Site icon Vistara News

Ganesh Chaturthi 2022 | ತತ್ವಮಯನಾದ ದೇವ ಗಣಪತಿ

Ganesh Chaturthi 2022

ಈ ಲೇಖನವನ್ನು ಇಲ್ಲಿ ಕೇಳಿ

https://vistaranews.com/wp-content/uploads/2022/08/WhatsApp-Audio-2022-08-30-at-1.26.13-PM.ogg

ಡಾ. ಗಣಪತಿ ಆರ್. ಭಟ್
ಗಣಪತಿ, ವಿಘ್ನನಿವಾರಕ, ಆದಿಪೂಜಿತ ಹೀಗೆ ಅನೇಕ ಹೆಸರುಗಳಿಂದ ಸ್ತುತಿಸಲ್ಪಡುವ ಏಕದಂತನ ಹಬ್ಬ ಬಂದಿದೆ (Ganesh Chaturthi 2022). ಸಮಸ್ತವನ್ನೂ ಮುನ್ನಡೆಸುವ ವಿನಾಯಕ, ವಿಘ್ನಗಳನ್ನು ನಿವಾರಿಸುವ ವಿಘ್ನರಾಜ, ಗಂಗೆ, ಪಾರ್ವತಿಯರಿಬ್ಬರ ಪ್ರೇಮವ ಪಡೆದ ದ್ವೈಮಾತುರ, ಶಿವಗಣಗಳ ಒಡೆಯ ಗಣಾಧಿಪ… ಹೇಗೆ ನಾನಾ ಕಾರಣಗಳಿಂದ ನಾನಾ ಹೆಸರುಗಳನ್ನು ಪಡೆದ ಗಣಪತಿಯು ತನ್ನ ತಂದೆ, ತಾಯಿಯರಲ್ಲೇ ಜಗತ್ತನ್ನು ಕಂಡ ಮಹಾನ್ ಮೇಧಾವಿ. ಮೂಷಕಾಸುರ, ಅನಲಾಸುರ, ಗಜಮೂಕಾಸುರರನ್ನು ಸಂಹರಿಸಿದ ಪರಾಕ್ರಮಿ ಕೂಡ. ಭಾದ್ರಪದ ಮಾಸದ ಶುಕ್ಲ ಚೌತಿಯಂದು ಮನೆ ಮನೆಯ ದೇವರ ಪೀಠವನ್ನು, ಮಂಟಪವನ್ನು ಅಲಂಕರಿಸುವ ಗಣೇಶನು ತನ್ನ ಆಕಾರ ಮತ್ತು ತತ್ವಗಳಿಂದ ಬಲು ಆಕರ್ಷಕನೂ ಹೌದು.

ಸಂಕಷ್ಟಹರ ಗಣಪತಿ
ಗಣಪತಿಯು ಸಂಕಷ್ಟಹರನೆಂದೇ ಪ್ರಸಿದ್ಧ. ನಮಗೇನಾದರೂ ತೊಂದರೆ, ಆತಂಕಗಳು ಎದುರಾದರೆ ವಿಘ್ನೇಶ್ವರನನ್ನು ಮರೆಯದೇ ಮೊರೆಹೋಗುತ್ತೇವೆ ತಾನೆ? ಆತನ ಸನ್ನಿಧಿಯಲ್ಲಿ ನಮ್ಮ ಸಂಕಟವನ್ನು ಹೇಳಿಕೊಂಡರೆ ಅದನೆಲ್ಲ ಆತ ಪರಿಹರಿಸಿಯೇ ಸಿದ್ಧನೆಂಬುದು ನಮ್ಮೆಲ್ಲರ ದೃಢ ನಂಬಿಕೆ. ನಮ್ಮಂಥ ಸಾಮಾನ್ಯರಾದ ಮನುಷ್ಯರಿಗಷ್ಟೇ ಅಲ್ಲ, ದೇವಾನುದೇವತೆಗಳಿಗೂ ಅಭಯ ನೀಡಿದ ಅಭಯದಾಯಕ ಆತನೆಂಬುದು ನಿಮಗೆ ಗೊತ್ತೆ?

