Site icon Vistara News

Gowri Habba 2022 | ಗೌರಿ ಪೂಜೆಯಲ್ಲಿ ನೀಡುವ ಬಾಗಿನಕ್ಕಿರುವ ಮಹತ್ವವೇನು? ಬಾಗಿನದಲ್ಲಿ ಏನೆಲ್ಲಾ ಇಡಬೇಕು?

Gowri Habba 2022

ಹೆಣ್ಣು ಮಕ್ಕಳಿಗೆ ತವರಿನ ಮೋಹ ಇದ್ದೇ ಇರುತ್ತದೆ. ಇದರಿಂದ ಶಿವನನ್ನು ಮದುವೆಯಾಗಿ ಕೈಲಾಸ ಸೇರಿದ ಗೌರಿಯೇನೂ ಹೊರತಲ್ಲ. ವರ್ಷಕ್ಕೊಮ್ಮೆ ತವರಿಗೆ ಅಂದರೆ ಭೂಮಿಗೆ ಹೋಗಿ ಬರುವನೆಂದು ಪತಿರಾಯ ಶಿವನನ್ನು ಒಪ್ಪಿಸಿರುವ ಗೌರಿ ಭಾದ್ರಪದ ಮಾಸದ ತದಿಗೆಯಂದು ಭೂಮಿಗೆ ಬಂದು ತನ್ನ ಬಂಧು ಬಾಂಧವರೊಡನೆ ಇದ್ದು ಸಂಭ್ರಮಿಸುತ್ತಾಳೆ. ಹೀಗೆ ತವರಿಗೆ ಬಂದ ಮಗಳಿಗೆ ಸಲ್ಲಿಸುವ ಸತ್ಕಾರವೇ ಗೌರಿ ಪೂಜೆ (Gowri Habba 2022). ಇದನ್ನೇ ಸ್ವರ್ಣಗೌರಿ ವ್ರತ ಎಂದು ಆಚರಿಸಲಾಗುತ್ತದೆ.

ಸ್ವರ್ಣಗೌರಿ ವ್ರತದ ಸಂದರ್ಭದಲ್ಲಿ ಮಹಿಳೆಯರು ಪರಸ್ಪರ ಬಾಗಿನ ಕೊಟ್ಟುಕೊಂಡು ಸಂಭ್ರಮಿಸುತ್ತಾರೆ. ಇದರಲ್ಲಿ ಧವಸ ಧಾನ್ಯಗಳನ್ನು ಇರಿಸಲಾಗಿರುತ್ತದೆ. ಇದು ಗೌರಿಯ ದೇಸಿತನವನ್ನು ಎತ್ತಿ ತೋರಿಸುತ್ತದೆ. ಬಾಗಿನ ಎಂದರೆ ದಾನ, ಹಾರೈಕೆ. ಸಮೃದ್ಧಿ, ನೆಮ್ಮದಿಯನ್ನು ಪರಸ್ಪರ ಹಾರೈಸುತ್ತಾ ನೀಡುವ ದಾನವೂ ಹೌದು, ಹಾರೈಕೆಯೂ ಹೌದು. ಮೊರದ ಬಾಗಿಕ್ಕೆ ಸಂಸ್ಕೃತದಲ್ಲಿ “ವೇಣುಪಾತ್ರʼʼ ಎಂದು ಕರೆಯುತ್ತಾರೆ.

ಬಾಗಿನಕ್ಕೆ ಏನೆಲ್ಲಾ ಇಡಬೇಕು?
ಸ್ವರ್ಣಗೌರಿ ಹಬ್ಬದಲ್ಲಿ ಗೌರಿಯನ್ನು ಪೂಜಿಸಿದವರು ಅಥವಾ ವ್ರತಮಾಡಿದವರು ನೀಡುವ ಮೊರದ ಬಾಗಿನಕ್ಕೆ ಬಹಳ ಮಹತ್ವವಿದೆ. ಬಾಗಿನಕ್ಕೆ ಹೊಸ ಮೊರಗಳನ್ನು ಹಬ್ಬಕ್ಕಿಂತ ಮೊದಲೇ ತಂದು ತೊಳೆದು ಒಣಗಿಸಿ ಮೊರಗಳಿಗೆ ಅರಿಶಿನ ಹಚ್ಚಬೇಕು. ಇದಕ್ಕೆ ಕುಂಕುಮ ಮತ್ತು ಕಾಡಿಗೆಯ ಬೊಟ್ಟು ಇಡುವ ಸಂಪ್ರದಾಯವೂ ಕೆಲವೆಡೆ ಇದೆ. ಇನ್ನು ಕೆಲವರು ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ, ಹಳದಿ ದಾರವನ್ನೂ ಕಟ್ಟುತ್ತಾರೆ.

