Site icon Vistara News

Ganesh Chaturthi: ಗಣಪ ನಮಗೇಕೆ ಇಷ್ಟು ಆಪ್ತ?

Ganesha idol

ಅಲಕಾ ಕೆ

ಗಣಪತಿಯನ್ನು (Ganesh Chaturthi) ನಾನಾ ಹೆಸರುಗಳಿಂದ ಕೊಂಡಾಡುತ್ತಾ, ಆತನ ಆಗಮನಕ್ಕೆ ಥರಾವರಿಯಾಗಿ ಸಿದ್ಧತೆ ನಡೆಸಿದ್ದೇವೆ. ಹೊಸ ಬಟ್ಟೆ-ಬಾಗಿನಗಳಿಂದ ಹಿಡಿದು, ಕಡುಬು-ಕಜ್ಜಾಯ, ಮಂತ್ರ-ಪುಷ್ಪಗಳವರೆಗೆ ಸಕಲ ಸಡಗರವನ್ನೂ ಮಾಡಿಕೊಂಡು ಭಾದ್ರಪದ ಚೌತಿಯನ್ನು ಎದುರು ನೋಡುತ್ತೇವೆ. ಆದರೆ ನಮಗೇಕೆ ಗಣಪಣ್ಣನ ಮೇಲೆ ಇಷ್ಟೊಂದು ಅಕ್ಕರೆ?
ಈ ದೇವರು ನಮಗೆ ಆಪ್ತರಾಗುವುದು ಹೇಗೆ? ದೇವರೆಂಬ ಭಯ ನಮ್ಮ ಮನದಲ್ಲಿ ನಿಲ್ಲದಂತೆ ಆತನೇ ನಿವಾರಿಸಿಕೊಳ್ಳಬೇಕೆ ಅಥವಾ ಅದು ನಮ್ಮ ಕೆಲಸವೇ? ದೇವರೆಂಬ ಕಲ್ಪನೆ ಹುಟ್ಟಿದಾರಭ್ಯ ಇಂದಿನವರೆಗೆ ಒಂದೇ ರೀತಿಯಲ್ಲಿದ್ದಿದ್ದರೆ ಹಿಮಾಲಯದಂತೆ ತಣ್ಣಗೆ, ಎತ್ತರಕ್ಕೆ, ದೂರವಾಗಿಯೇ ಇರುತ್ತಿತ್ತೇನೋ. ಹಾಗಾಗದೆ ಯುಗಧರ್ಮಕ್ಕೆ ತಕ್ಕ ಅವತಾರಗಳನ್ನು ತಾಳಿದ್ದಕ್ಕೆ, ಕಥೆಗಳನ್ನು ಸೃಷ್ಟಿಸಿಕೊಂಡಿದ್ದಕ್ಕೆ, ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಸಾಂಸ್ಕೃತಿಕವಾಗಿ ಸಂಪನ್ನತೆಯನ್ನು ಗಳಿಸಿ, ಜನಮಾನಸದಲ್ಲಿ ಬೇರೂರುವುದಕ್ಕೆ ಸಾಧ್ಯವಾಯಿತು. ಸರಳವಾಗಿ ಅಗಲ ಕಿವಿ, ಉದ್ದ ಮೂಗು, ಡೊಳ್ಳು ಹೊಟ್ಟೆ- ಇಷ್ಟು ಬರೆದರೆ ಸಾಕು, ಪ್ರಥಮ ಪೂಜಿತ ಸಿದ್ಧ! ಭಗವಂತನ ಈ ನಮ್ಯತೆಯೇ ಸಾಕು ಜನರಲ್ಲಿ ಆತನ ಬಗ್ಗೆ ವಿನಮ್ರತೆ ಮೂಡಿಸುವುದಕ್ಕೆ. ಈ ಹಿನ್ನೆಲೆಯಲ್ಲಿ, ಗಣಾಧಿಪನೂ, ಗುಣಾಧಿಪನೂ ಆದ ಪ್ರಣವನ ಒಂದಿಷ್ಟು ಪ್ರವರಗಳು ಇಲ್ಲಿವೆ.