ಹಿಂದೆ ಬ್ರಹ್ಮಾಂಡವನ್ನು ಸೃಷ್ಟಿಸುವದಕ್ಕೂ ಮೊದಲು ಬ್ರಹ್ಮದೇವನು ಧ್ಯಾನಾವಸ್ಥೆಯಲ್ಲಿ ಕುಳಿತುಕೊಂಡಿದ್ದ. ಆಗ ತನ್ನ ಕಾರ್ಯಕ್ಕೆ ವಿಘ್ನ ಎದುರಾಗುವುದೇನೋ ಎಂಬ ಆತಂಕ ಬ್ರಹ್ಮನಲ್ಲಿತ್ತು. ಆ ಸಮಯದಲ್ಲಿ ಓಂಕಾರರೂಪದಲ್ಲಿ ಕಾಣಿಸಿಕೊಂಡ ಗಣಪತಿಯು ಸೃಷ್ಟಿಕಾರ್ಯದಲ್ಲಿ ಯಾವ ತೊಂದರೆಯೂ ಬರುವುದಿಲ್ಲವಂದು ಬ್ರಹ್ಮನಿಗೆ ಅಭಯವನ್ನು ನೀಡಿದ. ಆ ಪ್ರಕಾರ ಯಾವ ತೊಂದರೆಯೂ ಬಾರದಂತೆ ನೋಡಿಕೊಂಡು ‘ಸಂಕಷ್ಟಹರ’ ಎನಿಸಿಕೊಡ. ಸೃಷ್ಟಿಗೂ ಮೊದಲೇ ಇದ್ದ ಈ ಆದಿದೇವ ಅನವರತವೂ ತನ್ನ ಭಕ್ತರ ವಿಘ್ನಬಾಧೆಗಳನ್ನು ನಿವಾರಿಸಿ ವಿಘ್ನೇಶ್ವರನೆನಿಸಿದ.

ಅನಾದಿ, ಅನಂತ, ವಿಶ್ವವ್ಯಾಪಿ
ಗಣಪತಿಯು ಭಾರತವಷ್ಟೇ ಅಲ್ಲದೆ, ಕಾಂಬೋಡಿಯಾ, ಜಾವಾ, ಚೀನಾ, ಶ್ರೀಲಂಕಾ ಹೀಗೆ ಏಷ್ಯಾಖಂಡದ ನಾನಾ ಭಾಗಗಳಲ್ಲಿ ಬಹಳ ಹಿಂದಿನಿಂದಲೂ ಪೂಜಿಸಲ್ಪಡುತ್ತಿರುವ ದೈವ. ಪ್ರಪಂಚದ ಅತ್ಯಂತ ಪ್ರಾಚೀನ ಸಾಹಿತ್ಯವೆನಿದ ಋಗ್ವೇದಲ್ಲಿ ಆತನ ಕುರಿತಾದ ಮಂತ್ರಗಳು ಸಿಗುತ್ತದೆಯೆಂಬುದು ಗಣಪತಿಯ ಪ್ರಾಚೀನತೆಯನ್ನು ತಿಳಿಸಿದರೆ, ವಾಜಸನೇಯೀ ಸಂಹಿತೆ, ಬ್ರಹ್ಮಾಂಡಾದಿ ಪ್ರಮುಖ ಪುರಾಣಗಳು, ಯಾಜ್ಞ್ಯವಲ್ಕ್ಯಾದಿ ಸ್ಮೃತಿಗ್ರಂಥಗಳು ಗಣಪತಿಯ ವಿಷಯವನ್ನು ಪ್ರಸ್ತಾಪಿಸಿ ಗಣಪತಿಯ ವಿಷಯವ್ಯಾಪ್ತಿಯ ವೈಶಾಲ್ಯವನ್ನು ಹೇಳುತ್ತವೆ. ಭಾರತೀಯ ಕಾವ್ಯ, ಶಾಸ್ತ್ರ, ಕಲೆಗಳೆಲ್ಲವೂ ಗಣಪತಿಯನ್ನು ಆವಾಹಿಸಿ ಆತನ ತತ್ವದ ನಿರಂತರತೆಯನ್ನು ಹೇಳುತ್ತವೆ.

