Site icon Vistara News

Guru Raghavendra Swamy : ಮಂತ್ರಾಲಯದ ಕೀರ್ತಿ ಮುಕುಟ ಶ್ರೀ ರಾಘವೇಂದ್ರ ಸ್ವಾಮಿಗಳು

Sri Raghavendra Swami Vardhanti celebration

ಶ್ರೀ ಗುರು ರಾಯರು

ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಯುಗಯುಗಗಳ ವರೆಗೂ ಅಸೃಜ್ಯವಾಗಿ ಉಳಿಯುವಂತೆ ವಿಶ್ವದ ತುಂಬ ಭಕ್ತಿಯ ಸಂಚಲನ ಸೃಷ್ಟಿಸಿದ ʻಕಲಿಯುಗದ ಕಾಮಧೇನುʼ ʻಕಲ್ಪವೃಕ್ಷರುʼ ಶ್ರೀ ರಾಘವೇಂದ್ರ ತೀರ್ಥರು (Guru Raghavendra Swamy).

ʻಜೀವಂ ನಯತಿ ಇತಿ ಜೀವನಮ್ʼ ಮುಂದೆ ಮುಂದೆ ಸಾಗುವುದೇ ಜೀವನ. ಆದರೆ ಜೀವನದಲ್ಲಿ ಮನಬಂದಂತೆ ಎಲ್ಲೆಂದರಲ್ಲಿ ಹೆಜ್ಜೆಗಳನ್ನಿಟ್ಟು ನಡೆಯುವುದು ಪಯಣವಲ್ಲ, ಸಾಗುವ ದಾರಿಯನ್ನು ಮನಸ್ಸು ನಿರ್ಧರಿಸಬೇಕು, ಬುದ್ಧಿ ಒಪ್ಪಬೇಕು, ಧರ್ಮದ ಸಮ್ಮತಿ ಇರಬೇಕು. ಕೈಹಿಡಿದು ಮುನ್ನಡೆಸಲು ಸದ್ಗುರುಗಳಿರಬೇಕು. ಹೀಗೆ ಸದ್ವಿಚಾರದಿಂದ ಕೂಡಿದ ಸಂಚಾರವೇ ಸಾರ್ಥಕ ಜೀವನದ ಪಯಣ. ಇಂತಹ ಸತ್ಯ ಧರ್ಮಗಳಿಂದ ಕೂಡಿದ ದಾರಿಯಲ್ಲಿ ಸಮಸ್ತ ವಿಶ್ವವನ್ನು ನಡೆಸಿ ಇಂದಿಗೂ ಎಲ್ಲ ಭಕ್ತರಿಗೆ ಸಾರ್ಥಕಜೀವನದಲ್ಲಿ ಮನ್ನಡೆಸುತ್ತಿರುವವರು ಕರುಣಾಮಯಿಗಳಾದ ʻಸತ್ಯಧರ್ಮರತಾಯ ಚʼ ಎನಿಸಿದ ಶ್ರೀ ರಾಘವೇಂದ್ರತೀರ್ಥರು.

ಜನಿಸಿದ್ದಕ್ಕಾಗಿ ಕೇವಲ ತಿಂದುಂಡು ಬದುಕಿದರೆ ಅದು ಪ್ರಕೃತಿ. ಕಂಡ ಕಂಡಂತೆ ಬದುಕಿದರೆ ಅದು ವಿಕೃತಿ. ಆದರೆ ರಾಯರು ತೋರಿದ ಸತ್ಯ-ಧರ್ಮದಿಂದ ಬದುಕಿದರೆ ಅದೇ ಸುಸಂಸ್ಕೃತಿ. ಹರಿಪಾದಕಂಜನಿಷೇವಣಾಲ್ಲಬ್ಧಸಮಸ್ತಸಂಪತ್ – ಶ್ರೀಹರಿಯ ಕರುಣೆಯಿಂದ ಪಡೆದ ಪುಣ್ಯದ ರಾಶಿಯನ್ನು ಇಂದಿಗೂ ಜಗತ್ತಿಗೆ ಹಂಚುತ್ತಿದ್ದಾರೆ. ಹೀಗೆ ಪಡೆದದ್ದನ್ನು ಹಂಚುವ ಧರ್ಮವನ್ನು ತಾವು ಮಾಡಿ, ಮಾಡಿರಿ ಎಂಬುದನ್ನು ಜಗತ್ತಿಗೆ ಸಾರುತ್ತಿದ್ದಾರೆ. ಸ್ವಯಂ ಬೆಳೆದು ಬೆಳೆಸುವುದನ್ನು ಕಲಿಸಿದರು. ಸಮಾಜಕ್ಕೆ ಬದುಕುವ ಬಗೆಯನ್ನು ತೋರಿದವರು ರಾಯರು.