ಈತ ಶ್ರಮಜೀವಿಗಳ ದೇವ

ಗಣಪತಿ ಎಂದರೆ ವಿಘ್ನ ವಿನಾಶಕ, ಪ್ರಥಮ ವಂದಿತ, ವಿದ್ಯೆ, ನಾಟ್ಯ, ಸಂಗೀತಗಳಿಗೆ ಅಧಿದೇವತೆ, ಸಿದ್ಧಿ ಪ್ರದಾಯಕ, ಯೋಗಿಗಳ ಪಾಲಿಗೆ ಮೂಲಾಧಾರ ಚಕ್ರದ ಮೂಲದೈವ, ವ್ಯಾಸರ ಪಾಲಿಗೆ ಮಹಾಕಾವ್ಯ ಸಂಪಾದಕ, ಸಾರ್ವಜನಿಕ ಗಣೇಶೋತ್ಸವಗಳ ಮೂಲಕ ಸಮಾಜ ಸಂಘಟನೆಯ ಮೂಲ ಪುರುಷ… ಇತ್ಯಾದಿ ಬಹಳಷ್ಟು ವಿಶೇಷಣಗಳುಂಟು. ಅವೆಲ್ಲವನ್ನೂ ಮೀರಿ ಗಣಪತಿಯನ್ನು ಧಾನ್ಯಾಧಿದೇವತೆ, ಕೃಷಿದೇವತೆ, ಕಷ್ಟಸಹಿಷ್ಣುಗಳ ಭಗವಂತ ಎಂಬಂತೆಯೂ ವರ್ಣಿಸಲಾಗುತ್ತದೆ. ಮನುವಿನದ್ದು ಎನ್ನಲಾಗುವ ಶ್ಲೋಕವೊಂದು ಗಣಪತಿಯ ಬಗ್ಗೆ ಹೇಳುವುದು ಹೀಗೆ-
ವಿಪ್ರಾಣಾಂ ದೈವತಂ ಶಂಭುಃ
ಕ್ಷತ್ರಿಯಾಣಾಂ ತು ಮಾಧವಃ
ವೈಶ್ಯಾಣಾಂ ತು ಭವೇತ್‌ ಬ್ರಹ್ಮಾ
ಶೂದ್ರಾಣಾಂ ಗಣನಾಯಕಃ

ಗಣಪತಿಯ ಹುಟ್ಟಿನ ಕಥೆಗಳನ್ನು ಕೇಳಿದರೆ ಈತನನ್ನು ಶ್ರಮಜೀವಿಗಳ ದೇವ ಎಂದರೆ ತಪ್ಪೇನಿಲ್ಲ. ತಾಯ ಬಸಿರಿನಿಂದ ಬಾರದೆ, ತಾಯಿ ಮೈಯ ಬೆವರು-ಮಣ್ಣಿನಿಂದ ಸೃಷ್ಟಿಗೊಂಡವ ಎಂಬುದು ಪ್ರಧಾನವಾಗಿ ಗಣಪತಿಯ ಜನನದ ಬಗ್ಗೆ ಪ್ರಚಲಿತ ಇರುವಂಥದ್ದು. ಗಣಪನಿಗೆ ಗರಿಕೆಯೇ ಶ್ರೇಷ್ಠವಾಗುವುದು, ದುಡಿಯುವವರಿಗೆ ಪೌಷ್ಟಿಕ ಆಹಾರ ಬೇಕು ಎಂಬಂತೆ ಉಂಡೆ, ಮೋದಕ, ಕಡುಬುಗಳನ್ನು ಆತನ ಕೈಯಲ್ಲಿರಿಸುವುದು, ಕಬ್ಬು, ಬತ್ತದ ತೆನೆಗಳನ್ನು ಆತನಿಗೆ ನೀಡುವುದು, ಮಣ್ಣಿನ ಮೂರ್ತಿ ನಿಸರ್ಗದಲ್ಲಿ ಲೀನವಾಗುವಂತೆ ನೀರಿನಲ್ಲಿ ವಿಸರ್ಜಿಸುವುದು, ಮೊರದಂಥ ಕಿವಿ, ಕಣಜದಂಥ ಹೊಟ್ಟೆ, ಆನೆ ಮುಖ, ಇಲಿ, ಹಾವುಗಳ ಸಾಂಗತ್ಯ- ಇಂಥವುಗಳ ಗಣಪತಿಯನ್ನು ಮಣ್ಣಿಗೆ, ಶ್ರಮಕ್ಕೆ, ನಿಸರ್ಗಕ್ಕೆ ಇನ್ನಷ್ಟು ಹತ್ತಿರವಾಗಿಸುತ್ತವೆ. ಈ ಮೂಲಕ ಗಣಪಣ್ಣ ಯಾವುದೇ ಭಾಷೆ, ಪ್ರಾಂತ್ಯ, ಜಾತಿ, ಪಂಗಡಗಳಿಗೆ ಸೀಮಿತಗೊಳ್ಳದೆ ಜನರೆಲ್ಲರಿಗೂ ಮೆಚ್ಚಾಗುತ್ತಾನೆ.