ಇನ್ನು ಆತನ ರೂಪದ ವಿಷಯಕ್ಕೆ ಬಂದರಂತೂ ಹೇರಂಭ ಗಣಪತಿ, ಹರಿದ್ರಾಗಣಪತಿ, ಶಕ್ತಿಗಣಪತಿ, ದುಂಡಿ ಗಣಪತಿ, ವಿಶ್ವಕ್ಸೇನ ಗಣಪತಿ ಇತ್ಯಾದಿಯಿಂದ ಹಿಡಿದು ನಾಟ್ಯಗಣಪತಿ, ದೃಷ್ಟಿಗಣಪತಿಯವರೆಗೆ ಅಂತ್ಯವೇ ಇಲ್ಲದ ನಾನಾ ರೂಪಗಳ ದೊಡ್ಡಪಟ್ಟಿಯನ್ನೇ ಮಾಡಬಹುದು. ಅನಾದಿಕಾಲದಿಂದಲೂ ಗಣಪತಿಯ ಕುರಿತಾದ ಚಿಂತನೆ ನಮ್ಮಲ್ಲಿ ಎಷ್ಟು ವಿಶಾಲವಾಗಿ ನೆಡೆದು ಬಂದಿದೆ ಎಂದು ತಿಳಿಯಲು ಆತನ ಅಸಂಖ್ಯ ನಾಮ ಮತ್ತು ರೂಪಗಳನ್ನು ಗಮನಿಸಿದರೆ ಸಾಕು.

ಕಥೆಗಳ ಹಿಂದಿದೆ ಜೀವನ ಸತ್ಯ
ಹುಟ್ಟುವಾಗ ಇದ್ದಿದ್ದು ಮನುಷ್ಯನ ಮುಖವೇ ಆದರೂ ನಂತರ ತಲೆ ಕಳೆದುಕೊಂಡ ಈತನಿಗೆ ಆನೆಯ ತಲೆಯನ್ನು ಕತ್ತರಿಸಿ ಜೋಡಿಸಲಾಯಿತೆಂಬ ಬಗೆ ಬಗೆಯ ಕಥೆಗಳು ಪುರಾಣಗಳಲ್ಲಿವೆ. ಯಾವುದೇ ಪೌರಾಣಿಕ ಕಥೆಯ ಹಿಂದಿರುವ ತತ್ವವನ್ನು ಅರಿತಾಗ ಮಾತ್ರವೇ ಅವುಗಳ ಮಹತ್ವವೂ ಗೊತ್ತಾಗುವುದು. ತಂದೆಯಾದ ಶಿವನೇ ಮಗನ ತಲೆಯನ್ನು ಕಡಿದನೆಂದರೆ ಅರ್ಥವೇನು? ತಂದೆಯೆಂದರೆ ಮಕ್ಕಳಿಗೆ ಸಂಸ್ಕಾರ ನೀಡುವ ಗುರುವೂ ಹೌದು. ಮಕ್ಕಳ ಬುದ್ಧಿಗೆ ಕವಿದ ಅಜ್ಞಾನವನ್ನು, ಅಹಂಕಾರವನ್ನು ತಿಳಿಹೇಳಿ, ದಂಡಿಸಿ ಕಳೆಯಬೇಕಾದುದು ತಂದೆಯಾದವನ ಕರ್ತವ್ಯ. ಶಿವನು ಗಣಪತಿಯ ತಲೆ ಕಡಿದುದರ ಹಿಂದಿನ ತತ್ವವೂ ಅದೇ. ಹೀಗೆ ವಿನಯಶೀಲನಾದ ಗಜಮುಖನು ಅಹಂಕಾರದಿಂದ ಮೆರೆಯುವವರಾರನ್ನೂ ಸಹಿಸಿಕೊಳ್ಳಲಿಲ್ಲ ಎಂಬುದನ್ನೂ ಗಮನಿಸಬೇಕು.

