Site icon Vistara News

ಗಣಪತಿ ಬಪ್ಪಾ ಮೋರ‍್ಯಾ ಎಂದರೇನು ಗೊತ್ತಾ? ಈ ಮರಾಠಿ ಘೋಷಣೆಗಿದೆ ಕರ್ನಾಟಕದ ಲಿಂಕ್‌!

Ganesh Chaturthi 2022

ರಾಮಸ್ವಾಮಿ ಹುಲಕೋಡು

ಗಣಪತಿ ಬಪ್ಪಾ ಮೋರ‍್ಯಾ
ಪುಡ್ಚ್ಯಾವರ್ಷಿ ಲೌಕರಿಯಾ
ಮಂಗಳ ಮೂರ್ತಿ ಮೋರ‍್ಯಾ

ಗಣೇಶ ಚತುರ್ಥಿಯಂದು (Ganesh Chaturthi 2022) ಗಣೇಶನ ವಿಗ್ರಹವನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುವಾಗ, ಮಂಗಳಾರತಿ ಬೆಳಗುವಾಗ ಕೊನೆಗೆ ವಿಸರ್ಜನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ, ವಿಸರ್ಜನೆ ಮಾಡುವಾಗ… ನಾವು ಈ ಮೇಲಿನ ಘೋಷಣೆಯನ್ನು ಕೂಗುತ್ತಲೇ ಇರುತ್ತೇವೆ. ಮೊದಲು ಮಹಾರಾಷ್ಟ್ರದಲ್ಲಿ ಚಾಲ್ತಿಗೆ ಬಂದ ಈ ಘೋಷಣೆ, ಈಗ ದೇಶಾದ್ಯಂತ ಗಣೇಶನ ಹಬ್ಬದ ಸಂದರ್ಭದಲ್ಲಿ ಮೊಳಗುತ್ತಿದೆ.

ಇದರ ಅರ್ಥವೇನು? ಈ ಘೋಷಣೆ ಕೂಗುವ ಬಹುತೇಕರಿಗೆ ಗೊತ್ತಿರುವುದಿಲ್ಲ. ವಿಶ್ವ ವಂದಿತ ವಿನಾಯಕನ ಮೇಲಿನ ಭಕ್ತಿಯನ್ನು ತೋರ್ಪಡಿಸಲು ಘೋಷಣೆಯೊಂದು ಬೇಕಿತ್ತು. “ಗಣಪತಿ ಬಪ್ಪಾ ಮೋರ‍್ಯಾʼʼ ಎಂಬುದು ಈಗಾಗಲೇ ಜನಪ್ರಿಯವಾಗಿರುವುದರಿಂದ ಅದನ್ನು ಬಳಸುತ್ತಿದ್ದೇವೆ. ಗಣಪನಿಗೆ ಜಯಕಾರ ಹಾಕುತ್ತಿದ್ದೇವೆ.

“ಗಣಪತಿ ಬಪ್ಪಾ ಮೋರ‍್ಯಾ” ಘೋಷಣೆಯಲ್ಲಿ ಗಣಪತಿ ಎಂದರೆ ವಿನಾಯಕ. ಇಲ್ಲಿ “ಗಣʼʼ ಎಂದರೆ ಸಮೂಹ ಅಥವಾ ಗುಂಪು. ಶಿವನ ಭಕ್ತರ ಗುಂಪು ಎಂದುಕೊಳ್ಳಬಹುದು. (ನಮ್ಮ ರಾಷ್ಟ್ರ ಗಣರಾಷ್ಟ್ರವಾಗಿದೆ. ಗಣರಾಜ್ಯವಾಗಿದೆ) ಪತಿ ಎಂದರೆ ನಾಯಕ ಎಂದರ್ಥ. ಗಂಡ ಎಂಬ ಅರ್ಥವೂ ಇದೆ! ಆದರೆ ಪತಿ ಪದವನ್ನು ಸಾಮೂಹಿಕವಾಗಿ ಬಳಸುವಾಗ ನಾಯಕ, ಯಜಮಾನ, ಮುಖ್ಯಸ್ಥ ಎಂದೇ ಅರ್ಥೈಸಲಾಗುತ್ತದೆ. ಗಣ ಎಂದರೆ ಸಮೂಹ, ಪತಿ ಎಂದರೆ ನಾಯಕ. ಗಣಪತಿ ಎಂದರೆ ಸಮೂಹದ ಮುಖ್ಯಸ್ಥ ಎಂದರ್ಥ. ಗಣಪತಿ ಹಲವಾರು ಗಣಗಳ ಅಧಿಪತಿ. ಆದಿಗುರು ಎಂದೂ ಹೇಳಬಹುದು.