ಹುಟ್ಟಿನ ಕಥೆಗಳು

ಪುರಾಣಗಳ ಪ್ರಕಾರ, ಶಿವ-ಪಾರ್ವತಿಯರ ಸುತ ಈತ. ಇನ್ನೂ ಹೇಳಬೇಕೆಂದರೆ ಪಾರ್ವತಿಯ ಮುದ್ದಿನ ಮಗ. ಆದರೆ ಆತನ ಹುಟ್ಟಿನ ಬಗ್ಗೆ ವಿಧವಿಧವಾದ ಕಥೆಗಳಿವೆ. ಜನಪ್ರಿಯವಾದ ಕಥೆಯ ಬಗ್ಗೆ ಮತ್ತಿಲ್ಲಿ ಉಲ್ಲೇಖ ಬೇಡ. ಅದರ ಹೊರತಾಗಿ, ಕಾಶ್ಮೀರಕವಿಯಾದ ಜಯರಥನ ಹರಚರಿತ ಚಿಂತಾಮಣಿಯಲ್ಲಿ ಪಾರ್ವತಿ-ಗಂಗೆ ಇಬ್ಬರೂ ಮಗನೂ ಹೌದಾಗಿದ್ದ ಗಣಪನನ್ನು, ಪಾರ್ವತೀಸುತನೆಂದು ತೀರ್ಮಾನಿಸುವುದು ಶಿವ. ಆದರೆ ಬ್ರಹ್ಮವೈವರ್ತಕ ಪುರಾಣದಲ್ಲಿ ಗಣೇಶನ ಜನನ ವೃತ್ತಾಂತವೇ ಬೇರೆ. ಪಾರ್ವತಿ ತನ್ನ ಮಗುವನ್ನು ತೋರಿಸಲು ಎಲ್ಲರೊಂದಿಗೆ ಶನಿಯನ್ನೂ ಕರೆದಿದ್ದಳಂತೆ. ಶನಿಯ ವಕ್ರದೃಷ್ಟಿ ಬೀಳುತ್ತಿದ್ದಂತೆ ಮಗುವಿನ ತಲೆ ಬಿದ್ದು ಹೋಗಿ, ಬದಲಿಗೆ ಆನೆಯ ತಲೆಯನ್ನು ವಿಷ್ಣು ತಂದು ಅಂಟಿಸಿದನಂತೆ. ಆತ ಏಕದಂತನಾದ ಬಗ್ಗೆಯೂ ನಾನಾ ಕಥೆಗಳಿವೆ. ಪರಶುರಾಮನೊಂದಿಗಿನ ಯುದ್ಧದಲ್ಲಿ ದಂತ ಮುರಿಯಿತೆಂದು ಬ್ರಹ್ಮವೈವರ್ತಕ ಪುರಾಣ ಹೇಳಿದರೆ, ರಾವಣ ಮುರಿದನೆಂದು ಮಾಘಕವಿ ಶಿಶುಪಾಲ ವಧೆಯಲ್ಲಿ ಹೇಳುತ್ತಾನೆ. ಕುಮಾರಸ್ವಾಮಿಯೊಂದಿಗಿನ ಲೋಕ ಸುತ್ತುವ ಸ್ಪರ್ಧೆಯಲ್ಲಿ ಹಲ್ಲು (ದಂತ!) ಮುರಿಯಿತು ಎನ್ನುತ್ತದೆ ಹರಚರಿತ ಚಿಂತಾಮಣಿ.

