Site icon Vistara News

Guru Sandesha | ಉನ್ನತ ಸ್ಥಾನವಲ್ಲ; ಆದರ್ಶ ಮುಖ್ಯ

veerendra heggade

ಪ್ರಪಂಚದಲ್ಲಿ ಅನೇಕರಿಗೆ ತಮ್ಮ ವ್ಯಕ್ತಿತ್ವ ಗುಣನಡತೆಗಿಂತಲೂ, ತಾವಿರುವ ಸ್ಥಾನ, ಅಧಿಕಾರ, ಪದವಿಗಳ ಬಗ್ಗೆ ವಿಶೇಷ ಒಲವು-ಅಹಂಕಾರವಿರುತ್ತದೆ. ಅಂಥ ಅಹಂಕಾರದ ಹಿನ್ನೆಲೆಯಲ್ಲೇ ಅವರು ಎಲ್ಲೆಲ್ಲೂ ಗೌರವ ಸ್ಥಾನ, ಪದವಿಗಳ ನಿರೀಕ್ಷೆಯಲ್ಲಿರುತ್ತಾರೆ. ಆದರೆ ವಾಸ್ತವದಲ್ಲಿ ಗೌರವ ಪಡೆಯುವ ಮಾರ್ಗ ಯಾವುದು? ಎಂಬುದನ್ನು ನಿರೂಪಿಸುವ ಪ್ರಸಂಗವೊಂದು ಇಲ್ಲಿದೆ.

ಜಪಾನಿನಲ್ಲಿ ಸಂತರಾದ ಮೇಹಜೀ ಎಂಬವರು ತಮ್ಮ ಪಾಂಡಿತ್ಯ ಮತ್ತು ವೈರಾಗ್ಯಪೂರ್ಣ ಸ್ವಭಾವದಿಂದಾಗಿ ವಿಖ್ಯಾತರಾಗಿದ್ದರು. ಜಿಜ್ಞಾಸುಗಳು ಅವರ ಬಳಿ ಬಂದು ತಮ್ಮ ಸಮಸ್ಯೆಗಳನ್ನು ನಿವೇದಿಸಿ, ಸೂಕ್ತ ಪರಿಹಾರವನ್ನು ಪಡೆಯುತ್ತಿದ್ದರು. ಒಮ್ಮೆ ಜಪಾನಿನ ಪ್ರಾಂತವೊಂದರ ರಾಜ್ಯಪಾಲರಾದ ಕಿಯಾಜಾರಿ ಎಂಬವರು ಅವರ ಬಳಿ ಬಂದರು. ಹಾಗೂ ತಮ್ಮ ಉನ್ನತ ಪ್ರಕಾರದ ಅಹಂಕಾರದಿಂದ ಸಂತರನ್ನು ಭೇಟಿಯಾಗಲು ಪತ್ರ ಬರೆದರು. ಪತ್ರದಲ್ಲಿ ಕಿಯಾಜಾರಿಯವರ ಪದವಿ-ಹುದ್ದೆಯ ಉಲ್ಲೇಖವಿತ್ತು.

ಪತ್ರವನ್ನು ಓದಿದ ಸಂತರು ರಾಜ್ಯಪಾಲರ ಸಹಾಯಕ ಸಚಿವನನ್ನು ಕರೆದು ಹೇಳಿದರು; ”ನೀವು ನಿಮ್ಮ ರಾಜ್ಯಪಾಲರಿಗೆ ತಿಳಿಸಿ, ನನಗೆ ರಾಜನೀತಿಯಲ್ಲಿ ಆಸಕ್ತಿಯಿಲ್ಲ. ಕೇವಲ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಚರ್ಚಿಸಬಯಸುತ್ತೇನೆ ಎಂಬ ಸಂದೇಶವನ್ನು ರಾಜ್ಯಪಾಲರಿಗೆ ಮುಟ್ಟಿಸಿ” ಎಂದರು. ಸಹಾಯಕನು ಸಂತರ ಮಾತುಗಳನ್ನು ರಾಜ್ಯಪಾಲರಿಗೆ ತಿಳಿಸಿದಾಗ ಅವರಿಗೆ ಪಶ್ಚಾತ್ತಾಪವಾಗಿ, ಅವರು ಸಂತರನ್ನು ಸ್ವತಃ ಭೇಟಿಯಾಗಿ ಆಶೀರ್ವಾದ ಪಡೆಯಲು ಬಯಸಿದರು. ಅಂತೆಯೇ ಸಂತರ ಬಳಿಗೆ ಕೇವಲ ತಮ್ಮ ಹೆಸರನ್ನು ಮಾತ್ರ ಬರೆದಿದ್ದ ಚೀಟಿಯೊಂದನ್ನು ಕಳುಹಿಸಿದಾಗ ಸಂದರ್ಶನಕ್ಕೆ ಅನುಮತಿ ದೊರಕಿತು. ಸಂತರು ಹಾಗೂ ರಾಜ್ಯಪಾಲರು ಲೋಕಾಭಿರಾಮವಾಗಿ ಧರ್ಮ-ಕರ್ಮ, ದೇವರು ಮೊದಲಾದ ವಿಷಯಗಳನ್ನು ಚರ್ಚಿಸಿದರು.

ಕೊನೆಗೆ ಸಂತರಿಗೆ ಧನ್ಯವಾದಗಳನ್ನು ಅರ್ಪಿಸಿದ ರಾಜ್ಯಪಾಲರು ನನಗೆ ತಮ್ಮ ಸಂದೇಶದಿಂದ ಮಾರ್ಗದರ್ಶನ ನೀಡಿ ಎಂದು ಕೇಳಿಕೊಂಡರು. ಆಗ ಸಂತರು ಹೇಳಿದರು ಧರ್ಮದ ಸಾರವು ಸೇವೆ, ಪರೋಪಕಾರ, ನ್ಯಾಯ, ಕರುಣೆಗ ಳಂಥ ಸದ್ಗುಣಗಳಲ್ಲಿ ಅಡಗಿದೆ ಎಂದರು. ಇದನ್ನು ಕೇಳಿ ಅರ್ಥಮಾಡಿಕೊಂಡ ರಾಜ್ಯಪಾಲರು ಸಂತರು ನೀಡಿದ ಮಾರ್ಗದರ್ಶನದಂತೆ ನಡೆಯಲು ನಿರ್ಧರಿಸಿದರು.

ಈ ಪ್ರಪಂಚದಲ್ಲಿ ಉನ್ನತ ತತ್ವಾದರ್ಶಗಳು ಮುಖ್ಯ. ಸ್ಥಾನ, ಪದವಿಗಳು ಮುಖ್ಯವಲ್ಲ. ಇದನ್ನು ಅರ್ಥಮಾಡಿಕೊಂಡಾಗ ಪ್ರಗತಿಯ ದಾರಿ ಗೋಚರಿಸುತ್ತದೆ.

ಇದನ್ನೂ ಓದಿ| ಪುರಾಣ ಕತೆ: ಬ್ರಹ್ಮಚಾರಿ ಹನುಮಂತನಿಗೂ ಒಬ್ಬ ಮಗನಿದ್ದ!

Exit mobile version