ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಭಾರತ ದೇಶದ ಸರ್ವಮತ ಪಂಥಗಳ ಆರಾಧ್ಯ ದೈವ ಗಣಪತಿ. ಎಲ್ಲರ ಮನೆಗಳಲ್ಲಿಯೂ ಗಣಪತಿಯ ವಿಗ್ರಹ ಅಥವಾ ಚಿತ್ರಪಟವಾದರೂ ಇದ್ದೇ ಇರುತ್ತದೆ. ಸರ್ವಧರ್ಮೀಯರಿಂದಲೂ ಪೂಜೆಗೊಂಬ ಏಕೈಕದೇವತೆ ಶಿವಪಾರ್ವತಿಯರ ಪುತ್ರನಾದ ಶ್ರೀವಿನಾಯಕ. ಕೇವಲ ಹಿಂದೂಗಳಷ್ಟೇ ಅಲ್ಲದೇ ಬೌದ್ಧರೂ ಸಹ ಗಣಪತಿಯನ್ನು ಪೂಜಿಸುತ್ತಾರೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ”ಗಣೇಶಚೌತಿ”ಯ (Ganesh Chaturthi 2022) ಹಬ್ಬ.
ಗಣಪತಿಯ ಅವತಾರಕಥೆಗಳು ಅನೇಕಕಡೆಗಳಲ್ಲಿ ಉಲ್ಲೇಖವಾದರೂ ಮತ್ಸ್ಯಪುರಾಣೋಕ್ತ ಕಥೆ ಬಹಳ ಜಗಜ್ಜನಿತವಾಗಿದೆ. ಪಾರ್ವತಿಯು ತನ್ನ ರಕ್ತಚಂದನಯುಕ್ತವಾದ ಶರೀರದ ಮಣ್ಣಿನಿಂದ ಗಣಪತಿಯ ಸೃಷ್ಟಿಯನ್ನು ಮಾಡಿದಳು. ಆದ್ದರಿಂದ ಗಣಪತಿಯನ್ನು ”ರಕ್ತಾಂಬರೋ ರಕ್ತತನೂ ರಕ್ತಮಾಲ್ಯಾನುಲೇಪನಃ” ಎಂದು ವರ್ಣಿಸಿದ್ದಾರೆ.
ಗಣಪತಿಯ ದೇಹ, ಉಟ್ಟ ವಸ್ತ್ರ, ಧರಿಸಿದ ಮಾಲೆ, ಲೇಪಿಸಿದ ಗಂಧ ಎಲ್ಲವೂ ಕೆಂಪುವರ್ಣದ್ದು. ಗಣಪತಿಗೆ ದಾಸವಾಳ ಮೊದಲಾದ ಕೆಂಪುಹೂಗಳನ್ನು ಪೂಜೆಗೆ ಸಮರ್ಪಿಸುವುದು ವಿಶೇಷ.
ಗಜಮುಖನಿಗೆ ನಾಮ ಹಲವು
ಸಜ್ಜನರ ಸಕಲವಿಧವಾದ ವಿಘ್ನಗಳನ್ನು ಗಣಪತಿ ಪರಿಹರಿಸುತ್ತಾನೆ. ಅಂತೆಯೇ ದುಷ್ಟರಿಗೆ ವಿಘ್ನಗಳನ್ನು ಒದಗಿಸಲೂ ಸಮರ್ಥ. ಆದ್ದರಿಂದ ಅವನು ”ವಿಘ್ನೇಶ್ವರ”.
ಗಣಪತಿಯು ಜಾಗ್ರದವಸ್ಥಾಪ್ರೇರಕನಾದ ಭಗವಂತನ ವಿಶ್ವಂಭರರೂಪದ ಉಪಾಸನೆಯನ್ನು ಮಾಡುತ್ತಾನೆ. ಹತ್ತೊಂಬತ್ತು ಮುಖಗಳನ್ನು ಹೊಂದಿದ ವಿಶ್ವಂಭರನ ಮಧ್ಯಮುಖ ಗಜಮುಖ. ಅದರ ವಿಶೇಷೋಪಾಸನೆಯಿಂದಲೇ ಗಣಪತಿಯು ”ಗಜಮುಖ”ನಾಗಿದ್ದು.