ಗಣಪಣ್ಣನಿಗೆ ಮದುವೆಯಾಗಿದೆಯೇ?

ಇದು ಆತನ ಬಗೆಗಿನ ಇನ್ನೊಂದು ಮುಖ್ಯ ಪ್ರಶ್ನೆ. ಈ ಅಣ್ಣನಿಗೆ ಮದುವೆಯಾಗಿದ್ದರೆ ಅತ್ತಿಗೆ ಯಾರು? ಅವನಿಗೆ ಮದುವೆಯಿಲ್ಲ, ಆತ ಬ್ರಹ್ಮಚಾರಿ ಎನ್ನುವಂಥ ಪುರಾಣಗಳು ಕೆಲವಾದರೆ, ಸಿದ್ಧಿ, ಬುದ್ಧಿಯರನ್ನು ಆತ ವಿವಾಹವಾಗಿದ್ದಾನೆ ಎಂಬ ಕಥೆಗಳುಂಟು. ನೋಡಿ, ಆತನಿಗೆ ಒಂದೋ ಮದುವೆಯೇ ಇಲ್ಲ ಅಥವಾ ದ್ವಿಪತ್ನೀವಲ್ಲಭ! ಇನ್ನೂ ಮುಂದುವರಿದು, ಸಿದ್ಧಿಯಲ್ಲಿ ಕ್ಷೇಮ ಮತ್ತು ಬುದ್ಧಿಯಲ್ಲಿ ಲಾಭ ಎಂಬ ಮಕ್ಕಳನ್ನೂ ಆತ ಪಡೆದ ಕಥೆಗಳಿವೆ. ಈತನ ಸಂಸಾರದಲ್ಲಿ ಸಿದ್ಧಿ, ಬುದ್ಧಿ, ಕ್ಷೇಮ, ಲಾಭಗಳೆಲ್ಲಾ ಇರುವುದಕ್ಕೋ ಏನೋ, ಈತ ಕೇವಲ ದೇವಳಗಳಲ್ಲಿ ಮಾತ್ರವಲ್ಲ, ಊರ ಕೋಟೆಗಳಲ್ಲೂ ಪ್ರತಿಷ್ಠಾಪಿತ. ಮಕ್ಕಳಿಂದ ಹಿಡಿದು ವೃದ್ಧರವರೆಗೆ, ಮಾನವ ನಿರ್ಮಿತ ಎಲ್ಲಾ ಬೇಲಿ, ಕಂದಕಗಳನ್ನೂ ದಾಟಿ ಪೂಜಿತ.

ಗಣಪನ ಕಲ್ಪನೆ ಅರ್ವಾಚೀನವೇ?