ತ್ರಿವಿಕ್ರಮ ಪಂಡಿತಾಚಾರ್ಯರು ಶ್ರೀಮನ್ಮಧ್ವಾಚಾರ್ಯರಲ್ಲಿ ಅನಂತಗುಣಗಳನ್ನು ಕಂಡರೂ ಅವುಗಳಲ್ಲಿ ಅತಿಶ್ರೇಷ್ಠಗುಣ ವಿಷ್ಣ್ವಂಗ್ರಿನಿಷ್ಠಾ- ವಿಷ್ಣುಭಕ್ತಿ-ವಿಷ್ಣುನಿಷ್ಠೆ ಎನ್ನುತ್ತಾರೆ. ಹಾಗೆಯೇ ಅಪ್ಪಣ್ಣಾಚಾರ್ಯರ ದೃಷ್ಟಿಯಲ್ಲಿ ರಾಯರ ಗುಣಗಳ ಭವ್ಯಮುಖವೊಂದಿದೆ. ಅದರಲ್ಲಿ ಅತಿಶ್ರೇಷ್ಠವಾಗಿ ಕಂಡು ವರ್ಣಿಸಿದ್ದು ಸರ್ವ ವಿದ್ಯಾ ಪ್ರವೀಣೋನ್ಯೋ ರಾಘವೇಂದ್ರಾನ್ನ ವಿದ್ಯತೇ ಎಂದು. ಶ್ರೀರಾಯರ ಅಪ್ರತಿಮ ಮೇರು ವಿನಂತಹ ವಿದ್ವತ್ತು ಮಿಕ್ಕೆಲ್ಲ ಗುಣಗಳಿಂದಲೂ ಮಹಾವಿಶೇಷ ಎಂದಿರುವರು. ಇದು ಸರ್ವತೋಮುಖರಾದ ರಾಯರ ಮಹಾಮುಖ.

50ಕ್ಕೂ ಹೆಚ್ಚು ಕೃತಿಗಳ ರಚನೆ

ಬ್ರಹ್ಮಸೂತ್ರಗಳ ಅಧ್ಯಯನಕ್ಕೆ ʻತಂತ್ರದೀಪಿಕಾʼ, ಭಗವದ್ಗೀತೆಯ ಅಧ್ಯಯನಕ್ಕಾಗಿ ʻಗೀತಾವಿವೃತಿʼ ರಚಿಸುವುದರ ಮೂಲಕ ವೇದವ್ಯಾಸರ ಹೃದಯಾಂತರ್ಯವನ್ನು ಹೊರಹಾಕಿದರು. ಶ್ರೀಮಧ್ವರ ಅಣುಭಾಷ್ಯಕ್ಕೆ ʻತತ್ವಮಂಜರೀʼ. ಹೀಗೆ ಬ್ರಹ್ಮಸೂತ್ರಗಳಿಗೆ ಸಂಬಂಧಿಸಿ ಒಟ್ಟಾರ ಏಳು ಗ್ರಂಥಗಳನ್ನು ರಚಿಸಿದ್ದಾರೆ. ಶ್ರೀಮಜ್ಜಯತೀರ್ಥರ ತತ್ವಪ್ರಕಾಶಿಕಾಕ್ಕೆ ʻಭಾವದೀಪʼ ಮತ್ತು ಶ್ರೀಮನ್ನ್ಯಾಯಸುಧಾಕ್ಕೆ ಪರಿಮಳ. ಶ್ರೀವ್ಯಾಸರಾಜರ ಚಂದ್ರಿಕಾಗ್ರಂಥಕ್ಕೆ ರಾಯರ ʻಚಂದ್ರಿಕಾ ಪ್ರಕಾಶ ವ್ಯಾಖ್ಯಾನʼ.

