ಗಣಪತಿ ಅನೇಕರಿಗೆ ಪ್ರಿಯ ದೇವರು. ಏನೇ ಕೆಲಸ ಮಾಡಬೇಕೆಂದರೂ ಮೊದಲು ಗಣಪನಿಗೆ ಪೂಜೆ (Ganesha Chaturthi) ಸಲ್ಲಿಸಿಯೇ ಕೆಲಸ ಆರಂಭಿಸಲಾಗುತ್ತದೆ. ಅದೇ ಕಾರಣಕ್ಕೆ ಭಾರತದಲ್ಲಿ ಪ್ರತಿ ಹಳ್ಳಿಯಲ್ಲೂ ಗಣೇಶನ ದೇವಸ್ಥಾನ ಕಾಣಸಿಗುತ್ತದೆ. ಅಂದ ಹಾಗೆ ನಮ್ಮ ಕರ್ನಾಟಕದಲ್ಲಿನ ಹಲವು ಗಣಪತಿ ದೇವಸ್ಥಾನಗಳು ಅಪಾರ ಪ್ರಮಾಣದ ಭಕ್ತರನ್ನು ಹೊಂದಿದೆ. ಆ ರೀತಿಯಲ್ಲಿ ಪ್ರಖ್ಯಾತವಾಗಿರುವ (Famous Ganesha Temples) ಗಣೇಶ ದೇವಸ್ಥಾನಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಇಡಗುಂಜಿ ಗಣಪತಿ ದೇವಸ್ಥಾನ
ಹೊನ್ನಾವರ ತಾಲೂಕಿನ ಇಡಗುಂಜಿಯಲ್ಲಿ ಪುರಾತನ ಗಣಪತಿ ದೇವಸ್ಥಾನವಿದೆ. ಈ ದೇವಸ್ಥಾನ ಸುಮಾರು 1500 ವರ್ಷಗಳಷ್ಟು ಪುರಾತನ ಇತಿಹಾಸವನ್ನು ಹೊಂದಿದೆ. ಇಲ್ಲಿ ಒಂದು ಕೈನಲ್ಲಿ ಮೋದಕ, ಇನ್ನೊಂದು ಕೈನಲ್ಲಿ ಕಮಲದ ಹೂವನ್ನು ಹಿಡಿದಿರುವ ಗಣಪತಿ ಮೂರ್ತಿಯನ್ನು ನೀವು ಕಾಣಬಹುದು. ತ್ರೇತಾಯುಗದಲ್ಲಿ ನಾರದ ಮಹರ್ಷಿ ಇಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ. ಪ್ರತಿದಿನ ಇಲ್ಲಿ ಸಹಸ್ರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಇಡಗುಂಜಿ ಜಾತ್ರೆ ಕೂಡ ಪ್ರಸಿದ್ಧವಾಗಿದೆ.
ದೇಗುಲದ ಸಮಯ
ಬೆಳಗ್ಗೆ: 6:00ರಿಂದ ಮಧ್ಯಾಹ್ನ 1:00
ಮಧ್ಯಾಹ್ನ: 3:00ರಿಂದ ಸಂಜೆ 8:30
ಗುಡ್ಡಟ್ಟು ವಿನಾಯಕ ದೇವಸ್ಥಾನ, ಕುಂದಾಪುರ
ಉಡುಪಿ ಜಿಲ್ಲೆಯ ಕುಂದಾಪುರದಲ್ಲಿರುವ ಗುಡ್ಡಟ್ಟು ವಿನಾಯಕ ದೇವಸ್ಥಾನ ಕೂಡ ಕರ್ನಾಟಕದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನವನ್ನು ಜಲಧಿವಾಸ ಗಣಪತಿ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಇದು ಭಾರತದ ಏಕೈಕ ಜಲಧಿವಾಸ ಗಣಪತಿ ದೇವಾಲಯವಾಗಿದೆ. ಇಲ್ಲಿನ ಮೂರು ಅಡಿಯ ಗಣಪತಿ ವಿಗ್ರಹ ಬಂಡೆಯಿಂದ ಹೊರಹೊಮ್ಮಿರುವುದಾಗಿದೆ ಎಂದು ನಂಬಲಾಗಿದೆ.