ಇನ್ನು ಬಪ್ಪಾ ಅಥವಾ ಬಪ್ಪ ಎಂದರೆ ಮರಾಠಿಯಲ್ಲಿ ತಂದೆ ಎಂದರ್ಥ. ಇನ್ನೊಂದರ್ಥದಲ್ಲಿ ದೇವರಿಗೆ ಸಮಾನ. ಒಟ್ಟಾರೆಯಾಗಿ “ಗಣಪತಿ ಬಪ್ಪಾ…” ಎಂದರೆ ಗಣಪತಿಯಪ್ಪಾ ಎಂದಾಗುತ್ತದೆ. ಇನ್ನು “ಮೋರ‍್ಯಾʼʼ ಎನ್ನುವುದರ ಹಿಂದೆ ಕುತೂಹಲಕಾರಿಯಾದ ಸಂಗತಿಗಳಿವೆ. “ಮೋರ‍್ಯಾʼʼ ಎಂದರೆ ಕರ್ನಾಟಕ ಮೂಲದ ಸಂತನೊಬ್ಬನ ಹೆಸರು! ಹೌದು, ಆಶ್ಚರ್ಯವೆನಿಸಿದರೂ ಇದು ನಿಜ.

ಯಾರು ಈ ಮೋರ‍್ಯಾ?
ಮೋರ‍್ಯಾ ಗೋಸಾವಿ ಅಥವಾ ಮೊರಿಯಾ ಗೋಸಾವಿ ಅಥವಾ ಮೊರೋಬ ಎಂದು ಕರೆಯಲ್ಪಡುವ ಸಂತ ಮಹಾರಾಷ್ಟ್ರದಲ್ಲಿದ್ದರು. ಗಣಪತಿಯೇ ಪರಮ ಶ್ರೇಷ್ಠ ಎಂದು ನಂಬಿರುವ ಗಣಪತಿ ಪಂಥದ ಪ್ರಮುಖ ಸಂತ. 13ರಿಂದ 17ನೇ ಶತಮಾತನದ ನಡುವೆ ಇವರು ಪುಣೆಯ ಸಮೀಪ ಚಿಂಚಾವಾಡದ ಹತ್ತಿರ ಇದ್ದರೆಂದು ಹೇಳಲಾಗುತ್ತಿದೆ.

ಮೋರ‍್ಯಾ ಗೋಸಾವಿ

ಮಹಾರಾಷ್ಟ್ರದ ಮೊರ್ಗಾವ್‌ನ ಹೆಸರಾಂತ ಮಹಾಗಣಪತಿ ದೇಗುಲದ ಪರಮ ಭಕ್ತರಾಗಿದ್ದ ಮೋರ‍್ಯಾ ಗೋಸಾವಿ ನಿತ್ಯ ಗಣಪತಿಯ ಪ್ರಾರ್ಥನೆಯಲ್ಲಿ ತೊಡಗಿರುತ್ತಿದ್ದರು. ಒಮ್ಮೆ ಅಲ್ಲಿಯ ಗಣಪತಿ ಮೂರ್ತಿಗೆ ಅರ್ಚನೆ ಮಾಡಲು ಹೋದಾಗ, ಅವರನ್ನು ಮಂದಿರದೊಳಗೆ ಬಿಡಲಿಲ್ಲವಂತೆ. ಮೋರ‍್ಯಾ ಇದರಿಂದ ಖಿನ್ನರಾದರು. ಆಗ ಅವರ ಆರಾಧ್ಯದೇವರಾದ ಗಣಪತಿಯೇ ಅವರ ಸ್ವಪ್ನದಲ್ಲಿ ಪ್ರತ್ಯಕ್ಷನಾಗಿ, ಹತ್ತಿರದ ‘ಚಿಂಚ್ ವಾಡ್’ ಗ್ರಾಮಕ್ಕೆ ಹೋಗಲು ಅಪ್ಪಣೆಕೊಟ್ಟರಂತೆ. ಅಲ್ಲಿ ಗಣೇಶ ಮಂದಿರವನ್ನು ನಿರ್ಮಿಸಿ ಮೋರ‍್ಯಾರು ಮಹಾಗಣಪತಿಯನ್ನು ಪ್ರತಿಷ್ಠಾಪಿಸಿದರು. ಇದಕ್ಕೆ ಅವರ ಮಗ ಚಿಂತಾಮಣಿ ಕೂಡ ನೇರವಾಗಿದ್ದರು. ಮುಂದೆ ಅಲ್ಲಿಯೇ ಮೋರ‍್ಯಾ ಅವರು ಸಜೀವ ಸಮಾಧಿಯೂ ಆದರು. ಇವರು ಸ್ಥಾಪಿಸಿದ ಮಹಾಗಣಪತಿ ಮಂದಿರ ಈಗಲೂ ಹೆಸರಾಂತ ದೇಗುಲವಾಗಿದೆ. ಗಣಪತಿಯ ಭಕ್ತರು ಮೋರ‍್ಯಾರನ್ನು “ದೇವ್‌ʼʼ ಎಂದು ಕರೆಯುತ್ತಿದ್ದರು.

