Site icon Vistara News

Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು!

Ganesha Stories With Audio

ಗಣಪತಿಯ ಬಗ್ಗೆ ಆತನ ಬಾಲ್ಯದಿಂದ ಹಿಡಿದು ಪ್ರೌಢಾವಸ್ಥೆಯವರೆಗೆ ಹಲವು ರೀತಿಯ ಕಥೆಗಳು ಪ್ರಚಲಿತದಲ್ಲಿವೆ. ಜನಪದ ಕಥೆಗಳಂತೆ ಅವು ಬಾಯಿಂದ ಬಾಯಿಗೆ ಬರುವಾಗ ತಮ್ಮಿಷ್ಟದ ರೂಪ ತಾಳಿವೆ. ಇವೆಲ್ಲವಕ್ಕೂ ಪೌರಾಣಿಕ ಉಲ್ಲೇಖಗಳು ನಿಖರವಾಗಿ ದೊರೆಯುತ್ತದೆಂದು ಹೇಳಲಾಗದಿದ್ದರೂ, ನಾವು ನಂಬಿದ ಭಗವಂತನ ಮನರಂಜಿಸುವ ಕಥೆಗಳನ್ನು ನಂಬುವುದಲ್ಲಿ ಹಾನಿಯಿಲ್ಲ. ಅದೇ ಖಾತ್ರಿಯಿಂದ ಒಂದಿಷ್ಟು ಗಣಪತಿ ಕಥೆಗಳು (Ganesha Stories With Audio) ನಿಮಗಾಗಿ.

ಆಡಿಯೊ ಕೇಳಿ

https://vistaranews.com/wp-content/uploads/2023/09/M̳P-3.mp3

ವಿಷ್ಣುವಿನ ಶಂಖ

ಶಂಖ, ಚಕ್ರ, ಗಧಾಹಸ್ತನಾದ ಶ್ರೀಮನ್ನಾರಾಯಣನಿಗೆ ತನ್ನ ಶಂಖವೇ ಕಾಣೆಯಾಗಿದೆ ಎಂಬುದು ಒಂದು ದಿನ ಹಠಾತ್ತನೆ ಅರಿವಾಯಿತು! ʻಅರೆ! ಇತ್ತಲ್ಲ ನನ್ನ ಕೈಯಲ್ಲೇ! ಎಲ್ಲಿ ಕಾಣೆಯಾಯಿತು!ʼ ಎಂದು ಲೋಕಲೋಕಾಂತರಗಳನ್ನು ಹುಡುಕಲು ಮುಂದಾದ ಅನಂತಶಯನ. ಅಷ್ಟರಲ್ಲೇ ದೂರದಿಂದ ಶಂಖನಾದವೊಂದು ತೇಲಿಬಂತು. ಆಲಿಸಿ ಕೇಳಿದರೆ, ಹೌದು ಇದು ತನ್ನದೇ ಶಂಖದ ಧ್ವನಿ ಎಂಬುದು ಖಾತ್ರಿಯಾಯಿತು ಮಹಾವಿಷ್ಣುವಿಗೆ. ಇದೆಲ್ಲಿಂದ ಬರುತ್ತಿದೆ ಎಂದು ನೋಡಿದರೆ, ಕೈಲಾಸ ಪರ್ವತದ ದಿಕ್ಕಿನಿಂದ!

ಗರುಡನನ್ನೇರಿ ಪರ್ವತದ ತುದಿಗೆ ಹಾರಿದ ಶೂಲಪಾಣಿಯ ಮಿತ್ರ. ಅಲ್ಲಿ ನೋಡಿದರೆ… ಶಂಖವು ಗಣಪತಿಯ ಕೈಯಲ್ಲಿದೆ. ಅದನ್ನು ಊದಲು ಆತ ತನ್ನದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಆನೆ ಮುಖದವನಿಗೆ ಶಂಖ ಊದುವುದು ಸುಲಭವಲ್ಲ, ಹಾಗೆಂದು ಆತ ತನ್ನ ಪ್ರಯತ್ನ ಬಿಡುವವನಲ್ಲ. ಆದರೆ ಶಂಖ ಮರಳಿ ಪಡೆಯುವುದು ವಿಷ್ಣುವಿಗೆ ಅನಿವಾರ್ಯ. ʻದಾರಿ ತೋರಿಸಯ್ಯʼ ಎಂದು ಈಶ್ವರನನ್ನೇ ಕೇಳಿದ ವಿಷ್ಣು. ಗಣಪತಿಯ ಸ್ತುತಿ ಮಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದ ಈಶ. ತ್ರಿಮೂರ್ತಿಗಳಲ್ಲಿ ಒಬ್ಬನಾಗಿ, ಜಗತ್ತಿನ ಸ್ಥಿತಿಯನ್ನು ಕಾಪಾಡುವ ಹೊಣೆ ಹೊತ್ತ ಮಹಾವಿಷ್ಣುವು ಕ್ಷಣಕಾಲವೂ ಯೋಚಿಸದೆ ಗಣೇಶನನ್ನು ಸ್ತುತಿಸಿದ. ಪ್ರಸನ್ನನಾದ ಗಣಪತಿ ಶಂಖವನ್ನು ಮಹಾವಿಷ್ಣುವಿಗೆ ಮರಳಿಸಿದ.

