ಧ್ಯಾನದ ಕುರಿತು ವಿಭಿನ್ನ ಸಿದ್ಧಾಂತಗಳು, ಮಾಡಲು ವಿಭಿನ್ನ ವಿಧಾನಗಳು ಮತ್ತು ವ್ಯವಸ್ಥೆಗಳು ಇವೆ. ‘ನಿಮ್ಮ ಹೆಬ್ಬರೆಳಿನ ಚಲನೆಯನ್ನು ನೋಡುತ್ತಿರಿ, ನೋಡುತ್ತಲೇ ಇರಿ’ ಎಂದು ಹೇಳುವಲ್ಲಿಯೇ ಹಲವಾರು ವಿಧಗಳಿವೆ! ನಿರ್ದಿಷ್ಟ ಭಂಗಿಯಲ್ಲಿ ಕುಳಿತು, ನಿಯಮಿತವಾಗಿ ಉಸಿರಾಡುವಂತೆ ಅಥವಾ ಜಾಗೃತಿಯನ್ನು ಅಭ್ಯಾಸಮಾಡುವಂತೆ ಹೇಳುವ ಮತ್ತೆ ಕೆಲವು ಸಿದ್ಧಾಂತಗಳಿವೆ. ಇವೆಲ್ಲ ಸಂಪೂರ್ಣ ಯಾಂತ್ರಿಕ.
ಇನ್ನೊಂದು ವಿಧಾನ ನಿಮಗೆ ಕೆಲವು ಪದಗಳನ್ನು ಪುನರುಚ್ಚರಿಸಿದರೆ ಅಸಾಧಾರಣ ಅತೀಂದ್ರಿಯ ಅನುಭವವಾಗುತ್ತದೆ ಎನ್ನುತ್ತದೆ. ‘ಆಮೆನ್’, ‘ಓಂ’ ಅಥವಾ ‘ಕೋಕೋ-ಕೋಲಾ’ ಪದಗಳನ್ನು ಅನಿರ್ದಿಷ್ಟ ಕಾಲ ಪುನರಾವರ್ತಿಸುವುದರಿಂದ ನಿಮಗೆ ನಿಶ್ಚಿತವಾಗಿಯೂ ಏನೋ ಒಂದು ಅನುಭವವಾಗುತ್ತದೆ, ಏಕೆಂದರೆ ಪುನರಾವರ್ತನೆಯಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ.
ಭಾರತದಲ್ಲಿ ಸಾವಿರಾರು ವರ್ಷಗಳಿಂದ ಮಂತ್ರಯೋಗ ಎಂಬ ಹೆಸರಿನಲ್ಲಿ ಇದನ್ನು ಅಭ್ಯಾಸ ಮಾಡಲಾಗುತ್ತಿದೆ. ಪುನರಾವರ್ತನೆಯಿಂದ ನೀವು ಮನಸ್ಸು ಕೋಮಲ ಮತ್ತು ಮೃದುವಾಗಿರುವಂತೆ ಮಾಡಬಹುದು, ಆದರೆ ಅದು ಇನ್ನೂ ಕ್ಷುದ್ರ, ತುಚ್ಛ ಮನಸ್ಸಾಗಿಯೇ ಇರುತ್ತದೆ. ಧ್ಯಾನವು ಯಾವುದೇ ವ್ಯವಸ್ಥೆಯನ್ನು ಪಾಲಿಸುವುದಿಲ್ಲ; ಅದು ನಿರಂತರ ಪುನರಾವರ್ತನೆ ಮತ್ತು ನಕಲು ಅಲ್ಲ.