ಒಮ್ಮೆ ಚಂದ್ರನು ಗಣಪತಿಯನ್ನು ನೋಡಿ ಅಪಹಾಸಮಾಡಿ ನಕ್ಕನು. ಗಣಪತಿಯು ಕೋಪದಿಂದ ತನ್ನ ಒಂದು ದಂತವನ್ನು ಕಿತ್ತಿ ಚಂದ್ರನ ಮೇಲೆ ಎಸೆದೆನೆಂದು ಉಲ್ಲೇಖವಿದೆ. ಅಂದಿನಿಂದ ಗಣಪತಿಯು ”ಏಕದಂತ”ನಾದ. ಈ ಕಥೆಯ ಹಿನ್ನೆಲೆಯಲ್ಲಿಯೇ ಚೌತಿ ಚಂದ್ರನನ್ನು ನೋಡಿದವರಿಗೆ ಮಿಥ್ಯಾಪವಾದ ಬರಲಿ ಎಂದು ಗಣಪತಿಯು ಚಂದ್ರನಿಗೆ ಶಾಪವನ್ನು ಕೊಡುತ್ತಾನೆ. ಅದಕ್ಕಾಗಿ ಇಂದಿಗೂ ಚೌತಿ ಚಂದ್ರನನ್ನು ನೊಡಬಾರದೆಂದು ಮತ್ತು ನೋಡಿದರೆ ಅದರ ಪರಿಹಾರಕ್ಕಾಗಿ ”ಸ್ಯಮಂತಕೋಪಾಖ್ಯಾನದ” ಶ್ರವಣವನ್ನು ಮಾಡಬೇಕೆಂದು ಪುರಾಣಗಳಲ್ಲಿ ಉಲ್ಲಿಖತವಾಗಿದೆ.
ಶ್ರೀಕೃಷ್ಣನು ಚೌತಿಚಂದ್ರನನ್ನು ನೋಡಿದ್ದಕ್ಕಾಗಿ ಸ್ಯಮಂತಕಮಣಿಯ ಕಳ್ಳತನದ ಮಿಥ್ಯಾರೋಪವನ್ನು ಪಡೆದನು. ಸೃಷ್ಟಿಕರ್ತನಾದ ಸಾಕ್ಷಾತ್ ನಾರಾಯಣನಿಗೆ ಚಂದ್ರದರ್ಶನದಿಂದ ಯಾವ ದೋಷವೂ ಇಲ್ಲ. ಆದರೂ ವಿಘ್ನನಿವಾರಕನ ಶಾಪ ಎಂದಿಗೂ ಸುಳ್ಳಾಗಬಾರದೆಂದು ತನ್ನನ್ನೇ ದೃಷ್ಟಾಂತವನ್ನಾಗಿಸಿ ಜಗತ್ತಿಗೆ ತೋರಿಸಿದ. ಚೌತಿಚಂದ್ರದರ್ಶನದ ಪರಿಹಾರಕ್ಕಾಗಿ ಪಠಿಸುವ ಮಂತ್ರ-
ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾ ರೋಧೀಃ ತವ ಹ್ಯೇಷಃ ಸ್ಯಮಂತಕಃ ||
ಕೃಷ್ಣಾವತಾರದಲ್ಲಿ ಗಣಪತಿಯು ”ಚಾರುದೇಷ್ಣ” ಎಂಬ ಹೆಸರಿನಿಂದ ಶ್ರೀಕೃಷ್ಣರುಕ್ಮಿಣಿಯರಲ್ಲಿ ಅವತರಿಸಿದ. ಶ್ರೀಕೃಷ್ಣನ ಆಜ್ಞೆಯಂತೆ ಸಾಂಬಮೊದಲಾದ ಅನೇಕ ಅಸುರಸಂಹಾರವನ್ನು ಮಾಡಿದನು.
