ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಶ್ರೀ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಶಿರಸಿ
ಭಗವದ್ಗೀತೆ ವಿಶ್ವಕ್ಕೆ ಭಾರತ ಕೊಟ್ಟ ಅದ್ಭುತ ಕೊಡುಗೆಗಳಲ್ಲಿ ಒಂದು. ಇಂದಿಗೂ ವಿಶ್ವದ ಬಹುತೇಕ ದೇಶಗಳಲ್ಲಿ ಅಲ್ಲಲ್ಲಿಯ ಭಾಷೆಗಳಲ್ಲಿಯೇ ಭಗವದ್ಗೀತೆ ಉಪಲಬ್ಧವಿದೆ. ವಿಶ್ವದ ಅತ್ಯಂತ ಹೆಚ್ಚು ಭಾಷೆಗಳಲ್ಲಿ ತುಂಬಾ ಹಿಂದೆಯೇ
ಭಗವದ್ಗೀತೆ ಅತ್ಯಂತ ಹೆಚ್ಚು ಆವೃತ್ತಿಗಳನ್ನು ಕಂಡಿದೆ. ವಿಶ್ವವ್ಯಾಪಿ ಭಗವದ್ಗೀತೆ ಅವತರಿಸಿದ ದಿನ “ಗೀತಾ ಜಯಂತಿʼʼ(Gita Jayanti 2022 ). ಮಾರ್ಗಶಿರ ಶುದ್ಧ ಏಕಾದಶಿಯಂದು ಭಗವಂತನು ಭಗವದ್ಗೀತೆಯನ್ನು ಉಪದೇಶಿಸಿದ.
ಒಂದು ಲೆಕ್ಕಾಚಾರದಂತೆ ಕ್ರಿಸ್ತಪೂರ್ವ 5561ನೇ ಸಾಲಿನಲ್ಲಿ ಅಕ್ಟೋಬರ್ 16ರಿಂದ 18 ದಿನಗಳ ಕಾಲ ಮಹಾಭಾರತ ಯುದ್ಧ ನಡೆಯಿತು. ಆರಂಭದ ದಿನವೇ ಗೀತೋಪದೇಶ. ಅಂದರೆ ನಾವು ಈಗ 7,583ನೇ ಗೀತಾಜಯಂತಿಯನ್ನು ಆಚರಿಸುತ್ತಿದ್ದೇವೆ. ಇಷ್ಟು ದೀರ್ಘವಾದ ಕಾಲಘಟ್ಟ ದಾಟಿಹೋಗಿದ್ದರೂ ಇಂದಿಗೂ ವಿಶ್ವದ ಜನಮಾನಸದಲ್ಲಿ ಭಗವದ್ಗೀತೆ ನೆಲೆ ನಿಂತಿರುವುದೇ ಅದೊಂದು ಅದ್ಭುತ ಗ್ರಂಥ ಎಂಬುದಕ್ಕೆ ನಿದರ್ಶನ.
ಭಗವದ್ಗೀತೆ ಯುದ್ಧರಂಗದಲ್ಲಿ ಅವತರಿಸಿತು. ಬಹುಶಃ ಯುದ್ಧರಂಗದಲ್ಲಿ ಹುಟ್ಟಿಕೊಂಡ ಕೃತಿ ಪ್ರಪಂಚದಲ್ಲಿ ಬೇರೆ ಯಾವುದೂ ಇರಲಾರದು. ಯುದ್ಧರಂಗದಲ್ಲಿ ಭಗವದ್ಗೀತೆ ಹುಟ್ಟಿದ ಬಗ್ಗೆ ಬೇರೆ ಬೇರೆ ವಿವರಣೆಗಳನ್ನು ಕೊಡುವುದುಂಟು. ನಮ್ಮ ಬದುಕೇ ಒಂದು ಯುದ್ಧ. ಬದುಕಿಗೆ ಸಂಬಂಧಿಸಿದ ವಿಷಯವಾದ್ದರಿಂದ ಭಗವದ್ಗೀತೆಯು ಬದುಕಿನ ರಣರಂಗಕ್ಕೆ ಅತಿ ಅವಶ್ಯ ಎಂಬ ಸಂದೇಶ ಇಲ್ಲಿದೆ ಎಂಬುದಾಗಿ ಕೆಲವರು ವಿವರಣೆ ನೀಡುತ್ತಾರೆ.