ಪೌರಾಣಿಕವಾಗಿ ಗಣಪತಿಯ ಕಥೆ-ಕಲ್ಪನೆಗಳು ಏನೇ ಇದ್ದರೂ, ಈಗ ನಮ್ಮೆದುರಿಗಿರುವ ಮುದ್ದು ಮುಖದ ಗಣಪನ ಕಲ್ಪನೆಗಳು ಪುರಾಣ ಪೂರ್ವದ ಋಗ್ವೇದದಲ್ಲಿ ಇದ್ದಂತಿಲ್ಲ. ಎಲ್ಲರಂತೆ ಆತನೂ ಒಬ್ಬ ಸಾಮಾನ್ಯ ದೇವತೆಯಂತೆ ಕಂಡುಬರುತ್ತಾನೆ. ಋಗ್ವೇದದಲ್ಲಿ ಇರುವ ʻಗಣಾನಾಂ ತ್ವಾಂ ಗಣಪತಿಂ ಹವಾಮಹೇʼ ಎಂಬ ಋಕ್ಕು ಗಣಪತಿ ಪೂಜೆಯ ಮುಖ್ಯಮಂತ್ರವಾಗಿ ಬಳಕೆಯಲ್ಲಿದ್ದರೂ, ಇಲ್ಲಿರುವ ಗಣಪತಿ ಶಬ್ದಕ್ಕೆ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿ ಎಂದು ಸಹ ವಿದ್ವಾಂಸರು ಅರ್ಥೈಸುತ್ತಾರೆ. ಯಜುರ್ವೇದದ ತೈತ್ತರೀಯ ಸಂಹಿತೆಯಲ್ಲಿ ʻನಮೋ ಗಣೇಭ್ಯೋ ಗಣಪತಿಭ್ಯಶ್ಚವೋ ನಮಃʼ ಎಂಬ ಮಂತ್ರದಲ್ಲಿ ಅನೇಕ ಗಣಪತಿಗಳ ಉಲ್ಲೇಖವಿದೆ. ಪ್ರಾಚೀನವಾದ ಮಾನವಗೃಹ್ಯಸೂತ್ರದಲ್ಲಿ ಈ ವಿನಾಯಕರ ಹೆಸರುಗಳನ್ನು ಸಾಲಕಟಂಟಕ, ಕೂಶ್ಮಾಂಡ, ರಾಜಪುತ್ರ ಉಸ್ಮಿತ ಮತ್ತು ದೇವಯಜನ ಎಂದು ಹೇಳಲಾಗಿದೆ. ಮುಂದೆ ಯಾಜ್ಞವಲ್ಕ್ಯ ಸೃತಿಯಲ್ಲಿ ಈ ವಿನಾಯಕರ ತಾಯಿ ಅಂಬಿಕೆಯೆಂದೂ, ವಿಘ್ನ ಪರಿಹಾರಕ್ಕೆ ಇವರನ್ನು ತೃಪ್ತಿ ಪಡಿಸಬೇಕೆಂದೂ ಹೇಳಲಾಗಿದೆ.
ತನ್ನ ಹುಟ್ಟಿನ ಆರಂಭದಲ್ಲೇ ಭಗ್ನವಾಗಿ, ಅದೇ ಕಾರಣಕ್ಕಾಗಿ ಪ್ರಥಮ ವಂದಿತ, ವಿಘ್ನ ನಿವಾರಕ ಆಗುವಂಥ ವರವನ್ನು ತಂದೆಯಿಂದಲೇ ಪಡೆದ ಗಣಪತಿಯ ದಂತಿ ಮುಖ, ಮಂದಸ್ಮಿತ ಮುಂತಾದ ಇಂದಿನ ಸ್ವರೂಪ ಕ್ರಿ. ಶ ಆರನೇ ಶತಮಾನದ ಆಜೂಬಾಜು ಅಸ್ತಿತ್ವಕ್ಕೆ ಬಂದಿತೆಂಬುದು ಅಂದಾಜು. ಇದೇ ಕಾಲದ ಪ್ರಾಚೀನ ಶಿಲಾ ಮೂರ್ತಿಗಳು ಜೋಧಪುರ, ಬಾದಾಮಿ, ಐಹೊಳೆ ಮುಂತಾದೆಡೆಗಳು ಲಭ್ಯವಿದೆ. ಈ ಹಿನ್ನೆಲೆಯಲ್ಲಿ, ಗಣಪತಿಯ ಗುಣವಿಶೇಷಗಳನ್ನು ಸಾರುವ ಪುರಾಣಗಳು ಆನಂತರ ರಚಿತವಾಗಿರಬಹುದೆಂಬ ಊಹೆ ಇದೆ. ರಾಮಾಯಣ ಮತ್ತು ಮಹಾಭಾರತದ ಮೂಲರೂಪದಲ್ಲಿ ಗಣಪತಿಯ ಬಗ್ಗೆ ಉಲ್ಲೇಖಗಳಿಲ್ಲ. ವ್ಯಾಸರು ನೀಡಿದ ಮಹಾಭಾರತದ ಉಕ್ತಲೇಖನವನ್ನು ಗಣಪತಿ ತನ್ನ ಸೊಂಡಿಲು ಮುರಿದು ಬರೆಯುತ್ತಾ ಹೋದ ಕಥೆಗಳೆಲ್ಲಾ ಪ್ರಕ್ಷಿಪ್ತವಾಗಿ ಸೇರಿಕೊಂಡಿದೆ ಎಂಬ ವಾದಗಳೂ ಇವೆ.

ಭಾರತಕ್ಕೆ ಸೀಮಿತನಲ್ಲ!

