Site icon Vistara News

Gowri Habba | ಬಂದಾಳೆ ಗೌರಿ ಮಾತೆ ನಮ್ಮೆಲ್ಲರ ಮನೆಗೆ: ಸೌಭಾಗ್ಯ ತರುವ ದೇವಿಗೆ ತವರಿನಲ್ಲಿಂದು ಪ್ರೀತಿಯ ಪೂಜೆ

Gowri Festival

| ಲಕ್ಷ್ಮೀ ಹೆಗಡೆ

ದೇವಿ ಗೌರಿ ತನ್ನ ತವರು ಮನೆ(ಭೂಲೋಕ)ಗೆ ಮುಂಜಾನೆಯೇ ಬಂದು ನಿಂತಿದ್ದಾಳೆ. ಆ ತಾಯಿಯನ್ನು ನನ್ನಮ್ಮನೂ ಸೇರಿದಂತೆ, ನಾಡಿನ ಎಲ್ಲ ಮನೆಗಳ ಹೆಂಗಳೆಯರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.. -ಪ್ರತಿವರ್ಷ ಭಾದ್ರಪದ ಶುಕ್ಲಪಕ್ಷದ ತದಿಗೆಯ ದಿನ ಗೌರಿ ಮಾತೆ ಭೂಮಿಗೆ ಅಂದರೆ ಅವಳ ತವರು ಮನೆಗೆ ಬರುತ್ತಾಳೆ, ಬೆಳಗ್ಗೆಯೇ ಬರುವ ಅವಳಿಗೆ ಸ್ನಾನದ ವ್ಯವಸ್ಥೆಯಾಗಬೇಕು. ಪೂಜೆಯಾಗಬೇಕು..ನೈವೇದ್ಯ ಅರ್ಪಿಸಬೇಕು..ಬಾಗಿನ ಕೊಡಬೇಕು ಮತ್ತು ನನ್ನನ್ನು ಹರಸು ತಾಯೀ..ಎಂದು ಭಕ್ತಿಯಿಂದ ಬೇಡಿಕೊಳ್ಳಬೇಕು-ಇದು ಹಿಂದೂಗಳ ನಂಬಿಕೆ ಹಾಗೂ ಈ ನಂಬಿಕೆಯ ಆಧಾರದ ಮೇಲೆ ಗೌರಿ ಹಬ್ಬದ ಆಚರಣೆಯ ವಿಧಾನವೂ ಇರುತ್ತದೆ. ಹಾಗಾಗಿ, ಭಾದ್ರಪದ ಮಾಸದ ಶುಕ್ಲಪಕ್ಷದ ತದಿಗೆಯ ದಿನ ಪ್ರತಿಮನೆಯೂ ತಾಯಿ ಗೌರಿ ಸ್ವಾಗತಕ್ಕೆ ಸಜ್ಜಾಗಿರುತ್ತದೆ.

ಒಂದೊಂದು ಪ್ರದೇಶದಲ್ಲಿ ಗೌರಿ ಹಬ್ಬದ ಆಚರಣೆ ವಿಧಾನ ಬೇರೆಬೇರೆಯಾಗೇ ಇರುತ್ತದೆ. ವ್ರತ, ಪೂಜೆ, ಕಜ್ಜಾಯಗಳ ತಯಾರಿಕೆಗಳಲ್ಲಿ ವಿಭಿನ್ನತೆ ಇದ್ದರೂ, ಸಂಭ್ರಮ ಒಂದೇ. ಅದರಲ್ಲೂ ಮುತ್ತೈದೆಯರಂತೂ ಸಿರಿ-ಸೌಭಾಗ್ಯ ತರುವ ಗೌರಿಯನ್ನು ಉತ್ಕೃಷ್ಟ ಭಕ್ತಿ-ಪ್ರೀತಿಯಿಂದ ಪೂಜಿಸಿ, ಭಜಿಸುತ್ತಾರೆ.

