ಬೆಂಗಳೂರು: ವಿಘ್ನ ನಿವಾರಕ, ಏಕದಂತ, ವಕ್ರತುಂಡ, ಗಣೇಶ, ವಿಘ್ನೇಶ್ವರ, ಗಜ ಮುಖ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಪ್ರಥಮ ಪೂಜಕನ ಚತುರ್ಥಿಗೆ ದಿನಗಣನೆ ಆರಂಭವಾಗಿದೆ. ಹಿಂದು ಧಾರ್ಮಿಕ ಪದ್ಧತಿಯಲ್ಲಿ (Religious practice) ಬಹುಮುಖ್ಯವಾದ ಹಬ್ಬವಾಗಿರುವ “ಗಣೇಶ ಚತುರ್ಥಿ”ಯನ್ನು (Ganesha Chaturthi 2023) ಶ್ರದ್ಧಾ – ಭಕ್ತಿಯಿಂದ ಆಚರಿಸಲಾಗುತ್ತದೆ. ರೂಢಿ ಪ್ರಕಾರ, ಗಣೇಶ ಚತುರ್ಥಿಯು ಗೌರಿ ಹಬ್ಬದ ಮರು ದಿನ ಆಚರಿಸಲ್ಪಡುತ್ತದೆ. ಆದರೆ, ಈ ಬಾರಿ ಮಾತ್ರ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ. ಚೌತಿ ಹಬ್ಬಕ್ಕೆ ಎರಡೆರಡು ದಿನಾಂಕಗಳು ಚಾಲ್ತಿಯಲ್ಲಿದ್ದು, ಒಂದೊಂದು ಕಡೆ ಒಂದೊಂದು ದಿನಾಂಕದಲ್ಲಿ ಆಚರಿಸುವ ಸಾಧ್ಯತೆ ಇದೆ. ಕೆಲವು ಕಡೆ ಗೌರಿ ಹಬ್ಬದ ದಿನವಾದ ಸೆಪ್ಟೆಂಬರ್ 18ರಂದೇ (ಸೋಮವಾರ) ಗಣೇಶ ಹಬ್ಬವನ್ನೂ ಆಚರಿಸಲಾಗುತ್ತಿದೆ. ಇನ್ನು ಕೆಲವು ಕಡೆ ಸೆಪ್ಟೆಂಬರ್ 19ರಂದು (ಮಂಗಳವಾರ) ನಡೆಯಲಿದೆ.
ಇನ್ನು ಕೆಲವು ಕ್ಯಾಲೆಂಡರ್ ಪ್ರಕಾರವೂ ಎರಡೆರಡು ದಿನಾಂಕಗಳು ಇವೆ. ಕೆಲವು ಕ್ಯಾಲೆಂಡರ್‌ನಲ್ಲಿ ಸೆಪ್ಟೆಂಬರ್ 18 ಎಂದು ಇದ್ದರೆ, ಮತ್ತೆ ಕೆಲವು ಕಡೆ ಸೆಪ್ಟೆಂಬರ್ 19 ಎಂದು ನಮೂದುಗೊಂಡಿದೆ. ಗೂಗಲ್‌ನಲ್ಲಿ ಸರ್ಚ್ (Google Search) ಕೊಟ್ಟರೂ ಸೆಪ್ಟೆಂಬರ್ 19 ಎಂದು ತೋರಿಸುತ್ತದೆ. ಹೀಗಾಗಿ ಸಾರ್ವಜನಿಕರಿಗೆ ಯಾವಾಗ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ (Public Ganesha Idol) ಮಾಡಬೇಕು ಎಂಬ ಗೊಂದಲ ಎದುರಾಗಿದೆ.
