Site icon Vistara News

Ganesh Chaturthi | ಇಂದು ಚಂದ್ರ ಕಂಡರೆ ಭಯ ಪಡಬೇಡಿ; ದೋಷ ಪರಿಹಾರಕ್ಕೆ ದಾರಿಗಳೂ ಇವೆ

Ganesh Chaturthi

ಭಾದ್ರಪದ ಶುಕ್ಲದ ಚೌತಿಯ ಈ ದಿನ (Ganesh Chaturthi) ಅಂದರೆ ಗಣಪತಿ ಹಬ್ಬದಂದು ಚಂದಿರನ ದರ್ಶನ ಮಾಡಿದರೆ ಯಾವುದಾದರೂ ಒಂದು ಅಪವಾದ ಹೊತ್ತುಕೊಳ್ಳಬೇಕಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಚೌತಿಯಂದು ರಾತ್ರಿ ಕೆಲವರು ಮನೆಯಿಂದ ಹೊರ ಹೋಗಲೂ ಭಯ ಪಡುತ್ತಾರೆ. ಇದ್ಯಾಕೆ ಹೀಗೆ ಎಂದರೆ ಇದರ ಹಿಂದೆಯೊಂದು ಕತೆಯಿದೆ;

ಒಮ್ಮೆ ಗಣಪತಿ ಚೌತಿಯ ದಿನದಂದು ಎಲ್ಲರ ಮನೆಯಲ್ಲಿಯೂ ಮಾಡಿದ ಬಗೆ ಬಗೆಯ ತಿಂಡಿಗಳನ್ನು ತಿಂದು, ಡೊಳ್ಳು ಹೊಟ್ಟೆ ಮಾಡಿಕೊಂಡು ಮನೆಗೆ ಹೋಗುತ್ತಿರುತ್ತಾನೆ. ಪಾಪಾ ಅವನ ವಾಹನ ಇಲಿಗೆ ಗಣಪತಿಯನ್ನು ಹೊತ್ತುಕೊಂಡು ಹೋಗುವುದೇ ಕಷ್ಟವಾಗಿರುತ್ತದೆ. ಆದರೂ ಕಷ್ಟಪಟ್ಟು ಮೂಟೆಯಂತಾಗಿದ್ದ ಗಣಪನನ್ನು ಕೂರಿಸಿಕೊಂಡು ಹೋಗುತ್ತಿರುತ್ತದೆ.

ಆಗ ದಾರಿಯಲ್ಲಿ ಒಂದು ಹಾವು ಹರಿದುಹೋಗುತ್ತಿರುತ್ತದೆ. ಹಾವನ್ನು ನೋಡಿದರೆ ಸಹಜವಾಗಿ ಇಲಿಗೆ ಭಯ ತಾನೆ? ಹೀಗಾಗಿ ಬೆದರಿದ ಇಲಿ, ತಾನು ಗಣಪತಿಯನ್ನು ಕೂರಿಸಿಕೊಂಡಿದ್ದೇನೆ ಎಂಬುದನ್ನೂ ಮರೆತು ಓಡಲು ಶುರುಮಾಡುತ್ತದೆ. ಆಗ ಅದರ ಮೇಲೆ ಕುಳಿತಿದ್ದ ಡೊಳ್ಳು ಹೊಟ್ಟೆಯ ಗಣಪ ಕೆಳಗೆ ಬೀಳುತ್ತಾನೆ. ಹೀಗೆ ಬಿದ್ದಾಗ ಆತನ ಹೊಟ್ಟೆ ಒಡೆಯುತ್ತದೆ. ದಂತ ಮುರಿಯುತ್ತದೆ.