ದೇವಸ್ಥಾನದ ಸಮಯ
ವಾರದ ದಿನಗಳು: ಬೆಳಗ್ಗೆ 6:30ರಿಂದ ಸಂಜೆ 7:00
ಮಂಗಳವಾರ: ಬೆಳಗ್ಗೆ 6:00ರಿಂದ ಸಂಜೆ 7:00
ಸೌತಡ್ಕ ಮಹಾ ಗಣಪತಿ ದೇವಸ್ಥಾನ
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿ ಸೌತಡ್ಕ ಮಹಾ ಗಣಪತಿ ದೇವಸ್ಥಾನವಿದೆ. ದೇವರಿಗೆ ಗರ್ಭ ಗುಡಿ ಅಥವಾ ಮಾಡು ಇಲ್ಲದಿರುವುದು ಈ ದೇವಸ್ಥಾನದ ವಿಶೇಷವಾಗಿದೆ. ಈ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 35 ಕಿಲೋಮೀಟರ್ ಮತ್ತು ಧರ್ಮಸ್ಥಳದಿಂದ 16 ಕಿಲೋ ಮೀಟರ್ ದೂರದಲ್ಲಿದೆ. ಸಾಮಾನ್ಯವಾಗಿ ಧರ್ಮಸ್ಥಳಕ್ಕೆ ಭೇಟಿ ನೀಡುವವರು ಇಲ್ಲಿಗೆ ಭೇಟಿ ನೀಡಿ ಗಣಪತಿಯ ಆಶೀರ್ವಾದ ಪಡೆಯುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಳ್ಳುವವರು ದೇಗುಲದಲ್ಲಿ ಗಂಟೆ ಕಟ್ಟಿ ಹರಕೆ ತೀರಿಸುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ನೀವು ಕಾಣಬಹುದು.
ದೇವಸ್ಥಾನದ ಸಮಯ
ಬೆಳಗ್ಗೆ 7:00ರಿಂದ ಸಂಜೆ 7:00
ಗೋಕರ್ಣದ ಮಹಾಗಣಪತಿ ದೇವಾಲಯ
ಉತ್ತರ ಕನ್ನಡದ ಗೋಕರ್ಣದಲ್ಲಿ ಮಹಾಗಣಪತಿ ದೇವಾಲಯವಿದೆ. ಈ ದೇವಸ್ಥಾನದ ಗಣಪತಿ ವಿಗ್ರಹ 1,500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಗೋಕರ್ಣದ ಮಹಾಬಲೇಶ್ವರ ದೇಗುಲದ ಸನಿಹದಲ್ಲೇ ಈ ದೇವಸ್ಥಾನವಿದೆ. ಇಲ್ಲಿಗೆ ಭೇಟಿ ನೀಡುವವರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇದೆ.
ದೇವಸ್ಥಾನದ ಸಮಯ
ಬೆಳಗ್ಗೆ 6:00ರಿಂದ ಮಧ್ಯಾಹ್ನ 12.30
ಸಂಜೆ 5:00ರಿಂದ 9:00
ಆನೆಗುಡ್ಡೆ ವಿನಾಯಕ ದೇವಸ್ಥಾನ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಆನೆಗುಡ್ಡೆ ಗ್ರಾಮದಲ್ಲಿ ಆನೆಗುಡ್ಡೆ ವಿನಾಯಕ ದೇವಸ್ಥಾನವಿದೆ. ಕುಂಭಾಶಿ ಎಂಬ ಹೆಸರು ರಾಕ್ಷಸ ಕುಂಭಾಸುರನಿಂದ ಬಂದಿದೆ ಎಂದು ಹೇಳಲಾಗುತ್ತದೆ. ಕಥೆಯ ಪ್ರಕಾರ, ಈ ಪ್ರದೇಶದಲ್ಲಿ ಬರಗಾಲ ಬಂದಾಗ, ಅಗಸ್ತ್ಯ ಋಷಿ ಮಳೆ ದೇವರಾದ ವರುಣನನ್ನು ಒಲಿಸಲು ತಪಸ್ಸು ಮಾಡಿದನು. ತಪಸ್ಸಿನ ಸಮಯದಲ್ಲಿ, ರಾಕ್ಷಸ ಕುಂಭಾಸುರನು ಋಷಿಗಳನ್ನು ತೊಂದರೆಗೊಳಿಸಲಾರಂಭಿಸಿದನು. ಭೀಮಸೇನನು ಕುಂಭಾಸುರನನ್ನು ಕೊಲ್ಲಲು ಮತ್ತು ಅವನನ್ನು ಇಲ್ಲಿ ವಧಿಸಲು ಗಣೇಶನಿಂದ ಆಯುಧವನ್ನು ಪಡೆಯುತ್ತಾನೆ. ಇಲ್ಲಿ 12 ಅಡಿ ಎತ್ತರದ ಉದ್ಭವ ಮೂರ್ತಿಯಿದೆ. ಅದಕ್ಕೆ ಐದು ಕೆಜಿ ತೂಕದ ಚಿನ್ನದ ಮುಖವಾಡವನ್ನು ಹಾಕಲಾಗಿರುತ್ತದೆ.