ನಮ್ಮನೆಯಲ್ಲೂ ಸಂಭ್ರಮ
ಮಲೆನಾಡಿನ ಭಾಗದ ನನ್ನ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಒಂದು ವಾರ ಇರುವಾಗಲೇ ಸಂಭ್ರಮ ಶುರುವಾಗಿದೆ. ತಾಯಿ-ಮಗನ ಸ್ವಾಗತಕ್ಕೆಂದು, ನನ್ನ ಅಮ್ಮ-ಅತ್ತಿಗೆಯರೆಲ್ಲ ಸೇರಿ ಮನೆ ಸ್ವಚ್ಛ ಮಾಡಿಟ್ಟುಕೊಂಡಿದ್ದಾರೆ. ದೇವರ ಮನೆಯಲ್ಲಿ ಆರತಿ ತಟ್ಟೆ, ಗಂಟೆ-ಜಾಗಟೆ-ಶಂಖಗಳೆಲ್ಲ ಪಳಪಳ ಹೊಳೆಯುತ್ತ ಸಜ್ಜಾಗಿವೆ. ಇಂದು ಗೌರಿಯೂ ಬಂದು ಪ್ರತಿಷ್ಠಾಪಿತಳಾಗಿದ್ದಾಳೆ. ಅವಳನ್ನು ಪೂಜಿಸಲು ಬೇಕಾದ ಸಾಮಗ್ರಿಗಳು, ಬಾಗಿನದ ವಸ್ತುಗಳನ್ನೆಲ್ಲ ನನ್ನಮ್ಮ ಜೋಡಿಸಿಟ್ಟುಕೊಂಡಿದ್ದಾರೆ.

ಹಣ್ಣು-ತರಕಾರಿಗಳ ‘ಫಲಾವಳಿ’ !
ನಮ್ಮ ಮಲೆನಾಡಿನ ಭಾಗದಲ್ಲಿ ಗೌರಿ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಮಾಡುವುದು ಅಪರೂಪ. ದೇಶದ-ನಾಡಿನ ಬೇರೆಬೇರೆ ಭಾಗದಲ್ಲಿ ಗೌರಿಯ ವಿಗ್ರಹ ಕೂರಿಸಿ ಅಲಂಕಾರ ಮಾಡಿ ಪೂಜಿಸುತ್ತಾರೆ. ಇನ್ನೂ ಹಲವರು ಫೋಟೋ ಇಟ್ಟು ಪೂಜೆ ಮಾಡುತ್ತಾರೆ. ಆದರೆ ನಮ್ಮಲ್ಲಿ ತುಸು ವಿಭಿನ್ನ. ನಾವು ಪ್ರಕೃತಿಯನ್ನೇ ಗೌರಿಯೆಂದು ಸ್ವಾಗತಿಸುತ್ತೇವೆ. ನಮಗಿಲ್ಲಿ ‘ಗೌರಿ ಹೂವಿನ ಗಿಡ’ ವೇ ಗೌರಿ ಮಾತೆ.

ಮಲೆನಾಡಿನಲ್ಲಿ ಗೌರಿ ಮಾತೆಯೆಂದು ಪೂಜಿಸಲ್ಪಡುವ ‘ಗೌರಿ ಹೂವು’