ಇದನ್ನೂ ಓದಿ: Ganesha Chaturthi: ಮುಂಬರುವ ಗೌರಿ-ಗಣೇಶ ಹಬ್ಬಕ್ಕೆ ಎಲ್ಲೆಡೆ ಶುರುವಾಯ್ತು ಶಾಪಿಂಗ್
ಮುಖ್ಯವಾಗಿ ಪಂಚಾಂಗದ ಅನುಸಾರ ಉಲ್ಲೇಖವಾದ ದಿನದಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಆದರೆ, ಈ ಬಾರಿ ಪಂಚಾಂಗಗಳಲ್ಲಿನ ದಿನಾಂಕವೂ ಗೊಂದಲವನ್ನು ಹುಟ್ಟುಹಾಕಿವೆ. ಸೂರ್ಯ ಸಿದ್ಧಾಂತ ಆಧಾರಿತ ಪಂಚಾಂಗದ ಅನುಸಾರ ಸೆ. 18ರಂದು ಗೌರಿ ತೃತೀಯ ಹಾಗೂ ಗಣೇಶ ಚತುರ್ಥಿ ಒಂದೇ ದಿನ ಬರುತ್ತದೆ. ಹಾಗಾಗಿ ಅಂದೇ ಗಣೇಶನ ಪ್ರತಿಷ್ಠಾಪನೆಗೆ ಪ್ರಶಸ್ತವಾದ ದಿನ ಎಂದು ಹೇಳಲಾಗಿದೆ. ಇನ್ನು ದೃಗ್ಗಣಿತ ಸಿದ್ಧಾಂತ ಆಧಾರಿತ ಪಂಚಾಂಗದ ಪ್ರಕಾರವಾಗಿ ನೋಡುವುದಾದರೆ ಸೆ. 19ರಂದು ಗಣೇಶ ಚತುರ್ಥಿ ನಡೆಸಬೇಕು ಎಂದು ಇದೆ. ಇದೇ ಈಗ ಗೊಂದಲ ನಿರ್ಮಾಣಕ್ಕೆ ಕಾರಣವಾಗಿದೆ.
ಸೂರ್ಯ ಸಿದ್ಧಾಂತ ಹೇಳುವುದೇನು?
ಸೂರ್ಯ ಸಿದ್ಧಾಂತದ ಅನುಸಾರ ರಚಿತವಾದ ಪಂಚಾಗದಂತೆ ಗಣೇಶ ಚತುರ್ಥಿ ಸೆಪ್ಟೆಂಬರ್ 18ಕ್ಕೆ ಆಚರಿಸಬೇಕು. ಅಂದು ಮಧ್ಯಾಹ್ನ 12.40ಕ್ಕೆ ಚೌತಿ ಪ್ರಾರಂಭವಾಗುತ್ತದೆ. ಇದು ಸೆಪ್ಟೆಂಬರ್ 19ರ ಮಂಗಳವಾರ ಮಧ್ಯಾಹ್ನ 1.43ಕ್ಕೆ ಕೊನೆಗೊಳ್ಳುತ್ತದೆ. ಹೀಗಿದ್ದರೂ ಸೆ. 18ರಂದೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಚೌತಿ ಆಚರಿಸುವುದು ಸೂಕ್ತ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಇಡಗುಂಜಿಯಲ್ಲಿ ಸೆಪ್ಟೆಂಬರ್ 19ಕ್ಕೆ ಆಚರಣೆ
ಇನ್ನು ಕರ್ನಾಟಕದ ಸುಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ ಈ ಬಾರಿ ಸೆಪ್ಟೆಂಬರ್ 19ಕ್ಕೆ ಗಣೇಶ ಚತುರ್ಥಿ ಆಚರಿಸಲ್ಪಡುತ್ತಿದೆ. ಬಗ್ಗೋಣ ಪಂಚಾಂಗದ ಅನುಸಾರ ಇಡಗುಂಜಿ ದೇವಸ್ಥಾನದಲ್ಲಿ ಇದುವರೆಗೆ ಪೂಜಾ ಕೈಂಕರ್ಯ ಸೇರಿದಂತೆ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಈ ಪಂಚಾಂಗದಲ್ಲಿ ಈ ಬಾರಿ ಸೆಪ್ಟೆಂಬರ್ 19ಕ್ಕೆ ಗಣೇಶ ಚತುರ್ಥಿ ಆಚರಣೆ ಮಾಡುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರಂತೆ ಇಡಗುಂಜಿಯಲ್ಲಿ ಮಂಗಳವಾರ ಚೌತಿ ಆಚರಣೆಗೆ ಸಿದ್ಧತೆಗಳು ನಡೆದಿವೆ. ಆದರೆ, ಧಾರ್ಮಿಕ ಪಂಚಾಂಗದ ಅನುಸಾರ ಸೆಪ್ಟೆಂಬರ್ 18ಕ್ಕೆ ಆಚರಿಸಲ್ಪಡುತ್ತದೆ.