ಧ್ಯಾನವು ಏಕಾಗ್ರತೆ ಅಲ್ಲ. ಧ್ಯಾನದ ಕೆಲವು ಗುರುಗಳು ಏಕಾಗ್ರತೆಯನ್ನು ಕಲಿಯುತ್ತಿರುವ ತಮ್ಮ ಶಿಷ್ಯಂದಿರಿಗೆ ಒತ್ತಾಯಿಸುವ ಒಂದು ಉಪಾಯವಷ್ಟೇ. ಏಕಾಗ್ರತೆಯೆಂದರೆ ಮನಸ್ಸನ್ನು ಒಂದು ಯೋಚನೆಯ ಮೇಲಿಟ್ಟು, ಬೇರೆಲ್ಲ ಯೋಚನೆಗಳನ್ನು ಹಿಂತೆಗೆದುಕೊಳ್ಳುವುದು, ಶಾಲಾ ಹುಡುಗರಿಗೆ ಒತ್ತಾಯಿಸಿದರೂ ಅದನ್ನು ಮಾಡಬಲ್ಲರು. ಅಂದರೆ ನೀವು ಏಕಾಗ್ರತೆ ಮಾಡುವಂತೆ ಒತ್ತಾಯ ಮತ್ತು ಎಲ್ಲ ಬಗೆಯ ವಿಚಾರಗಳತ್ತ ಹರಿಯುವ ನಿಮ್ಮ ಮನಸ್ಸಿನ ನಡುವಣ ಯುದ್ಧವನ್ನು ಹೊಂದಿರುತ್ತೀರಿ; ಬದಲಾಗಿ ನಿಮ್ಮ ಮನಸ್ಸು ಎಲ್ಲೆಲ್ಲ ಅಲೆಯುತ್ತದೆಯೋ ಆ ಎಲ್ಲ ಚಲನೆಗಳ ಕುರಿತು ನೀವು ಲಕ್ಷ್ಯವಹಿಸಬಹುದು.
ನಿಮ್ಮ ಮನಸ್ಸು ಅಲೆದಾಡುವುದನ್ನು ನಿಲ್ಲಿಸಿದಾಗ, ನಿಮಗೆ ಬೇರೆ ಯಾವುದರಲ್ಲಿಯೋ ಆಸಕ್ತಿ ಇದೆ ಎಂದರ್ಥ. ಧ್ಯಾನವು ಅತ್ಯಂತ ಎಚ್ಚರಿಕೆಯುಳ್ಳ ಮನಸ್ಸನ್ನು ಬೇಡುತ್ತದೆ; ಅದು ಎಲ್ಲ ಬಗೆಯ ವಿಚ್ಛದ್ರತೆಯು ಕೊನೆಗೊಂಡಿರುವ, ಬದುಕಿನ ಪೂರ್ಣತೆಯ ಅರಿಯುವಿಕೆ. ಧ್ಯಾನ ಎಂದರೆ ಆಲೋಚನೆಗಳ ನಿಯಂತ್ರಣವಲ್ಲ, ಹಾಗೆ ನಿಯಂತ್ರಿಸಿದಾಗ ಮನಸ್ಸಿನಲ್ಲಿ ಸಂಘರ್ಷ ಹುಟ್ಟಿಕೊಳ್ಳುತ್ತದೆ. ಆದರೆ ನೀವು ಯೋಚನೆಯ ರಚನೆ ಮತ್ತು ಮೂಲವನ್ನು ಅರ್ಥ ಮಾಡಿಕೊಂಡಾಗ , ಅದು ಮಧ್ಯಪ್ರವೇಶ ಮಾಡುವುದಿಲ್ಲ. ಯೋಚನೆಯ ರಚನೆಯನ್ನು ಅರಿಯುವುದೇ ಅದರ ಸ್ವಂತ ಶಿಸ್ತು, ಅದೇ ಧ್ಯಾನ.
ಧ್ಯಾನವೆಂದರೆ ಎಲ್ಲ ಯೋಚನೆ ಮತ್ತು ಭಾವನೆಗಳ ಕುರಿತು ಜಾಗೃತಿಯಿಂದಿರುವುದು. ಅದನ್ನು ತಪ್ಪು , ಸರಿ ಎಂದು ಹೇಳಲಿಕ್ಕಲ್ಲ, ಸುಮ್ಮನೇ ಅದನ್ನು ಗಮನಿಸುತ್ತ ಅದರೊಂದಿಗೆ ಸಾಗುವುದು. ಹಾಗೆ ಗಮನಿಸುವಾಗ ನೀವು ಯೋಚನೆ ಮತ್ತು ಭಾವನೆಗಳ ಪೂರ್ಣ ಚಲನೆಯನ್ನು ಅರಿಯಲಾರಂಭಿಸುತ್ತೀರಿ. ಈ ಜಾಗೃತಿಯಿಂದ ಮೌನ ಉಂಟಾಗುತ್ತದೆ. ಯೋಚನೆಗಳಿಂದ ಒಟ್ಟುಗೂಡಿದ ಮೌನವು ನಿಶ್ಚಲತೆ, ಮರಣ. ಆದರೆ ಯೋಚನೆಯ ಆರಂಭವನ್ನು, ಅದರದ್ದೇ ಲಕ್ಷಣವನ್ನು ಅರಿತಾಗ; ಎಲ್ಲ ಯೋಚನೆಗಳು ಎಂದೂ ಮುಕ್ತವಲ್ಲ, ಆದರೆ ಸದಾ ಹಳೆಯದಾಗಿರುತ್ತವೆ ಎಂದು ಅರಿತಾಗ, ಈ ಮೌನವು ಧ್ಯಾನವಾಗುತ್ತದೆ.