ಕುಬೇರ ಕಲಿತ ಪಾಠ

ವಿಶ್ವದಲ್ಲಿ ಸಂಪತ್ತಿನ ಅಧಿದೇವತೆ ಎಂದರೆ ಕುಬೇರ. ತನ್ನ ಅಲಕಾವತಿಯಲ್ಲಿ ಉಕ್ಕಿ ಹರಿಯುವ ಸಂಪತ್ತಿನ ಬಗ್ಗೆ ಆತನಿಗೆ ಸಿಕ್ಕಾಪಟ್ಟೆ ಹೆಮ್ಮೆ; ಅಷ್ಟೇ ತೂಕದ ಅಹಂಕಾರ! ಹೀಗೆಯೇ ಒಮ್ಮೆ ಎಲ್ಲಾ ದೇವತೆಗಳಿಗಾಗಿ ಒಂದು ಭರ್ಜರಿ ಔತಣಕೂಟವನ್ನು ಆತ ಏರ್ಪಡಿಸಿದ್ದ. ಶಿವ- ಪಾರ್ವತಿಯರಿಗೂ ಈ ಕೂಟದ ಆಹ್ವಾನ ಹೋಗಿತ್ತು. ಅಂದು ಅವರಿಗೆ ಪುರುಸೊತ್ತೇ ಇಲ್ಲ; ಆದರೆ ಆಹ್ವಾನ ಬಂದ ಮೇಲೆ ಹೋಗಬೇಕಲ್ಲ. ಹಾಗಾಗಿ ತಮ್ಮ ಪ್ರತಿನಿಧಿಯಾಗಿ ಗಣೇಶನನ್ನು ಈ ಔತಣಕೂಟಕ್ಕೆ ಅಟ್ಟಿದರು.

ಕುಬೇರನ ಅರಮನೆಗೆ ಬಂದ ಗಣಪತಿ. ಬಂದವರನ್ನೆಲ್ಲಾ ಸ್ವಾಗತಿಸುತ್ತ ನಿಂತಿದ್ದ ಕುಬೇರ. ಆದರೆ ಆತನಲ್ಲಿ ಅತಿಥಿ ಸತ್ಕಾರದ ಭಾವಕ್ಕಿಂತ ಹೆಚ್ಚಾಗಿ ತನ್ನ ಸಂಪತ್ತಿನ ಪ್ರದರ್ಶನವೇ ಹೆಚ್ಚಾಗಿ ಕಂಡಿತು ಗಣಪತಿಗೆ. ಇವನಿಗೊಂದು ಪಾಠ ಕಲಿಸಬೇಕೆಂದು ನಿರ್ಧರಿಸಿದ. ಔತಣಕ್ಕಾಗಿ ಸಿದ್ಧಪಡಿಸಲಾಗಿದ್ದ ಆಹಾರವನ್ನು ಉಳಿದವರಿಗಿಂತ ಮೊದಲೇ ಮೆಲ್ಲಲಾರಂಭಿಸಿದ ಪ್ರಥಮ ಪೂಜಿತ, ನೋಡನೋಡುತ್ತಿದ್ದಂತೆ ಅಟ್ಟಿದ್ದ ಅಡುಗೆಯನ್ನೆಲ್ಲ ಬರಿದಾಗಿಸಿದ. ಆದರೇನು, ವಿಘ್ನನಿವಾರಕ ಹಸಿವೆಯಿನ್ನೂ ನಿವಾರಣೆ ಆಗಿರಲಿಲ್ಲ. ಅಡುಗೆ ಮಾಡಿರಿಸಿದ್ದ ಪಾತ್ರೆಗಳನ್ನು ತಿಂದಿದ್ದಾಯ್ತು; ಕುಬೇರನ ಸಂಪತ್ತನ್ನೆಲ್ಲಾ ತಿಂದಿದ್ದಾಯ್ತು; ಊಹುಂ, ಲಂಬೋದರ ತುಂಬಲಿಲ್ಲ. ಇನ್ನೀಗ ಕುಬೇರನನ್ನೇ ತಿಂದಾದರೂ ಹಸಿವೆ ನೀಗಿಸುವ ಪ್ರಯತ್ನಿಕ್ಕಿಳಿದ ಗಣಪತಿ. ಕಂಗಾಲಾದ ಕುಬೇರ, ಈಶ್ವರನಲ್ಲಿಗೆ ಓಡಿದ.