ಅತಿವಿಸ್ತಾರವಾದ ಶ್ರೀಕೃಷ್ಣನ ಕಥೆಯನ್ನು 28 ಶ್ಲೋಕದ ಕೃಷ್ಣಚಾರಿತ್ರ್ಯಮಂಜರಿಯಲ್ಲಿ, ರಾಮಾಯಣದ ಸಾರವನ್ನು 11 ಶ್ಲೋಕಗಳಲ್ಲಿ ರಾಮಚಾರಿತ್ರ್ಯಮಂಜರಿಯಲ್ಲಿ ಸಂಗ್ರಹಿಸಿದ್ದಾರೆ. ಐದುಸಾವಿರ ಶ್ಲೋಕಗಳ ಶ್ರೀಮಧ್ವರ ಮಹಾ ಭಾರತತಾತ್ಪರ್ಯ ನಿರ್ಣಯದ ಎಲ್ಲ ವಿಷಯಗಳನ್ನು 32 ಶ್ಲೋಕದ ತಾತ್ಪರ್ಯ ನಿರ್ಣಯ ಭಾವಸಂಗ್ರಹದಲ್ಲಿ ನಿರೂಪಿಸಿದ್ದಾರೆ. ಪ್ರಾತಃಸಂಕಲ್ಪಗದ್ಯ, ಸರ್ವಸಮರ್ಪಣಗದ್ಯ, ಭಗವದ್ಧ್ಯಾನ ಮೊದಲಾದ ಕೃತಿಗಳಲ್ಲಿ ಅಪಾರಪ್ರಮೇಯಗಳನ್ನು ಸಂಗ್ರಹಿಸಿದ್ದಾರೆ. ಹತ್ತೂ ಪ್ರಕರಣಗ್ರಂಥಗಳಿಗೆ ಟಿಪ್ಪಣಿ ರಚಿಸಿದ್ದಾರೆ. ಮೂರೂ ವೇದಗಳಿಗೂ ವ್ಯಾಖ್ಯಾನ ಮಾಡಿದ್ದಾರೆ. ಪುರುಷಸೂಕ್ತಮೊದಲಾದ ಐದು ಸೂಕ್ತಗಳಿಗೆ ವ್ಯಾಖ್ಯಾನರಚಿಸಿದ್ದಾರೆ. ಭಾಟ್ಟಸಂಗ್ರಹವೆಂಬ ವ್ಯಾಖ್ಯಾನವನ್ನು ಜೈಮಿನಗಳ ಸೂತ್ರಕ್ಕೆ ರಚಿಸಿದ್ದಾರೆ. ದಾಸಸಾಹಿತ್ಯದಲ್ಲಿಯೂ ಅನೇಕ ಪದ್ಯಗಳನ್ನು ರಚಿಸಿದ್ದಾರೆ.

ಹೀಗೆ ಅಧ್ಯಾತ್ಮಿಕವಾಙ್ಮಯಪ್ರಪಂಚವನ್ನು ಶ್ರೀಮಂತಗೊಳಿಸಿದವರು ರಾಯರು. ಶ್ರೀಮಧ್ವರ, ಜಯತೀರ್ಥರ ಕೃತಿಗಳ ಬಗ್ಗೆ, ಮಾತುಗಳ ಬಗ್ಗೆ ಅಂದಿನವರು ಇಂದಿನವರು ಮುಂದಿನವರು ಎಂದಿಗೂ ಆಕ್ಷೇಪ ಎತ್ತದಂದೆ ಭದ್ರಬುನಾದಿ ಹಾಕಿದ್ದಾರೆ. ಇದುವೇ ಅವರ ಗ್ರಂಥಗಳ ಗುರಿ ಎಂದು ತೋರಿಸಿದ್ದಾರೆ. ಆದ್ದರಿಂದಲೇ ಅವರನ್ನು ಶ್ರೀಮಧ್ವಮತ ವರ್ಧನಃ ಎಂದು ಕರೆದಿದ್ದಾರೆ. ವೇದವ್ಯಾಸರ ಶ್ರೀಮನ್ಮಧ್ವಾಚಾರ್ಯರ ಜಯತೀರ್ಥರ ಗ್ರಂಥಗಳ ಗಾಂಭೀರ್ಯವನ್ನು ಸುಲಭವಾಗಿ ತಿಳಿಸುವ ಶೈಲಿ ರಾಯರದ್ದು.

