ಚೌತಿ ಹಬ್ಬ ಎಂದು ಕರೆಯಲ್ಪಡುವ ಗಣೇಶನ ಹಬ್ಬಕ್ಕೆ ಇನ್ನು ಹೆಚ್ಚು ದಿನವಿಲ್ಲ. ಗಣೇಶ ಚತುರ್ಥಿಯಂದು (Ganesh Chaturthi 2022) ವ್ರತ ಅಥವಾ ಪೂಜೆ ಮಾಡುವವರು ಪೂಜಾ ಸಾಮಗ್ರಿ, ಪತ್ರೆ, ಹೂವು ಮತ್ತು ಹಣ್ಣುಗಳನ್ನು ಪೂಜೆಗೆ ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯ ಆರಂಭಿಸಬೇಕಾಗಿದೆ.
ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಯಾವುದೇ ಕೆಲಸ ಆರಂಭಿಸುವ ಮುನ್ನ ವಿಘ್ನ ನಿವಾರಕ ವಿಘ್ನೇಶನ ಪೂಜೆ ಮಾಡುತ್ತಿರುತ್ತೇವೆ. ಹೀಗಾಗಿ ಎಲ್ಲರಿಗೂ ಗಣೇಶನ ಪೂಜೆಗೆ ಏನೆಲ್ಲಾ ಸಾಮಗ್ರಿ ಬೇಕೆಂಬುದು ಗೊತ್ತಿರುತ್ತದೆ. ಆದರೆ ಗಣೇಶನಿಗೆ ಏನಿಷ್ಟವೆಂಬಹುದನ್ನು ತಿಳಿದುಕೊಂಡರೆ ಅದನ್ನೇ ಹಬ್ಬದಂದು ದೇವರಿಗೆ ಅರ್ಪಿಸಬಹುದಾಗಿರುತ್ತದೆ. ಜತೆಗೆ ಅದಕ್ಕೆ ತಕ್ಕ ಫಲವನ್ನೂ ಪಡೆಯಬಹುದು.
ಗಣೇಶ ಹಬ್ಬದಂದು ಪೂಜಿಸಲು ನಾವೆಲ್ಲರೂ ಮಣ್ಣಿನಿಂದ ಮಾಡಿದ ಗಣಪತಿಯನ್ನೇ ಬಳಸುತ್ತೇವೆ. ಒಂದು ವೇಳೆ ಮಣ್ಣಿನ ಗಣಪತಿ ತರಲು ಸಾಧ್ಯವಾಗದಿದ್ದರೆ, ವಿಸರ್ಜನೆಗೆ ಅಡಚಣೆಗಳಿದ್ದರೆ ಬೆಳ್ಳಿಯ ಗಣಪತಿಯನ್ನು ಇಟ್ಟು ಪೂಜಿಸಬಹುದು. ಬೆಳ್ಳಿಗಣಪತಿಯನ್ನು ಪೂಜಿಸುವುದಾದರೆ ವಿಗ್ರಹವನ್ನು ಮೊದಲು ಅರಿಸಿನದ ನೀರಿನಿಂದ ಶುದ್ಧ ಮಾಡಿ, ಪೂಜೆಗೆ ಇಟ್ಟುಕೊಳ್ಳಬೇಕು. ಇವೆರಡೂ ಇಲ್ಲದಿದ್ದರೂ ದೂರ್ವಾ ಸಗಣಿ ಗಣಪತಿ ಮಹಾಶ್ರೇಷ್ಟವೆಂದು ಪುರಾಣಗಳಲ್ಲಿಯೇ ಹೇಳಲಾಗಿದೆ.