ಅಹಂಕಾರದಿಂದ ಮೆರೆಯುತ್ತಿದ್ದ ರಾವಣನ ಆತ್ಮಲಿಂಗವನ್ನು ಆಜ್ಞೆ ಮೀರಿ ನೆಲಕ್ಕಿಟ್ಟು ಆತನ ಗರ್ವಭಂಗ ಮಾಡಿದ ಪ್ರಸಂಗವು ಗಣಪತಿಯ ದಿಟ್ಟತನಕ್ಕೊಂದು ಉದಾಹರಣೆ. ತನ್ನ ತಂದೆ, ತಾಯಿಯರ ಪ್ರದಕ್ಷಿಣೆ ಹಾಕಿ ಅವರಲ್ಲಿಯೇ ಜಗತ್ತನ್ನು ಕಂಡು, ಮೆಚ್ಚುಗೆಗಳಿಸಿದ ಮತ್ತು ಆದಿಪೂಜೆಯ ವರವನ್ನು ಶಿವನಿಂದ ಪಡೆದ. ಈ ಪ್ರಸಂಗವು ಮಕ್ಕಳು ತಮ್ಮ ಹೆತ್ತವರ ಬಗ್ಗೆ ತೋರಬೇಕಾದ ಗೌರವಾದರ, ಅವರಿಂದ ಪಡೆಯಬೇಕಾದ ಪ್ರಶಂಸೆ, ಅದರಿಂದಲೇ ಜೀವನದಲ್ಲಿ ಔನತ್ಯದ ಪ್ರಾಪ್ತಿ ಇವುಗಳನೆಲ್ಲ ತಿಳಿಸುವುದು.

ಎಣಿಯಿಲ್ಲದ ತತ್ವ
ಕುಬ್ಜವಾದ ದೇಹ, ಡೊಳ್ಳುಹೊಟ್ಟೆ, ಆನೆಯ ಮುಖ, ಒಂದೇ ದಂತ ಹೀಗೆ ಗಣಪತಿಯ ಆಕಾರ ವಿಚಿತ್ರವಾಗಿದ್ದರೂ ಆತನ ರೂಪವು ವ್ಯಕ್ತಪಡಿಸುವ ತತ್ವಕ್ಕೆ ಸಮವಾದುದು ಯಾವುದೂ ಇಲ್ಲ.
ಮನುಷ್ಯನ ದೇಹಕ್ಕೆ, ಆನೆಯ ತಲೆಯನ್ನು ಜೋಡಿಸಿರುವುದರಿಂದ ಈತನಿಗೆ ದೇಹಕ್ಕಿಂತಲೂ ತಲೆಯೇ ದೊಡ್ಡದು. ದೇಹದಲ್ಲಿ ಉತ್ತಮಾಂಗವೆನಿಸಿದ ಶಿರಸ್ಸಿನ ಪ್ರಾಧಾನ್ಯತೆಯನ್ನು ಇದು ತಿಳಿಸುತ್ತದೆ. ಎಷ್ಟೆಂದರೂ ಜಗದ್ವಂದ್ಯರಾದ ಶಿವಪಾರ್ವತಿಯರ ಬುದ್ಧಿವಂತ ಮಗನಲ್ಲವೆ? ಈತನ ತಲೆ ಬುದ್ಧಿಶಕ್ತಿಯನ್ನು ಪ್ರತಿನಿಧಿಸುತ್ತದೆಯಷ್ಟೆ. ವಿದ್ಯಾಗಣಪತಿ ಎಂತಲೂ ಕರೆಸಿಕೊಳ್ಳುವ ಈತ ಸಕಲ ವಿದ್ಯೆಗಳಿಗೆ ಅಧಿಪತಿಯೆಂಬುದನ್ನು ಮರೆಯುವಂತಿಲ್ಲ.

ನಮ್ಮ ದೇಹದ ಮೂಲಾಧಾರದಲ್ಲಿ ಕುಳಿತು ಬುದ್ಧಿಯನ್ನು ಪ್ರಚೋದಿಸುವ ಗಣಪ ನಾವು ಸದಾ ಜಾಗರೂಕರಾಗಿ ಇರುವಂತೆ ಮಾಡುತ್ತಾನೆ ಎಂಬುದು ಯೋಗಶಾಸ್ತ್ರೀಯವಾದ ನಂಬಿಕೆ. ಸಣ್ಣ ಕಣ್ಣು, ಅಗಲ ಕಿವಿಗಳು ಸೂಕ್ಷ್ಮ ಗ್ರಾಹಿತ್ವವನ್ನು ತಿಳಿಸಿದರೆ, ಆತನ ಏಕದಂತವು ನಮ್ಮೊಳಗಿನ ದ್ವಂದ್ವವನ್ನು ಮೀರಿದಾಗ ಕಾಣುವ ಅದ್ವೈತಮಯ ಜಗತ್ತನ್ನು ಸೂಚಿಸುವುದು. ಉದರವಂತೂ ಇಡೀ ಬ್ರಹ್ಮಾಂಡವನ್ನೇ ಹೋಲುತ್ತದೆ.