ಗಣಪತಿಯ ಪರಮ ಭಕ್ತರಾಗಿದ್ದ ಮೋರ‍್ಯಾ ಗೋಸಾವಿ ಕನಸಿನಲ್ಲಿ ಬಂದಿದ್ದ ಗಣಪತಿ ಏನು ವರ ಬೇಕೆಂದು ಕೇಳಿದಾಗ, ಮೋರ‍್ಯಾರು “ನನಗೆ ಧನಕನಕಾದಿ ಸಂಪತ್ತೇನು ಬೇಡ, ನಿನ್ನ ನಾಮದೊಂದಿಗೆ ನನ್ನ ಹೆಸರೂ ಸದಾ ಬೆರೆತಿರಲಿʼʼ ಎಂದು ಬೇಡಿಕೊಂಡಿದ್ದರಂತೆ. ಇದರಿಂದ ನಿನ್ನ ಮತ್ತು ನಿನ್ನ ಭಕ್ತರ ನಡುವಿನ ಸಂಬಂಧ ಜಗತ್ತಿಗೆ ತಿಳಿಯುವಂತಾಗಲಿ ಎಂದಿದ್ದರಂತೆ. ಅವರ ಕೋರಿಕೆಯಂತೆಯೇ “ಗಣಪತಿ ಬಪ್ಪಾʼʼರ ಜತೆ ಮೋರ‍್ಯಾರ ಹೆಸರು ಸೇರಿಕೊಂಡಿದೆ. “ಗಣಪತಿ ಬಪ್ಪಾ ಮೋರ‍್ಯಾ” ಘೋಷಣೆ ಜನಪ್ರಿಯವಾಗಿದೆ.

ಮೋರ‍್ಯಾ ಕರ್ನಾಟಕ ಮೂಲದವರು!
ಹೌದು, ಗಣಪತಿಯ ಈ ಪರಮಭಕ್ತ ಸಂತ ಮೋರ‍್ಯಾ ಗೋಸಾವಿ ನಮ್ಮ ರಾಜ್ಯದವರು. ಒಂದು ಇತಿಹಾಸದ ಪ್ರಕಾರ, ಮೋರ‍್ಯಾ ಗೋಸಾವಿ ಬೀದರ್‌ನಲ್ಲಿ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಇವರನ್ನು ಕೆಲಸಕ್ಕೆ ಬಾರದ ಸೋಮಾರಿಯೆಂದು ಮನೆಯಿಂದ ಹೊರಗೆ ಹಾಕಿದಾಗ ನೆರೆಯ ಮಹಾರಾಷ್ಟ್ರದ ಮೊರ್ಗಾವ್‌ ಎಂಬ ಗ್ರಾಮಕ್ಕೆ ಹೋಗುತ್ತಾರೆ. ಅಲ್ಲಿ ಗಣಪತಿಯ ದೇಗುಲದಲ್ಲಿ ನೆಲೆಸಿ, ನಂತರ ಚಿಂಚ್ ವಾಡ್‌ಗೆ ಹೋಗಿ ನೆಲೆಸುತ್ತಾರೆ.