ನಮ್ಮ ಮನಸ್ಸಿನ ಒಳ್ಳೆಯ ವಿಚಾರಗಳೇ ಪಾಂಡವರು, ಕೆಟ್ಟವಿಚಾರಗಳೇ ಕೌರವರು. ಒಳ್ಳೆಯ ವಿಚಾರ ಮತ್ತು ಕೆಟ್ಟವಿಚಾರಗಳ ಸಂಘರ್ಷದಲ್ಲಿ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕೆಂಬ ಸಂದೇಶ ಭಗವದ್ಗೀತೆಯಲ್ಲಿ ಇದೆ ಎಂಬುದು ಇನ್ನೊಂದು ವಿವರಣೆ. ಹೀಗೆ ಬೇರೆ ಬೇರೆ ವಿವರಣೆಗಳು ಉಂಟು. ಆದರೆ ನಮ್ಮದೊಂದು ವಿವರಣೆ ಇದೆ. ಅಧ್ಯಾತ್ಮದ ವಿಷಯಗಳನ್ನು ಅರಿತುಕೊಳ್ಳಲು ಕೊಂಚವಾದರೂ ವೈರಾಗ್ಯ ಇರಬೇಕಾಗುತ್ತದೆ. ಮರಣದ ಚಿಂತನೆ ವೈರಾಗ್ಯವನ್ನು ಪ್ರಚೋದಿಸುತ್ತದೆ. ಯಾರಾದರೂ ಸಮೀಪದ ಬಂಧುಗಳು ಮರಣ ಹೊಂದಿದರೆ ಮನಸ್ಸಿನಲ್ಲಿ ನಾವೂ ಒಂದಲ್ಲಾ ಒಂದು ದಿನ ಹೀಗೆಯೇ ಸಾಯುವವರೇ ಆಗಿದ್ದೇವೆ ಎಂಬ ಭಾವ ಬರುತ್ತದೆ. ಈ ಭಾವವೇ ತೀವ್ರವಾದಾಗ ವೈರಾಗ್ಯ ಎನಿಸಿಕೊಳ್ಳುತ್ತದೆ.
ಕಾಶೀ ಕ್ಷೇತ್ರದ ದರ್ಶನ ಉಳಿದ ಎಲ್ಲಾ ಪುಣ್ಯಕ್ಷೇತ್ರಗಳ ದರ್ಶನಕ್ಕಿಂತ ತುಂಬಾ ವಿಭಿನ್ನ. ಗಂಗಾನದಿಯ ತಟದಲ್ಲಿಯೇ ಮಣಿಕರ್ಣಿಕಾ ಘಾಟ್‌ನಲ್ಲಿಯೇ ನಿರಂತರ ಅಂತ್ಯಸಂಸ್ಕಾರ ನಡೆಯುತ್ತದೆ. ಸಾವಿರಾರು ವರ್ಷಗಳಿಂದ ಹಗಲು-ರಾತ್ರಿ ಭೇದವೆನಿಸದೆ ಚಳಿ-ಬಿಸಿಲು ಲೆಕ್ಕಿಸದೇ ಅಲ್ಲಿ ನಿರಂತರವಾಗಿ ಅಂತ್ಯಸಂಸ್ಕಾರ ನಡೆಯುತ್ತಿರುತ್ತದೆ. ಗಂಗಾನದಿಯಲ್ಲಿ ದೋಣಿಯ ಮೂಲಕ ಹೋಗುವವರೆಲ್ಲರಿಗೂ ಇದು ಕಂಡೇ ಕಾಣುತ್ತದೆ. ಮಣಿಕರ್ಣಿಕಾ ಘಾಟ್ ನಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಹೋಗುವುದು ಸಾಮಾನ್ಯ ರೂಢಿ. ಆ ಅಂತ್ಯಸಂಸ್ಕಾರಗಳ ದೃಶ್ಯವನ್ನು ನೋಡುತ್ತಾ ಮಣಿಕರ್ಣಿಕಾ ಸ್ನಾನವನ್ನು ಮಾಡಿ ವಿಶ್ವನಾಥನ ಮಂದಿರದ ಕಡೆ ಹೆಜ್ಜೆಯಿಟ್ಟರೆ ಮನಸ್ಸಿನ ತುಂಬಾ ಶ್ರದ್ಧಾ-ಭಕ್ತಿಗಳು ಉಕ್ಕಿಬರುತ್ತವೆ. ಇದಕ್ಕೆ ಒಂದು ಮುಖ್ಯ ಕಾರಣ ಆ ಅಂತ್ಯಸಂಸ್ಕಾರಗಳನ್ನು ನೋಡಿರುವಿಕೆ.
ಜೀವನದಲ್ಲಿ ಯಾವಾಗಲೋ ಕೇಳಿದ ಅಧ್ಯಾತ್ಮ ವಿಷಯಗಳು ಆಗ ಒಮ್ಮೆ ಬಹುತೇಕ ಸ್ಮರಣೆಗೆ ಬರುತ್ತವೆ. ಅಧ್ಯಾತ್ಮ ವಿಷಯಗಳ ಚಿಂತನೆಗೆ ಈ ವೈರಾಗ್ಯವು ಹದವಾದ ಮನಸ್ಥಿತಿಯನ್ನುಂಟು ಮಾಡುತ್ತದೆ. ಮಹಾತ್ಮರ ದೃಷ್ಟಿಯಲ್ಲಿ ಈ ವೈರಾಗ್ಯವೂ ಸಣ್ಣದಾಗಿರಬಹುದು. ಆದರೆ ಜನಸಾಮಾನ್ಯರಿಗೆ ಇಂತಹ ಸಣ್ಣಪುಟ್ಟ ವೈರಾಗ್ಯಗಳೇ ಬರುತ್ತವೆ. ಅಧ್ಯಾತ್ಮದ ಚಿಂತನೆಗೆ ಅಷ್ಟಾದರೂ ವೈರಾಗ್ಯಭಾವ ಇದ್ದರೆ ಅಧ್ಯಾತ್ಮಗ್ರಂಥ ರುಚಿಸುತ್ತದೆ, ತಕ್ಕಮಟ್ಟಿಗೆ ಅರ್ಥವಾಗುತ್ತದೆ.