ನಡೆದ ವಿಷಯವೆಲ್ಲಾ ಈಶ್ವರನಿಗೆ ತಿಳಿಯಿತು. ಒಂದು ಹಿಡಿ ಧಾನ್ಯವನ್ನು ಭಕ್ತಿಯಿಂದ, ನಮ್ರತೆಯಿಂದ ಗಣಪತಿಗೆ ಅರ್ಪಿಸು ಎಂದು ಕುಬೇರನಿಗೆ ಸೂಚಿಸಿದ ಈಶ್ವರ. ಇಷ್ಟಾದ ಮೇಲೆ ಗಣಪತಿಯ ಡೊಳ್ಳು ಹೊಟ್ಟೆ ತುಂಬಿತು. ಕುಬೇರ ತನ್ನ ಅಹಂಕಾರಕ್ಕಾಗಿ ಕ್ಷಮೆ ಬೇಡಿದ

ಅವನೇಕೆ ಮೋದಕಪ್ರಿಯ?

ಗಣಪತಿಯ ನೈವೇದ್ಯಕ್ಕೆ ಮೋದಕ ಇರಲೇಬೇಕು. ಹಾಗಾದರೆ ಅವನಿಗೆ ಮೋದಕ ಎಂದರೆ ಅಷ್ಟೊಂದು ಪ್ರೀತಿಯೇಕೆ? ಒಮ್ಮೆ ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಶಿವ-ಪಾರ್ವತಿಯರು ಹೋಗಿದ್ದರಂತೆ. ಜೊತೆಗೆ ಪುಟ್ಟ ಗಣೇಶನೂ ಇದ್ದ. ಶಿವ ಸಂಸಾರ ಸಮೇತ ತಮ್ಮಲ್ಲಿಗೆ ಬಂದಿದ್ದನ್ನು ಕಂಡು ಆನಂದಪರವಶಳಾದ ಅತ್ರಿ ಸತಿ ಅನಸೂಯೆ, ಹಲವು ಬಗೆಯ ಭೋಜನಗಳನ್ನು ಸಿದ್ಧಪಡಿಸಿದಳು. ಅದರ ಪರಿಮಳಕ್ಕೆ ಗಣೇಶನ ಹೊಟ್ಟೆಯಲ್ಲಿ ತಳಮಳ ಪ್ರಾರಂಭವಾಯಿತು.
ಮಕ್ಕಳೆಂದರೆ ದೇವರ ಸ್ವರೂಪ, ಇಲ್ಲಂತೂ ದೇವರೇ ಮಗುವಿನ ರೂಪದಲ್ಲಿದ್ದಾನೆ ಎಂದು ಭಾವಿಸಿದ ಅನಸೂಯಾ ದೇವಿ, ಮೊದಲು ಗಣೇಶನಿಗೇ ಬಡಿಸಿದಳು. ಮಾಡಿದ್ದೆಲ್ಲಾ ತಳ ಕಂಡರೂ ದೇವರ ನೈವೇದ್ಯ ಮುಗಿಯಲಿಲ್ಲ. ಇದು ಹೀಗೆಯೇ ಆದರೆ ಶಿವ-ಪಾರ್ವತಿಯರಿಗೆ ಏನೂ ಉಳಿಯುವುದಿಲ್ಲ ಎಂದು ಗ್ರಹಿಸಿದ ಅನಸೂಯೆ, ರುಚಿಯಾದ, ಸಿಹಿಯಾದ ಮೋದಕಗಳನ್ನು ಸಿದ್ಧಮಾಡಿ ಬಡಿಸಿದಳು. ನಾಲ್ಕಾರು ಮೋದಕಗಳನ್ನು ಮೆಲ್ಲುತ್ತಿದ್ದಂತೆಯೇ ಪುಟ್ಟ ಗಣೇಶನಿಗೆ ತೃಪ್ತಿಯಾಯಿತು. ಇದನ್ನು ಕಂಡ ಪಾರ್ವತಿ, ತನ್ನ ಮುದ್ದು ಮಗನಿಗೆ ಮೋದಕದ ನೈವೇದ್ಯವೇ ಶ್ರೇಷ್ಠ ಎಂದು ಸಾರಿದಳಂತೆ. ಲಂಬೋದರ ಮೋದಕ ಪ್ರಿಯನೂ ಆಗಿದ್ದು ಹೀಗೆ.