ಗಣಪತಿಯನ್ನು “ರಕ್ತಾಂಭರದಾರಿʼʼ ಎಂದು ಕರೆಯುತ್ತೇವೆ. ಹೀಗಾಗಿ ಗಣಪತಿಗೆ ಅರ್ಪಿಸುವ ವಸ್ತ್ರವನ್ನು, ಕುಂಕುಮದಿಂದ ಕೆಂಪಾಗಿಸಿರಬೇಕು. ಅರಿಸಿನ ವಸ್ತ್ರವನ್ನೂ ಅರ್ಪಿಸಬಹುದು. ಹಸೀ ಹಾಲನ್ನೇ ಪೂಜೆಗೆ (ಅಭಿಷೇಕ ಮಾಡಲು, ನೈವೇದ್ಯಕ್ಕೆ) ಬಳಸಬೇಕು. ನುಚ್ಚಿಲ್ಲದ ಅಕ್ಕಿಯಿಂದ ಅಕ್ಷತೆಯನ್ನು ಮಾಡಿಟ್ಟುಕೊಂಡೇ ಪೂಜೆಗೆ ಕೂರಬೇಕು.
ಗಣಪತಿ ಪೂಜೆಗೆ ಗರಿಕೆ ಬೇಕೇಬೇಕು. ಏನಿಲ್ಲವೆಂದರೂ 21 ಗರಿಕೆಯನ್ನಾದರೂ ಪೂಜೆಗೆ ಬಳಸಬೇಕು. ಗರಿಕೆಯನ್ನು ಎಷ್ಟು ಅರ್ಪಿಸಿದರೂ ಗಣೇಶನಿಗೆ ಖುಷಿಯೇ. ಗರಿಕೆಯನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸುವುದರಿಂದ ಗಣೇಶ ಅದೃಷ್ಟವನ್ನು ನೀಡುತ್ತಾನೆ. ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಶನಿಕಾಟ ಇರುವವರು ಗರಿಕೆಯಿಂದ ಪೂಜೆ ಮಾಡಿದರೆ ಗಣಪತಿಯು ಕಾಪಾಡುತ್ತಾನಂತೆ.
ಪೂಜೆಗೆ ಏನೆಲ್ಲಾ ಪತ್ರೆಗಳು ಬೇಕು?
“ಅಥ ಪತ್ರಪೂಜಾಂ ಕರಿಷ್ಯೇʼʼ ಎಂದು ಮಂತ್ರ ಹೇಳುತ್ತಾ ಗಣಪತಿನ್ನು ಪತ್ರೆಗಳಿಂದ ಪೂಜೆ ಮಾಡಬೇಕು. ಯಾವ ಪತ್ರೆಗಳನ್ನು ಗಣಪತಿಗೆ ಅರ್ಪಿಸಿದರೆ ಏನೇನು ಲಾಭ ಪಡೆಯಬಹುದು ಎಂಬುದನ್ನು ನೋಡೋಣ.
ದವನ ಪತ್ರೆಯನ್ನು ಗಣಪತಿಗೆ ಅರ್ಪಿಸಿದರೆ ಸಕಲ ಕಾರ್ಯ ಸಿದ್ಧಿ, ಕೆಲಸದಲ್ಲಿ ಯಾವ ತೊಂದರೆ ಬರದೇ, ಅಧಿಕ ಲಾಭವಾಗುತ್ತದೆ. ಶಿವನಿಗೆ ಬಹಳ ಇಷ್ಟವಾದ ಬಿಲ್ವಪತ್ರೆಯನ್ನೂ ಗಣಪತಿಗೆ ಅರ್ಪಿಸಬಹುದು. ಇದರಿಂದ ಋಣಬಾಧೆ, ರೋಗಬಾಧೆ ನಿವಾರಣೆಯಾಗುತ್ತದೆ. ಶಮೀ ಪತ್ರೆ ಕೂಡ ಗಣಪತಿಗೆ ಅರ್ಪಿಸಲಾಗುತ್ತದೆ. ಇದರಿಂದ ಸಾಡೇಸಾತ್, ಅಷ್ಟಮ, ಪಂಚಮ, ಇತ್ಯಾದಿ ಶನಿದೋಷಗಳು ನಿವಾರಣೆಯಾಗುತ್ತವೆ.