ಕುರುಕ್ಷೇತ್ರದಲ್ಲಿ ಹುಟ್ಟಿದ ಮಹಾನ್ ಕೃತಿ
ಯುದ್ಧರಂಗ ಪ್ರತಿದಿನವೂ ಅನೇಕ ಮರಣಗಳಿಗೆ ಭೂಮಿಕೆ. ನಿನ್ನೆ ಬದುಕಿದ್ದವರು ಇವತ್ತು ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಬಹುದು. ಇವತ್ತು ಇದ್ದವರು ನಾಳೆಗೆ ಪ್ರಾಣಾರ್ಪಣೆ ಮಾಡಬಹುದಾದ ಪ್ರಸಂಗ ಬರಬಹುದು. ಇಂತಹ ಯುದ್ಧರಂಗದ ವಾತಾವರಣ ಒಂದು ರೀತಿಯ ವೈರಾಗ್ಯಭಾವವನ್ನು ಉಂಟುಮಾಡುತ್ತದೆ. ಅರ್ಜುನನಿಗೆ ಇಂಥದೇ ಒಂದು ವೈರಾಗ್ಯಭಾವ ಆರಂಭದಲ್ಲಿ ಮೂಡಿತು. ತನ್ನ ಬಾಂಧವರು ಯುದ್ಧಕ್ಕೆ ಸಜ್ಜಾಗಿ ನಿಂತಿರುವುದನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ರೀತಿಯ ವಿಷಾದ ಉಂಟಾಯಿತು. ಈ ವಿಷಾದವೇ ಒಂದು ರೀತಿಯ ವೈರಾಗ್ಯ. ಇದರಿಂದಲೇ ಮುಂದೆ ಶ್ರೀಕೃಷ್ಣನ ಉಪದೇಶ ಹುಟ್ಟಿಕೊಳ್ಳಬೇಕಾಯಿತು.
ಅಲ್ಲದೇ ಅರ್ಜುನ ಶ್ರೀಕೃಷ್ಣನ ಉಪದೇಶಗಳನ್ನು ತೆರೆದ ಮನಸ್ಸಿನಿಂದ ಗಮನವಿಟ್ಟು ಕೇಳಿದನು. ಇದಕ್ಕೆ ಅವನ ವಿಷಾದ ಅಥವಾ ವೈರಾಗ್ಯವೇ ಕಾರಣ. ಮರಣದ ಚಿಂತನೆಯೊಂದಿಗೆ ವೈರಾಗ್ಯಭಾವ ಹುಟ್ಟಿಕೊಂಡು ಅಧ್ಯಾತ್ಮ ಉಪದೇಶಕ್ಕೆ ಕಾರಣವಾದಂತಹ ನಿದರ್ಶನಗಳು ಇನ್ನೂ ಅನೇಕ ಇವೆ. ನಚಿಕೇತನಿಗೆ ಯಮಧರ್ಮರಾಜನ ಉಪದೇಶ, ಪರೀಕ್ಷಿತನಿಗೆ ಶುಕಮುನಿಗಳಿಂದ ಉಪದೇಶ, ಶ್ರೀರಾಮನಿಗೆ ಶ್ರೀವಸಿಷ್ಠರಿಂದ ಉಪದೇಶ ಹೀಗೆ ಹಲವು ನಿದರ್ಶನಗಳಿವೆ. ಒಟ್ಟಾರೆ ಮರಣದ ಚಿಂತನೆಯಿಂದ ಮೂಡಿದ ವೈರಾಗ್ಯಭಾವ ಅಧ್ಯಾತ್ಮ ಚಿಂತನೆಗೆ ಹದವಾದ ಮನಸ್ಥಿತಿಯನ್ನುಂಟು ಮಾಡುತ್ತದೆ. ಭಗವದ್ಗೀತೆ ಯುದ್ಧರಂಗದಲ್ಲಿ ಹುಟ್ಟಿ ಕೊಳ್ಳುವುದಕ್ಕೆ ಇದು ಕಾರಣ ವಾಗಿರಬಹು ದೆಂಬುದು ನಮಗೆ ತೋರುವ ಒಂದು ವಿವರಣೆ. ಕುರುಕ್ಷೇತ್ರದ ಯುದ್ಧರಂಗದಲ್ಲಿ ಹುಟ್ಟಿಕೊಂಡ ಭಗವದ್ಗೀತೆ ಮಾನವ ಮನಸ್ಸುಗಳ ಸಾರ್ವಭೌಮ ಗ್ರಂಥ.