ಮನುಷ್ಯನ ಜೀವನದ ಎಲ್ಲವಿಧ ಸಮಸ್ಯೆಗಳಿಗೆ ಪರಹಾರ ದೊರೆಯುವುದು ಯಾವ ಸಂಪತ್ತು ಅಧಿಕಾರ ವಿಜ್ಞಾನದಿಂದಲ್ಲ. ಕೇವಲ ಸತ್ಯ-ಧರ್ಮದಿಂದ ಕೂಡಿ ಶ್ರೀಹರಿಯಲ್ಲಿ ಆಚರಿತರಾದರೆ ಮಾತ್ರ ಎಲ್ಲದಕ್ಕೂ ಪರಿಹಾರ. ಇದುವೇ ಮಧ್ವಮತದ ಸತ್ಯ-ಧರ್ಮ. ಇದನ್ನು ಜಗತ್ತಿಗೆ ಸಾರಿದವರೆ ಸತ್ಯಧರ್ಮರತರಾದ ಶ್ರೀರಾಘವೇಂದ್ರ ತೀರ್ಥರು. ಅಪೌರುಷೇಯವಾದ ನಿತ್ಯ ಉತ್ತಮವಾದ ವೇದಗಳು ಪರವಿದ್ಯೆ ಎನಿಸಿದ ಬ್ರಹ್ಮಸೂತ್ರಗಳು ಜಗನ್ಮಾನ್ಯತೆಯನ್ನು ಹೊಂದಿದ ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತಾದಿಗಳು. ಇವೇ ಸತ್ಯವಾದ ಧರ್ಮಗಳು. ರಾಯರು ಸದಾ ಇವುಗಳಲ್ಲಿಯೇ ನಿರತರು. ಆದ್ದರಿಂದಲೇ ಅವರು ಸತ್ಯಧರ್ಮರತರು. ಸರ್ವಮೂಲಗಳಲ್ಲಿ ಸದಾ ನಿರತರು. ಶ್ರೀಹರಿಯಲ್ಲಿಯೇ ಸದಾ ಸ್ಥಿರರು.

ವೆಂಕಟನಾಥರು ಹುಟ್ಟಿದ್ದೇ ಗುರುವಾರ!

ತಿಮ್ಮಣ್ಣಭಟ್ಟರು ಹಾಗು ಗೋಪಿಕಾಂಬೆ ದಂಪತಿಗಳಲ್ಲಿ 1595 ಫಾಲ್ಗುಣಶುದ್ಧ ಸಪ್ತಮೀಯಂದು ಜನಿಸಿದರು. ಅಂದು ಗುರುವಾರವಾಗಿತ್ತು. ತಿರುಪತಿಯ ವೇಂಕಟೇಶದೇವರ ಸೇವಾಫಲವಾಗಿ ಜನಿಸಿದ್ದರಿಂದ ಇವರಿಗೆ ವೇಂಕಟನಾಥ ಎಂದು ಕರೆದರು. ವೇಂಕಟನಾಥರಿಗೆ ಗುರುರಾಜರೆಂಬ ಅಣ್ಣ ವೇಂಕಟಾಂಬೆ ಎಂಬ ಅಕ್ಕ ಇದ್ದರು. ತಂದೆ ತಿಮ್ಮಣ್ಣಭಟ್ಟರು ಬೇಗನೆ ಕಾಲವಾಗಿದ್ದರಿಂದ ಅಣ್ಣ ಗುರುರಾಜರೇ ಸಂಸಾರದ ಎಲ್ಲ ಜವಾಬ್ದಾರಿಯನ್ನು ಹೊತ್ತರು. ವೇಂಕಟನಾಥರು ತಮ್ಮ ಅಕ್ಕನ ಪತಿಯಾದ ಲಕ್ಷ್ಮೀನರಸಿಂಹಾಚಾರ್ಯರಲ್ಲಿ ಪ್ರಾರಂಭಿಕ ಶಾಸ್ತ್ರಾಧ್ಯಯನ ಮಾಡಿದರು. ಬಾಲ್ಯದಲ್ಲಿಯೇ ಬಹುತೀಕ್ಷ್ಣಬುದ್ಧಿಯವರಾದ್ದರಿಂದ ಎಲ್ಲ ಶಾಸ್ತ್ರಗಳಲ್ಲಿ ಪ್ರಾವೀಣ್ಯತೆ ಪಡೆದರು. ನಂತರ ಶ್ರೀಸುಧೀಂದ್ರತೀರ್ಥರಲ್ಲಿ ಮುಂದಿನ ಶಾಸ್ತ್ರಾಭ್ಯಾಸ ಮಾಡಿದರು. ಸರಸ್ವತೀ ಎಂಬ ಕನ್ಯೆಯೊಡನೆ ವಿವಾಹವಾಯಿತು.

