Site icon Vistara News

Ganesh Chaturthi: ರಾಜ್ಯಾದ್ಯಂತ ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿ ಸರ್ಕಾರ ಆದೇಶ

PoP Ganesha idols

ಬೆಂಗಳೂರು: ರಾಜ್ಯಾದ್ಯಂತ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ಮೂರ್ತಿಗಳ (Ganesh Chaturthi) ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಎನ್‌.ಪ್ರವೀಣ್‌ ಸೂಚಿಸಿದ್ದಾರೆ.

ಪಿಒಪಿ ಮೂರ್ತಿ ವಿಸರ್ಜನೆಯಿಂದ ಜಲಮೂಲ ಕಲುಷಿತ

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಮುಖ್ಯ ಪೀಠ ಆದೇಶದ ಪ್ರಕಾರ ನೀರಿನ ಮೂಲಗಳನ್ನು ನಾವು ರಕ್ಷಿಸಿಕೊಳ್ಳಬೇಕು. POP ಮೂರ್ತಿಗಳ ವಿಸರ್ಜನೆಯಿಂದಾಗಿ ಜಲಮೂಲಗಳು ಕಲುಷಿತವಾಗುತ್ತಿದ್ದು, ಅದನ್ನು ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆಯಲ್ಲಿನ ಕಲಂ 33(ಎ) ಹಾಗೂ ಇನ್ನಿತರ ಕಲಂಗಳಲ್ಲಿ, ಪುದತ್ತವಾದ ಅಧಿಕಾರವನ್ನು ಚಲಾಯಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಸ್ಪಷ್ಟವಾಗಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗಾಗಲೆ ಹೊರಡಿಸಿರುವ ಅಧಿಸೂಚನೆಯಲ್ಲಿ ಯಾವುದೇ ರಾಸಾಯನಿಕ ಬಣ್ಣ ಸಹಿತ ಪಿಒಪಿ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಹಾಗೂ ಅವುಗಳ ಉತ್ಪಾದನೆ ಸಹಾ ಮಾಡದಂತೆ ಸೂಚಿಸಲಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮೇ 12 ರಂದು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿ, ನೀರಿನ ಮೂಲಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಪಿಒಪಿ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗು ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಇದನ್ನೂ ಓದಿ | Ganesh Chaturthi: ಪರಿಸರ ಪ್ರೇಮಿಗಳಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಇಕೋ ಫ್ರೆಂಡ್ಲಿ ಗೌರಿ-ಗಣೇಶ

ನಿಯಮ ಉಲ್ಲಂಘಿಸಿದರೆ ಭಾರಿ ದಂಡದೊಂದಿಗೆ ಜೈಲು ಶಿಕ್ಷೆ

ಜಲ (ಮಾಲಿನ್ಯ ನಿಯಂತ್ರಣ ಮತ್ತು ನಿವಾರಣ) ಕಾಯ್ದೆ, 1974ರ ಕಲಂ 33(A) ಅಡಿಯಲ್ಲಿ ಈ ರೀತಿಯ ವಿಗ್ರಹಗಳ ಉತ್ಪಾದನಾ ಘಟಕವನ್ನು ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಸದರಿ ವಿಗ್ರಹಗಳನ್ನು ಯಾವುದೇ ನೀರಿನ ಮೂಲಗಳಿಗೆ ವಿಸರ್ಜಿಸುವುದು ಸಹ ಕಾಯ್ದೆಯ ಕಲಂ 24ರ ಸ್ಪಷ್ಟ ಉಲ್ಲಂಘನೆಯಾಗಿದೆ. ಅದು ಕಾಯ್ದೆಯ ಕಲಂ 41 ಹಾಗು 43ರ ಪುಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಸದರಿ, ಅಪರಾಧಕ್ಕೆ ದಂಡದೊಂದಿಗೆ ಕನಿಷ್ಠ ಒಂದೂವರೆ ವರ್ಷ ಹಾಗೂ ಗರಿಷ್ಠ ಆರು ವರ್ಷಗಳ ಕಾರಾಗೃಹವಾಸದ ಜತೆಗೆ ಉಲ್ಲಂಘನೆಗೆ ಪರಿಸರ (ಸಂರಕ್ಷಣಾ) ಕಾಯ್ದೆ, 1986 ರಡಿಯಲ್ಲಿಯೂ ಸಹಾ ಕ್ರಮ ಜರುಗಿಸಬಹುದಾಗಿರುತ್ತದೆ.

ನಿಯಮ ಉಲ್ಲಂಘಿಸುವ ಉದ್ಯಮ ಅಥವಾ ಉತ್ಪಾದನಾ ಘಟಕವನ್ನು ಪರಿಸರ (ಸಂರಕ್ಷಣಾ) ಕಾಯ್ದೆ, 1986 ಕಲಂ 5 ರಡಿಯಲ್ಲಿ ಮುಚ್ಚುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶ ಇರುತ್ತದೆ. ಮುಂದುವರಿದು, ಈ ಕಾಯ್ದೆಯ ಉಲ್ಲಂಘನೆ ಕಲಂ 15 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿಗಳ ದಂಡದೊಂದಿಗೆ ಗರಿಷ್ಠ 5 ವರ್ಷದ ಕಾರಾಗೃಹವಾಸದ ಅವಕಾಶವಿರುತ್ತದೆ.