Gowri Habba 2022

ಮೊರದಲ್ಲಿ 16 ಪದಾರ್ಥಗಳನ್ನು ಇರಿಸಲಾಗುತ್ತದೆ. ಈ 16 ಪದಾರ್ಥಗಳು 16 ಲಕ್ಷ್ಮೀಯರನ್ನು ಸೂಚಿಸುತ್ತವೆ. ಅವುಗಳ ವಿವರ ಇಲ್ಲಿದೆ:
1. ಅರಿಶಿನ : ಗೌರಿದೇವಿ
2. ಕುಂಕುಮ: ಮಹಾಲಕ್ಷ್ಮೀ
3. ಸಿಂಧೂರ: ಸರಸ್ವತಿ
4. ಕನ್ನಡಿ: ರೂಪಲಕ್ಷ್ಮೀ
5. ಬಾಚಣಿಗೆ: ಶೃಂಗಾರಲಕ್ಷ್ಮೀ,
6. ಕಾಡಿಗೆ: ಲಜ್ಜಾಲಕ್ಷ್ಮೀ
7. ಅಕ್ಕಿ: ಶ್ರೀಲಕ್ಷ್ಮೀ
8. ತೊಗರಿಬೇಳೆ: ವರಲಕ್ಷ್ಮೀ
9. ಉದ್ದಿನಬೇಳೆ: ಸಿದ್ದಲಕ್ಷ್ಮೀ
10. ತೆಂಗಿನಕಾಯಿ: ಸಂತಾನಲಕ್ಷ್ಮೀ
11. ವೀಳ್ಯದ ಎಲೆ: ಧನಲಕ್ಷ್ಮೀ
12. ಅಡಿಕೆ: ಇಷ್ಟಲಕ್ಷ್ಮೀ
13. ಫಲ (ಹಣ್ಣು): ಜ್ಞಾನಲಕ್ಷ್ಮೀ
14. ಬೆಲ್ಲ: ರಸಲಕ್ಷ್ಮೀ
15. ವಸ್ತ್ರ: ವಸ್ತ್ರಲಕ್ಷ್ಮೀ
16. ಹೆಸರುಬೇಳೆ: ವಿದ್ಯಾಲಕ್ಷ್ಮೀ.
ಈ 16 ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು, ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿನ ಕೊಡಲಾಗುತ್ತದೆ.

ಗೌರಿ ಪೂಜೆ, ವ್ರತಕ್ಕಿಂತ ಮೊದಲೇ ಬಾಗಿನವನ್ನು ಸಿದ್ಧಪಡಿಸಿಟ್ಟುಕೊಂಡು ಪೂಜೆ ಮಾಡುವಾಗ ಅದನ್ನು ದೇವಿಯ ಎದುರಿಗೆ ಇಟ್ಟುಕೊಳ್ಳಬೇಕು. ಉತ್ತರ ಪೂಜೆಯ ನಂತರ ಇದಕ್ಕೂ ಪೂಜೆ ಸಲ್ಲಿಸಿ, ಅದನ್ನು ಸುಮಂಗಲಿಯರಿಗೆ ನೀಡಬೇಕು. ಮೊರದ ಬಾಗಿನವನ್ನು ಕೊಡುವಾಗ ಲಲಿತಾ ಪಂಚಕ ಮತ್ತಿತರ ಹಾಡುಗಳನ್ನು ಹೇಳುವ ಸಂಪ್ರದಾಯವಿದೆ.