ಗಣಪತಿ ತಿಂದದ್ದೆಲ್ಲ ಹೊರಗೆ ಬಂದಿರುತ್ತದೆ. ಮೇಲೆದ್ದ ಗಣಪ ಹೊಟ್ಟೆಯಿಂದ ಬಿದ್ದದ್ದನ್ನೆಲ್ಲ ತಿರುಗಿ ಹೊಟ್ಟೆಗೆ ಸೇರಿಸಿ ಮತ್ತೆ ಅದು ಚೆಲ್ಲದಂತೆ, ಅಲ್ಲಿಯೇ ಹೋಗುತ್ತಿದ್ದ ಹಾವನ್ನು ಹಿಡಿದು ಹೊಟ್ಟೆಗೆ ಕಟ್ಟಿಕೊಂಡು ಮತ್ತೆ ಸವಾರಿ ಹೊರಡುತ್ತಾನೆ. ಇದನ್ನೆಲ್ಲಾ ಬಾನಿಂದ ನೋಡುತ್ತಿದ್ದ ಚಂದಿರನಿಗೆ ನಗು ಬರುತ್ತದೆ. ಅವನು ಬಿದ್ದೂ ಬಿದ್ದೂ ನಗುತ್ತಾನೆ. ಆಗ ಗಣಪನಿಗೆ ಸಿಟ್ಟು ಬರುತ್ತದೆ. ಕೂಡಲೇ ಮುರಿದಿದ್ದ ತನ್ನ ದವಡೆಯನ್ನು ಆತನತ್ತ ಬಿಸಾಕಿ, ಚಂದ್ರನಿಗೆ “ಇನ್ನು ಮುಂದೆ ನಿನ್ನನ್ನು ಯಾರೂ ಯಾವಾಗಲೂ ನೋಡದಿರಲಿ, ನೋಡಿದರೆ ಅವರಿಗೆ ಅಪವಾದ ಬರಲಿʼʼಎಂದು ಶಾಪ ನೀಡುತ್ತಾನೆ.

ಆಗ ಚಂದ್ರನಿಗೆ ಜ್ಞಾನೋದಯವಾಗುತ್ತದೆ. ಶಾಪದ ಬಿಸಿ ತಟ್ಟುತ್ತದೆ. ಶಾಪವನ್ನು ಹಿಂತೆಗೆದುಕೊಳ್ಳುವಂತೆ ಪರಿಪರಿಯಾಗಿ ಗಣಪತಿಯನ್ನು ಬೇಡಿಕೊಳ್ಳುತ್ತಾನೆ. ಅಷ್ಟರಲ್ಲಿ ಗಣಪನಿಗೆ ಒಂದಿಷ್ಟು ಸಿಟ್ಟು ಕಡಿಮೆಯಾಗುತ್ತಾ ಬಂದಿರುತ್ತದೆ. ತನ್ನ ಶಾಪವನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ. ಆದರೆ ಸ್ವಲ್ಪ ಕಡಿಮೆ ಮಾಡಿ “ಯಾರೂ ಯಾವಾಗಲೂ ನೋಡದಿರಲಿ” ಎಂಬುದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿ “ಭಾದ್ರಪದ ಶುಕ್ಲಚೌತಿಯಂದು ಯಾರೂ ನಿನ್ನನ್ನು ನೋಡಬಾರದು, ಯಾರಾದರೂ ನಿನ್ನ ನೋಡಿದರೆ ಅವರಿಗೆ ಶಾಪ ತಟ್ಟುತ್ತದೆʼʼ ಎಂದು ಶಾಪವನ್ನು ಮಾರ್ಪಡಿಸುತ್ತಾನೆ.

ಹಾಗಾಗಿ ಚೌತಿಯ ದಿನದಂದು ಬಾನಿನಲ್ಲಿರುವ ಚಂದ್ರನನ್ನು ನೋಡಬಾರದು. ನೋಡಿದರೆ ಅನಾವಶ್ಯಕ ಸುಳ್ಳು ಅಪವಾದ ಬರುತ್ತದೆ ಎಂಬ ನಂಬುಗೆ ಇದೆ. ಶ್ರೀ ಕೃಷ್ಣ ಕೂಡ ಇಂತಹ ಅಪವಾದಕ್ಕೆ ಒಳಗಾಗಿದ್ದ. ಶಮಂತಕ ಮಣಿಯನ್ನು ಕದ್ದ ಆರೋಪ ಎದುರಿಸಿದ್ದ. ಹೀಗಾಗಿ ಇಂದಿಗೂ ಜನರು ಚೌತಿಯಂದು ಚಂದ್ರನ ದರ್ಶನವಾದರೆ ಅಪವಾದ ಎದುರಿಸಬೇಕಾದೀತು ಎಂದೇ ನಂಬುತ್ತಾರೆ.