ಅಂದರೆ ವಿವಿಧ ಮನೋಭೂಮಿಕೆಯುಳ್ಳವರಿಗೆ ಅನ್ವಯವಾಗುವ ಗ್ರಂಥ. ದೇವರೇ ಇಲ್ಲ ಎಂಬ ನಾಸ್ತಿಕರಿಂದ ಆರಂಭಿಸಿ ದೇವರೇ ಎಲ್ಲವೂ ಎಂಬುವ ಕಠೋರ ಆಸ್ತಿಕತೆಯುಳ್ಳ ಬ್ರಹ್ಮಜ್ಞಾನಿ ಯವರೆಗೆ; ಭೂತ-ಪ್ರೇತ-ಯಕ್ಷ ಮುಂತಾದ ಕ್ಷುದ್ರದೇವತೆಗಳ ಉಪಾಸಕರಿಂದ ಆರಂಭಿಸಿ ಸೂರ್ಯ-ಸ್ಕಂದ-ಬ್ರಹ್ಮ-ವಿಷ್ಣು- ಮಹೇಶ್ವರ ರೆಂಬ ಉನ್ನತ ದೇವತೋಪಾಸಕರವರೆಗೆ; ಅಗಸನಿಂದ-ಅರಸನವರೆಗೆ; ಓದು ಬರಹ ಕಲಿಯ ದಿದ್ದರೂ ಹಿರಿಯರ ಬಾಯಿಯಿಂದಲೇ ಭಗವದ್ಗೀತೆಯ ಹಾಡುಗಳನ್ನು ಕಲಿತ ಅನಕ್ಷರಸ್ಥ ಅಜ್ಜಿಯರಿಂದ ಆರಂಭಿಸಿ ವಿವಿಧ ಡಾಕ್ಟರೇಟ್‌ಗಳ ಪದಕಾವಳಿಯನ್ನೇ ಧರಿಸಿರುವ ಸುಶಿಕ್ಷಿತರವರೆಗೆ; ಹೀಗೆ ವಿವಿಧ ಸ್ತರದ ಮನಸ್ಸುಳ್ಳ ಎಲ್ಲರಿಗೆ ಅನ್ವಯವಾಗುವ ಉಪದೇಶ ಭಗವದ್ಗೀತೆಯಲ್ಲಿದೆ. ಈ ಅರ್ಥದಲ್ಲಿ ಅದು ಸಾರ್ವಭೌಮ ಗ್ರಂಥ. ಭಗವದ್ಗೀತೆಯ ಸಾರ್ವಭೌಮತೆ ಬಹುಶಃ ಬೇರೆ ಯಾವ ಗ್ರಂಥಕ್ಕೂ ಬರಲಾರದು.
ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ ಮತ್ತು ಜ್ಞಾನಯೋಗ ಎಂಬ 4 ಪ್ರಮುಖ ಯೋಗಗಳುಳ್ಳ ಭಗವದ್ಗೀತೆಯು ಅವತರಿಸಿದ್ದು ನಾಲ್ವರ ವಿರುದ್ಧ ನಡೆದ ಮಹಾಭಾರತ ಯುದ್ಧದಲ್ಲಿ. ದುರ್ಯೋಧನ, ದುಶ್ಶಾಸನ, ಶಕುನಿ ಮತ್ತು ಕರ್ಣ ಈ ನಾಲ್ವರನ್ನು ದುಷ್ಟಚತುಷ್ಟಯ ಎಂಬುದಾಗಿ ಕರೆಯುತ್ತಾರೆ. ಈ ನಾಲ್ವರ ಕಾರಣದಿಂದಲೇ ಮಹಾಭಾರತ ಯುದ್ಧ ಆಗಬೇಕಾಯಿತು. ಈ ಅರ್ಥದಲ್ಲಿ ಮಹಾಭಾರತ ಯುದ್ಧ ಈ ನಾಲ್ವರ ವಿರುದ್ಧ ಎಂಬ ಮಾತು ಬಂದಿದೆ. ಭಗವದ್ಗೀತಾ ಅಭಿಯಾನವೂ ಇದೇ ರೀತಿಯಲ್ಲಿ ಸಮಾಜದಲ್ಲಿರುವ ನಾಲ್ಕು ದೋಷಗಳ ವಿರುದ್ಧ ಹೋರಾಟವಾಗಿದೆ. ಭಗವದ್ಗೀತಾ ಅಭಿಯಾನದ ಪ್ರಮುಖ ನಾಲ್ಕು ಉದ್ದೇಶಗಳನ್ನು ಗಮನಿಸಿದರೆ ಈ ಮಾತು ಅರ್ಥವಾಗುತ್ತದೆ.
ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯಗಳು ಈ ಅಭಿಯಾನದ ಪ್ರಮುಖ ಉದ್ದೇಶಗಳು. ಇವುಗಳನ್ನು ಒಂದೊಂದಾಗಿ ಅರ್ಥಮಾಡಿಕೊಂಡರೆ ನಾಲ್ಕುದೋಷಗಳ ಪರಿಮಾರ್ಜನೆಗಾಗಿ ನಡೆಯುವ ಈ ಅಭಿಯಾನದ ಉದ್ದೇಶ ಎಲ್ಲರಿಗೂ ತಿಳಿಯುತ್ತದೆ.