ಇನ್ನೊಂದು ಇತಿಹಾಸದ ಪ್ರಕಾರ ಅವರು ಸಾಲಿಗ್ರಾಮ ಮೂಲದವರು. ಇವರ ಪೋಷಕರು ಬೀದರ್‌ನಲ್ಲಿ ನೆಲೆಸಿದ್ದರು. ನಂತರ ಮಹಾರಾಷ್ಟ್ರದ ಮೊರ್ಗಾವ್‌ಗೆ ಸ್ಥಳಾಂತರಗೊಂಡರು. ಅಲ್ಲಿಯ ಮಹಾಗಣಪತಿಯನ್ನು ಪ್ರಾರ್ಥಿಸಿದ್ದರಿಂದ ಮೋರ‍್ಯಾ ಜನಿಸಿದರು. ಆದರೆ ಮೋರ‍್ಯಾ ಚಿಕ್ಕವರಿದ್ದಾಗ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ಆಗ ಮತ್ತೆ ಇವರ ಪೋಷಕರು ಮಹಾಗಣಪತಿಯ ಮೊರೆ ಹೋಗಿದ್ದು, ದೇಗುಲದ ಅರ್ಚಕ ನಾರಾಯಣ ಭಾರತಿ ಬಂದು ಮೋರ‍್ಯಾಗೆ ಔಷಧಿ ನೀಡಿ ಅವರನ್ನು ಬದುಕುಳಿಸಿದರು. ಹೀಗಾಗಿ ಮೋರ‍್ಯಾರ ಹೆಸರಿನ ಮುಂದೆ ಗೋಸಾವಿ ಎಂಬ ಹೆಸರೂ ಸೇರಿಕೊಂಡಿತು. ಗೋಸಾವಿ ಎಂದರೆ ಮರಾಠಿಯಲ್ಲಿ ಅರ್ಚಕ ಎಂಬ ಅರ್ಥವಿದೆ.

ಒಟ್ಟಾರೆಯಾಗಿ ಮಹಾರಾಷ್ಟ್ರದಲ್ಲಿದ್ದ ಪ್ರಸಿದ್ಧ ಸಂತ, ಗಣಪತಿಯ ಮಹಾ ಭಕ್ತ ಮೋರ‍್ಯಾ ಗೋಸಾವಿ ಕರ್ನಾಟಕ ಮೂಲದವರು ಎಂಬುದು ಈಗಾಗಲೇ ಖಚಿತಪಟ್ಟಿದೆ. ಅವರ ಪೋಷಕರು ಮೂಲತಃ ಬೀದರ್‌ನವರೇ ಅಥವಾ ಸಾಲಿಗ್ರಾಮದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೋರ‍್ಯಾ ಗೋಸಾವಿ ಅವರು ಇದ್ದ ಕಾಲಮಾನದ ಬಗ್ಗೆಯೇ ಇತಿಹಾಸಕಾರರಲ್ಲಿ ಸಾಕಷ್ಟು ಗೊಂದಲವಿದೆ.

ಇನ್ನೊಂದು ಅರ್ಥವೂ ಇದೆ
“ಗಣಪತಿ ಬಪ್ಪಾ ಮೋರ‍್ಯಾ” ಘೋಷಣೆಯಲ್ಲಿನ ಮೋರ‍್ಯಾ ಎಂಬ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಮೋರ‍್ಯಾ ಎಂಬುದು ಎರಡು ಶಬ್ದಗಳ ಮಿಶ್ರಣ. “ಮೋರ್‌ʼʼ ಮತ್ತು “ಯಾʼʼ ಎಂಬುದು ಸೇರಿ “ಮೋರ‍್ಯಾʼʼವಾಗಿದೆ. ಕೊಲ್ಹಾಪುರಿಯ ಆಡುಭಾಷೆಯ ಪ್ರಕಾರ “ಮೋರ್‌ʼʼ ಮತ್ತು “ಯಾʼʼ ಒಟ್ಟಾಗಿ ಸೇರಿದರೆ “ಮುಂದೆ ಬಂದು ಆಶೀರ್ವದಿಸುʼʼ ಎಂದಾಗುತ್ತದೆ. ಅಂದರೆ “ಗಣಪತಿ ಬಪ್ಪಾ ಮೋರ‍್ಯಾʼʼ ಎಂದರೆ ʼʼಗಣಪತಿಯಪ್ಪಾ ಮುಂದೆ ಬಂದು ನಮ್ಮನ್ನು ಆರ್ಶೀವದಿಸಪ್ಪಾʼʼ ಎಂದಾಗುತ್ತದೆ.