ಬಾಗಿನ ಕೊಡುವುದು ಹೇಗೆ?
ಗೌರಿಗೆ ಪೂಜೆಯ ನಂತರ ಮುತ್ತೈದೆಯರನ್ನು ಪೂರ್ವ ಅಥವ ಪಶ್ಚಿಮದ ಕಡೆಗೆ ಮುಖ ಮಾಡಿ ಕುಳ್ಳಿರಿಸಿ ಅವರ ಅಂಗೈ, ಅಂಗಾಲುಗಳಿಗೆ ಅರಿಶಿನ ಹಚ್ಚಿ, ಕುಂಕುಮ ಹೂವು ಕೊಟ್ಟು, ಬಾಗಿನವನ್ನು ಮುಚ್ಚಿ, ಅಕ್ಷತೆ ಹಾಕಿ, ಸೀರೆಯ ಸೆರಗನ್ನು ಅದರ ಮೇಲಿಟ್ಟು ಕೊಡಬೇಕು ಎನ್ನುತ್ತದೆ ಶಾಸ್ತ್ರ.

ಬಾಗಿನ ತೆಗೆದುಕೊಳ್ಳುವ ಮುತ್ತೈದೆಯರು ಸಹ ತಮ್ಮ ಸೀರೆಯ ಸೆರಗನ್ನು ಭುಜದ ಮೇಲಿಂದ ಮುಂದಕ್ಕೆ ತಂದು ಎರಡೂ ಕೈಗಳಿಂದ ಬಾಗಿನವನ್ನು ಹಿಡಿದುಕೊಂಡು ಅಡ್ಡಡ್ಡ ಉದ್ದುದ್ದ ಅಲ್ಲಾಡಿಸಬೇಕು. ಮೇಲಿನ ಮುಚ್ಚಿರುವ ಮೊರವನ್ನು ತುಂಬಿರುವ ಮೊರದ ಕೆಳಕ್ಕೆ ಇಟ್ಟು ಎರಡೂ ಮೊರಗಳನ್ನು ಮತ್ತೆ ಅಡ್ಡ ಉದ್ದ ಅಲ್ಲಾಡಿಸಿ ಪಡೆಯಬೇಕು.
ಸೀರೆ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿನ ಕೊಡುವ ಸಂಪ್ರದಾಯ ಬೆಳೆದು ಬಂದಿದೆ.

ಬಾಗಿನದಲ್ಲಿ ಇರಿಸುವ ಪದಾರ್ಥಗಳ ಮಹತ್ವವೇನು? ಫಲಗಳೇನು?