1. ವ್ಯಕ್ತಿತ್ವ ವಿಕಸನ
ನೇರವಾಗಿ ಹೇಳುವುದಾದರೆ ನಮ್ಮ ಮನಸ್ಸೇ ನಮ್ಮ ವ್ಯಕ್ತಿತ್ವ. ಹಲವು ಕಾರಣಗಳಿಂದ ಮನಸ್ಸು ಮುದುಡಿಕೊಂಡಿದೆ. ಅದನ್ನು ಅರಳಿಸುವ ಪ್ರಯತ್ನವೇ ವ್ಯಕ್ತಿತ್ವ ವಿಕಸನ. ಹೆಚ್ಚುತ್ತಿರುವ ಆತ್ಮಹತ್ಯೆಗಳು, ಹೆಚ್ಚುತ್ತಿರುವ ಮನೋರೋಗಿಗಳ ಸಂಖ್ಯೆ, ಹೆಚ್ಚುತ್ತಿರುವ ಮಧು ಮೇಹ- ರಕ್ತದೊತ್ತಡ- ಹೃದಯಸಂಬಂಧಿ ಕಾಯಿಲೆಗಳು ಮುಂತಾದವು ಗಳಿಂದ ಇವತ್ತಿನ ಮನುಷ್ಯನ ಮನಸ್ಸು ಮುದುಡಿಕೊಂಡಿದೆ ಎಂಬುದು ಅರ್ಥವಾಗುತ್ತದೆ. ಬೆಂಗಳೂರಿನಂತಹ ಮಹಾನಗರ ಗಳಲ್ಲಿ ಸುಶಿಕ್ಷಿತ ಜನಗಳೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ದೊಡ್ಡದುರಂತವೇ ಸರಿ. ಮಧುಮೇಹ- ರಕ್ತದೊತ್ತಡ ಮತ್ತು ಹೃದಯ ಸಂಬಂಧೀ ಕೆಲವು ಕಾಯಿಲೆಗಳಿಗೆ ಮನಸ್ಸಿನ ಒತ್ತಡ ಮುಖ್ಯ ಕಾರಣ. ಈ ಮೂರೂ ರೋಗಗಳು ಜಾಸ್ತಿಯಾಗುತ್ತಿವೆ. ಮಧುಮೇಹದಲ್ಲಿ ಭಾರತವು ವಿಶ್ವದಲ್ಲಿ ಅಗ್ರಸ್ಥಾನವನ್ನು ಪಡೆದಿದೆ.
ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತವಾಗುವಿಕೆ ಭಾರತದಲ್ಲಿ ಹೆಚ್ಚಿಗೆ ಆಗಿದೆ. ಎಂಬುದಾಗಿ ತಜ್ಞರು ಹೇಳುತ್ತಿದ್ದಾರೆ.
ಇವೆಲ್ಲ ಮನುಷ್ಯನ ಮನಸ್ಸು ಮುದುಡಿರುವುದನ್ನು ಸೂಚಿಸುತ್ತದೆ. ಭಗವದ್ಗೀತೆ ಹೇಳಿದ ಕ್ರಮದಲ್ಲಿ ಜೀವನವನ್ನು ರೂಢಿಸಿಕೊಂಡರೆ ಹೀಗಾಗುವುದಿಲ್ಲ. ಯುಕ್ತವಾದ ಆಹಾರ, ಯುಕ್ತವಾದ ವಿಹಾರ ಮತ್ತು ಯುಕ್ತವಾದ ನಿದ್ರೆ-ಜಾಗರಗಳು ಇದ್ದರೆ ಇಂತಹ ಮಾನಸಿಕ-ದೈಹಿಕ ಅನಾರೋಗ್ಯಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಭಗವದ್ಗೀತಾ ಅಭಿಯಾನದ ಮೊದಲ ಉದ್ದೇಶವಾದ ವ್ಯಕ್ತಿತ್ವವಿಕಸನದ ತಾತ್ಪರ್ಯ ಇದು. ಇದೊಂದು ರೀತಿಯಲ್ಲಿ ವ್ಯಕ್ತಿತ್ವದ ಮುದುಡಿಕೊಂಡಿರುವಿಕೆ ಅಥವಾ ಸಂಕೋಚದ ವಿರುದ್ಧದ ಹೋರಾಟ.
2.ನೈತಿಕತೆಯ ಪುನರುತ್ಥಾನ
ಇಂದು ದೇಶದಲ್ಲಿ ಅಡಿಯಿಂದ ಮುಡಿಯವರೆಗೆ ನೈತಿಕತೆಯ ಪತನ ಕಂಡು ಬರುತ್ತಿದೆ. ದೊಡ್ಡ ಸ್ಥಾನದಲ್ಲಿದ್ದವರಲ್ಲಿ ಅನೇಕರು ಅಪರಾಧಿಗಳೆಂದು ಸಾಬೀತಾದ ಸಂದರ್ಭಗಳು ತುಂಬಾ ಇವೆ. ಕೆಲವರು ಒಳ್ಳೆಯವರೂ ಇರಬಹುದು, ಆದರೆ ಅನೇಕರು ಭ್ರಷ್ಟರು ಇದ್ದಾರೆಂಬುದು ಅನೇಕ ಸಲ ಅನುಭವಕ್ಕೆ ಬಂದಿದೆ. ಕೇಂದ್ರ ಸರ್ಕಾರದ ಗ್ರಹಸಚಿವಾಲಯವು ಪ್ರತಿವರ್ಷ ಬಿಡುಗಡೆ ಮಾಡುವ ಅಪರಾಧ ಪ್ರಕರಣಗಳ ಅಂಕಿ-ಅಂಶಗಳು ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ.