ಒಮ್ಮೆ ಒಂದು ಸಮಾರಂಭಕ್ಕೆ ಹೋದಾಗ ಅಲ್ಲಿ ವೇಂಕಟನಾಥರಿಗೆ ಅವಮಾನಿಸಿ ಮೂಲೆಯಲ್ಲಿ ಕುಳಿತು ಗಂಧವನ್ನು ತೇಯುವ ಕೆಲಸವನ್ನಿತ್ತರು. ಅವರು ಅದನ್ನೂ ಶ್ರದ್ಧೆಯಿಂದ ಅಗ್ನಿ ಸೂಕ್ತಪಾರಾಯಣ ಮಾಡುತ್ತ ತೇಯ್ದರು. ಅವರ ಮಂತ್ರಶಕ್ತಿ ಎಷ್ಟು ಪ್ರಾಮಾಣಿಕ ಮತ್ತು ಪ್ರಭಾವಶಾಲಿ ಎಂದರೆ ಗಂಧಲೇಪಿಸಕೋಂಡ ಎಲ್ಲರಿಗೂ ಮೈಯೆಲ್ಲ ಉರಿ ಶುರುವಾಯಿತು. ನಂತರ ಎಲ್ಲರಿಗಾಗಿ ಪ್ರಾರ್ಥಿಸಿ ವರುಣಸೂಕ್ತಪಠಿಸಿ ಆ ಉರಿಯನ್ನು ಶಮನಗೊಳಿಸಿದ ಮಹಾನುಭಾವರು ವೇಂಕಟನಾಥರು.

ಶ್ರೀಸುಧೀಂದ್ರತೀರ್ಥರಿಗೆ ವೇಂಕಟನಾಥರನ್ನೇ ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿಕೊಳ್ಳಬೇಕೆಂಬ ಬಲವಾದ ಪ್ರೇರಣೆ. ಅದನ್ನು ಸೂಚಿಸಿದಾಗ ವೇಂಕಟನಾಥರು ಗ್ರಹಸ್ಥಜೀವನದ ಜವಾಬ್ದಾರಿಯನ್ನು ಮುಂದೆಮಾಡಿ ವಿನಮ್ರವಾಗಿ ನಿರಾಕರಿಸಿದರು. ಆದರೂ ಗುರು ಸುಧೀಂದ್ರತೀರ್ಥರ ಸಂಕಲ್ಪ ಬಲವಾಗಿತ್ತು. ರಾತ್ರಿ ನಿದ್ದೆಗೈದಾಗ ವೇಂಕಟನಾಥರ ಸ್ವಪ್ನದಲ್ಲಿ ಸಾಕ್ಷಾತ್ ವಾಯುಪತ್ನಿ ವಾಗ್ದೇವಿ ದ್ವೈತಮತಸಾಮ್ರಾಜ್ಯದ ರಕ್ಷಣೆಯ ಭಾರಹೊತ್ತು ಸಂನ್ಯಾಸಾಶ್ರಮವನ್ನು ಪಡೆದು ನನ್ನ ಸೇವೆಯನ್ನು ಮಾಡು ಎಂದು ಆಜ್ಞಾಪಿಸಿದಳು. ನಂತರ 1621 ದುರ್ಮತಿ ನಾಮಸಂವತ್ಸರ ಫಾಲ್ಗುಣಶುದ್ಧ ಬಿದಿಗೆಯಂದು ತಮಿಳುನಾಡಿನ ತಂಜಾವೂರಿನಲ್ಲಿ ಶ್ರೀಸುಧೀಂದ್ರತೀರ್ಥ ಕರಕಮಲ ಸಂಜಾತರಾಗಿ ಜಗತ್ತಿಗೆ ಶ್ರೀರಾಘವೇಂದ್ರತೀರ್ಥರಾಗಿ ಹೊರಹೊಮ್ಮಿದರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ರಾಯರು ಮಾಡಿದ್ದು ಪವಾಡವಲ್ಲ,ಉದ್ಧಾರ!