ಸುತ್ತಿ ಬಿಗಿದ ಹಾವು ಅದರ ರಹಸ್ಯವನ್ನು ತನ್ನೊಳಗೆ ಹಿಡಿದಿಟ್ಟಿರುವುದನ್ನು ತಿಳಿಸುತ್ತದೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳ ರಹಸ್ಯವನ್ನು ಬೇಧಿಸಲು ಗಣಪತಿಯ ತತ್ವಾನುಸಂಧಾನ ಮಾಡಬೇಕು. ಹಾಗಾಗಿ ಗಣಪತಿಯನ್ನು ಯೋಗಿಗಳು ಪರಬ್ರಹ್ಮ ವಿಷಯವಾಗಿ ಕಂಡಿದ್ದಾರೆ. ಚತುರ್ಭುಜನಾದರೂ ಸೊಂಡಿಲು ಇರುವುದರಿಂದ ಗಣೇಶನು ಪಂಚಹಸ್ತನಾಗಿದ್ದಾನೆ. ಆಯುಧವಾಗಿ ಆತ ಧರಿಸಿರುವ ಪಾಶ ಮತ್ತು ಅಂಕುಶಗಳು ವಿಘ್ನಗಳನ್ನು ನಿವಾರಿಸಿ, ಸನ್ಮಾರ್ಗದಲ್ಲಿ ನಮ್ಮನ್ನು ಕೊಂಡೊಯ್ಯುವದಕ್ಕಾಗಿಯೇ ಇವೆ.

Ganesh Chaturthi 2022

ಗಣಪತಿಯ ಕೈಯಲ್ಲಿರುವ ಮೋದಕವು ಕೇವಲ ಭಕ್ಷ್ಯವಲ್ಲ. ಸಾಧಕರಿಗೆ ಮುಕ್ತಿಯಿಂದ ಸಿಗುವ ನಿತ್ಯವಾದ ಸಂತಸವನ್ನು ಸೂಚಿಸುತ್ತದೆ ಮೋದಕ. ಅದಕ್ಕಾಗಿಯೇ ಶಂಕರಾಚಾರ್ಯರು “ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಮ್” ಎಂಬುದಾಗಿ ಸ್ತುತಿಸಿದ್ದಾರೆ.

ಗಣಪತಿಯ ಪೂಜೆಗೆ ಸಲ್ಲುವ ಕೆಂಪುಪುಷ್ಪಗಳು ಅದ್ವೈತಾದಿಗಳಲ್ಲಿ ಹೇಳಿರುವ ಜಾಗೃತಾವಸ್ಥೆಯನ್ನು ಹೇಳಿದರೆ, ದೂರ್ವಾಂಕುರವು ಮತ್ತೆ ಮತ್ತೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕಾದ ಜಿಜ್ಞಾಸೆಯನ್ನು ಹೇಳುತ್ತದೆ.

ಬ್ರಹ್ಮಚಾರಿ ಈ ಗಣೇಶ
ಗಣೇಶನು ಬ್ರಹ್ಮಚಾರಿಯೆಂಬುದು ನಿಸ್ಸಂಶಯವಾದ ವಿಚಾರ. ಆದರೂ ಸಿದ್ಧಿ ಬುದ್ಧಿಯರ ಕಾಂತ ಈತನೆಂದು ಹೇಳುವುದು ಕೇವಲ ತಾತ್ವಿಕವಾಗಿಯಷ್ಟೆ. ಅಣಿಮಾ, ಮಹಿಮಾ ಇತ್ಯಾದಿ ಅಷ್ಟಸಿದ್ಧಿಗಳನ್ನು ಯೋಗಿಗಳಿಗೆ ಕರುಣಿಸುವವ ಈತ. ಇನ್ನು ಬುದ್ಧಿಯೂ ಕೂಡ ಈ ಮೊದಲೇ ವಿವರಿಸಿದಂತೆ ಗಣಪತಿಯ ಅಧೀನವಷ್ಟೆ. ಹೀಗೆ ಸಿದ್ಧಿ, ಬುದ್ಧಿಗಳೆರಡೂ ಆತನ ಜೊತೆಗೇ ಇರುವ ಕಾರಣದಿಂದಷ್ಟೆ ಅವೆರಡೂ ಆತನ ಪತ್ನಿಯರಿದ್ದಂತೆ ಎಂದು ಭಾವಿಸಿರಬೇಕು.

