Site icon Vistara News

Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?

Ganesh Chaturthi

ಗಣೇಶ ಚತುರ್ಥಿ ಹಬ್ಬ (Ganesh Chaturthi) ಹತ್ತಿರ ಬಂದಿದೆ. ಎಲ್ಲೆಡೆ ಸಾರ್ವಜನಿಕ ಗಣೇಶನನ್ನು ಕೂರಿಸಲೆಂದು ಭರ್ಜರಿ ತಯಾರಿಯೂ ನಡೆಯುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈ ಹಬ್ಬಕ್ಕೆಂದು ಉತ್ಸುಕತೆಯಲ್ಲಿದ್ದಾರೆ. ಹಾಗಾದರೆ ಈ ಹಬ್ಬದ ಹಿನ್ನೆಲೆ ಏನು? ಏಕೆ ಈ ಹಬ್ಬ ಆಚರಿಸಲಾಗುತ್ತದೆ? ಎಲ್ಲೆಲ್ಲಿ ಯಾವ ರೀತಿಯಲ್ಲಿ ಗಣೇಶನ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ? ಎನ್ನುವುದರ ಕುರಿತಾದ ಮಾಹಿತಿ ಇಲ್ಲಿದೆ.
1892ರಲ್ಲಿ ಪುಣೆಯಲ್ಲಿ ಬಾಹುಸಾಹೇಬ್ ಲಕ್ಷ್ಮಣ ಜಾವಲೆ ಅವರು ಮೊದಲ ಬಾರಿಗೆ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೂ ಮಹಾರಾಷ್ಟ್ರದಾದ್ಯಂತ ಅತಿ ದೊಡ್ಡ ಹಬ್ಬವಾಗಿ ಆಚರಣೆಯಾಗುತ್ತಿರುವುದು ಈ ಗಣೇಶ ಚತುರ್ಥಿಯೇ. ಈ ಹಬ್ಬದಲ್ಲಿ ಮಹಿಳೆಯರು ಪಾರ್ವತಿ ದೇವಿಯನ್ನು ಪೂಜಿಸುತ್ತಾರೆ. ಏಳು ಬೆಣಚುಕಲ್ಲುಗಳನ್ನು ಸಂಗ್ರಹಿಸಿ ಅದನ್ನು ಗೌರಿ ರೂಪ ಎಂದು ಸ್ಥಾಪಿಸಿ, ಪೂಜೆ ಮಾಡಲಾಗುತ್ತದೆ. ಅದೇ ರೀತಿ ಗೋವಾದಲ್ಲಿ ಗಣಪತಿಗೆ ಹೊಸದಾಗಿ ಕೊಯ್ಲು ಮಾಡಿದ ಭತ್ತವನ್ನು ಅರ್ಪಿಸಲಾಗುತ್ತದೆ. ಗಣಪನ ವಿಸರ್ಜನೆ ನಂತರ ಆ ಭತ್ತವನ್ನು ಮನೆಯ ಮುಂದೆ ನೇತು ಹಾಕಲಾಗುತ್ತದೆ. ಹೀಗೆ ವಿವಿಧ ರಾಜ್ಯಗಳಲ್ಲಿ ಗಣಪತಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿಕೊಂಡು ಬರಲಾಗುತ್ತಿದೆ.

ಇತಿಹಾಸ ಮತ್ತು ಮೂಲ

ಶಿವಾಜಿ ಕಾಲದಲ್ಲಿ ಪೇಶ್ವೆಗಳು ಗಣೇಶನ ಅನುಯಾಯಿಗಳಾಗಿದ್ದರು. ಅವರು ಭಾದ್ರಪದ ಮಾಸದಲ್ಲಿ ಗಣೇಶನಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಿದ್ದರು. ಸಾರ್ವಜನಿಕವಾಗಿಯೂ ಆಚರಣೆ ನಡೆಸಲಾಗುತ್ತಿತ್ತು. ಆದರೆ ಬ್ರಿಟಿಷರ ಕಾಲದಲ್ಲಿ ಅದಕ್ಕೆ ನಿಷೇಧ ಹೇರಲಾಯಿತು. ಮನೆಯೊಳಗೆ ಮಾತ್ರವೇ ಪೂಜೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ನಂತರ 1893ರಲ್ಲಿ ಸಮಾಜ ಸುಧಾರಕ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವಕ್ಕೆ ಚಾಲನೆ ಕೊಟ್ಟರು. ಅಂದಿನಿಂದ ಇಂದಿನವರೆಗೂ ಗಣೇಶನನ್ನು ಸಾರ್ವಜನಿಕವಾಗಿ, ಜಾತಿ ಭೇದ ತೋರದೆ ಪೂಜೆ ಮಾಡಿಕೊಂಡು ಬರಲಾಗುತ್ತಿದೆ.