ಜನರು ಪೂಜಿಸುವಂತಹ ಗಣೇಶ ಪರಿಸರದಿಂದಲೇ ಉದ್ಭವವಾದಂತಹ ದೇವರು ಎಂದು ಪ್ರತೀತಿ ಇದೆ. ಆದ್ದರಿಂದ ಮೂರ್ತಿಯನ್ನು ಜೇಡಿ ಮಣ್ಣಿನಿಂದಲೇ ತಯಾರಿಸಿ, ಪೂಜಿಸಿ ಅನಂತರ ನದಿ ಕೆರೆ ಇತ್ಯಾದಿ ಜಲಮೂಲಗಳಿಗೆ ಪರಿಸರದಲ್ಲಿಯೇ ಲೀನವಾಗುವಂತೆ ವಿಸರ್ಜಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಆಚರಣೆಯಲ್ಲಿ ಹಲವು ಬದಲಾವಣೆಗಳಾಗಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ನಿಂದ ತಯಾರಿಸಿದ ಹೊಳೆಯುವ ಭಾರಲೋಹ ಮಿಶ್ರಿತ ಹಾಗು ರಾಸಾಯನಿಕಯುಕ್ತ ಬಣ್ಣಗಳಿಂದ ಅಲಂಕೃತಗೊಂಡಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆಯಾಗಿದೆ.

ಜಲಚರಗಳಿಗೆ ಮಾರಕವಾಗುವ ರಾಸಾಯನಿಕಗಳು

ಪಿಒಪಿ ವಿಗ್ರಹಗಳನ್ನು ಪೂಜಿಸಿದ ನಂತರ ಹತ್ತಿರದ ನೀರಿನ ಮೂಲಗಳಾದ ನದಿ, ತೊರೆ, ಕೆರೆ, ಕಟ್ಟೆ, ಬಾವಿ, ಇತ್ಯಾದಿಗಳಲ್ಲಿ ವಿಸರ್ಜಿಸಲಾಗುತ್ತಿದೆ. ಈ ವಿಗ್ರಹಗಳ ಮೂಲವಸ್ತು ಪ್ಲಾಸ್ಟರ್ ಆಫ್‌ ಪ್ಯಾರಿಸ್ (POP). ಇದರ ರಾಸಾಯನಿಕ ಮೂಲ ಹೆಸರು “ಕ್ಯಾಲ್ಷಿಯಮ್ ಸಲ್ಫೇಟ್ ಹೆಮಿಹೈಡ್ರೇಟ್” (CaSO4.1/2H20). ಇದರಿಂದ ತಯಾರಿಸಿದ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ಅವು ನೀರಿನಲ್ಲಿ ನಿಧಾನವಾಗಿ ಕರಗುವುದರಿಂದ ನೀರಿನಲ್ಲಿನ ಆಮ್ಲಜನಕ (DO) ದ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗುತ್ತದೆ ಹಾಗೂ ಅದರಲ್ಲಿ ಕ್ಯಾಲ್ಷಿಯಮ್ ಅಂಶ ಇರುವುದರಿಂದ ನೀರಿನ ಶಾಶ್ವತ ಗಡಸುತನ (Hardness) ಸಹ ಹೆಚ್ಚಾಗುತ್ತದೆ.

ಇದನ್ನೂ ಓದಿ | Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?

ವಿಗ್ರಹಗಳಲ್ಲಿ ಉಪಯೋಗಿಸಲಾದ ರಾಸಾಯನಿಕ ಯುಕ್ತ ಬಣ್ಣಗಳಲ್ಲಿರುವ ಭಾರಲೋಹಗಳಾದ ಮರ್ಕ್ಯುರಿ, ಆರ್ಸೆನಿಕ್, ಲೆಡ್, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್, ಸತು ಇತ್ಯಾದಿ ಹಾನಿಕಾರಕ ವಸ್ತುಗಳು ಕ್ರಮೇಣ ನೀರಿನಲ್ಲಿ ಬೆರೆತು ನೀರಿನ ಮೂಲಗಳು ಕಲುಷಿತವಾಗುತ್ತವೆ. ಅಲ್ಲದೆ, ನೀರಿನಲ್ಲಿನ ಮೀನುಗಳು ಹಾಗೂ ಇತರೇ ಜಲಚರಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಈ ನೀರನ್ನು ಬಳಸುವಂತಹ ಸುತ್ತಮುತ್ತಲಿನ ಜನ ಹಾಗೂ ಜಾನುವಾರುಗಳಿಗೆ ವಿವಿಧ ರೀತಿಯ ಕಾಯಿಲೆಗಳು ಮತ್ತು ಕ್ಯಾನ್ಸರ್‌ಕಾರಕವಾಗುವಂತಹ ಇತರ ರೋಗರುಜಿನಗಳು ಹರಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಪಿಒಪಿ ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆಯನ್ನು ನಿಷೇಧಿಸಲಾಗಿದೆ.

Exit mobile version