ಗಣಪತಿ ಹಬ್ಬಕ್ಕೆ (Ganesh Chaturthi Recipes) ದಿನಗಣನೆ ಆರಂಭವಾಗಿದೆ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗಣಪತಿಗೆ ಪೂಜೆ ಮಾಡುವುದಕ್ಕೆಂದು ಭರದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ತಿಂಡಿ ಪ್ರಿಯ ಗಣಪನಿಗೆ ನೈವೇದ್ಯಕ್ಕೆ ಇಡುವುದಕ್ಕೆ ಏನೇನು ತಿಂಡಿ ಮಾಡಬೇಕು ಎನ್ನುವ ಯೋಚನೆಯನ್ನು ಈಗಾಗಲೇ ಹೆಣ್ಣುಮಕ್ಕಳು ಮಾಡಲಾರಂಭಿಸಿದ್ದಾರೆ. ಗಣಪತಿ ಹಬ್ಬಕ್ಕೆ ಮಾಡಬಹುದಾದ ಐದು ವಿಶೇಷ ಖಾದ್ಯಗಳ ರೆಸಿಪಿಗಳು ಇಲ್ಲಿವೆ ನಿಮಗಾಗಿ.
ಮೋದಕ
ಗಣಪ ಮೋದಕ ಪ್ರಿಯ. ಗಣಪತಿ ಹಬ್ಬವೆಂದ ಮೇಲೆ ಅಲ್ಲಿ ಮೋದಕವಿರಲೇಬೇಕು. ಆ ಮೋದಕವನ್ನು ಮಾಡುವ ಬಗೆ ಇಲ್ಲಿದೆ ನೋಡಿ.
ಬೇಕಾಗುವ ಪದಾರ್ಥಗಳು:
ಸ್ಟಫಿಂಗ್ಗೆ:
1 ಚಮಚ ತುಪ್ಪ
2 ಕಪ್ ತುರಿದ ತೆಂಗಿನಕಾಯಿ
1 ಕಪ್ ಬೆಲ್ಲ
1/2 ಚಮಚ ಏಲಕ್ಕಿ ಪುಡಿ
ಹಿಟ್ಟಿಗೆ:
2 ಕಪ್ ನೀರು
1/2 ಚಮಚ ಉಪ್ಪು
1 ಚಮಚ ತುಪ್ಪ
2 ಕಪ್ ಅಕ್ಕಿ ಹಿಟ್ಟು
ಸ್ಟಫಿಂಗ್ ಮಾಡುವುದು:
- ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 1 ಚಮಚ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ 2 ಕಪ್ ತೆಂಗಿನಕಾಯಿ ಸೇರಿಸಿ.
- ತೆಂಗಿನಕಾಯಿ ಪರಿಮಳ ಬರುವವರೆಗೆ ಹುರಿದುಕೊಳ್ಳಿ.
- ಅದಕ್ಕೆ 1 ಕಪ್ ಬೆಲ್ಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬೆಲ್ಲ ಕರಗುವ ತನಕ ಮಧ್ಯಮ ಉರಿಯಲ್ಲಿ ಬೇಯಿಸಿ.
- ಮಿಶ್ರಣ ಚೆನ್ನಾಗಿ ದಪ್ಪವಾಗುವವರೆಗೆ ಬೇಯಿಸಿ, ಅದಕ್ಕೆ 1/2 ಚಮಚ ಏಲಕ್ಕಿ ಪುಡಿ ಹಾಕಿ ಕಲಸಿಡಿ.
ಮೋದಕ ಹಿಟ್ಟಿನ ತಯಾರಿಕೆ: - ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 2 ಕಪ್ ನೀರು, 1/2 ಚಮಚ ಉಪ್ಪು ಮತ್ತು 1 ಚಮಚ ತುಪ್ಪ ತೆಗೆದುಕೊಳ್ಳಿ.
- ಚೆನ್ನಾಗಿ ಮಿಶ್ರಣ ಮಾಡಿ ಮತ್ತು ನೀರನ್ನು ಕುದಿಸಿ.
- ಅದಕ್ಕೆ 2 ಕಪ್ ಅಕ್ಕಿ ಹಿಟ್ಟು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ.