ಪರಿಹಾರವೇನು?
ಒಂದುವೇಳೆ ಗಣಪತಿ ಹಬ್ಬದಂದು ಅಪ್ಪಿತಪ್ಪಿ ಚಂದ್ರನನ್ನು ನೋಡಿದರೆ ಅದಕ್ಕೆ ಪರಿಹಾರವನ್ನೂ ಗಣಪತಿಯೇ ಸೂಚಿಸಿದ್ದಾನೆ. ಕೃಷ್ಣ ಶಮಂತಕ ಮಣಿ ಕಥೆಯನ್ನು ಕೇಳಿದರೆ ಈ ಅಪವಾದ ಕಾಡುವುದಿಲ್ಲ ಎಂದು ಭರವಸೆಯನ್ನು ನೀಡಿದ್ದಾನೆ. ಹೀಗಾಗಿ ಚಂದ್ರನನ್ನು ನೋಡಿದವರು ಈ ಕಥೆಯನ್ನು ಕೇಳುತ್ತಾರೆ. ಕಥೆ ಹೀಗಿದೆ;

ಬಹಳ ಹಿಂದೆ ಸತ್ರಾರ್ಜಿತ ಎಂಬ ರಾಜನಿದ್ದನು. ಅವನು ತಪಸ್ಸು ಮಾಡಿ, ಸೂರ್ಯನಿಂದ ಶಮಂತಕ ಮಣಿಯನ್ನು ವರವಾಗಿ ಪಡೆದಿದ್ದನು. ಇದು ಪ್ರತಿ ದಿನಕ್ಕೆ 10 ತೊಲ ಬಂಗಾರ/ಚಿನ್ನ ಕೊಡುತ್ತಿತ್ತು. ಇದು ನಿನ್ನ ಬಳಿ ಇರಲು ಕ್ಷೇಮವಲ್ಲ ನನಗೆ ಕೊಡು ಎಂದು ಶ್ರೀ ಕೃಷ್ಣನು ಕೇಳುತ್ತಾನೆ. ಆದರೇ ಸತ್ರಾರ್ಜಿತನು ಇದನ್ನು ಕೊಡಲು ನಿರಾಕರಿಸುತ್ತಾನೆ.

ಒಮ್ಮೆ ಸತ್ರಾರ್ಜಿತನ ತಮ್ಮನಾದ ಪ್ರಸೇನಜಿತನು ಮಣಿಯನ್ನು ಧರಿಸಿ, ಕೃಷ್ಣನೊಂದಿಗೆ ಕಾಡಿಗೆ ಬೇಟೆಗೆಂದು ಹೋಗುತ್ತಾನೆ. ಕಾಡಿನಲ್ಲಿ ಇವರಿಬ್ಬರೂ ಬೇರೆ ಬೇರೆ ಯಾಗುತ್ತಾರೆ. ಇವನ ಕೊರಳಲ್ಲಿ ಫಳ ಫಳ ಹೊಳೆತ್ತಿದ್ದ ಮಣಿಯನ್ನು ಕಂಡು ಒಂದು ಸಿಂಹವು ಅವನನ್ನು ಕೊಂದು ತಿನ್ನುತ್ತದೆ. ಇದನ್ನು ಜಾಂಬವಂತ ನೆಂಬ ಕರಡಿಯು ಕಂಡು ಆ ಸಿಂಹವನ್ನು ಕೊಂದು ಮಣಿಯನ್ನು ಮನೆಗೆ ತೆಗೆದು ಕೊಂಡು ಹೋಗುತ್ತಾನೆ. ಇದನ್ನು ತನ್ನ ಮನೆಯಲ್ಲಿರುವ ತೊಟ್ಟಿಲಿಗೆ ಕಟ್ಟುತ್ತಾನೆ. ಇತ್ತ ಪ್ರಸೇನಜಿತನು ಮನೆಗೆ ಹಿಂತಿರುಗದಿರುವುದನ್ನು ಕಂಡು, ಮಣಿಯ ಆಸೆಗಾಗಿ ಕೃಷ್ಣನೇ ಅವನನ್ನು ಕೊಂದಿದ್ದಾನೆ ಎಂದು ಸತ್ರಾರ್ಜಿತನು ಅಪಪ್ರಚಾರ ಮಾಡುತ್ತಾನೆ.