ನೈವೇದ್ಯ

ಹಬ್ಬವೆಂದರೆ ಹಬ್ಬದೂಟ ಇರಲೇಬೇಕು. ಅದರಲ್ಲೂ ಗಣಪ ಆಹಾರ ಪ್ರಿಯ. ಆತನಿಗೆ ಮೋದಕ, ಲಡ್ಡುಗಳೆಂದರೆ ಇಷ್ಟ ಎಂದು ನಂಬಲಾಗಿದೆ. ಹಾಗಾಗಿ ಗಣೇಶ ಚತುರ್ಥಿಯಂದು ಗಣಪನಿಗೆ ವಿಶೇಷವಾಗಿ ಮೋದಕವನ್ನು ನೈವೇದ್ಯ ರೂಪದಲ್ಲಿ ನೀಡಲಾಗುತ್ತದೆ. ಹಾಗೆಯೇ ಕೆಲವು ಕಡೆಗಳಲ್ಲಿ ಲಡ್ಡುಗಳನ್ನೂ ಗಣಪನಿಗೆ ಅರ್ಪಿಸಲಾಗುತ್ತದೆ.
ಹಿಂದೆ ಅಸುರರು ಮತ್ತು ದೇವತೆಗಳು ಸಮುದ್ರ ಮಂಥನ ಮಾಡುವಾಗ ಸಮುದ್ರದಿಂದ ಉದ್ಭವಿಸಿದ ಅಮೃತದಿಂದ ಸಾಕಷ್ಟು ಸಿಹಿ ಖಾದ್ಯಗಳನ್ನು ತಯಾರಿಸಲಾಯಿತು. ಅದರಲ್ಲಿ ಒಂದು ಮೋದಕ. ಎಲ್ಲ ಮೋದಕಗಳನ್ನು ದೇವತೆಗಳು ಪಾರ್ವತಿಗೆ ಅರ್ಪಿಸಿದರು. ಪಾರ್ವತಿ ಅವುಗಳನ್ನು ಪುತ್ರ ಗಣೇಶನಿಗೆ ಅರ್ಪಿಸಿದಳು. ಗಣೇಶ ಅದನ್ನು ಪ್ರೀತಿಯಿಂದ ಇಷ್ಟಪಟ್ಟು ಸೇವಿಸಿದನಾದ್ದರಿಂದ ಗಣೇಶ ಚತುರ್ಥಿಯಂದು ಗಣಪನಿಗೆ ಮೋದಕವನ್ನೇ ನೈವೇದ್ಯವಾಗಿ ನೀಡಲಾಗುತ್ತದೆ ಎಂಬ ಪ್ರತೀತಿ ಇದೆ. ಮೋದಕ, ಲಡ್ಡು ಮಾತ್ರವಲ್ಲ, ಅರ್ಧವೃತ್ತಾಕಾರದ ಕರ್ಜಿಕಾಯಿ ಕೂಡ ಗಣೇಶನಿಗೆ ಪ್ರಿಯವಾದ ತಿನಿಸು. ಹಾಗಾಗಿ ಚೌತಿಯಂದು ಗಣೇಶನಿಗೆ ಕರ್ಜಿಕಾಯನ್ನೂ ನೈವೇದ್ಯವಾಗಿ ನೀಡುವ ಸಂಪ್ರದಾಯವಿದೆ. ಹಾಗೆಯೇ ಪಂಚಕಜ್ಜಾಯವನ್ನು ಕೂಡ ನೈವೇದ್ಯ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಗಣಪನಿಗೆ ಪಂಚಕಜ್ಜಾಯವನ್ನೇ ಮುಖ್ಯ ನೈವೇದ್ಯವಾಗಿ ನೀಡಲಾಗುತ್ತದೆ.