ನೀವೆಲ್ಲ ಕೇಳಿರಬಹುದು ಈ ಗೌರಿ ಹೂವಿನ ಬಗ್ಗೆ. ಮಲೆನಾಡಿನ ಭಾಗದಲ್ಲಿ ಇದೇ ಭಾದ್ರಪದ ಮಾಸದಲ್ಲಿ ಅರಳಿ ನಿಲ್ಲುವ ಹೂವಿದು. ಹೂವಿನ ಎಸಳುಗಳ ಮೇಲ್ಭಾಗ ಕೆಂಪು/ಕಿತ್ತಳೆ ಬಣ್ಣದಲ್ಲಿದ್ದರೆ, ಕೆಳಭಾಗ ಹಳದಿಯಾಗಿರುತ್ತದೆ. ಕೆಲವು ಹೂವುಗಳು ಪೂರ್ತಿ ಕೆಂಪಾಗಿರುತ್ತವೆ. ವೈಜ್ಞಾನಿಕ ಭಾಷೆಯಲ್ಲಿ ಈ ಹೂವಿಗೆ ಗ್ಲೋರಿಯೋಸಾ ಸುಪರ್ಬ ಎಂದು ಕರೆದರೂ, ನಾಟಿ ಪದ್ಧತಿಯಲ್ಲಿ ಇದೊಂದು ಔಷಧೀಯ ಸಸ್ಯ ಎನ್ನಿಸಿಕೊಂಡಿದ್ದರೂ, ನಮ್ಮ ಮಲೆನಾಡಿಗರ ಪಾಲಿಗೆ ಇದು ದೇವಿ ಗೌರಿ.. ಹಬ್ಬದ ಮುನ್ನಾದಿನವೇ, ಈ ಗೌರಿ ಗಿಡದ ಹೂವನ್ನು ಹುಡುಕಿ ತರಲಾಗುತ್ತದೆ. ಹಬ್ಬದ ದಿನ ಸ್ನಾನ ಮಾಡಿ, ಮಡಿಯಲ್ಲಿ ಈ ಹೂವಿನ ಗಿಡವನ್ನೇ ಗೌರಿಯೆಂದು ಪ್ರತಿಷ್ಠಾಪಿಸಿ, ಅದಕ್ಕೆ ಇನ್ನೂ ಹಲವು ಬಗೆಯ ಹೂವುಗಳು, ಅರಿಶಿಣ-ಕುಂಕುಮ, ಅಕ್ಷತೆಯನ್ನೆಲ್ಲ ಹಾಕಿ ಪೂಜಿಸಲಾಗುತ್ತದೆ.

ಮಲೆನಾಡಿನಲ್ಲಿ ಗೌರಿಯೆಂದರೆ ವನದುರ್ಗೆ. ಅವಳಿಗಾಗಿ ದೇವರಕೋಣೆಯಲ್ಲೆಲ್ಲ ವಿವಿಧ ತರಕಾರಿ, ಹಣ್ಣುಗಳನ್ನು ಇಡಲಾಗುತ್ತದೆ. ಇದನ್ನು ಫಲಾವಳಿ ಎನ್ನುವರು. ಬೆಂಡೆಕಾಯಿ, ಸೋರೆಕಾಯಿ, ಕ್ಯಾರೆಟ್​, ಮಾವಿನ ಹಣ್ಣು, ಸೇಬು ಹಣ್ಣು, ಕಿತ್ತಳೆ, ಬಾಳೆ ಹಣ್ಣು-ಹೀಗೆ ವಿವಿಧ ಬಗೆಯ ಹಣ್ಣು-ತರಕಾರಿಗಳನ್ನು ದೇವರ ಮನೆಯ ಛಾವಣಿಗೆ ಕಟ್ಟುವ ಒಂದು ವಿಶೇಷ ಸಂಪ್ರದಾಯ ಇದು. ಹಾಗಂತ ಇದು ನೈವೇದ್ಯವಲ್ಲ. ಫಲಗಳ ಆವಳಿ ಎಂದೇ ಕರೆಯಲಾಗುತ್ತದೆ. ‘ಪ್ರಕೃತಿ ಸ್ವರೂಪಿಣಿಯಾದ ಗೌರಿ ಮನೆಗೆ ಬರುವಾಗ, ಅವಳದ್ದೇ ಅಂಶಗಳಾದ ಫಲ-ಪುಷ್ಪಗಳ ಮೂಲಕ ಸ್ವಾಗತಿಸುವ ಸಲುವಾಗಿ ಈ ಆಚರಣೆ ಮಾಡಲಾಗುತ್ತದೆ’. ನಮ್ಮನೆಯಲ್ಲೂ ಅಪ್ಪ, ಗೌರಿ ಮಾತೆ ಸಂತುಷ್ಟಳಾಗಲೆಂದು ತುಂಬ ಮುತುವರ್ಜಿಯಿಂದ ಫಲಾವಳಿ ಕಟ್ಟಿದ್ದಾರೆ. ಗೌರಿ-ಗಣೇಶ ಹಬ್ಬ ಮುಗಿಯುವವರೆಗೂ ಅದನ್ನು ತೆಗೆಯುವ ಮಾತೇ ಇಲ್ಲ.