ಕೃಷಿಕರ ದೇವತೆ
ಕೃಷಿಪ್ರಧಾನವಾದ ಭಾರತದಲ್ಲಿ ಸಹಸ್ರಾರು ವರ್ಷಗಳಿಂದ ಕೃಷಿಕರ ಆರಾಧ್ಯದೈವವಾಗಿಯೂ ಸಲ್ಲಿದವ ಈ ಗಣಪತಿ. ದೊಡ್ಡ ಹೊಟ್ಟೆ ಧಾನ್ಯ ತುಂಬಿದ ಕಣಜವಾದರೆ, ಕಿವಿಯು, ಧಾನ್ಯಗಳನ್ನು ಶುಚಿಗೊಳಿಸುವ ಮೊರವಾಗಿ ಕಾಣಿಸುತ್ತದೆ. ಇಲಿಯು ಧಾನ್ಯಗಳ ತಿನ್ನುವ, ರೈತನ ವೈರಿಯಾದರೆ ಅದರ ವೈರಿ ಹಾವು ರೈತನಿಗೆ ಉಪಕಾರಿಯೇ ಸರಿ. ಕೈಯಲ್ಲಿ ಹಿಡಿದಿರುವ ಪಾಶ, ಅಂಕುಶಗಳು ಕೃಷಿಕರ ಹೈನುಗಳ ನಿಯಂತ್ರಣಕಾಕಾಗಿ ಇರುವವಷ್ಟೆ. ಮೃಣ್ಮಯವಾದ ಮೂರ್ತಿಯೂ ಕೂಡ ರೈತನಿಗಿರಬೇಕಾದ ಮಣ್ಣಿನ ಕುರಿತಾದ ಪ್ರಜ್ಞೆಯನ್ನೇ ತಿಳಿಸುತ್ತದೆ.

‘ತ್ವಂ ಭೂಮಿರಾಪೋsನಿಲೋನಲಃ’ ಎಂಬುದಾಗಿ ಪಂಚಭೂತಗಳನ್ನೂ ವ್ಯಾಪಿಸಿದ ಗಣಪತಿಯೇ ಪರಬ್ರಹ್ಮನೆಂದು ಗಣಪತಿ ಅಥರ್ವಶೀರ್ಷಮಂತ್ರವು ನಮಗೆ ತಿಳಿಸುತ್ತದೆ. ಇಂಥಹ ಪ್ರಕೃತಿಸ್ವರೂಪನಾದ ಗಣಪತಿಯ ವಿಗ್ರಹವನ್ನು ನೈಸರ್ಗಿಕ ವಸ್ತುಗಳಿಂದಲೇ ಮಾಡಿ ಪೂಜಿಸಬೇಕು.

ಗಣಪತಿಯ ನಾಮ, ರೂಪಗಳೆಲ್ಲವನ್ನೂ ತಾತ್ವಿಕವಾಗಿ ತಿಳಿದು ಗಣೇಶ ಹಬ್ಬವನ್ನು ಆಚರಿಸಿದರೆ ಆಚರಣೆ ಹೆಚ್ಚು ಸೂಕ್ತವೂ ಫಲಪ್ರದವಾಗಿಯೂ ಇರುವುದು.

(ಲೇಖಕರು ಸಂಸ್ಕೃತ ಪ್ರಾಧ್ಯಾಪಕರು)

ಇದನ್ನೂ ಓದಿ| ಗಣಪತಿ ಬಪ್ಪಾ ಮೋರ‍್ಯಾ ಎಂದರೇನು ಗೊತ್ತಾ? ಈ ಮರಾಠಿ ಘೋಷಣೆಗಿದೆ ಕರ್ನಾಟಕದ ಲಿಂಕ್‌!

Exit mobile version