ಅರಳೀ ಪತ್ರೆಯನ್ನು ಗಣಪತಿಗೆ ಅರ್ಪಿಸುವುದರಿಂದ ಸಂತಾನವಾಗದವರಿಗೆ ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಉತ್ತರಾಣಿ ಪತ್ರೆಯನ್ನು ವಿದ್ಯಾರ್ಥಿಗಳು ಗಣಪತಿಗೆ ಅರ್ಪಿಸಲೇಬೇಕು. ಇದರಿಂದ ಅವರಿಗೆ ಅತ್ಯಂತ ಶುಭವಾಗುತ್ತದೆ. ಸಕಲ ವಿದ್ಯಾ ಬುದ್ಧಿ ಯೋಗಗಳೂ ದೊರೆಯುತ್ತವೆ. ಇನ್ನು ದರ್ಬೆಯನ್ನೂ ಗಣಪತಿಗೆ ಅರ್ಪಿಸಬಹುದು. ಇದರಿಂದ ಸಕಲ ಕೇತು ದೋಷ, ನಕ್ಷತ್ರ ದೋಷ ನಿವಾರಣೆಯಾಗುತ್ತದೆ. ಇದಲ್ಲದೆ ಲಭ್ಯವಿರುವ ಇನ್ನಿತರ ಪತ್ರೆಗಳನ್ನೂ ಅರ್ಪಿಸಬಹುದು.
ಯಾವ ಹೂವು ಗಣಪತಿಗೆ ಇಷ್ಟ?
ಗಣಪತಿಯನ್ನು ನಾವು ವಿವಿಧ ಹೂವುಗಳಿಂದ ಅಲಂಕರಿಸುತ್ತೇವೆ. ಇತ್ತೀಚೆಗೆ ಕೃತಕ ಹೂವುಗಳನ್ನೂ ಬಳಸಿ, ಮಂಟಪವನ್ನು ಅಲಂಕಾರ ಮಾಡುವುದು ಹೆಚ್ಚಿದೆ. ಆದರೆ ಗಣಪತಿಗೆ ಕೆಲವು ಇಷ್ಟವಾದ ಹೂವುಗಳಿವೆ. ಅವುಗಳನ್ನು ಅರ್ಪಿಸುವುದರಿಂದ ನಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಬಹುದು.
ಬಿಳಿ ಎಕ್ಕದ ಗಿಡವನ್ನು ಪೂಜಿಸಿದರೆ ಸೂರ್ಯನನ್ನು ಮತ್ತು ಗಣೇಶನನ್ನು ಪೂಜಿಸಿದ ಫಲ ಸಿಗುವುದು ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಬಿಳಿ ಎಕ್ಕದ ಹೂವನ್ನು ಗಣಪತಿಗೆ ಅರ್ಪಿಸಲೇಬೇಕು. ಇದರಿಂದ ಸಮಸ್ತ ರೋಗ ನಿವಾರಣೆಯಾಗಿ ಆರೋಗ್ಯ ಭಾಗ್ಯ ದೊರೆಯಲಿದೆ ಎಂಬ ನಂಬಿಕೆ ಇದೆ. ಶತ್ರು ನಾಶ ಮತ್ತು ನೆಮ್ಮದಿಗಾಗಿ ದ್ರೋಣ ಪುಷ್ಪ ಅರ್ಪಿಸಬಹುದು. ಚಿಕ್ಕ ಹೂವೆಂಬ ಕಾರಣಕ್ಕೆ ಪ್ರಸಿದ್ಧವಾಗಿರುವ ತುಂಬೆ ಹೂವು ಗಣಪತಿಗೆ ಬಹಳ ಪ್ರಿಯ. ಇದನ್ನು ಅರ್ಪಿಸುವುದರಿಂದ ದೈವಬಲ ಜಾಸ್ತಿಯಾಗುತ್ತದೆ, ಆಧ್ಯಾತ್ಮಿಕತೆ ಹೆಚ್ಚುತ್ತದೆ. ಎಲ್ಲೆಡೆ ದೊರೆಯುವ ಮಲ್ಲಿಗೆ ಹೂವುವನ್ನು ಗಣಪತಿ ಪೂಜೆಗೆ ಬಳಸುವುದರಿಂದ ಎಲ್ಲ ರೀತಿಯ ದೈಹಿಕ ಹಾಗೂ ಮಾನಸಿಕ ರೋಗ ನಿವಾರಣೆಯಾಗುತ್ತದೆ.