ಗೌರಿ ಎಂದರೆ ಮತ್ಯಾರಲ್ಲ, ಶಿವನ ಪತ್ನಿ ಪಾರ್ವತಿ. ಭಗವಂತ ಗಣಪನ ತಾಯಿ. ಪ್ರತಿವರ್ಷಕ್ಕೊಮ್ಮೆ ಪುತ್ರನ ಜತೆಗೆ ಭುವಿಗೆ ಬರುವ ಗೌರಿ, ತನ್ನ ಮಗನಷ್ಟು ಕಜ್ಜಾಯಪ್ರಿಯೆ ಅಲ್ಲ. ಅಂದರೆ ಗೌರಿ ಹಬ್ಬದ ನೈವೇದ್ಯಕ್ಕೆ ಒಂದೋ-ಎರಡೋ ಸಿಹಿ ಮಾಡಿದರೆ ಸಾಕಾಗುತ್ತದೆ. ನಮ್ಮಲ್ಲೂ ಅಷ್ಟೇ, ಗೌರಿಗಾಗಿ ಒಂದೇ ಸಿಹಿ ತಿಂಡಿ ಮಾಡುತ್ತಾರೆ. ಮರುದಿನ ಗಣಪತಿ ಪೂಜೆಯ ದಿನ ಹಲವು ಬಗೆಯ ಕಜ್ಜಾಯಗಳ ಜತೆ, ಗೌರಿ ದೇವಿಗಾಗಿ ಕರಕಲಿ ಎಂಬ ವಿಶೇಷ ಪದಾರ್ಥ ಸಿದ್ಧವಾಗುತ್ತದೆ. ಅದು ಕೆಸುವಿನ ಎಲೆಯಿಂದ ಮಾಡುವ ಒಂದು ಪದಾರ್ಥ. ಸಾಮಾನ್ಯವಾಗಿ ಬೇರೆ ದಿನಗಳಲ್ಲಿ ಇದಕ್ಕೆ ಉಪ್ಪು, ಖಾರ, ಬೆಳ್ಳುಳ್ಳಿ ಒಗ್ಗರಣೆ ಸರಿಯಾಗಿಯೇ ಬೀಳುತ್ತದೆಯಾದರೂ, ಗೌರಿಮಾತೆಗಾಗಿ, ಹಬ್ಬದ ದಿನ ಮಾಡಲಾಗುವ ಕರಕಲಿಯಲ್ಲಿ ಇದೆಲ್ಲ ಇರುವುದಿಲ್ಲ. ಸಪ್ಪೆಯೆನಿಸಿದರೂ ರುಚಿ ಕಡಿಮೆ ಇರುವುದಿಲ್ಲ. ಹೀಗಾಗಿ ಪ್ರತಿವರ್ಷ ಹಬ್ಬ ಮುಗಿಸಿ, ಊಟಕ್ಕೆ ಕುಳಿತಾಗಲೂ ಮನೆಯ ಹಿರಿಯರು ಒಬ್ಬರಲ್ಲ, ಒಬ್ಬರು ‘ವರ್ಷದಲ್ಲಿ ಎಷ್ಟೇ ಸಲ ಈ ಕರಕಲಿ ಮಾಡಿದರೂ, ಗೌರಿ ಹಬ್ಬದಂದು ಮಾಡುವ ಉಪ್ಪು-ಹುಳಿ-ಖಾರ-ಒಗ್ಗರಣೆಯಿಲ್ಲದ ಕರಕಲಿಯಷ್ಟು ರುಚಿ ಬರುವುದೇ ಇಲ್ಲ ನೋಡಿ’ ಎಂಬ ಮಾತನ್ನು ಆಡುತ್ತಾರೆ. ಅದೂ ಗೌರಿ ದೇವಿಯ ಕೃಪೆ ಎಂಬ ಭಾವ ಮಾತಿನಲ್ಲಿ ಎದ್ದು ಕಾಣುತ್ತಿರುತ್ತದೆ !