ಹೌದು. ಹಿಂದೆ ಭಾರತೀಯ ಸಂಸ್ಕೃತಿಯ ಸಂಪರ್ಕಕ್ಕೆ ಬಂದ ಹಲವಾರು ದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ದೇಶಗಳಲ್ಲಿ ಗಣಪತಿಯ ಕಲ್ಪನೆ ಇದೆ, ಆರಾಧನೆಯೂ ಇದೆ. ಜಾವಾ, ಥಾಯ್ಲೆಂಡ್‌, ಕಾಂಬೋಡಿಯದಂಥ ಆಗ್ನೇಯ ಏಷ್ಯಾ ದೇಶಗಳಲ್ಲಿ ಗಣಪತಿ ಹಿಂದೂ ಸಂಪ್ರದಾಯದ ಅನ್ವಯ ಇದ್ದರೆ, ಶ್ರೀಲಂಕಾ, ಜಪಾನ್‌ ಮತ್ತು ಚೀನಾಗಳಲ್ಲಿ ಬೌದ್ಧ ಸಂಪ್ರದಾಯದ ಪ್ರಭಾವಕ್ಕೆ ಒಳಗಾಗಿರುವಂತೆ ಕಾಣುತ್ತದೆ. ಅದರಲ್ಲೂ ಬುದ್ಧನ ಜಾತಕ ಕಥೆಗಳಲ್ಲಿ ಹಿಂದಿನ ಜನ್ಮಗಳಲ್ಲಿ ಬುದ್ಧ ಆನೆಯೇ ಆಗಿದ್ದನಂತೆ. ಬುದ್ಧನಾಗಿದ್ದ ಜನ್ಮದಲ್ಲಿ ಆತ ತಾಯಿಯ ಹೊಟ್ಟೆಯಲ್ಲಿದ್ದಾಗ ಬಿಳಿಯ ಆನೆಯೊಂದು ಆಕೆಯ ಗರ್ಭವನ್ನು ಚುಚ್ಚಿತ್ತು ಎಂದೂ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಬೌದ್ಧರ ಪ್ರಭಾವವಿದ್ದ ಪ್ರಾಂತ್ಯಗಳಲ್ಲಿ ಆನೆ ಮುಖದ ದೇವರ ಆರಾಧನೆಗೆ ಮಹತ್ವ ದೊರೆತಿದೆ.
ಮಾನವನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿಯ ವಿಕಸನದೊಂದಿಗೆ ನಮ್ಮ ಗಣೇಶ ದೇವನೂ ವಿಕಾಸ ಹೊಂದುತ್ತಾ ಬಂದಿರುವುದನ್ನು ಕಾಣುತ್ತೇವೆ. ದೇಶ, ಕಾಲ, ಪಾತ್ರಗಳನ್ನು ಮೀರಿ, ನಮ್ಮ ಅಮೂರ್ತ ಪ್ರಜ್ಞೆಯ ಭಾಗವಾಗಿ, ವಿದ್ಯೆ ನೀಡುತ್ತಾ, ಸಿದ್ಧಿ ಪ್ರದಾಯಕನಾಗಿ, ವಿಘ್ನ ನಿವಾರಿಸುತ್ತಾ ಮೂರ್ತ ರೂಪದಲ್ಲಿ ಮನೆಮನೆಗೆ ಬರುವವನಾತ. ನಮ್ಮ ಕಲ್ಪನೆಯ ರೂಪವನ್ನು ತಾನು ಧರಿಸಿ, ನಮ್ಮಿಷ್ಟದ ಕಡುಬು-ಕಜ್ಜಾಯಗಳನ್ನು ತಾನು ತಿಂದು, ನಾವು ನಿವೇದಿಸಿದ ಮಂತ್ರ-ಪುಷ್ಪಗಳಿಂದ ಪೂಜಿತನಾಗುತ್ತಾನೆ ಗಣಪ. ಹೀಗೆ ನಮ್ಮೊಂದಿಗೆ ನಮ್ಮಂತೆಯೇ ಇರುವ ದೇವರೇ ಅಲ್ಲವೇ ನಮಗೆ ಆಪ್ತರಾಗುವುದು?

ಇದನ್ನೂ ಓದಿ: Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು!

Exit mobile version