ಕಾವೇರಿಗೂ ಗಣಪತಿಗೂ ಏನು ನಂಟು?

ಕಾವೇರಿ ಹುಟ್ಟಿದ ಪ್ರದೇಶದಲ್ಲಿ ಮನೆಮನೆಯಲ್ಲೂ ಗಣಪತಿ ಎಂಬ ಹೆಸರಿನವರು ಇರುವುದಕ್ಕೂ ಈ ಕಥೆಗೂ ಸಂಬಂಧ ಇದ್ದಿರಲಾರದು. ಆದರೆ ಕಾವೇರಿ ನದಿಗೂ, ಗಂಗಾ ನದಿಯ ಮಗನೂ ಆದ ಗಣಪನಿಗೂ (ಅಗ್ನಿ ಪುರಾಣ, ಹರಚರಿತ ಚಿಂತಾಮಣಿಗಳ ಪ್ರಕಾರ) ನಂಟುಂಟು. ದಕ್ಷಿಣ ಭಾರತದ ಬಹುಮಂದಿಗೆ ಆಸರೆ ನೀಡುವಂಥ ಪವಿತ್ರ ನದಿಯೊಂದನ್ನು ಸೃಷ್ಟಿಸಬೇಕೆಂದು ಅಗಸ್ತ್ಯರು ಚಿಂತಿಸಿದರು. ಇದಕ್ಕೆ ಪೂರಕವಾಗಿ, ದೇವತೆಗಳು ಅವರ ಕಮಂಡಲಕ್ಕೆ ಪವಿತ್ರ ಜಲವನ್ನು ತುಂಬಿ, ಸೂಕ್ತ ಸ್ಥಳದಲ್ಲಿ ಈ ನೀರನ್ನು ಹರಿಸಿದರೆ ನದಿ ಸೃಷ್ಟಿಯಾಗುತ್ತದೆ ಎಂದು ಹರಸಿದರು.
ಸೂಕ್ತ ಸ್ಥಳವನ್ನು ಅರಸುತ್ತಾ ಹೊರಟರು ಅಗಸ್ತ್ಯರು. ಬಹಳ ದೂರ ನಡೆದ ಮೇಲೆ ಪರ್ವತಗಳನ್ನು ದಾಟುತ್ತಿರುವಾಗ ಆಯಾಸಗೊಂಡ ಮುನಿಗಳಿಗೆ ಕೊಂಚ ವಿಶ್ರಾಂತಿ ಬೇಕೆನಿಸಿತು. ಆದರೆ ಈ ಕಮಂಡಲದ ನೀರನ್ನು ಕಾಯುವವರಾರು? ಸಮೀಪದಲ್ಲೇ ಬಾಲಕನೊಬ್ಬ ನಿಂತಿದ್ದ. ಆತನನ್ನು ಕರೆದು, ಕಮಂಡಲದ ಜಲವನ್ನು ಕಾಯ್ದುಕೊಳ್ಳುವಂತೆ ಸೂಚಿಸಿ ವಿರಮಿಸಿದರು. ನದಿ ಹರಿಯುವುದಕ್ಕೆ ಪ್ರಶಸ್ತವಾದ ಸ್ಥಳ ಅದೇ ಪರ್ವತದ ಒಡಲು ಎಂದು ಗ್ರಹಿಸಿದ್ದ ಗಣಪತಿ, ಅಲ್ಲಿಗೆ ಬಾಲಕನ ರೂಪದಲ್ಲಿ ಬಂದಿದ್ದ.