- ಅಕ್ಕಿ ಹಿಟ್ಟು ಎಲ್ಲಾ ನೀರನ್ನು ಹೀರಿಕೊಳ್ಳುವವರೆಗೆ ಮಿಶ್ರಣ ಮಾಡಿ. ಅದಾದ ನಂತರ ಐದು ನಿಮಿಷಗಳ ಕಾಲ ಅದನ್ನು ತಣ್ಣಗಾಗಲು ಬಿಡಿ.
- ಹಿಟ್ಟನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ, ನಾದಲು ಪ್ರಾರಂಭಿಸಿ. 5 ನಿಮಿಷಗಳ ಕಾಲ ಅಥವಾ ಹಿಟ್ಟು ಮೃದುವಾಗುವವರೆಗೆ ನಾದಿಕೊಳ್ಳಿ.
- ಚೆಂಡಿನ ಗಾತ್ರದ ಅಕ್ಕಿ ಹಿಟ್ಟಿನ ಹಿಟ್ಟನ್ನು ತೆಗೆದುಕೊಂಡು ಅದನ್ನು ಚಪ್ಪಟೆ ಮಾಡಿ. ನೀವು ತಯಾರಿಸಿಟ್ಟುಕೊಂಡ ಸ್ಟಫಿಂಗ್ ಅನ್ನು ಒಂದು ಅದರೊಳಗೆ ಹಾಕಿ ಎಲ್ಲ ಬದಿಗಳಿಂದ ಅದನ್ನು ಮೋದಕದ ಆಕಾರದಲ್ಲಿ ಒತ್ತಿರಿ.
- ಇಡ್ಲಿ ಪಾತ್ರೆಯಲ್ಲಿ ಇಡ್ಲಿ ಬೇಯಿಸುವ ರೀತಿಯಲ್ಲಿ ಹತ್ತು ನಿಮಿಷಗಳ ಕಾಲ ಮೋದಕವನ್ನು ಬೇಯಿಸಿ.
ಶೀರಾ
ಬೇಕಾಗುವ ಪದಾರ್ಥಗಳು
2 ಚಮಚ ತುಪ್ಪ
ಸ್ವಲ್ಪ ಗೋಡಂಬಿ ಮತ್ತು ಒಣದ್ರಾಕ್ಷಿ
1/2 ಕಪ್ ರವೆ
ಒಂದೂವರೆ ಕಪ್ ನೀರು
1/2 ಕಪ್ ಸಕ್ಕರೆ
1/4 ಕಪ್ ತುಪ್ಪ
ಆಹಾರ ಬಣ್ಣ
1/2 ಚಮಚ ಏಲಕ್ಕಿ ಪುಡಿ
ಮಾಡುವ ವಿಧಾನ:
- ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ಗೋಡಂಬಿ, ಒಣ ದ್ರಾಕ್ಷಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
- ಅದು ಚಿನ್ನದ ಕಂದು ಬಣ್ಣಕ್ಕೆ ತಿರುಗಿದ ನಂತರ, ಪಕ್ಕಕ್ಕೆ ಇರಿಸಿ.
- ಉಳಿದ ತುಪ್ಪದಲ್ಲಿ 1/2 ಕಪ್ ರವೆ ಸೇರಿಸಿ, ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಹುರಿಯಿರಿ. ನಂತರ ಪಕ್ಕಕ್ಕೆ ಇರಿಸಿ.
- ದೊಡ್ಡ ಕಡಾಯಿಯಲ್ಲಿ ಒಂದೂವರೆ ಕಪ್ ನೀರನ್ನು ಹಾಕಿ, ಕುದಿಸಿ.
- ಅದಕ್ಕೆ ಹುರಿದ ರವೆ ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ.
- ರವೆ ಎಲ್ಲಾ ನೀರನ್ನು ಹೀರಿಕೊಳ್ಳುವ ತನಕ ಬೇಯಿಸಿ.
- ರವೆ ನೀರನ್ನು ಹೀರಿಕೊಂಡ ನಂತರ 1/2 ಕಪ್ ಸಕ್ಕರೆ ಸೇರಿಸಿ, ಮಿಶ್ರಣ ಮಾಡಿ.
- ಸಕ್ಕರೆ ಕರಗಿದ ನಂತರ 1/4 ಕಪ್ ತುಪ್ಪ ಮತ್ತು ಆಹಾರ ಬಣ್ಣವನ್ನು ಸೇರಿಸಿ. (ಆಹಾರ ಬಣ್ಣ ಬಳಸದೆಯೂ ಶೀರಾ ಮಾಡಬಹುದು)
- ಐದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
- ನಂತರ ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ½ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ.