ಹಲವು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ಪಾರಿಜಾತವನ್ನು ಗಣಪತಿಗೆ ಅರ್ಪಿಸುವುದರಿಂದ ಸರ್ಪದೋಷ ನಿವಾರಣೆಯಾಗುತ್ತದೆ. ರುದ್ರಾಕ್ಷಿಯಂತೆ ಇರುವ ರುದ್ರಾಕ್ಷಿ ಹೂವನ್ನು ಗಣೇಶನಿಗೆ ಏರಿಸಿ ಪೂಜೆ ಮಾಡಿದರೆ ಎಷ್ಟೇ ಕಷ್ಟ ಬಂದರು ಜಯ ನಿಮ್ಮದಾಗುತ್ತದೆ. ಇನ್ನು ಗ್ರಾಮೀಣ ಭಾಗದಲ್ಲಿ ದೊರೆಯುವ ಕಣಗಲೆ ಹೂವಿನಿಂದ ಪೂಜಿಸಿದರೆ ಭಯ ಭೀತಿ ನಿವಾರಣೆ, ಮಾಂತ್ರಿಕ ಬಾಧೆ ನಿವಾರಣೆ, ಹಾಗೂ ವಿದ್ಯಾಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಸೂರ್ಯಕಾಂತಿ ಹೂವನ್ನೂ ಗಣೇಶನಿಗೆ ಅರ್ಪಿಸಬಹುದು. ಇದರಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗಿ, ಉದ್ಯೋಗದಲ್ಲಿನ ಅಡಚಣೆಗಳು ದೂರವಾಗುತ್ತವೆ.
ನೈವೇದ್ಯಕ್ಕೆ ಏನೇನು ಬೇಕು?
ಗಣಪತಿಯನ್ನು ಹೊಟ್ಟೆಬಾಕ ಗಣಪ, ಡೊಳ್ಳೊಟ್ಟೆ ಗಣಪ ಎಂದೆಲ್ಲಾ ಕರೆಯುತ್ತೇವೆ. ಗಣಪತಿಗೆ ತಿಂಡಿಗಳೆಂದರೆ ಬಹಳ ಪ್ರೀತಿ. ಮೋದಕವನ್ನು ಕೈಯಲ್ಲೇ ಹಿಡಿದು ಕುಳಿತಿರುವ ಗಣಪತಿಗೆ ಕರಿಗಡುಬು, ಪಂಚಕಜ್ಜಾಯ ಇಷ್ಟ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಷ್ಟವಾದ ತಿಂಡಿಯನ್ನು ತಿಂದು ಹೊಟ್ಟೆ ಒಡೆದುಕೊಂಡ ಗಣಪತಿಗೆ ಬಗೆ ಬಗೆ ಭಕ್ಷ್ಯಗಳನ್ನು ನೈವೇದ್ಯ ಮಾಡಲಾಗುತ್ತದೆ.