ಗಣಪತಿ ಆಕಾಶತತ್ವಕ್ಕೆ ಅಭಿಮಾನಿ. ಶಬ್ದಗಳ ಅಭಿವ್ಯಕ್ತಿಯಾಗವುದು ಆಕಾಶದಲ್ಲಿ. ವಾಕ್ ಮತ್ತು ಅರ್ಥಗಳು ಶಿವಪಾರ್ವತಿಯರೆಂತೆ ಅನ್ಯೋನ್ಯತೆಯನ್ನು ಹೊಂದಿವೆ. ಶಬ್ದಗಳ ಅಭಿವ್ಯಕ್ತಿಯು ಅರ್ಥದಿಂದ ಕೂಡಿರಬೇಕು. ಅರ್ಥವನ್ನು ಅಭಿವ್ಯಕ್ತಿಗೊಳಿಸಲು ಶಬ್ದಗಳ ಸಹಾಯಬೇಕು. ಇವೆರಡರ ಸಿದ್ಧಿಗೆ ಗಣಪತಿಯ ಅನುಗ್ರಹವು ಬಹುಮುಖ್ಯ. ಆದ್ದರಿಂದಲೇ ಗಣಪತಿಯು ”ವಿದ್ಯಾಭಿಮಾನಿ” ಆದ್ದರಿಂದ ಎಲ್ಲ ಶಾಲೆಗಳಲ್ಲಿ ನೂತನವಾಗಿ ಪಾಠಪ್ರಾರಂಭಿಸುವಾಗ ಮೊದಲು ಗಣಪತಿಯ ಪ್ರಾರ್ಥನೆ ಮತ್ತು ಪೂಜೆಗಳನ್ನು ಮಾಡುತ್ತಾರೆ.
ಪಂಚಮವೇದವೆನಿಸಿದ ಮಹಾಭಾರತವನ್ನು ಬರೆಯಲು ಶ್ರೀವೇದವ್ಯಾಸರು ಗಣಪತಿಗೆ ಆಜ್ಞಾಪಿಸಿದರು. ‘ಮಧ್ಯದಲ್ಲಿ ಎಲ್ಲಿಯೂ ನಿಲ್ಲಿಸದಂತೆ ಹೇಳಬೇಕೆಂದು’ ಗಣಪತಿ ವ್ಯಾಸರಿಗೆ ಪ್ರಾರ್ಥಿಸಿದಾಗ ‘ಆಗಲಿ, ಆದರೆ ನಾವು ಹೇಳುವದನ್ನೆಲ್ಲ ಅರ್ಥೈಸಿಕೊಂಡೇ ಬರೆಯಬೇಕು’ ಎಂದು ವ್ಯಾಸರು ಹೇಳಿದರು. ಹೀಗೆ ಗಣಪತಿ ಕೇವಲ ಮಹಾಭಾರತದ ಲೇಖಕನಷ್ಟೇ ಅಲ್ಲದೇ ಸಾಕ್ಷಾತ್ ವೇದವ್ಯಾಸರಿಂದ ಮಹಾಭಾರತವನ್ನು ಕೇಳಿ ಅರ್ಥೈಸಿಕೊಂಡ ಮಹಾನುಭಾವ. ಆದ್ದರಿಂದ ದಾಸವರೇಣ್ಯರಾದ ಜಗನ್ನಾಥದಾಸರು ವಿನಾಯಕನನ್ನು “ಲೇಖಕಾಗ್ರಣೀ”ಎಂದು ಕೊಂಡಾಡಿದ್ದಾರೆ.
ಗಣಪತಿಗೆ ಇಬ್ಬರು ಪತ್ನಿಯರು. ಸಿದ್ಧಿ ಹಾಗೂ ಬುದ್ಧಿ. ಅವರಿಗೆ ಇಬ್ಬರು ಮಕ್ಕಳು ಶುಭ ಮತ್ತು ಲಾಭ. ಹೆಂಡಿತಿ ಎಂದರೆ ಬುದ್ಧಿಯೆಂದು ಶಾಸ್ತ್ರದ ಪರಿಭಾಷೆ. ಬುದ್ಧಿಯ ಪ್ರಚೋದನೆ ಸರಿಯಾದ ಮಾರ್ಗದಲ್ಲಿದ್ದರೆ ಸತ್ಕಾರ್ಯಗಳ ಸಿದ್ಧಿಯು ಪರಿಪೂರ್ಣವಾಗಿ ಫಲಿಸುತ್ತದೆ. ಅಂತಹ ಫಲವು ಎಂದಿಗೂ ಶುಭವಾಗಿ ಮತ್ತು ಲಾಭವಾಗಿರುತ್ತದೆ ಎಂಬುದು ಇದರ ಸಾಂಕೇತಿಕ ಅರ್ಥ. ಆದ್ದರಿಂದ ಕಾರ್ಯಸಿದ್ಧಿಗಾಗಲಿ ಸದ್ಬುದ್ಧಿಗಾಗಲಿ ಗಣಪತಿಯ ಅನುಗ್ರಹವೇ ಆಗಬೇಕು.