ಹೋಳಿಗೆ
ಬೇಕಾಗುವ ಪದಾರ್ಥಗಳು
ಕಣಕಕ್ಕೆ:
1/2 ಕಪ್ ಮೈದಾ ಹಿಟ್ಟು ಅಥವಾ ಒಂದು ಕಪ್ ಗೋಧಿ ಹಿಟ್ಟು
1/4 ಕಪ್ ನೀರು
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಅರಿಶಿಣ
3 ಚಮಚ ಅಡುಗೆ ಎಣ್ಣೆ
ಹೂರಣಕ್ಕೆ
1/2 ಕಪ್ ಕಡ್ಲೆಬೇಳೆ
1/2 ಕಪ್ ಬೆಲ್ಲ
2 ಚಮಚ ತೆಂಗಿನ ತುರಿ
ಸ್ವಲ್ಪ ಏಲಕ್ಕಿ
ಮಾಡುವ ವಿಧಾನ
- ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಉಪ್ಪು, ಅರಿಶಿಣ ಹಾಕಿ.
- ಸ್ವಲ್ಪಸ್ವಲ್ಪವೇ ನೀರು ಹಾಕುತ್ತ ಚಪಾತಿ ಹಿಟ್ಟಿಗಿಂತ ಮೃದುವಾಗಿ ಕಲಸಿಟ್ಟುಕೊಳ್ಳಿ.
- ಮೇಲಿನಿಂದ ಸ್ವಲ್ಪ ಎಣ್ಣೆ ಸುರಿದು, 30 ನಿಮಿಷಗಳ ಕಾಲ ಅದನ್ನು ತೆಗೆದಿಡಿ.
- ಹೂರಣ ತಯಾರಿಸಲು ಬೇಳೆಯನ್ನು ತೊಳೆದು ಅದಕ್ಕೆ ಎರಡು ಪಟ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. (೩-೪ ವಿಷಲ್ ಬರಿಸಿಕೊಂಡರೆ ಸಾಕು)
- ಬೇಯಿಸಿದ ಬೇಳೆಯ ನೀರು ಬಸಿದು, ಆ ನೀರಿನಿಂದ ಸಾರು ಮಾಡಬಹುದು.
- ಬೇಯಿಸಿದ ಬೇಳೆಗೆ ತೆಂಗಿನ ತುರಿ(ಅವಶ್ಯಕಗೆ ಇದ್ದರೆ), ಪುಡಿ ಮಾಡಿದ ಬೆಲ್ಲ ಮತ್ತು ಏಲಕ್ಕಿ ಪುಡಿ ಹಾಕಿ ಕಲಿಸಿ.
- ಮಿಶ್ರಣವನ್ನು ಅರಿದು, ಅದನ್ನು ಬಾಣಲೆ ಮೇಲಿಟ್ಟು ಸ್ವಲ್ಪ ಗಟ್ಟಿಯಾಗುವವರೆಗೆ ಹುರಿಯಿರಿ.
- ಹೂರಣವನ್ನು ನಿಂಬೆ ಹಣ್ಣಿನ ಗಾತ್ರದಲ್ಲಿ ಉಂಡೆ ಮಾಡಿಟ್ಟುಕೊಳ್ಳಿ.
- ನಾದಿಟ್ಟುಕೊಂಡಿದ್ದ ಹಿಟ್ಟನ್ನು ಉಂಡೆ ಮಾಡಿ, ಅದನ್ನು ಚಪ್ಪಟೆ ಮಾಡಿ ಅದರೊಳಗೆ ಹೂರಣದ ಉಂಡೆ ಇಟ್ಟು ನಾದಿದ ಹಿಟ್ಟಿನಿಂದ ಮುಚ್ಚಿ.
- ಅದನ್ನು ತೆಳುವಾಗಿ ಲಟ್ಟಿಸಿ, ಕಾವಲಿಗೆ ಹಾಕಿ ಚಪಾತಿಯಂತೆ ಕಾಯಿಸಿ.