ಅಪವಾದ ಹೊತ್ತ ಕೃಷ್ಣನು ಮಣಿಯನ್ನು ಹುಡುಕಿಕೊಂಡು ಕಾಡಿಗೆ ಹೋಗುತ್ತಾನೆ. ಕಾಡಿನಲ್ಲಿ ಪ್ರಸೇನಜಿತನನ್ನು ಕೊಂದ ಸ್ಥಳ ಹುಡುಕುತ್ತಾನೆ. ಅಲ್ಲಿ ಸಿಂಹದ ಹೆಜ್ಜೆ ಗುರುತುಗಳನ್ನು ಕಂಡು, ಅದನ್ನು ಅನುಸರಿಸಿ ಹೋಗುತ್ತಾನೆ. ಹೀಗೆ ಜಾಂಬವಂತನ ಗುಹೆಯನ್ನು ಪ್ರವೇಶಿಸಿ ಅಲ್ಲಿ ಹೊಳೆಯುತ್ತಿದ್ದ ಮಣಿಯನ್ನು ತೆಗೆದುಕೊಳ್ಳಲು ಹೋಗುತ್ತಾನೆ. ಆಗ ಜಾಂಬವಂತ ತನ್ನ ಮನೆಗೆ ಬರುತ್ತಾನೆ.

ಮಣಿ ತೆಗೆದುಕೊಳ್ಳಲು ಹೊರಟ ಕೃಷ್ಣ ಮತ್ತು ಜಾಂಬವಂತನ ನಡುವೆ 21 ದಿನಗಳ ಕಾಲ ಯುದ್ಧ ನಡೆಯುತ್ತದೆ. ನಂತರ ತಾನು ರಾಮನ ಅವತಾರವಾದ ಕೃಷ್ಣನ ಜೊತೆ ಯುದ್ಧ ಮಾಡುತ್ತಿರುವುದು ಎಂದು ಜಾಂಬವಂತನಿಗೆ ಅರಿವಾಗಿ, ಯುದ್ಧ ನಿಲ್ಲಿಸಿ, ಮಣಿಯನ್ನು ಕೊಟ್ಟು ಜತೆಗೆ ಮಗಳನ್ನು(ಜಾಂಬವತಿ) ಕೊಟ್ಟು ಮದುವೆ ಮಾಡಿ ಕಳುಹಿತ್ತಾನೆ.

ಮಣಿಯೊಂದಿಗೆ ಕೃಷ್ಣ ಹಿಂದಿರುಗಿ, ಸತ್ರಾರ್ಜಿತನಿಗೆ ಮಣಿಯನ್ನು ಒಪ್ಪಿಸುತ್ತಾನೆ. ಮತ್ತು ಆರೋಪದಿಂದ ಮುಕ್ತನಾಗುತ್ತಾನೆ. ಯಾಕೆ ತನ್ನ ಮೇಲೆ ಈ ರೀತಿಯ ಆರೋಪ ಬಂತು ಎಂದು ಶ್ರೀಕೃಷ್ಣನು ನೋಡಲು ಅವನು ಚೌತಿಯಂದು ಚಂದ್ರನ ದರ್ಶನ ಮಾಡಿರುವುದು ಗೊತ್ತಾಗುತ್ತದೆ. ಈ ಕಥೆಯನ್ನು ಕೇಳಿದರೆ ಚಂದ್ರ ದರ್ಶನ ಮಾಡಿದ ಆರೋಪದಿಂದ ಮುಕ್ತರಾಗಬಹುದು.

ಮಂತ್ರವೂ ಇದೆ!
ಚಂದ್ರ ದರ್ಶನದ ದೋಷ ಪರಿಹಾರವಾಗಲು ಈ ಮಂತ್ರವನ್ನೂ ಹೇಳಬಹುದು; ಕೆಲವರು ಕೃಷ್ಣ ಶಮಂತಕ ಮಣಿ ಕಥೆಯನ್ನು ಕೇಳಿ ನಂತರ ಈ ಮಂತ್ರ ಹೇಳಿದರೆ, ಇನ್ನು ಕೆಲವರು ಕೇವಲ ಮಂತ್ರ ಹೇಳುತ್ತಾರೆ. ಇದರಿಂದ ಚಂದ್ರ ದರ್ಶನದ ಶಾಪ ತಟ್ಟುವುದಿಲ್ಲ.
ಸಿಂಹಃ ಪ್ರಸೇನಮವಧೀತ್ಸಿಂಹೋ ಜಾಂಬುವತಾ ಹತಃ |
ಸುಕುಮಾರಕ ಮಾ ರೋದೀಃ ತವ ಹ್ಯೇಷ ಸ್ಯಮಂತಕಃ ||

ಇದನ್ನೂ ಓದಿ| ಗಣಪತಿ ಬಪ್ಪಾ ಮೋರ‍್ಯಾ ಎಂದರೇನು ಗೊತ್ತಾ? ಈ ಮರಾಠಿ ಘೋಷಣೆಗಿದೆ ಕರ್ನಾಟಕದ ಲಿಂಕ್‌!

Exit mobile version