ಅಜ್ಜಿ ಮನೆಗೆ ಬರುವ ಗಣಪ

ಗಣಪನ ಹಬ್ಬಕ್ಕೂ ಒಂದು ದಿನ ಮೊದಲು ಗೌರಿ ಪೂಜೆಯನ್ನು ನಡೆಸಲಾಗುತ್ತದೆ. ಪುರಾಣಗಳ ಪ್ರಕಾರ ಗಣಪತಿಯು ಪಾರ್ವತಿ ದೇವಿಯು ತನ್ನ ಮೈ ಕೊಳೆಯಿಂದ ನಿರ್ಮಿಸಿದ ಮಗನಾಗಿದ್ದಾನೆ. ಶಿವನೊಂದಿಗೆ ಕುಪಿಸಿಕೊಂಡ ಪಾರ್ವತಿ ಭೂಲೋಕಕ್ಕೆ ಬಂದಿರುತ್ತಾಳೆ. ಆ ದಿನವನ್ನು ಗೌರಿ ಪೂಜೆ ಮಾಡಿ ಸಂಭ್ರಮಿಸಲಾಗುತ್ತದೆ. ಅದರ ಮಾರನೇ ದಿನ ಗಣಪತಿಯು ತನ್ನ ತಾಯಿಯನ್ನು ಕರೆದುಕೊಂಡು ಹೋಗಲೆಂದು ಭೂಲೋಕಕ್ಕೆ ಬರುತ್ತಾನೆ. ಹಾಗೆ ಬಂದ ಗಣಪ ಅಜ್ಜಿ ಮನೆಯಲ್ಲಿ ಬಗೆ ಬಗೆಯ ತಿನಿಸುಗಳನ್ನು ತಿಂದು ತಾಯಿಯನ್ನು ಕರೆದುಕೊಂಡು ಹೋಗುತ್ತಾನೆ ಎನ್ನುವುದು ನಂಬಿಕೆ. ಹಾಗಾಗಿ ಮೊದಲನೇ ದಿನ ಗೌರಿ ಪೂಜೆ ಮಾಡಿ, ಎರಡನೇ ದಿನ ಗಣಪತಿ ಪೂಜೆ ಮಾಡಿ ನಂತರ ಇಬ್ಬರನ್ನೂ ಒಟ್ಟಿಗೆ ವಿಸರ್ಜನೆ ಮಾಡಲಾಗುತ್ತದೆ.

ಚಂದ್ರನನ್ನು ನೋಡಬಾರದು ಏಕೆ?

ಯುಗಾದಿಯ ದಿನದಂದು ಚಂದ್ರನ ದರ್ಶನ ಮಾಡಬೇಕು. ಆದರೆ ಗಣೇಶ ಚತುರ್ಥಿಯ ದಿನದಂದು ಚಂದ್ರನ ದರ್ಶನ ಮಾಡಬಾರದು ಎಂದು ಹೇಳಲಾಗುತ್ತದೆ. ಅಮ್ಮನನ್ನು ಕರೆದುಕೊಂಡು ಹೋಗಲು ಬಂದ ಗಣಪ, ಹೊಟ್ಟೆ ತುಂಬ ತಿಂದು ನಡೆದುಕೊಂಡು ಹೋಗುತ್ತಿರುವಾಗ ಬಿದ್ದು ಬಿಡುತ್ತಾನೆ. ಅದನ್ನು ಕಂಡ ಚಂದ್ರ ಜೋರಾಗಿ ನಗಲಾರಂಭಿಸುತ್ತಾನೆ. ಅದರಿಂದ ಸಿಟ್ಟಿಗೆದ್ದ ಗಣಪ, ಭಾದ್ರಪದ ಶುಕ್ಲದ ಚೌತಿಯಂದು ನಿನ್ನನ್ನು ನೋಡುವವರು ವರ್ಷ ಪೂರ್ತಿ ಕಳಂಕಗಳಿಗೆ ಸಿಲುಕಿಕೊಳ್ಳಲಿ ಎಂದು ಶಾಪ ಕೊಡುತ್ತಾನೆ. ಅದೇ ಕಾರಣಕ್ಕೆ ಗಣೇಶನ ಹಬ್ಬದ ದಿನದಂದು ಚಂದ್ರನನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಒಂದು ವೇಳೆ ಅಪ್ಪಿತಪ್ಪಿ ನೋಡಿದರೆ ಗಣೇಶನ ಮಂತ್ರ ಪಠಿಸಿ ಶಾಪದಿಂದ ದೂರವಾಗಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Ganesha Chaturthi: ಮುಂಬರುವ ಗೌರಿ-ಗಣೇಶ ಹಬ್ಬಕ್ಕೆ ಎಲ್ಲೆಡೆ ಶುರುವಾಯ್ತು ಶಾಪಿಂಗ್

Exit mobile version