಹ್ನ ಸುಮಾರು 3.30 ರವರೆಗೂ ಶುಭ ಮುಹೂರ್ತವಿರುತ್ತದೆ.
ಮಂಗಳಕರ ಯೋಗ: ಈ ವರ್ಷ ಗಣೇಶ ಚತುರ್ಥಿ ಉತ್ಸವವು 31 ಆಗಸ್ಟ್ 2022 ರಿಂದ ಪ್ರಾರಂಭವಾಗುತ್ತಿದೆ, ಅದೇ ಸಮಯದಲ್ಲಿ, ಗಣಪತಿಯ ಆಗಮನವು ಅತ್ಯಂತ ಮಂಗಳಕರ ಯೋಗವಾಗಿದೆ ಎಂದು ಖ್ಯಾತ ಜ್ಯೋತಿಷಿ ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ ತಿಳಿಸಿದ್ದಾರೆ.
ಹಬ್ಬದ ಸಂಭ್ರಮಕ್ಕೆ ಈ ವಿಷಯಗಳನ್ನು ಗಮನಿಸಿ;
- ಗೌರಿ ಹಾಗೂ ಗಣೇಶನ ವಿಗ್ರಹವನ್ನು ಮನೆಗೆ ತರುವ ಮೊದಲೇ ಮನೆಯನ್ನು ಸ್ವಚ್ಛಗೊಳಿಸಿ, ಶುದ್ಧಗೊಳಿಸಿ.
- ಮಣ್ಣಿನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಹೀಗಾಗಿ ಮೊದಲೇ ಬುಕ್ ಮಾಡಿಕೊಳ್ಳಿ. ವಿಗ್ರಹಗಳು ಊನಗೊಂಡಿರಬಾರದು, ಇದನ್ನು ಪರಿಶೀಲಿಸಿಯೇ ವಿಗ್ರಹವನ್ನು ಮನೆಗೆ ತನ್ನಿ.
- ಹಬ್ಬವು ವಾರದ ದಿನಗಳಲ್ಲಿ ಬರುತ್ತಿರುವುದರಿಂದ ಉದ್ಯೋಗದಲ್ಲಿರುವವರಿಗೆ ಒಂದೇ ವಾರಾಂತ್ಯದ ರಜೆ ದೊರೆಯಲಿದೆ. ಹೀಗಾಗಿ ಹಬ್ಬದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸುವುದು ಒಳ್ಳೆಯದು.
- ಕೋವಿಡ್-೧೯ ಮತ್ತು ಇನ್ನಿತರ ಸಾಂಕ್ರಾಮಿಕ ಕಾಯಿಲೆಗಳು ಹೆಚ್ಚಾಗಿವೆ. ಹೀಗಾಗಿ ಜನ ಸೇರಿರುವಾಗ ಮಾಲ್, ಅಂಗಡಿಗೆ ಹೋಗುವುದಕ್ಕಿಂತ ಮೊದಲೇ ಶಾಪಿಂಗ್ ಮುಗಿಸುವುದು ಒಳ್ಳೆಯದು.
- ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಸುರಕ್ಷಿತವಾಗಿರುವ ಕುರಿತು ಮನೆಯ ಮಕ್ಕಳಿಗೆ ಈಗಿನಿಂದಲೇ ಮಾಹಿತಿ, ತರಬೇತಿ ನೀಡಿ. ಅವರನ್ನೂ ಹಬ್ಬದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಿ.
ಇದನ್ನೂ ಓದಿ| ವಾರ್ಡ್‌ಗೊಂದೇ ಗಣಪತಿ | ಇನ್ನೂ ತೀರ್ಮಾನ ಆಗಿಲ್ಲ, ಸರಕಾರ ಹೇಳಿದ್ದೇ ಅಂತಿಮ ಎಂದ ಆಯುಕ್ತರು