  1. ಅರಿಸಿನ: ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆಯಾಗುತ್ತದೆ. ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ. ಹೀಗಾಗಿಯೇ ನಮ್ಮಲ್ಲಿ ಮತ್ತೈದೆಯರಿಗೆ ಅರಿಸಿನ ಕುಂಕುಮ ನೀಡುವ ಪದ್ಧತಿ ರೂಢಿಯಲ್ಲಿದೆ.
  2. ಕುಂಕುಮ: ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಹೊಂದಿರುತ್ತಾರೆ. ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ. ದೃಷ್ಟಿದೋಷ ನಿವಾರಣೆಯಾಗುತ್ತದೆ, ಕೋಪ, ಹಠ, ಕಮ್ಮಿಯಾಗುತ್ತದೆ.
  3. ಸಿಂಧೂರ: ಸತಿ ಪತಿ ಕಲಹ ನಿವಾರಣೆಯಾಗುತ್ತದೆ. ರೋಗಭಾಧೆ, ಋಣಭಾದೆ, ನಿವಾರಣೆಯಾಗಿ, ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತವೆ.
  4. ಕನ್ನಡಿ(ರೂಪಲಕ್ಷ್ಮೀ): ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ.
  5. ಬಾಚಣಿಗೆ: ಇದನ್ನು ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು, ಯೋಚನೆಗಳು ಕಡಿಮೆಯಾಗುತ್ತವೆ ಮತ್ತು ರೂಪವತಿಯಾಗುತ್ತಾರೆ.
  6. ಕಾಡಿಗೆ: ದೃಷ್ಟಿ ಆಗುವುದು, ಕಣ್ಣಿನ ಕೆಳಗೆ ಕಪ್ಪಾಗುವುದು ಕಡಿಮೆಯಾಗುತ್ತದೆ. ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌
  7. ಅಕ್ಕಿ: ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌ ಆರೋಗ್ಯಭಾಗ್ಯ ದೊರೆಯುತ್ತದೆ. ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತವೆ, ಸಮೃದ್ಧಿ ಹೆಚ್ಚುತ್ತದೆ.
  8. ತೊಗರಿಬೇಳೆ: ತೊಗರಿಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌ ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು, ಸರ್ಪದೋಷಗಳು ನಿವಾರಣೆಯಾಗುತ್ತವೆ. ರಜಸ್ವಲಾ ದೋಷಗಳು ನಿವಾರಣೆಯಾಗುತ್ತವೆ. ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯವಂತರಾಗುತ್ತಾರೆ. ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ.
  9. ಉದ್ದಿನ ಬೇಳೆ: ಪಿತೃಶಾಪ ನಿವಾರಣೆಯಾಗುತ್ತದೆ. ಪಿತೃಕಾರ್ಯಗಳಲ್ಲಿ ಮಾಡಿರಬಹುದಾದ ತಪ್ಪುಗಳ ಫಲ ಕಡಿಮೆಯಾಗುತ್ತದೆ. ಅಪಮೃತ್ಯು ಅಪಾಯ ತಪ್ಪುತ್ತದೆ. ಅಗೋಚರ ರೋಗಗಳು ನಿವಾರಣೆಯಾಗುತ್ತವೆ. ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ.
  10. ತೆಂಗಿನಕಾಯಿ: ಇಷ್ಟಾರ್ಥಸಿದ್ಧಿಯಾಗುತ್ತದೆ, ತೆಂಗಿನಕಾಯಿಗೆ “ಇಷ್ಟಾರ್ಥ ಪ್ರದಾಯಿನಿ” ಅಂತನೂ ಹೆಸರಿದೆ. ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಹಿಡಿದ ಕಾರ್ಯಗಳು ಯಶಸ್ವಿಯಾಗುತ್ತವೆ. ಸರ್ವಕಾರ್ಯದಲ್ಲಿಯೂ ವಿಜಯ ದೊರೆಯುತ್ತದೆ. ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ. ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ.