ರವೆ ಉಂಡೆ
ಬೇಕಾಗುವ ಸಾಮಾಗ್ರಿಗಳು
1 ಕಪ್ ಚಿರೋಟಿ ರವೆ
1 ಕಪ್ ಒಣಕೊಬ್ಬರಿ
ಸ್ವಲ್ಪ ಗೋಡಂಬಿ ಮತ್ತು ಒಣದ್ರಾಕ್ಷಿ
ಸ್ವಲ್ಪ ಏಲಕ್ಕಿ
1 ಕಪ್ ಸಕ್ಕರೆ
1 ಕಪ್ ಹಾಲು
1 ಕಪ್ ತುಪ್ಪ
ಮಾಡುವ ವಿಧಾನ
- ಮೊದಲಿಗೆ ಚಿರೋಟಿ ರವೆಯನ್ನು ಸಣ್ಣ ಉರಿಯಲ್ಲಿ ತುಪ್ಪ ಹಾಕಿ ಚೆನ್ನಾಗಿ ಹುರಿಯಿರಿ.
- ಒಣಕೊಬ್ಬರಿಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
- ದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಹಾಕಿ ಹುರಿದಿಟ್ಟುಕೊಳ್ಳಿ.
- ರವೆ ಬಿಸಿ ಇರುವಾಗಲೇ ಅದಕ್ಕೆ ಕೊಬ್ಬರಿ ಪುಡಿ, ದ್ರಾಕ್ಷಿ, ಗೋಡಂಬಿ, ಪುಡಿ ಮಾಡಿದ ಸಕ್ಕರೆ, ಎಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ನಂತರ ಬಿಸಿ ಮಾಡಿದ ಹಾಲನ್ನು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲೆಸಿ. ರವೆ ಗಟ್ಟಿಯಾಗುವ ತನಕ ಕಲಸಿ ನಂತರ ಅದನ್ನು ಉಂಡೆಯಾಕಾರದಲ್ಲಿ ಕಟ್ಟಿಡಿ.
ಪಾಯಸ
ಬೇಕಾಗುವ ಪದಾರ್ಥಗಳು
150 ಗ್ರಾಂ ಶಾವಿಗೆ
ಅರ್ಧ ಲೀಟರ್ ಹಾಲು
ಒಂದು ಕಪ್ ಸಕ್ಕರೆ
4 ಚಮಚ ತುಪ್ಪ
ಸ್ವಲ್ಪ ಏಲಕ್ಕಿ ಪುಡಿ
ಸ್ವಲ್ಪ ಹಾಲಿನಲ್ಲಿ ನೆನೆಸಿದ ಕೇಸರಿ ಎಳೆಗಳು
ಸ್ವಲ್ಪ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ
ಮಾಡುವ ವಿಧಾನ
- ಬಾಣಲಿಯೊಂದಕ್ಕೆ ಎರಡು ಚಮಚದಷ್ಟು ತುಪ್ಪ ಹಾಕಿ, ಅದಕ್ಕೆ ಗೋಡಂಬಿ, ದ್ರಾಕ್ಷಿ ಮತ್ತು ಬಾದಾಮಿಯನ್ನು ಹಾಕಿ ಹುರಿದು, ತೆಗೆದಿಟ್ಟುಕೊಳ್ಳಿ.
- ಬಾಣಲಿಯಲ್ಲಿ ಉಳಿದ ತುಪ್ಪಕ್ಕೆ ಶಾವಿಗೆಯನ್ನು ಹಾಕಿ ಹುರಿದುಕೊಳ್ಳಿ.
- ಶಾವಿಗೆ ಹುರಿದ ನಂತರ ಅದಕ್ಕೆ ಅರ್ಧ ಲೀಟರ್ ಹಾಲನ್ನು ಸೇರಿಸಿ.
- ಅವೆರೆಡು ಕುದಿಯುತ್ತಿರುವಾಗ ಅದಕ್ಕೆ ಸಕ್ಕರೆಯನ್ನು ಸೇರಿಸಿ ಕೆಲಸ ಕಾಲ ಅದನ್ನು ಬೇಯುವುದಕ್ಕೆ ಬಿಡಿ.
- ನಂತರ ಅದಕ್ಕೆ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಮತ್ತು ಏಲಕ್ಕಿ ಪುಡಿಯನ್ನು ಹಾಕಿ. ಹಾಗೆಯೇ ಎರಡು ಚಮಚ ತುಪ್ಪ ಸೇರಿಸಿ ಗ್ಯಾಸ್ ಆಫ್ ಮಾಡಿ.
ಇದನ್ನೂ ಓದಿ: Ganesh Chaturthi: ಪರಿಸರ ಪ್ರೇಮಿಗಳಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