ಮುನಿಗಳು ವಿಶ್ರಾಂತಿಯಿಂದ ಮರಳಿ ಬಂದವರು ನೋಡುತ್ತಾರೆ, ಆ ಬಾಲಕನಿಲ್ಲ. ಬದಲಿಗೆ ಕಮಂಡಲ ನೆಲದ ಮೇಲಿದೆ ಮತ್ತು ಕಾಗೆಯೊಂದು ಬಂದು ಅದರ ನೀರನ್ನು ಕುಡಿಯಲು ಹವಣಿಸುತ್ತಿದೆ. ಆ ಪಕ್ಷಿಯನ್ನು ಅಗಸ್ತ್ಯರು ಓಡಿಸಿದರೂ, ಹಾರುವ ಭರದಲ್ಲಿ ಆ ಕಮಂಡಲವನ್ನು ಕಾಗೆ ಉರುಳಿಸಿತು. ಅದೇ ಸ್ಥಳದಲ್ಲಿ ಕಾವೇರಿ ನದಿಯ ಉಗಮವಾಯಿತು ಎಂಬ ಕಥೆಯಿದೆ.

ಭೂಕೈಲಾಸಕ್ಕೂ ಗಣಪನೇ ಬೇಕಾಯ್ತು

ಸ್ವರ್ಣ ಲಂಕಾಧೀಶ, ರಾಕ್ಷಸ ರಾಜ ರಾವಣ ಸಕಲವಿದ್ಯಾ ಪಾರಂಗತ; ಮಹಾ ಶಿವಭಕ್ತ. ಆತನ ತಾಯಿ ಕೈಕಸಾ ದೇವಿ ಪ್ರತಿ ದಿನ ಸಮುದ್ರದ ತಟದಲ್ಲಿ, ಮರಳಿನಲ್ಲಿ ಶಿವಲಿಂಗವನ್ನು ಮಾಡಿ ಅರ್ಚಿಸುತ್ತಿದ್ದಳು. ಆದರೆ ಮಾರನೇ ದಿನಕ್ಕೆ ಆ ಲಿಂಗ ನೀರಿನಲ್ಲಿ ಕೊಚ್ಚಿಹೋಗುತ್ತಿತ್ತು. ಹಾಗಾಗಿ ಶಿವನ ಆತ್ಮಲಿಂಗವನ್ನೇ ಲಂಕೆಯಲ್ಲಿ ಪ್ರತಿಷ್ಠಾಪಿಸಬೇಕೆಂದು ಆಕೆ ಬಯಸಿದಳು. ತಾಯಿಯ ಬಯಕೆಯನ್ನು ನೆರವೇರಿಸಲು ರಾವಣ ಹೊರಟ. ದೀರ್ಘಕಾಲ ಘೋರ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಂಡ. ಮೆಚ್ಚಿ ಒಲಿದ ದೇವನಲ್ಲಿ ಆತನ ಆತ್ಮಲಿಂಗವನ್ನೇ ಬೇಡಿದ. ದೇವ ʻತಥಾಸ್ತುʼ ಎಂದ. ಆದರೆ ಈ ಲಿಂಗವನ್ನು ಎಲ್ಲಿ ಭೂಮಿಗೆ ತಾಗಿಸಿದರೂ ಅದು ಅಲ್ಲಿಯೇ ಸ್ಥಿರವಾಗಿತ್ತದೆ ಎಂದು ಎಚ್ಚರಿಸಿದ ಶಿವ.
ಮಹೇಶ್ವರನ ಆತ್ಮಲಿಂಗವನ್ನು ಹಿಡಿದು ರಾವಣ ಹೊರಡುತ್ತಿದ್ದಂತೆ, ದೇವತೆಗಳಲ್ಲಿ ತಳಮಳ ಜೋರಾಯಿತು. ಇನ್ನೀಗ ಈ ರಕ್ಕಸನನ್ನು ಹಿಡಿಯುವವರುಂಟೇ? ಈ ವಿಘ್ನವನ್ನು ನಿವಾರಿಸಿಕೊಡು ಎಂದು ಗಣಪತಿಯಲ್ಲಿ ಮೊರೆಯಿಟ್ಟರು. ಉಪಾಯದಿಂದ ಅಪಾಯ ನಿವಾರಿಸುವುದಕ್ಕೆ ಬುದ್ಧಿ ಪ್ರದಾಯಕನಿಗೆ ಹೇಳಿಕೊಡಬೇಕೆ! ಸಣ್ಣ ವಟುವಿನ ರೂಪದಲ್ಲಿ ಹೊರಟ. ಇತ್ತ ಲಂಕೆಯನ್ನು ತಲುಪುವ ಗಡಿಬಿಡಿಯಲ್ಲಿ ಧಾವಿಸುತ್ತಿದ್ದ ರಾವಣ ಸಂಜೆಯಾಗುತ್ತಿದ್ದಂತೆ ಕೊಂಚ ವಿಚಲಿತನಾದ. ಕಾರಣ, ಅದು ಸಂಧ್ಯಾವಂದನೆಯ ಸಮಯ, ಆತ ಅನುಷ್ಠಾನದ ಸಮಯ ತಪ್ಪಿಸುವವನಲ್ಲ, ಆದರೆ ಕೈಯಲ್ಲಿರುವ ಲಿಂಗವನ್ನು ಏನು ಮಾಡುವುದು? ಆಗಲೇ ಸಣ್ಣ ವಟುವೊಬ್ಬ ಎದುರಾದ.
ʻಸರಿಯಾದ ಸಮಯಕ್ಕೆ ದೇವರಂತೆ ನನ್ನೆದುರಿಗೆ ಬಂದೆ! ನಾನು ಸಂಧ್ಯಾವಂದನೆ ಮಾಡಿ ಬರುವವರೆಗೆ ಈ ಲಿಂಗವನ್ನು ಕೈಯಲ್ಲಿ ಹಿಡಿದಿರುತ್ತೀಯಾ?ʼ ವಟುವನ್ನು ಕೇಳಿದ ರಾವಣ. ಮೊದಲಿಗೆ ಒಲ್ಲೆ ಎಂದ ಹುಡುಗ, ರಾವಣನ ಆಗ್ರಹದ ಮೇಲೆ ಒಪ್ಪಿದ. ʻಆದರೆ ನೀನು ಜಪ ಮುಗಿಸಿ ಬರುವುದು ತಡವಾದರೆ ನನ್ನ ಕೈಸೋಲಬಹುದು. ಆಗ ಮೂರು ಬಾರಿ ನಿನ್ನ ಹೆಸರು ಕರೆಯುತ್ತೇನೆ. ಮೂರನೇ ಬಾರಿಗೂ ನೀ ಬಾರದಿದ್ದರೆ, ಈ ಲಿಂಗವನ್ನು ಕೆಳಗೆ ಇರಿಸುತ್ತೇನೆʼ ಎಂದು ಹುಡುಗ. ರಾವಣ ಒಪ್ಪಿದ.