ರಾಯರನ್ನು ಕೇವಲ ಪವಾಡಪುರುಷರು ಎಂದು ಕರೆಯುವುದು ಒಂದು ರೀತಿಯ ಅಪರಾಧವೇ ಸರಿ. ಅವರು ಮಾಡಿದ್ದು ಕೇವಲ ಪವಾಡಗಳಲ್ಲ. ನಂಬಿಬಂದ ಭಕ್ತರ ಉದ್ಧಾರಮಾಡಿ ತೋರಿದ ಅಪಾರ ಕಾರುಣ್ಯ. ತಾವು ಮಾಡಿದ ತಪಸ್ಸನ್ನು ವಿಶ್ವದೆಲ್ಲೆಡೆ ಭಕ್ತರ ಉದ್ಧಾರಕ್ಕಾಗಿ ಹಂಚುತ್ತಿರುವ ಮಹಾಮಹಿಮರು.

ಅವರ ವಿದ್ಯಾರ್ಥಿಶಿಷ್ಯನೊಬ್ಬ ಮನೆಯ ಕಷ್ಟಕ್ಕಾಗಿ ಅನುಗ್ರಹಿಸಬೇಕೆಂದು ರಾಯರಿಂದ ಮಂತ್ರಾಕ್ಷತೆಯನ್ನು ಪಡೆದು ಊರಿಗೆ ಹೊರಟಿದ್ದ. ದಾರಿಯಲ್ಲಿ ರಾತ್ರಿ ಒಂದು ಊರಿನಲ್ಲಿ ಒಬ್ಬರ ಮನೆಯ ಹೊರಾಂಗಣದಲ್ಲಿ ಮಲಗಿದ. ಅದೊಂದು ಪಿಶಾಚಬಾಧೆಯಿಂದ ಕೂಡಿದ ಮನೆ. ಮನೆಯಲ್ಲಿ ಗರ್ಭಿಣಿ. ಆಕೆಯ ಗರ್ಭದಲ್ಲಿರುವ ಮಗುವನ್ನು ಕೊಲ್ಲಬೇಕೆಂದು ಪಿಶಾಚಿ ಬಂದಾಗ, ಅಂಗಳದಿಂದ ಒಳಗೆ ಹೋಗಲಾಗಲಿಲ್ಲ. ಅಲ್ಲಿರುವ ಆ ಗುರುಗಳ ಮಂತ್ರಾಕ್ಷತೆಯು ಬೆಂಕಿಯಂತೆ ಕಾಣುತ್ತಿತ್ತು. ತಕ್ಷಣದಲ್ಲಿಯೇ ಶಿಷ್ಯ ಎದ್ದು ಗಾಬರಿಯಿಂದ ರಾಯರು ಕೋಟ್ಟ ಮಂತ್ರಾಕ್ಷತೆಯನ್ನು ಪಿಶಾಚಿ ಮೇಲೆ ಎಸೆದಾಗ ಅದು ಅಲ್ಲಿಯೇ ಭಸ್ಮವಾಗಿ ಹೋಯಿತು. ಹೀಗೆ ರಾಯರ ಮಂತ್ರಾಕ್ಷತೆಯ ಅಸಂಖ್ಯ ಮಹಿಮೆಗಳು ಇಂದಿಗೂ ನಡೆಯುತ್ತಿವೆ.