ಆಗಲೇ ಹೇಳಿದಂತೆ ಗೌರಿಯನ್ನು ನಾವು ಮಲೆನಾಡಿಗರು ಪ್ರಕೃತಿ ಮಾತೆಯೆಂದೇ ಭಾವಿಸುವುದರಿಂದ ಸುತ್ತಲಿನ ನಿಸರ್ಗ ನಮಗೇನು ಕೊಡುತ್ತದೆಯೋ ಅದರಿಂದಲೇ ದೇವಿಯನ್ನು ಪೂಜಿಸುತ್ತೇವೆ..ನೈವೇದ್ಯ ತಯಾರಿಸುತ್ತೇವೆ. ಕನ್ನೇಕುಡಿ ಕಟ್ನೆ, ಕೆಸುವಿನ ಸೊಪ್ಪಿನ ಕರಕಲಿಗಳೆಲ್ಲ ಮಲೆನಾಡಿನ ವಿಶೇಷ ಅಡುಗೆಯಾಗಿದ್ದರಿಂದ, ಮನೆ ಮಗಳು ಗೌರಿ ಬಂದಾಗ ಇಂಥ ವಿಶೇಷ ಪದಾರ್ಥಗಳನ್ನು ಮಾಡಿ ಅರ್ಪಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಕೆಸುವಿನ ಪತ್ರೊಡೆಯನ್ನೂ ತಯಾರಿಸಲಾಗುತ್ತದೆ.

ಬರುವಾಗ ಒಂದು ದಿನ ಮುಂಚಿತವಾಗಿಯೇ ಬರುವ ಗೌರಿ, ವಾಪಸ್ ಹೋಗುವುದು ತನ್ನ ಪುತ್ರ ಗಣಪನೊಂದಿಗೇ. ಚೌತಿ ಪೂಜೆಯ ಬಳಿಕ ಗಣಪತಿ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವಾಗಲೇ, ಗೌರಿಯನ್ನೂ ಅಂದರೆ ಗೌರಿ ಗಿಡವನ್ನೂ ನೀರಿನಲ್ಲಿ ಬಿಟ್ಟು, ಅರಿಶಿಣ-ಕುಂಕುಮ ಹಾಕಿ, ಕೊನೆಯದಾಗಿ ಒಂದು ಆರತಿಯನ್ನು ಎತ್ತಿ ಕಳಿಸುವುದು ನಮ್ಮಲ್ಲಿನ ಪದ್ಧತಿ. ಅದೇನೇ ಇರಲಿ ಇವತ್ತು ಈಗಷ್ಟೇ ಗೌರಿ ನಮ್ಮ-ನಿಮ್ಮೆಲ್ಲರ ಮನೆಗೆ ಕಾಲಿಟ್ಟಿದ್ದಾಳೆ. ಮನೆ ಮಗಳಾದ ಅವಳನ್ನು ಆದರಿಸಿ, ಪೂಜಿಸಿ-ಪ್ರೀತಿ ಕೊಟ್ಟು, ಆಶೀರ್ವಾದ ಪಡೆಯೋಣ ! ಅವಳಿರುವ ಎರಡು ದಿನ ಭಜನೆ, ಮಂತ್ರಗಳಿಂದ ಸಂತುಷ್ಟಗೊಳಿಸಿ ಕಳಿಸೋಣ. ಮತ್ತೆ ಬಾ..ಸದಾ ನಿನ್ನಾಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿಕೊಳ್ಳೋಣ ..

ಇದನ್ನೂ ಓದಿ: Festive Fashion: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ರೇಷ್ಮೆಯ ಲಂಗ-ದಾವಣಿ

Exit mobile version