ಒಂದೊಂದು ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ವಿಚಾರಿಸಿದರೆ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಚೆನ್ನಾಗಿ ಗೊತ್ತಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಕಾನೂನು, ಪೊಲೀಸ್ ಮುಂತಾದವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಆದರೂ ಅಪರಾಧಗಳು ಬೆಳೆ ಯುತ್ತಲೇ ಇವೆ. ಅಪರಾಧದ ಬೆಳವಣಿಗೆಯ ಮೂಲವನ್ನು ಶೋಧಿಸಬೇಕಾದ ಅಗತ್ಯ ವಿದೆ. ಅಪರಾಧಗಳ ಮೂಲ ಕಾರಣವೇ ಅದರ ಬೆಳವಣಿಗೆಗೂ ಕಾರಣ. ಕಾಮ- ಕ್ರೋಧಗಳೇ ಅಪರಾಧಗಳಿಗೆ ಮೂಲ ಕಾರಣ.
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ |
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್॥
ಎಂಬ ಶ್ಲೋಕದಲ್ಲಿ ಶ್ರೀಕೃಷ್ಣನು ಇದನ್ನು ಹೇಳಿದ್ದಾನೆ. ಕಾನೂನು, ಪೊಲೀಸ್ ಮುಂತಾದವರು ಯಾರೂ ಕಾಮ-ಕ್ರೋಧಗಳನ್ನು ಮೂಲಸಹಿತ ಕಿತ್ತು ಹಾಕುವ ಉಪಾಯವನ್ನು ಕೊಡುವುದಿಲ್ಲ. ಅದನ್ನು ಭಗವದ್ಗೀತೆಯಂತಹ ಅಧ್ಯಾತ್ಮವಾಣಿಯೇ ಕೊಡಬಲ್ಲದು.
ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳೇ ಕ್ರಾಮ-ಕ್ರೋಧಗಳ ನೆಲೆಗಳು. ಇಂದ್ರಿಯಗಳನ್ನು ಹತೋಟಿಯಲ್ಲಿಡುವ ಸಾಮರ್ಥ್ಯ ಮನಸ್ಸಿಗಿದೆ. ಮನಸ್ಸನ್ನು ಹತೋಟಿಯಲ್ಲಿಡುವ ಸಾಮರ್ಥ್ಯ ಬುದ್ಧಿಗಿದೆ. ಬುದ್ಧಿಗಿಂತಲೂ ಆಚೆಗಿರುವ ಪರಮಾತ್ಮಚೈತನ್ಯದ ಸ್ವಲ್ಪ ಪರಿಚಯವಾದರೂ ಕಾಮ-ಕ್ರೋಧಗಳು ಹತೋಟಿಗೆ ಬರುತ್ತವೆ. ಇದು ಭಗವದ್ಗೀತೆ ಅಪರಾಧದ ಮೂಲವಾದ ಕಾಮಕ್ರೋಧಗಳನ್ನು ನಿಯಂತ್ರಿಸಲು ಕೊಡುವ ಉಪಾಯ. ಭಗವದ್ಗೀತೆಯ ಸಂಸ್ಕಾರವನ್ನು ಬೆಳೆಸುವ ಮೂಲಕ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಭಗವದ್ಗೀತಾ ಅಭಿಯಾನವು ಅಪರಾಧೀಕರಣದ ವಿರುದ್ಧದ ಹೋರಾಟ.
16 ವರ್ಷಗಳಿಂದ ಭಗವದ್ಗೀತಾ ಅಭಿಯಾನ
ಮಹಾಭಾರತ ಯುದ್ಧ ದುಷ್ಟಚತುಷ್ಟಯರ ವಿರುದ್ಧವಾಗಿದ್ದರೆ ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ನೇತೃತ್ವದಲ್ಲಿ ನಡೆಯುತ್ತಿರುವ ‘ಭಗವದ್ಗೀತಾ ಅಭಿಯಾನ’ ಈ ದೋಷಚತುಷ್ಟಯಗಳ ವಿರುದ್ಧ ಸಾರಿದ ಒಂದು ಯುದ್ಧವೆಂದು ಹೇಳಬಹುದು. ಈ ಪ್ರಯತ್ನ ಕಳೆದ ಹದಿನಾರು ವರ್ಷಗಳಿಂದ ನಡೆಯುತ್ತಿದೆ.