ರಾಯಚೂರು ಗ್ರಾಮದಲ್ಲಿ ಒಬ್ಬ ಬಡ ಅನಕ್ಷರಸ್ಥ ಬ್ರಾಹ್ಮಣ ವೆಂಕಣ್ಣ. ಒಮ್ಮೆ ರಾಯರ ಮಹಿಮೆಯನ್ನು ಕೇಳಿದ ವೆಂಕಣ್ಣ ಅವರ ಬಳಿಬಂದು ತನಗೆ ಏನೂ ಬರುವದಿಲ್ಲ ಕೇವಲ ದನಕಾಯುವೆ. ನನಗೆ ಅನುಗ್ರಹಿಸಿ ಎಂದು ಪ್ರಾರ್ಥಿಸಿದ. ರಾಯರು ಒಂದು ಮುಷ್ಟಿ ಮಂತ್ರಾಕ್ಷತೆಯನ್ನು ನೀಡಿ ಕಷ್ಟಬಂದಾಗ ನನ್ನನ್ನು ಸ್ಮರಿಸು ಎಂದು ಹೇಳಿದ್ದರು. ಮುಂದೊಮ್ಮೆ ನವಾಬ್ ಆದಿಲ್ ಶಾಹ್ ನ ಕಂದಾಯ ವಸೂಲಿಗನಾದ ಸಿದ್ಧ ಮಸೂದ್ ಎಂಬುವನಿಗೆ ಒಂದು ಮುಖ್ಯವಾದ ಪತ್ರವನ್ನು ಓದಬೇಕಿತ್ತು. ಏಕೆಂದರೆ ಅವನಿಗೆ ಕನ್ನಡ ಓದಲು ಬರುತ್ತಿರಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದಾಗ ದನಕಾಯುವ ಬ್ರಾಹ್ಮಣ ವೆಂಕಣ್ಣ ಕಣ್ಣಿಗೆ ಬಿದ್ದ. ಕೂಡಲೇ ಆ ಪತ್ರವನ್ನು ಓದಲು ಆತನಿಗೆ ಹೇಳಿದ. ಹೆದರಿದ ವೆಂಕಣ್ಣ ನನಗೆ ಓದಲು ಬರುವದಿಲ್ಲವೆಂದಾಗ ಮಸೂದ್ ಕೋಪಗೊಂಡ. ಗಾಬರಿಗೊಂಡ ವೆಂಕಣ್ಣ ಕಣ್ಣು ಮುಚ್ಚಿ ರಾಯರನ್ನು ಸ್ಮರಿಸಿ ಪ್ರಾರ್ಥಿಸಿದ.

ತಕ್ಷಣವೇ ಚಮತ್ಕಾರ. ಓದಲು ಬಾರದ ವೆಂಕಣ್ಣ ಪತ್ರವನ್ನು ಓದಿ ತಿಳಿಸಿ ಅದರಲ್ಲಿರುವ ಸಮಸ್ಯೆಗಳನ್ನೂ ಪರಿಹರಿಸಿದ. ಅಷ್ಟೇ ಅಲ್ಲದೇ ರಾಯರ ಅನುಗ್ರಹದಿಂದ ಮುಂದೆ ದೊಡ್ಡ ವಿದ್ವಾಂಸನಾದ. ಅಸತುಲ್ಲಾ ಖಾನ್ ಎಂಬ ನವಾಬನ ಆಸ್ಥಾನದಲ್ಲಿ ವೆಂಕಣ್ಣ ದಿವಾನನಾದ. ವೆಂಕಣ್ಣನು ಮುಂದೆ ರಾಯರ ಅನನ್ಯ ಸೇವೆಯನ್ನು ಮಾಡಿದ. ರಾಯರನ್ನು ಪರೀಕ್ಷಿಸಲೆಂದು ನಾಸ್ತಿಕ ನವಾಬ ರಾಯರ ಮುಂದೆ ಮಾಂಸದ ತಟ್ಟೆಯನ್ನು ತಂದಿಟ್ಟಾಗ ರಾಯರು ನಸು ನಗುತ್ತಾ ತಮ್ಮ ದೃಷ್ಟಿಮಾತ್ರದಿಂದ ಅದನ್ನೆಲ್ಲ ಹಣ್ಣುಗಳನ್ನಾಗಿ ಪರಿವರ್ತಿಸಿದ ಘಟನೆ ನಡೆದಿತ್ತು. ಆಗ ಪಶ್ಚಾತ್ತಾಪಕ್ಕೊಳಗಾದ ನವಾಬ ರಾಯರ ಅನನ್ಯಭಕ್ತನಾಗಿ ಶರಣಾಗುತ್ತಾನೆ.