ದೇವಸ್ಥಾನದ ಸಮಯ
ಬೆಳಗ್ಗೆ 5:30ರಿಂದ ರಾತ್ರಿ 8:30
ಕುರುಡುಮಲೆ ಶ್ರೀ ಗಣೇಶ ದೇವಸ್ಥಾನ
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಕುರುಡುಮಲೆಯಲ್ಲಿ ಕುರುಡುಮಲೆ ಶ್ರೀ ಗಣೇಶ ದೇವಸ್ಥಾನವಿದೆ. ಇಲ್ಲಿ ಸಾಲಿಗ್ರಾಮದಿಂದ ತಯಾರಿಸಲಾಗಿರುವ 13.5 ಅಡಿ ಎತ್ತರದ ಗಣೇಶನ ವಿಗ್ರಹವಿದೆ. ಈ ಸ್ಥಳವು ದೇವಾನುದೇವತೆಗಳು ಭೂಮಿಯ ಮೇಲೆ ಮನರಂಜನೆಗಾಗಿ ಸ್ವರ್ಗದಿಂದ ಇಳಿಯುವ ಸ್ಥಳವಾಗಿದೆ ಎಂದು ನಂಬಲಾಗಿದೆ. ಕುರುಡುಮಲೆ ಗಣೇಶ ದೇವಸ್ಥಾನ ವಿಜಯನಗರ ಅರಸರ ಆಳ್ವಿಕೆಯಲ್ಲಿ ನಿರ್ಮಾಣವಾಗಿದೆ ಎಂಬುದಕ್ಕೆ ದೇವಾಲಯದ ಗೋಡೆಯ ಮೇಲಿನ ಶಾಸನಗಳು ಪುರಾವೆಗಳನ್ನು ನೀಡುತ್ತವೆ. ಎಲ್ಲಾ ಶಾಸನಗಳು ತಮಿಳಿನಲ್ಲಿವೆ ಮತ್ತು ಕೆಲವು ಹೊಯ್ಸಳ ರಾಜರ ಆಳ್ವಿಕೆಯಲ್ಲಿ 13ನೇ ಶತಮಾನದಷ್ಟು ಹಿಂದಿನವುಗಳಾಗಿವೆ.
ದೇವಸ್ಥಾನದ ಸಮಯ
ಬೆಳಗ್ಗೆ 6.30ರಿಂದ ಮಧ್ಯಾಹ್ನ 1.00
ಸಂಜೆ 3.00ರಿಂದ 8.30
ಶರವು ಮಹಾಗಣಪತಿ ದೇವಸ್ಥಾನ
ಶರವು ಮಹಾಗಣಪತಿ ದೇವಸ್ಥಾನ ಕರ್ನಾಟಕದ ಮಂಗಳೂರಿನ ಹಂಪನಕಟ್ಟೆಯಲ್ಲಿದೆ. ಇದು ಸುಮಾರು 800 ವರ್ಷಗಳಷ್ಟು ಹಳೆಯ ದೇವಾಲಯವಾಗಿದೆ. ಈ ದೇವಸ್ಥಾನವನ್ನು ತುಳುವ ರಾಜ ವೀರಬಾಹು ನಿರ್ಮಿಸಿದರು. ಇಲ್ಲಿ ಶರಬೇಶ್ವರ ಮತ್ತು ಮಹಾಗಣಪತಿ ದೇವತೆಗಳನ್ನು ಕ್ರಮವಾಗಿ ಪಶ್ಚಿಮ ಭಾಗದಲ್ಲಿ ಮತ್ತು ದಕ್ಷಿಣ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.
ದೇವಸ್ಥಾನದ ಸಮಯ
ಬೆಳಗ್ಗೆ 5:00ರಿಂದ 12:00
ಸಂಜೆ 4:30ರಿಂದ 8:00
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ
ಬೆಂಗಳೂರಿನ ದೊಡ್ಡ ಗಣಪತಿ ದೇವಾಲಯ ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲೇ ಪ್ರಸಿದ್ಧವಾದ ಗಣಪತಿ ದೇವಸ್ಥಾನವಾಗಿದೆ. ಇಲ್ಲಿ 18 ಅಡಿ ಎತ್ತರ ಮತ್ತು 16 ಅಡಿ ಅಗಲವಿರುವ ಏಕಶಿಲೆ ಗಣಪತಿ ಮೂರ್ತಿಯಿದೆ. ಈ ಗಣಪತಿಯನ್ನು ಶಕ್ತಿ ಗಣಪತಿ ಮತ್ತು ಸತ್ಯ ಗಣಪತಿ ಎಂದೂ ಕರೆಯಲಾಗುತ್ತದೆ. ಈ ದೇವಸ್ಥಾನವನ್ನು ಕೆಂಪೇಗೌಡ ಅವರು ನಿರ್ಮಿಸಿದರು ಎಂಬ ಇತಿಹಾಸವಿದೆ.
ದೇವಸ್ಥಾನದ ಸಮಯ
ಬೆಳಗ್ಗೆ 6:00ರಿಂದ ಮಧ್ಯಾಹ್ನ 12:00
ಸಂಜೆ 5:30ರಿಂದ 9:00
ಇದನ್ನೂ ಓದಿ: Ganesh Chaturthi: ದೇಶದ ಟಾಪ್ 10 ಗಣೇಶ ಪೆಂಡಾಲ್‌ಗಳಿವು, ಇವುಗಳ ವಿಶೇಷ ಏನು?