ಹಬ್ಬದಂದು ಯಾವೆಲ್ಲಾ ತಿಂಡಿಗಳನ್ನು ನೈವೇದ್ಯಕ್ಕೆ ಮಾಡಿದರೆ, ಶ್ರೇಷ್ಟ, ಇದರಿಂದ ಖುಷಿಪಟ್ಟ ಗಣಪ ಏನೆಲ್ಲಾ ಫಲವನ್ನು ನೀಡುತ್ತಾನೆ ನೋಡೋಣ;
ಮೋದಕ: ಇಷ್ಟಾರ್ಥ ಸಿದ್ಧಿಯಾಗುತ್ತದೆ ಮತ್ತು ಸಾಕ್ಷಾತ್ ಗಣಪತಿಯೇ ನಿಮ್ಮ ಮನೆಯನ್ನು ಕಾಯುತ್ತಾನೆ. ಜಾತಕ ದೋಷಗಳು ನಿವಾರಣೆಯಾಗುತ್ತವೆ.
ಲಾಡು: ಮನೆಯಲ್ಲಿ ಮಂಗಳ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ, ವಿವಾಹ ಭಾಗ್ಯ ಪ್ರಾಪ್ತಿಯಾಗುತ್ತದೆ.
ಕರಿಗಡುಬು: ಆರೋಗ್ಯ ಭಾಗ್ಯ ಮತ್ತು ಧನ ಪ್ರಾಪ್ತಿ.
ಕಜ್ಜಾಯ: ಹಿರಿಯರ ಶಾಪ ನಿವಾರಣೆ.
ಒಬ್ಬಟ್ಟು: ಕುಜದೋಷ ನಿವಾರಣೆಯಾಗುತ್ತದೆ, ವಿವಾಹದ ದೋಷಗಳು ನಿವಾರಣೆಯಾಗುತ್ತವೆ.
ಬೆಲ್ಲದ ಅಚ್ಚು: ಕುಲದೇವರ ಬಲ, ದಾರಿದ್ರ್ಯ ನಿವಾರಣೆ, ಇಷ್ಟಾರ್ಥ ಸಿದ್ಧಿ, ಅಪಮೃತ್ಯು ನಿವಾರಣೆಯಾಗುತ್ತದೆ.
ಪಂಚಕಜ್ಜಾಯ: ಸಕಲ ಗ್ರಹ ಕಾಟ ನಿವಾರಣೆ, ಉದ್ಯೋಗ ಭಾಗ್ಯ, ಇಷ್ಟಾರ್ಥ ಸಿದ್ಧಿ, ಶನಿ ದೋಷ, ರಾಹು ದೋಷ ನಿವಾರಣೆಯಾಗುತ್ತದೆ. ಎಲ್ಲ ರೀತಿಯಲ್ಲಿಯೂ ಏಳಿಗೆ ಸಾಧಿಸುವಿರಿ.
ಗಣಪತಿಯನ್ನು ಪೂಜಿಸಲು ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ಮನಸ್ಸಿನಲ್ಲಿ ಭಕ್ತಿ ಇರಬೇಕು. ಭಕ್ತಿಯಿಂದ ನೀವು ಗಣೇಶನಿಗೆ ಏನನ್ನು ಅರ್ಪಿಸಿದರೂ ಆತ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲಿದ್ದಾನೆ. ಗಣೇಶ ಚತುರ್ಥಿಯಂದು ಶ್ರದ್ಧಾಭಕ್ತಿಯಿಂದ ಗಣೇಶನನ್ನು ಪೂಜಿಸೋಣ. ಆಡಂಬರಕ್ಕಿಂತ ಭಕ್ತಿ ಮುಖ್ಯ ಎಂಬುದನ್ನು ಮರೆಯದಿರೋಣ.
ಇದನ್ನೂ ಓದಿ| Ganesh Chaturthi 2022 | ಈ ಬಾರಿ ಗೌರಿ-ಗಣೇಶ ಹಬ್ಬದಂದು ಎಷ್ಟು ಹೊತ್ತಿಗೆ ಪೂಜೆ ಮಾಡಬೇಕು?