Site icon Vistara News

Guru Sandesha | ಸ್ವಸ್ಥ ಜೀವನ-ಸ್ವಾಸ್ಥ್ಯ ಸಮಾಜಕ್ಕೆ ಪಂಚ ‘ಆ’ಕರಗಳು!

Guru Sandesha

ಆಧ್ಯಾತ್ಮಿಕತೆ ಎಂದರೆ ಏನು ಎಂದು ಸರಿಯಾಗಿ ತಳಿದುಕೊಳ್ಳದೇ ಇರುವುದರಿಂದ ಅನೇಕ ತಪ್ಪು ಅಭಿಪ್ರಾಯಗಳು ಅನೇಕರಲ್ಲಿ ಮೂಡಿವೆ. “ತಾನು ಯಾರು?’ʼ, “ಈ ಪ್ರಪಂಚದ ಸ್ವರೂಪ ಏನು?”, “ತನ್ನನ್ನು ಮತ್ತು ಜಗತ್ತನ್ನು ಸೃಷ್ಟಿಸಿರುವ ಪರಮಾತ್ಮನು ಯಾರು?’ʼ ಎಂದು ತಿಳಿಸುವುದೇ ಅಧ್ಯಾತ್ಮ.

೧. ಆಧ್ಯಾತ್ಮಿಕತೆ: ಮಾನವನು ತನ್ನ ದೇಹ ಮತ್ತು ಮನಸ್ಸುಗಳು ಭೋಗಿಸಲು ಸಾಧನ. ಅದೇ ರೀತಿ ಜಗತ್ತನ್ನೂ ಕೂಡ ತನ್ನ ಕಾಮನೆಗಳನ್ನು ತೀರಿಸಿಕೊಳ್ಳಲು ಒಂದು ಸಾಧನ, ಅವಕಾಶ ಎಂದು ಎಣಿಸಿದ್ದಾನೆ. ಆದರೆ ತಾನು ನಿಜವಾಗಿ “ಪಂಚಭೂತಗಳಿಂದ ಮಾಡಿರುವ ದೇಹವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ; ಬದಲಾಗಿ ನಿತ್ಯ-ಶುದ್ಧ-ಬುದ್ಧ-ಮುಕ್ತ ಆತ್ಮ ಸ್ವರೂಪಿ”. ದೇಹ, ಮನಸ್ಸು, ಇತ್ಯಾದಿಗಳು ನಮಗೆ ಭಗವಂತ ನೀಡಿರುವ ಉಪಕರಣಗಳಷ್ಟೇ.

ಸ್ವಾಮಿ ವಿವೇಕಾನಂದರು ಹೇಳಿರುವಂತೆ, “ಈ ಜಗತ್ತು ಒಂದು ವ್ಯಾಯಾಮ ಶಾಲೆ. ನಾವು ಸಶಕ್ತರಾಗುವುದಕ್ಕೆ ಅದು ನೆರವಾಗುತ್ತದೆ. ಮಾನವನು ಇವುಗಳನ್ನು ಸರಿಯಾಗಿ ತಿಳಿದಾಗ ಅವನ ದೃಷ್ಟಿಕೋನವೇ ಬದಲಾಗುತ್ತದೆ.
ಮನುಷ್ಯನು ತನ್ನ ಆಸೆಗಳ ದಾಸನಾಗಿ, ಅವುಗಳನ್ನು ಪಡೆಯಲು ಪ್ರಕೃತಿಯನ್ನು ನಾಶಪಡಿಸುತ್ತಿರುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಸರಿ. ಅತಿಯಾದ ಆಸೆ, ಲೋಭ, ಮೋಹ, ಇತ್ಯಾದಿಗಳೇ ಇದಕ್ಕೆ ಮೂಲ ಕಾರಣʼʼ.

ಅಧ್ಯಾತ್ಮ ಹೇಳಿದಂತೆ ತಾನು ವಾಸ್ತವವಾಗಿ ಆತ್ಮಸ್ವರೂಪಿ ಎಂದು ತಿಳಿದು ಅದನ್ನು ಜೀವನದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಬೇಕಾದರೆ, ತನ್ನ ದೇಹ-ಮನಸ್ಸು-ಬುದ್ಧಿಗಳನ್ನು, ಕಾಮನೆಗಳನ್ನು ನಿಗ್ರಹಿಸಬೇಕು. ಪವಿತ್ರ ಮತ್ತು ವಿವೇಕಯುಕ್ತ ಜೀವನವನ್ನು ನಡೆಸಬೇಕು. ಆಗ ಅಂತಹ ವ್ಯಕ್ತಿಯಿಂದ ಸಮಾಜಕ್ಕಾಗಲೀ, ದೇಶಕ್ಕಾಗಲೀ ಯಾವ ತೊಂದರೆಯೂ ಬಾರದು. ಬದಲಾಗಿ ಅಂತಹವನು ಧರೆಗೆ ವರವಾಗುತ್ತಾನೆ. ಇದು ಆಧ್ಯಾತ್ಮಿಕತೆಯ ಅನುಷ್ಠಾನದಿಂದ ಸಾಧ್ಯ. ಅಧ್ಯಾತ್ಮಕ್ಕೆ ನಮ್ಮ ಮೂಲ ಸ್ವರೂಪವನ್ನೇ ಸರಿ ಮಾಡುವ ಶಕ್ತಿಯಿದೆ.