ಗದುಗಿನ ಸಮೀಪದ ಗ್ರಾಮವೊಂದರಲ್ಲಿ ದೇಸಾಯಿ ದಂಪತಿಗಳ ಮನೆಯಲ್ಲಿ ರಾಯರ ಸಂಸ್ಥಾನ ಪೂಜೆ. ಈ ಮಧ್ಯದಲ್ಲಿ ದೇಸಾಯಿಯವರ ಮಗ ಆಟವಾಡುತ್ತ, ಬಂದಭಕ್ತರಿಗಾಗಿ ಸಿದ್ಧಪಡಿಸಿದ ಮಾವಿನ ಹಣ್ಣಿನ ರಸಾಯನದಲ್ಲಿ ಬಿದ್ದು ಮೃತನಾಗುತ್ತಾನೆ. ಆ ಬಾಲಕನಿಗೆ ತಮ್ಮ ತಪಃಶಕ್ತಿಯಿಂದ ಮರುಜನ್ಮವಿತ್ತು ಉದ್ಧರಿಸುತ್ತಾರೆ ರಾಯರು.

ಹೀಗೆ ಒಂದೇ ಎರಡೇ ಅಸಂಖ್ಯಾತ ಭಕ್ತರಕಷ್ಟಗಳನ್ನು ಇಂದಿಗೂ ಪರಿಹರಿಸುತ್ತಲಿದ್ದಾರೆ. ಅವರ ಮಹಿಮೆಗಳ ವರ್ಣನೆ ಮಾಡಲು ಪ್ರಯತ್ನಿಸಿದರೆ ಪದಗಳ ಸಮುದ್ರವೇ ಬತ್ತಿಹೋಗವುದು. ಆದರೂ ರಾಯರ ಲೋಕೋದ್ಧಾರ ಮಹಿಮೆಗಳು ಎಂದಿಗೂ ಮುಗಿಯುವದಿಲ್ಲ. ಭಕ್ತರ ಕಣ್ಣಿಗೆ ಅಗೋಚರರಾಗಿದ್ದರೂ, ಕಲ್ಲಿನ ಕವಚ ತೋಟ್ಟು ತಮ್ಮ ಹರಿಪಾದೋದಕದ ಅಮೃತದಂತಿರುವ ಪುಣ್ಯದ ಕಲಶದಿಂದ, ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ದೂರಮಾಡಿ ಎಲ್ಲರಲ್ಲೂ ಧರ್ಮದ ಬೀಜ ಬಿತ್ತುತ್ತಿದ್ದಾರೆ. ದೇವದೂತರಾಗಿ ಇಂದಿಗೂ ಕಲ್ಪವೃಕ್ಷ ಕಾಮಧೇನು ಆಗಿದ್ದಾರೆ.

ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ ಎಂದು ಅಪ್ಪಣ್ಣಾಚಾರ್ಯರು ಹೇಳಿದಂತೆ ವೇದಶಾಸ್ತ್ರಗಳ ಜ್ಞಾನಸಿದ್ಧಿಗಾಗಿಯೇ ರಾಯರ ಸ್ಮರಣೆ, ಸೇವೆ, ಸಂಕೀರ್ತನೆ. ಅವರ ಸ್ಮರಣೆಯ ಮುಖ್ಯಪ್ರಯೋಜನವೇ ಶಾಸ್ತ್ರಾರ್ಥಗಳ ಜ್ಞಾನ. ಇಂದು ಇಂತಹ ಮಧ್ವಮತದ ಮಹಾಗುರು ವಿಶ್ವಸಂತರೆನಿಸಿದ ಶ್ರೀರಾಘವೇಂದ್ರಸ್ವಾಮಿಗಳ ವರ್ಧಂತಿ. ಅವರಿಗೆ ಅನಂತ ಪ್ರಣಾಮಗಳು.

ಇದನ್ನೂ ಓದಿ | ತಾತಯ್ಯ ತತ್ವಾಮೃತಂ : ಯೋಗಿ ಎಂದರೆ ಯಾರು? ಉತ್ತಮ ಯೋಗಿಯ ಲಕ್ಷಣಗಳೇನು?

Exit mobile version