ಮಹಾರಾಷ್ಟ್ರ ಮತ್ತು ಗಣಪತಿ
ಮರಾಠಿಯ ಈ ಘೋಷಣೆ ಹೀಗೆ ಜಗದಗಲ ಹರಡಲು ಕಾರಣವಾಗಿದ್ದು ಸಾರ್ವಜನಿಕ ಗಣೇಶೋತ್ಸವ. ಇತಿಹಾಸ ತಜ್ಞ ಶ್ರೀ ರಾಜವಾಡೆ ಪ್ರಕಾರ ಗಣಪತಿ ಉತ್ಸವಕ್ಕೆ ದಕ್ಷಿಣ ಭಾರತವೇ ಮೂಲ ಎನ್ನಬಹುದಾದರೂ, ಐತಿಹಾಸಿಕ ಆಧಾರದಂತೆ ಮೊಗಲ್ ಮರಾಠರ ಯುದ್ಧಗಳ ನಂತರ, ಶಿವಾಜಿಯ ಪ್ರಾಯೋಜಕತ್ವದಲ್ಲಿ ದೊಡ್ಡ ಸಾಮಾಜಿಕ ಹಾಗೂ ಸಾರ್ವಜನಿಕ ಉತ್ಸವವಾಗಿ ಇದು ಬದಲಾಯಿತು. ಅಂದಿನಿಂದ ಇಂದಿನವರೆಗೆ ಆಚರಣೆ ಹಾಗೇ ಮುಂದುವರಿದಿದೆ.
ಛತ್ರಪತಿ ಶಿವಾಜಿಗೆ ಗಣೇಶನೆಂದರೆ ಅಪಾರ ಭಕ್ತಿ. ಜೀವನದಲ್ಲಿ ಕಂಡ ಸೋಲುಗಳನ್ನೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿದ್ದ ಆತ ಯಾವುದೇ ಕೆಲಸಕ್ಕೆ ಹೊರಡುವ ಮುನ್ನ ಗಣಪನನ್ನು ತಪ್ಪದೇ ಪ್ರಾರ್ಥಿಸುತ್ತಿದ್ದ. ಇನ್ನು ಚಾರಿತ್ರಿಕ ದಾಖಲೆಗಳ ಪ್ರಕಾರ ಪೇಶ್ವೆಗಳ ಕುಲದೇವತೆಯಾಗಿತ್ತಂತೆ ಗಣಪತಿ.

ಮುಂದೆ 19ನೇ ಶತಮಾನದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ, ಬಾಲಗಂಗಾಧರನಾಥ ತಿಲಕರು
ಸಾಮೂಹಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದರು. ಖಾಸಗಿ ಆಚರಣೆಯನ್ನು ಸಾರ್ವತ್ರಿಕವಾಗಿಸಿದರು. ಈಗಲೂ ಮುಂಬೈನಲ್ಲಿ ಹತ್ತು ದಿನಗಳ ಕಾಲ ಗಣೇಶೋತ್ಸವ ನಡೆಯುತ್ತದೆ. ನಂತರ ಸಮುದ್ರದಲ್ಲಿ “ಮಹಾರಾಜ ರೇ ಜೈʼʼ ಎಂದು ಜಯಘೋಷ ಕೂಗುತ್ತಾ ಸಾಮೂಹಿಕ ಗಣೇಶ ವಿಸರ್ಜನೆ ಮಾಡಲಾಗುತ್ತದೆ.

ಇದನ್ನೂ ಓದಿ| Ganesh Chaturthi 2022 | ಗಣೇಶನಿಗೆ ಯಾವ ಪತ್ರೆ, ಪುಷ್ಪ, ಭಕ್ಷ್ಯ ಅರ್ಪಿಸದರೆ ಏನು ಫಲ ದೊರೆಯುತ್ತದೆ ಗೊತ್ತೇ?

Exit mobile version