ಇದಕ್ಕೇನಾದರೂ ಫಲ ದೊರೆತಿದೆಯೇ? ಎಂಬುದಾಗಿ ಕೆಲವರು ಕೇಳುತ್ತಾರೆ. ಸ್ವಲ್ಪ ಸ್ವಲ್ಪ ಫಲಗಳು ಈಗಾಗಲೇ ಬಂದಿವೆ. ಮುಂಚೆ ರಾಜ್ಯಸರ್ಕಾರದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಭಗವದ್ಗೀತೆಯನ್ನು ಹೇಳಲು ಅವಕಾಶವಿರಲಿಲ್ಲ. ಅಭಿಯಾನ ಶುರುವಾದ ಕೆಲವೇ ವರ್ಷಗಳಲ್ಲಿ ಸರ್ಕಾರವೇ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. ಜೈಲುಗಳಲ್ಲಿ ಭಗವದ್ಗೀತೆ ಹೇಳಿಕೊಟ್ಟಿದ್ದರಿಂದ ಒಳ್ಳೆಯ ಪರಿಣಾಮಗಳ ಸೂಚನೆ ಕಂಡು ಬಂದಿದೆ.
ಕಲಬುರ್ಗಿಯ ಕಾರಾಗ್ರಹದಲ್ಲಿರುವ ಕೈದಿಯೊಬ್ಬರು ಪ್ರತಿದಿನವೂ ಭಗವದ್ಗೀತೆಯನ್ನು ಪೂರ್ತಿ ಓದುತ್ತಿದ್ದು ನಮ್ಮ ಸಂಪರ್ಕದಲ್ಲಿದ್ದಾರೆ. ಬೆಳಗಾವಿಯ ಹಿಂಡಲಗಾ ಕಾರಾಗ್ರಹದ ಕೈದಿಗಳು ನಮಗೆ ಪತ್ರ ಬರೆದಿದ್ದಾರೆ. ಹೀಗೆ ಅಲ್ಲಲ್ಲಿ ಪರಿಣಾಮಗಳಾಗಿರುವದು ಕಂಡು ಬಂದಿದೆ. ಆದರೆ ಆಗಬೇಕಾದದ್ದು ಬಹಳ ಇದೆ. ನಮ್ಮ ದೃಷ್ಟಿಯಲ್ಲಿ ಈ ಎರಡು ಪ್ರಮುಖ ಕಾರ್ಯಗಳಾಗಬೇಕಾಗಿದೆ. ಎಲ್ಲರ ಉದ್ಧಾರಕ್ಕೆ ಹೊರಟಿರುವ ಭಗವದ್ಗೀತೆಯು ಅವತರಿಸಿದ ದಿನವಾದ ಗೀತಾ ಜಯಂತಿಯು ಇದೊಂದು ರಾಷ್ಟ್ರೀಯ ಹಬ್ಬವಾಗಬೇಕು. ಅಂದರೆ ಎಲ್ಲ ಜನಗಳೂ “ಗೀತಾಜಯಂತಿʼʼಯ ಉತ್ಸವವನ್ನು ಆಚರಿಸುವಂತೆ ಸಮಾಜದಲ್ಲಿ ಮಾರ್ಪಾಟು ಆಗಬೇಕು. ಆಗಬೇಕಾಗಿರುವ ಇನ್ನೊಂದು ಕೆಲಸ ವೇನೆಂದರೆ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಕೆ. ಪ್ರಾಥಮಿಕ ಅಥವಾ ಪ್ರೌಢಶಿಕ್ಷಣದ ಹಂತದಲ್ಲಿ ಭಗವದ್ಗೀತೆಯ ಕೆಲವು ಭಾಗಗಳಾದರೂ ಅಳವಡಿಕೆ ಆಗಬೇಕು. ಇದು ಸರ್ಕಾರದ ಕಡೆಯಿಂದ ಆಗಬೇಕಾಗಿರುವ ಕೆಲಸ. ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಈ ಎರಡು ಸುಧಾರಣೆಗಳು ಬಂದರೆ ಈ ಹೋರಾಟ ಸಂಪೂರ್ಣವಾಗುತ್ತದೆ.
3.ಸಾಮಾಜಿಕ ಸಾಮರಸ್ಯ
ವಿವಿಧ ಮತ-ಪಂಥಗಳಿರುವ ವಿವಿಧತೆಯ ಮಧ್ಯದಲ್ಲಿ ಏಕತೆಯ ಸಮನ್ವಯ ಸೂತ್ರವನ್ನು ಇಟ್ಟುಕೊಂಡು ಹೋಗಬೇಕಾದದ್ದು ನಮ್ಮ ದೇಶಕ್ಕೆ ಅತೀ ಅವಶ್ಯ. ಭಗವದ್ಗೀತೆಯು ಈ ಸಮನ್ವಯ ಸೂತ್ರವನ್ನು ವೈಜ್ಞಾನಿಕವಾಗಿ ಕೊಡಬಲ್ಲದು. ಎಲ್ಲ ಮತ-ಪಂಥಗಳಿಗೂ ಅವಕಾಶ ಕೊಟ್ಟು ಅನಂತರ ಅವುಗಳ ನಡುವೆ ಬೆಸುಗೆಯನ್ನು ಹಾಕುವ ಕೆಲಸ ಸುಲಭವಲ್ಲ. ಎಲ್ಲ ಮತ-ಪಂಥಗಳ ಆಚಾರ್ಯ ಪುರುಷರು ಭಗವದ್ಗೀತೆಗೆ ತಮ್ಮ ಮತಕ್ಕನುಸಾರವಾದ ವ್ಯಾಖ್ಯಾನಗಳನ್ನು ಮಾಡಿದ್ದಾರೆ.
