ಮನುಷ್ಯ ತಾಯಿಯ ಗರ್ಭದಿಂದ ಈ ಪ್ರಪಂಚಕ್ಕೆ ಬರುತ್ತಾನೆ. ಯಾವುದೇ ಜ್ಞಾನವಿಲ್ಲದೆ ಬರುತ್ತಾನೆ. ತನ್ನ ಬಗ್ಗೆಯೂ ಗೊತ್ತಿಲ್ಲ. ತನ್ನೊಳಗಿನ ಬಗ್ಗೆಯೂ ಗೊತ್ತಿಲ್ಲ. ಪ್ರಪಂಚದ ಬಗ್ಗೆಯೂ ಗೊತ್ತಿಲ್ಲ. ಪ್ರಪಂಚದಲ್ಲಿ ಬೆಳೆಯುತ್ತಾ ಬಾಹ್ಯ ವಸ್ತುಗಳ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವನ್ನು ಪಡೆಯುತ್ತಾನೆ. ತನ್ನ ಬಗ್ಗೆ ಯಾವುದೇ ರೀತಿಯ ವಿಚಾರಮಾಡದೆ “ಶರೀರವೇ ತಾನೆಂದುʼʼ ಅಭಿಮಾನ ಪಡುತ್ತಾನೆ.
‘‘ನಾನು-ನನ್ನದು’’ ಎಂದು ಜೀವಿಸುತ್ತಿರುತ್ತಾನೆ.
ನಾನೆಂದರೆ ಯಾವುದು, ನಾನಲ್ಲದ್ದು ಯಾವುದು ಎಂಬುದನ್ನು ವಿಚಾರಮಾಡಿ ವಿಂಗಡಿಸದಿರುವುದೇ ‘‘ದುಃಖಿ, ಒಂದಲ್ಲ ಒಂದು ದಿವಸ ಸಾಯುತ್ತೇನೆ’’ ಎಂಬುದಕ್ಕೆ ಮೂಲ ಕಾರಣ ಎನ್ನುತ್ತದೆ ಸನಾತನ ಸಂಪ್ರದಾಯ, ವೇದೋಕ್ತ ಸಂಪ್ರದಾಯ. ಈ ಅವಿವೇಕವೇ ಅಜ್ಞಾನ -ಮನುಷ್ಯ ಜೀವನದ ಮೂಲ ಭೂತ ಕತ್ತಲು.
ಈ ಕತ್ತಲನ್ನು ಕಳೆದುಕೊಂಡು, ಆನಂದವಾಗಿ ಜೀವಿಸಲು, ಮೃತ್ಯು ಭಯವಿಲ್ಲದೆ ಜೀವಿಸಲು ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಜ್ಞಾನದ ದೀಪವನ್ನು ಬೆಳಗಿಸಿಕೊಳ್ಳಬೇಕು.
ಜ್ಞಾನ ದೀಪ ತನ್ನಲ್ಲಿ ಬೆಳಗಲು- ಚಿತ್ತವನ್ನು ವಿಷಯಗಳಿಂದ ಹಿಂತೆಗೆದುಕೊಂಡಿರಬೇಕು. ರಾಗ-ದ್ವೇಷಗಳಿಂದ ಮುಕ್ತಮಾಡಿಕೊಂಡಿರಬೇಕು. ಇಂತಹ ಚಿತ್ತವೇ ಜ್ಞಾನದೀಪ ಉರಿಯುವ ಕೋಣೆ. ವೈರಾಗ್ಯದಿಂದ ಕೂಡಿದ ಅಂತಃಕರಣವೇ ದೀಪಸ್ತಂಭ. ಬ್ರಹ್ಮಚರ್ಯ ಮುಂತಾದ ಸಾಧನಗಳ ಸಂಸ್ಕಾರವುಳ್ಳ ಪ್ರಜ್ಞೆ ಎಂಬುದು ಬತ್ತಿ. ಪರಮಾತ್ಮನ ಭಾವನೆಯಲ್ಲಿಯೇ ಇಟ್ಟಿರುವ ಹೆಚ್ಚಿನ ಅಭಿಮಾನವು ಈ ದೀಪ ಉರಿಯಲು ಗಾಳಿ, ಪರಮಾತ್ಮನಲ್ಲಿ ಭಕ್ತಿಯಿಂದ ಮನಸ್ಸಿನ ಪ್ರಸನ್ನತೆಯೇ ಎಣ್ಣೆ. ದೀಪಸ್ತಂಭ ತಯಾರಾಗಿದೆ. ಇನ್ನು ದೀಪ ಹಚ್ಚಬೇಕು.