೨. ಆತ್ಮಾವಲೋಕನ: ‘ಜಗದೀ ಸಂತೆಯೊಳು ಅಲೆಯುವ ಮನುಜ ನಿಲ್ಲೋ ಒಂದು ಕ್ಷಣ’. ನಮ್ಮ ಆಂತರಿಕ ಪ್ರಕೃತಿಯನ್ನು ಅಂದರೆ ಸ್ವಭಾವವನ್ನು ಶುದ್ಧಿ ಮಾಡಕೊಳ್ಳದೇ ಇರುವುದರಿಂದ ಅನೇಕ ಅನರ್ಥಗಳೂ ಉಂಟಾಗುತ್ತಿವೆ. ಜೈವಿಕ ಯುದ್ಧ, ಇತ್ಯಾದಿಗಳೇ ಇದಕ್ಕೆ ನಿದರ್ಶನ. ಇದನ್ನೆಲ್ಲಾ ಸರಿಯಾಗಿ ತಿಳಿಯಬೇಕಾದರೆ ನಮಗೆ ಆತ್ಮಾವಲೋಖನ ಅತ್ಯಾವಶ್ಯಕ.

೩. ಆತ್ಮೋಲ್ಲಾಸ: ನಾವು ಆತ್ಮಸ್ವರೂಪಿ ಅಥವಾ ಭಗವಂತನ ಮಕ್ಕಳು ಎಂಬ ಭಾವ ನಮ್ಮಲ್ಲಿ ದೃಢವಾಗಿ, ವಿವೇಕಯುಕ್ತ ಜೀವನವನ್ನು ನಡೆಸುವುದರಿಂದ, ಎಂತಹ ವಿಷಮ ಪರಿಸ್ಥಿತಿಯಲ್ಲೂ ಕೂಡ ಉಲ್ಲಾಸದಿಂದ ಇರಲು ಸಾಧ್ಯ. ಅದೇ ಆತ್ಮೋಲ್ಲಾಸ.

೪. ಆತ್ಮವಿಶ್ವಾಸ: ನಾವು ಸರಿಯಾದ ಜೀವನ ಶೈಲಿ, ಉನ್ನತವಾದ ಚಿಂತನೆ ಹಾಗೂ ಅದರ ಅನುಷ್ಠಾನಗಳನ್ನು ಮಾಡಿಕೊಂಡಾಗ ನಮ್ಮಲ್ಲಿ ನಮಗೆ ವಿಶ್ವಾಸ ಹೆಚ್ಚಾಗುತ್ತದೆ. ಅದನ್ನು ನಾವು ಆತ್ಮವಿಶ್ವಾಸ ಎಂದು ಕರೆಯಬಹುದು. ವಿಷಮ ಪರಿಸ್ಥಿತಿಗಳನ್ನು ಎದುರಿಸಲು ಇದು ಒಂದು ದಿವ್ಯೌಷಧಿಯೇ ಸರಿ.

೫. ಆರೋಗ್ಯ : ನಾವು ವಿವೇಕಯುಕ್ತ ಜೀವನವನ್ನು ನಡೆಸಿದಾಗ, ಶಾರೀರಿಕ, ಮಾನಸಿಕ, ಬೌದ್ಧಿಕ, ಮತ್ತು ಭಾವನಾತ್ಮಕವಾಗಿಯೂ ಆರೋಗ್ಯದಿಂದಿರಲು ಸಾಧ್ಯ. ಅಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಾಗ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ.

ಹೀಗೆ ಆಧ್ಯಾತ್ಮಿಕತೆಯಿಂದ ಆತ್ಮಾವಲೋಕನ, ಆತ್ಮೋಲ್ಲಾಸ, ಆರೋಗ್ಯ, ಆತ್ಮವಿಶ್ವಾಸಗಳು ಹೆಚ್ಚಾಗಿ ಸ್ವಸ್ಥ ಜೀವನ – ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ.

ಇದನ್ನೂ ಓದಿ| Guru Sandesha | ಅವಿವೇಕವೆಂಬ ಕತ್ತಲ ತೊಲಗಿಸಲು ಹಚ್ಚಬೇಕಿದೆ ಜ್ಞಾನ ದೀಪ

Exit mobile version