ಭಗವದ್ಗೀತೆಯಲ್ಲಿ ಇವೆಲ್ಲಕ್ಕೂ ಅವಕಾಶಗಳಿವೆ. ಹೀಗೆ ಎಲ್ಲ ಮತಗಳಿಗೂ ಯೋಗ್ಯ ಅವಕಾಶ ಕೊಟ್ಟು ಅವುಗಳನ್ನು ಬೆಸೆಯುವ ಕೆಲಸ ಭಗವದ್ಗೀತೆಯು ಮಾಡಿದಷ್ಟು ಉತ್ತಮವಾಗಿ ಮತ್ತೆ ಯಾರೂ ಮಾಡಲು ಸಾಧ್ಯವಿಲ್ಲ. ಭಗವದ್ಗೀತಾ ಅಭಿಯಾನ ಸಮಾಜದಲ್ಲಿರುವ ಅಸಾಮರಸ್ಯದ ವಿರುದ್ಧದ ಹೋರಾಟ.
4. ರಾಷ್ಟ್ರೀಯ ಭಾವೈಕ್ಯ
ಇಡೀ ಭಾರತ ದೇಶ ಒಂದು ರಾಷ್ಟ್ರ. ಯಾವುದೇ ಅಂತರಗಳಿದ್ದರೂ ನಾವೆಲ್ಲರೂ ಈ ಒಂದು ರಾಷ್ಟ್ರದ ಪ್ರಜೆಗಳು. ಇದು ರಾಷ್ಟ್ರೀಯಭಾವೈಕ್ಯ. ಭಯೋತ್ಪಾದನೆ ಇದಕ್ಕೆ ಒಂದು ದೊಡ್ಡ ಸವಾಲು. ಶಿಕ್ಷಣ ಪಡೆದ ಯುವಜನಾಂಗ ಭಯೋತ್ಪಾದಕ ಸಂಘಟನೆಗಳತ್ತ ಆಕರ್ಷಣೆಗೆ ಒಳಗಾಗದಂತೆ ಮಾಡಿಕೊಳ್ಳುವುದು ಅಗತ್ಯವಿದೆ. ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ-ಯುವಕ-ಯುವತಿಯರಿಗೆ ಭಗವದ್ಗೀತೆಯ ಶಿಕ್ಷಣವು ದೊರೆತರೆ ಅವರು ಭಯೋತ್ಪಾದಕ ಸಂಘಟನೆಗಳತ್ತ ಆಕರ್ಷಿತರಾಗುವದು ತಪ್ಪುತ್ತದೆ ಎಂಬುದು ನಮ್ಮ ವಾದ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸವಾಗಬೇಕಾಗಿದೆ. ಆದರೂ ಭಗವದ್ಗೀತಾ ಅಭಿಯಾನ ರಾಷ್ಟ್ರೀಯ ಭಾವೈಕ್ಯತೆಗೆ ಸವಾಲಾಗಿರುವ ಉಗ್ರವಾದದ ವಿರುದ್ಧ ಒಂದು ಮೌನ ಹೋರಾಟ.
ಐನ್‌ಸ್ಟೀನ್‌ನಂತಹ ವಿಜ್ಞಾನಿಗಳಿಗೆ, ಗಾಂಧೀಜಿ ಯಂತಹ ಸಮಾಜ ಸುಧಾರಕರಿಗೆ, ಅರಿಸ್ಟಾಟಲ್ ನಂತಹ ತತ್ವಜ್ಞಾನಿಗಳಿಗೆ, ಇನ್ನೂ ಅನೇಕ ಮಹತ್ತರ ವ್ಯಕ್ತಿಗಳಿಗೆ ಪ್ರಭಾವವನ್ನುಂಟು ಮಾಡಿದ ಭಗವದ್ಗೀತೆಯು ನಮ್ಮ ದೇಶದ ಇಂದಿನ ಜನಾಂಗಕ್ಕೆ ತನ್ನ ಪ್ರಭಾವವನ್ನು ಉಂಟುಮಾಡಲಾರದೇ? ಖಂಡಿತ ಉಂಟುಮಾಡುತ್ತದೆ ಎಂಬುದು ನಮ್ಮ ವಿಶ್ವಾಸ.
ಇದನ್ನೂ ಓದಿ | Gita Jayanti 2022 | ಭಾರತ ಈಗ ಭಗವದ್ಗೀತೆ ನೀಡಿದ ಸಂದೇಶವನ್ನೇ ಅನುಸರಿಸುತ್ತಿದೆ ಎಂದ ಸಚಿವ ರಾಜನಾಥ್ ಸಿಂಗ್