ಧ್ಯಾನ ಎಲ್ಲವನ್ನೂ ಇಡಿಯಾಗಿ ಪೂರ್ಣ ಲಕ್ಷ್ಯದಿಂದ ನೋಡುವ ಮನಸ್ಸಿನ ಸ್ಥಿತಿ. ಹೇಗೆ ಲಕ್ಷ್ಯದಿಂದಿರಬೇಕೆಂದು ನಿಮಗೆ ಯಾರೂ ಕಲಿಸಿಕೊಡಲಾಗುವುದಿಲ್ಲ. ಯಾವುದಾದರೂ ವ್ಯವಸ್ಥೆ ನಿಮಗೆ ಲಕ್ಷ್ಯ ವಹಿಸುವುದು ಹೇಗೆಂದು ಬೋಸಿದರೆ, ಆಗ ನೀವು ಆ ವ್ಯವಸ್ಥೆಯ ಕುರಿತು ಮಾತ್ರವೇ ಲಕ್ಷ್ಯ ವಹಿಸುತ್ತೀರಿ. ಧ್ಯಾನವು ಜೀವನದ ಅತ್ಯಂತ ಶ್ರೇಷ್ಠ ಕಲೆ, ಅದನ್ನು ಯಾರೂ ಬೇರೆಯವರಿಂದ ಕಲಿಯಲು ಸಾಧ್ಯವಿಲ್ಲ ಮತ್ತು ಇದೇ ಅದರ ಸೌಂದರ್ಯ. ಅದು ಯಾವ ತಂತ್ರವನ್ನು ಒಳಗೊಂಡಿಲ್ಲ.
ನೀವು ನಿಮ್ಮ ಕುರಿತೇ ಕಲಿಯಲಾರಂಭಿಸಿದಾಗ, ನಿಮ್ಮನ್ನೇ ಗಮನಿಸಿ, ನೀವು ನಡೆದಾಡುವ ರೀತಿ, ತಿನ್ನುವ ರೀತಿ, ನೀವೇನು ಹೇಳುತ್ತೀರಿ, ಹರಟೆ ಕೊಚ್ಚುತ್ತೀರಿ, ಯಾವುದನ್ನು ದ್ವೇಷಿಸುತ್ತೀರಿ, ಎಲ್ಲವನ್ನೂ ಗಮನಿಸಿ; ನಿಮ್ಮೊಳಗೆ ಇರುವ ಈ ಎಲ್ಲದರ ಬಗ್ಗೆ ಜಾಗೃತಿ ಹೊಂದಿದರೆ ಬೇರಾವುದೇ ಆಯ್ಕೆ ಇಲ್ಲದೇ ಅದು ಧ್ಯಾನದ ಭಾಗವಾಗುತ್ತದೆ.
ಹೀಗಾಗಿ ನೀವು ಬಸ್‌ನಲ್ಲಿ ಕುಳಿತಾಗ ಅಥವಾ ಕಾಡಿನಲ್ಲಿ ನಡೆಯುವಾಗ ಅಥವಾ ಹಕ್ಕಿಗಳ ಚಿಲಿಪಿಲಿ ಆಲಿಸುವಾಗ ಅಥವಾ ಮಗುವೊಂದನ್ನು ನೋಡುವಾಗ ಧ್ಯಾನ ಮಾಡಬಹುದು!
ಇದನ್ನೂ ಓದಿ | Guru Sandesha | ಸ್ವಸ್ಥ ಜೀವನ-ಸ್ವಾಸ್ಥ್ಯ ಸಮಾಜಕ್ಕೆ ಪಂಚ ‘ಆ’ಕರಗಳು!