19ಕ್ಕೆ ಆಚರಣೆಯೇ ಸೂಕ್ತವೆನ್ನುತ್ತಾರೆ ವಿದ್ವಾನ್ ವಿಷ್ಣು ಭಟ್
ಈ ಬಗ್ಗೆ ಇಡಗುಂಜಿ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ವಿಷ್ಣು ಭಟ್ ಅವರನ್ನು ವಿಸ್ತಾರ ನ್ಯೂಸ್ ಸಂಪರ್ಕಿಸಿದಾಗ, ಚೌತಿ ಹಬ್ಬದ ಬಗ್ಗೆ ಮಾಹಿತಿ ನೀಡಿದ್ದಾರೆ. ಚೌತಿ ಹಬ್ಬದ ನಿರ್ಣಯದ ಅನುಸಾರ ಸೂರ್ಯೋದಕ್ಕೆ ಚೌತಿ ಸಿಗಬೇಕು. ಆಗ ಮಾತ್ರ ಚೌತಿಯ ಆಚರಣೆ ಮಾಡುವುದು ಧಾರ್ಮಿಕವಾಗಿ ಸರಿಯಾದ ಪದ್ಧತಿಯಾಗಿದೆ. ಅಂದರೆ ಸಂಕಲ್ಪ ಮಾಡುವಾಗ ಸೂರ್ಯೋದಯದ ಉಲ್ಲೇಖ ಮಾಡಬೇಕು. ಆಗ ಸೆಪ್ಟೆಂಬರ್ 18ಕ್ಕೆ ಸೂರ್ಯೋದಯವು ತದಿಗೆಯಲ್ಲಿ ಆಗಿರುತ್ತದೆ. ನಿಜವಾಗಿ ಸೂರ್ಯೋದಯಕ್ಕೆ ಚತುರ್ಥಿ ಸಿಗುವುದು ಮಂಗಳವಾರ ಆಗಿರುತ್ತದೆ. ಈ ಕಾರಣದಿಂದ ಮಂಗಳವಾರವೇ ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಚಾಂದ್ರಮಾನದಲ್ಲಿ ಘಟಿ ತಿಥಿಗಳ ಅನುಸಾರ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ಸೋಮವಾರ (ಸೆ.18) 12.29ರವರೆಗೆ ತದಿಗೆ ಇರುತ್ತದೆ. ಅದರ ನಂತರ ಬರುವ ಅಪರಾಹ್ನದಲ್ಲಿ ಚೌತಿ ಬರುತ್ತದೆ. ಹಾಗಾಗಿ ಆ ದೃಷ್ಟಿಯಿಂದ ಧರ್ಮಶಾಸ್ತ್ರದ ಪ್ರಕಾರ ಮರುದಿನವಾದ ಮಂಗಳವಾರ (ಸೆ. 19) 1.43 ನಿಮಿಷದವರೆಗೂ ಚೌತಿ ಸಿಕ್ಕುವುದಾದ್ದರಿಂದ ಚಾಂದ್ರಮಾನದ ಪ್ರಕಾರ ಚತುರ್ಥಿಯ ಆಚರಣೆ ಸೆ. 19ಕ್ಕೆ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ವಿದ್ವಾನ್ ವಿಷ್ಣು ಭಟ್ ವಿವರಿಸಿದ್ದಾರೆ.
ಇದನ್ನೂ ಓದಿ: Ganesh Chaturthi: ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ಶುರು; ಏನು ಈ ಹಬ್ಬದ ಹಿನ್ನೆಲೆ?
ಸಾರ್ವಜನಿಕ ಗಣೇಶ ಉತ್ಸವ 10 ದಿನಕ್ಕೆ ಮೊಟಕು?
ಇನ್ನು ಸಾರ್ವಜನಿಕ ಗಣೇಶ ಉತ್ಸವವು ಸಾಮಾನ್ಯವಾಗಿ 11 ದಿನಗಳ ಕಾಲ ಆಚರಿಸಲ್ಪಡುತ್ತದೆ. ಉತ್ತರ ಕರ್ನಾಟಕ ಭಾಗವಾದ ಹುಬ್ಬಳ್ಳಿಯಲ್ಲಿ ಬಹಳ ಅದ್ಧೂರಿಯಾಗಿ ಇದುವರೆಗೆ ಆಚರಿಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಅಧಿಕ ಮಾಸ ಬಂದಿರುವ ಹಿನ್ನೆಲೆಯಲ್ಲಿ 11 ದಿನದ ಬದಲು 10 ದಿನ ಮಾತ್ರವೇ ಆಚರಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಕಾರಣ, ಅಧಿಕ ಮಾಸದಿಂದ ಒಂದು ದಿನ ಲೋಪವಾಗಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಈ ಕಾರಣಕ್ಕಾಗಿ ಒಂದು ದಿನ ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.