ಯಾವ ರೀತಿ ಹಚ್ಚುವುದು. ಉಪಾಸನೆಯೆಂಬ ಸಾಧನೆಯಿಂದ ಏಕಾಗ್ರತೆ. ಏಕಾಗ್ರತೆಯಿಂದ ಗುರುವಿನಲ್ಲಿ ಶ್ರವಣ. ಶ್ರವಣದಲ್ಲಿ ನನ್ನ ತತ್ತ ್ವ ವಿಷಯದ ಸಮ್ಯಗ್ದರ್ಶನ – ಸರಿಯಾದ ತಿಳುವಳಿಕೆ ಎಂಬುದೇ ಜ್ಞಾನ – ದೀಪ. ಆತ್ಮನೇ ಸತ್ಯ. ಇತರೆ ಎಲ್ಲವೂ ತೋರಿಕೆ – ಮಿಥ್ಯಾ ಎಂಬ ವಿವೇಕ ಪ್ರತ್ಯಯವೇ ಜ್ಞಾನ – ದೀಪ. ನನ್ನ ಬಗ್ಗೆ ನನ್ನಲ್ಲೇ ಇದ್ದ ಅವಿವೇಕವೆಂಬ ಕತ್ತಲೆಯ ನಾಶ ಈ ದೀಪದಿಂದಲೇ ಸಾಧ್ಯ. ಮತ್ತಾವ ಮಾರ್ಗವಿಲ್ಲ.
ಜ್ಞಾನ ದೀಪವು ಬೆಳಗುವುದು ವಿಷಯ ರಹಿತ ಅಂತಃಕರಣವೆಂಬ ಕೋಣೆಯಲ್ಲಿ, ವೈರಾಗ್ಯದಿಂದ ಕೂಡಿದ ಅಂತಃಕರಣವೇ ದೀಪಸ್ತಂಭ, ಪರಮಾತ್ಮ ಭಾವನೆಯೇ ವಾಯು, ಬ್ರಹ್ಮಚರ್ಯ ಮುಂತಾದ ಸಾಧನ ಸಂಸ್ಕಾರವುಳ್ಳ ಪ್ರಜ್ಞೆಯೇ ಬತ್ತಿ, ಭಕ್ತಿ ಪ್ರಸನ್ನತೆಯೇ ಎಣ್ಣೆ. ವಿವೇಕ ಪ್ರತ್ಯಯ ರೂಪವೇ ಜ್ಯೋತಿ. ಈ ಜ್ಞಾನದೀಪವು ಅವಿವೇಕದಿಂದ ಹುಟ್ಟಿದ ಮಿಥ್ಯಾ ಪ್ರತ್ಯಯವೆಂಬ ಮೋಹದ ಕತ್ತಲೆಯನ್ನು-ತಮಸ್ಸನ್ನು ನಾಶಗೊಳಿಸುವುದು.
ಮೌಲ್ಯಯುಕ್ತವಾದ ಮಾತು ಒಂದೇ ಒಂದು -`‘‘ಯಾವ ರೀತಿಯಿಂದಲಾದರೂ ದ್ವಂದ್ವವನ್ನು ಅತಿಕ್ರಮಿಸು, ದ್ವಂದ್ವಾತೀತನಾಗು, ಆಗ ಮಹಾಸುಖದ ಮಳೆ ಬೀಳುವುದು.’ʼ
ಇದನ್ನೂ ಓದಿ| Guru Sandesha | ಒತ್ತಡದ ಜೀವನ; ಪರಿಹಾರಕ್ಕೆ ಧ್ಯಾನವೇ ವಿಧಾನ