ಗಣಪತಿಯು ಒಂದು ಕೈಯಲ್ಲಿ ಅಂಕುಶವನ್ನು ಮತ್ತೊಂದು ಕೈಯಲ್ಲಿ ಪಾಶವನ್ನು ಹಿಡಿದಿರುವನು. ಸಂಸಾರದಲ್ಲಿಯ ಸುಖಭೋಗಗಳು ಪಾಶದಂತೆ ಎಲ್ಲರನ್ನು ಬಂಧಿಸುತ್ತವೆ. ಆದರೆ ಅವುಗಳಿಗೆ ತಕ್ಷಣದಲ್ಲಿಯೇ ಅಂಕುಶವನ್ನು ಹಾಕಬೇಕು. ಎಲ್ಲ ಸಾಂಸಾರಿಕ ಸುಖಭೋಗಕ್ಕೂ ಒಂದು ಇತಿಮಿತಿ ಇರಲಿ ಎಂದು ಈ ಅಂಕುಶವು ಸೂಚಕವಾಗಿದೆ. ಆದ್ದರಿಂದ ಗಣಪತಿ ”ಪಾಶಾಂಕುಶಧರ”.
”ಕಲೌ ದುರ್ಗಾವಿನಾಯಕೌ” ಎಂದು ಶ್ರೀಮನ್ಮಧ್ವಾಚಾರ್ಯರು ತಂತ್ರಸಾರಸಂಗ್ರಹದಲ್ಲಿ ಹೇಳಿದ್ದಾರೆ. ಕಲಿಯುಗದಲ್ಲಿ ಸಾಧನೆಗೆ ಶೀಘ್ರಫಲಪ್ರದರು ದುರ್ಗೆ ಮತ್ತು ಗಣಪತಿ. ಆದ್ದರಿಂದ ಗಣಪತಿಗೆ ”ಕ್ಷಿಪ್ರಪ್ರಸಾದ” ಎಂದು ಕರೆಯುತ್ತಾರೆ.
ಗಣಪತಿಯು ಆದಿಪೂಜಿತನಾಗಿದ್ದಾನೆ. ಸೇತುಬಂಧನ ಮಾಡುವಾಗ ಸಾಕ್ಷಾತ್ ಶ್ರೀರಾಮಚಂದ್ರನು ಗಣಪತಿಯನ್ನು ಪೂಜಿಸಿದ್ದಾನೆ. ಮಹಾಭಾರತದ ಯುದ್ಧಪ್ರಾರಂಭದಲ್ಲಿ ಶ್ರೀಕೃಷ್ಣನ ಆಜ್ಞೆಯಂತೆ ಧರ್ಮರಾಜನೂ ಸಹ ಮೊದಲು ಗಣಪತಿಯನ್ನು ಪೂಜಿಸಿದ್ದಾನೆ. ದೈತ್ಯರನ್ನು ಸಂಹರಿಸಲು ದೇವೆಂದ್ರನೂ ಸಹ ಗಣಪತಿಯ ಪೂಜೆಯನ್ನು ಮಾಡಿದ್ದಾನೆ. ಹೀಗೆ ತನಗಿಂತಲೂ ಶ್ರೇಷ್ಠರಾದ ದೇವತೆಗಳಿಂದ ಮತ್ತು ಶ್ರೀರಾಮಚಂದ್ರನಿಂದ ಪೂಜೆಗೊಂಡ ಉನ್ನತ ಸ್ಥಾನ ಗಣಪತಿಯದ್ದು. ಆದ್ದರಿಂದ ಎಲ್ಲ ಶುಭಕಾರ್ಯಗಳಲ್ಲಿ ಗಣಪತಿಯನ್ನು ಪೂಜಿಸುತ್ತಾರೆ. ಅನೇಕ ದಾಸವರೇಣ್ಯರು ಗಣಪತಿಯನ್ನು ”ಮೊದಲೊಂದಿಪೆ ನಿನಗೆ ಗಣನಾಥ” ಎಂದು ಕೊಂಡಾಡಿದ್ದಾರೆ.