ರಾವಣ ಸಂಧ್ಯಾವಂದನೆ ಮಾಡುತ್ತಿರುವಾಗ ಹುಡುಗ ಒಮ್ಮೆ ಕರೆದ, ಇನ್ನೊಮ್ಮೆ ಕರೆದ, ಮೂರನೇ ಬಾರಿಗೂ ಕರೆದವ ಲಿಂಗವನ್ನು ನೆಲ್ಕಕಿರಿಸಿಯೇಬಿಟ್ಟ. ರಾವಣ ಓಡೋಡಿ ಬರುವಷ್ಟರಲ್ಲಿ ಲಿಂಗ ನೆಲದಲ್ಲಿ ಸ್ಥಿರವಾಗಿ ಕುಳಿತಿತ್ತು. ಕೋಪಗೊಂಡ ರಾವಣ ಆ ವಟುವನ್ನು ಅಟ್ಟಿಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಆತ್ಮಲಿಂಗವನ್ನು ಕೀಳುವುದಕ್ಕೆ ಆತ ಯತ್ನಿಸಿದರೂ ಅದು ಮೂರು ಚೂರಾಗಿ, ಒಂದು ಅಲ್ಲಿಯೇ ಉಳಿಯಿತು. ಭಾರತದ ಪಶ್ಚಿಮ ತೀರದಲ್ಲಿ ಶಿವನ ಆತ್ಮಲಿಂಗ ಮೊದಲಿಗೆ ಸ್ಥಿತವಾದ ಆ ಸ್ಥಳವೇ ಗೋಕರ್ಣ.

ಇದನ್ನೂ ಓದಿ: Ganesha Chaturthi : ಚೌತಿಗೆ ಗಣೇಶನ ಕೂರಿಸ್ತೀರಾ? ಹಾಗಿದ್ದರೆ ನೀವು ಈ 9 ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕು

Exit mobile version