  11. ವೀಳ್ಯದೆಲೆ: ವೀಳ್ಯದೆಲೆಯನ್ನು ಧನಲಕ್ಷ್ಮೀ ಎಂದು ಪರಿಗಣಿಸಲಾಗುತ್ತದೆ. ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ.
  12. ಅಡಿಕೆ: ಅಡಿಕೆಯನ್ನು ಸಂಸ್ಕೃತದಲ್ಲಿ “ಪೂಗೀಫಲ” ಎಂದು ಕರೆಯುತ್ತಾರೆ. ಅಡಿಕೆಗೆ ಅಭಿಮಾನ ದೇವತೆ “ಇಷ್ಟಲಕ್ಷ್ಮೀ”. ಯಾರು ವೀಳ್ಯದೆಲೆ-ಅಡಿಕೆ ತಾಂಬೂಲವನ್ನು ಪ್ರತಿದಿನ ಸೇವಿಸುತ್ತಾರೋ ಅವರ ಇಷ್ಟಾರ್ಥ ಹಾಗೂ ಬಯಕೆಗಳು ಬೇಗನೇ ನೆರವೇರುತ್ತವೆ.
  13. ಫಲದಾನ: ಫಲಗಳು ಜ್ಞಾನಲಕ್ಷ್ಮೀಯ ಅಧಿಪತಿ. ಫಲದಾನ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಕಾರ್ಯಗಳೂ ಸುಗಮವಾಗಿ, ಸುಲಲಿತವಾಗಿ ಯಾವುದೇ ತೊಂದರೆಯಿಲ್ಲದೆ, ಯಶಸ್ವಿಯಾಗಿ, ಲಾಭದಾಯಕವಾಗಿ ನಡೆಯುತ್ತವೆ‌. ದೇವತೆಗೆ ನೈವೇದ್ಯ ಮಾಡಿರುವ ಹಣ್ಣುಗಳನ್ನು ಸುಮಂಗಲಿಯರಿಗೆ ದಾನ ಮಾಡಿದರೆ, ಸ್ತ್ರೀ ಶಾಪಗಳು ನಿವಾರಣೆಯಾಗುತ್ತದೆ.
  14. ಬೆಲ್ಲ (ರಸಲಕ್ಷ್ಮೀ): ಬೆಲ್ಲದ ಅಭಿಮಾನ ದೇವತೆ “ರಸಲಕ್ಷ್ಮೀ”. ಬೆಲ್ಲದಲ್ಲಿ “ಬ್ರಹ್ಮದೇವರು” , ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾಗಣಪತಿ ದೇವರ ಸಾನಿಧ್ಯ ಇರುತ್ತದೆ. ಬೆಲ್ಲದಾನ ಮಾಡಿದರೆ ಬಹಳಷ್ಟು ಯೋಚನೆಗಳು ನಿವಾರಣೆಯಾಗುತ್ತದೆ. ಕಷ್ಟ-ಸಂಕಷ್ಟ ನಿವಾರಣೆಯಾಗುತ್ತದೆ. ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ.
  15. ವಸ್ತ್ರ: ಸುಮಂಗಲಿಯರನ್ನು ಪ್ರತ್ಯಕ್ಷ ಸ್ತ್ರೀದೇವತೆ ಎಂದು ಪರಿಗಣಿಸಲಾಗುತ್ತದೆ. ಕುಲದೇವತೆಯ ಸ್ವರೂಪ, ಆದಿಶಕ್ತಿಯ ಸ್ವರೂಪ ಎಂದು ತಿಳಿದು ಬಾಗಿನ ಕೊಡುವಾಗ ವಸ್ತ್ರದಾನ ಮಾಡಲಾಗುತ್ತದೆ. ಹೀಗೆ ಮಾಡುವದರಿಂದ “ವಸ್ತ್ರ” ದಾರಿದ್ರ್ಯ ನಿವಾರಣೆಯಾಗುತ್ತದೆ. ಕುಲದೇವತೆ ತೃಪ್ತಿಯಾಗುತ್ತದೆ. ಮನೆಯಲ್ಲಿನ ಸ್ತ್ರೀ ದೋಷಗಳು ನಿವಾರಣೆಯಾಗುತ್ತವೆ.
  16. ಹೆಸರುಬೇಳೆ : ವಿದ್ಯಾಲಕ್ಷ್ಮೀ ಎಂದು ಇದನ್ನು ಪರಿಗಣಿಸಲಾಗುತ್ತದೆ. ವಿದ್ಯಾಲಕ್ಷ್ಮೀ ಹೆಸರು ಕೇಳುತ್ತಿದ್ದಂತೆ ಎಲ್ಲರಿಗೂ ಸಂತೋಷವಾಗುತ್ತದೆ. ವಿದ್ಯೆ ಎಂದರೆ ಸರಸ್ವತೀ, ಲಕ್ಷ್ಮೀ ಎಂದರೆ ಮಹಾಲಕ್ಷ್ಮೀ ಎಂದು ಅರ್ಥ. ಹೆಸರುಬೇಳೆಯನ್ನು ದಾನ ಮಾಡಿದವರಿಗೂ, ತೆಗೆದುಕೊಂಡವರಿಗೂ ಸರಸ್ವತೀ ದೇವಿ ಹಾಗೂ ಮಹಾಲಕ್ಷ್ಮೀ ದೇವಿಯ ಶಾಶ್ವತ ಅನುಗ್ರಹ ಪ್ರಾಪ್ತವಾಗುತ್ತದೆ. ಹೆಸರುಬೇಳೆ ದಾನದಿಂದ ಸುಖ, ಶಾಂತಿ, ನೆಮ್ಮದಿಯ ವಾತಾವರಣ ಇರುತ್ತದೆ. ಮನೆಯಲ್ಲಿ ಒಳಜಗಳಗಳು ನಿವಾರಣೆಯಾಗುತ್ತವೆ. ದೇವಿಗೆ “ಹೆಸರುಬೇಳೆ” ತುಂಬಾ ಇಷ್ಟ, ಇದರಿಂದ ದೇವಿ ಸುಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಎಲ್ಲರೂ ತುಂಬಾ ವಿದ್ಯಾವಂತರಾಗುತ್ತಾರೆ.‌

ಇದನ್ನೂ ಓದಿ| Ganesh Chaturthi 2022 | ಗಣೇಶನಿಗೆ ಯಾವ ಪತ್ರೆ, ಪುಷ್ಪ, ಭಕ್ಷ್ಯ ಅರ್ಪಿಸದರೆ ಏನು ಫಲ ದೊರೆಯುತ್ತದೆ ಗೊತ್ತೇ?

Exit mobile version