ವಿದ್ಯಾಭಿಮಾನಿಯಾದ ಗಣಪತಿಯಲ್ಲಿ ಸದಾ ಸದ್ಭುದ್ಧಿ ವಿದ್ಯೆಗಳಿಗಾಗಿಯೇ ಪ್ರಾರ್ಥಿಸಬೇಕು. ಸಜ್ಜನರ ಸನ್ಮಾರ್ಗದಲ್ಲಿ ಬರುವ ವಿಘ್ನಗಳನ್ನು ಆ ವಿಘ್ನಹರ್ತನು ಸದಾ ಪರಿಹರಿಸುವ.
ಗಣಪತಿಯನ್ನು ಲಂಬೋದರ, ಗರಿವದನ, ಗಿರಿಶೃಂಗ, ಗೌರಿಜ, ಗೌರೀಪುತ್ರ, ದಂತಿಮುಖ, ದಾಕ್ಷಾಯಣೀ ಪುತ್ರ, ನವನೀತ ಗಣಪ, ಪೃಥ್ವಿಗರ್ಭ, ಬೆನಕ, ಮಹಾಗಣಪತಿ, ಮಹಾಗಣಾಧಿಪತಿ, ಮೂಷಿಕ ವಾಹನ, ಮೂಷಿಕ-ವಾಹನ, ಮೂಷಿಕರಥ, ಮೂಷಿಕವಾಹನ, ಮೊರಗಿವಿದಯ, ವಕ್ರತುಂಡ, ವಿಘ್ನಹರ, ವಿಘ್ನಾದಿಪ, ವಿಘ್ನೇಶ್ವರ, ವಿದ್ಯಾದೀಶ, ವಿದ್ಯಾನಾಥ, ವಿದ್ಯಾಪ್ರದಾಯಕ, ವಿನಾಯಕ, ವೃಷಧ್ವಜ, ಶಿವಸುತ, ಶುಂಡಾಲ, ಶೂರ್ಪಕರ್ಣ, ಶ್ರೀಗಣೇಶ, ಸರ್ವವಿದ್ಯಾಪ್ರದಾಯಕ, ಸಿದ್ಧಿಗಣಪತಿ, ಸಿದ್ಧಿವಿನಾಯಕ, ಸುಂಡಿಲಮೊಗ, ಸುಮುಖ, ಸುಮುಖ ಗಣಪತಿ, ಸ್ಕಂದಪೂರ್ವಜ, ಹೇರುಂಬ ಎಂದೆಲ್ಲಾ ಕರೆಯಲಾಗುತ್ತದೆ.
ಗಣೇಶನನ್ನು ಅಲ್ಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೂಡಿಸಿ ಪಾಶ್ಚಾತ್ಯಸಂಗೀತದೊಂದಿಗೆ ಕಂಡಂತೆ ಕುಣಿಯುವುದು ಎಂದಿಗೂ ಆಚರಣೆಯಾಗುವದಿಲ್ಲ. ಇದೊಂದು ದೇವತಾಪೂಜೆ. ಪ್ರಸಾದ ಹಂಚುವುದು, ಅನ್ನದಾನ, ಶಾಸ್ತ್ರೀಯಸಂಗೀತ, ಶಾಸ್ತ್ರೀಯ ನೃತ್ಯಸೇವೆ, ಭಕ್ತಿಗೀತೆ ಇವುಗಳೆಲ್ಲ ವಿಹಿತ. ಆಚರಣೆಯ ಹೆಸರಿನಲ್ಲಿ ಭಾರತೀಯ ಸಂಪ್ರದಾಯಕ್ಕೆ ಆಗುವ ಅವಮಾನಗಳಿಗೆ ತಡೆಯೊಡ್ಡಬೇಕು. ನಮ್ಮ ಆಚರಣೆಗಳು ಧರ್ಮದ ಚೌಕಟ್ಟಿನಲ್ಲಿರಲಿ. ಆಚರಣೆಯ ನೆಪದಲ್ಲಿ ವಿಡಂಬನೆ ಬೇಡ.
-ಲೇಖಕರು ಹವ್ಯಾಸಿ ಬರಹಗಾರರು
ಇದನ್ನೂ ಓದಿ| Ganesh Chaturthi 2022 | ಗಣಪತಿಗೆ ಇಷ್ಟವಾದ ಮೋದಕ, ಲಡ್ಡು, ಕಜ್ಜಾಯ ಮಾಡುವುದು ಹೀಗೆ