ಡಾ.ಪ್ರಕಾಶ್.ಕೆ.ನಾಡಿಗ್
ಭಾರತೀಯ ಸಂಸ್ಕೃತಿಯು ಋಷಿ ಜೀವನದ ತಳಹದಿಯ ಮೇಲೆ ಮೂಡಿದಂತದ್ದು, ಅದು ಭಕ್ತಿಗೆ ಮಹತ್ವದ ಸ್ಥಾನ ನೀಡಿದೆ. ಭಕ್ತಿಯೆಂಬುದು ಒಂದು ದಿವ್ಯವಾದ ಯೋಗ. ಈ ಭಕ್ತಿಯೋಗದ ಮುಖಾಂತರ ಲೋಕದ ಭವ್ಯಶಕ್ತಿಯಾಗಿ ಹಲವು ಭಕ್ತಾಗ್ರೇಸರರು ಬಾಳಿ, ನಂದಾದೀಪವಾಗಿ ಇಂದಿಗೂ ಬೆಳಗುತ್ತಿದ್ದಾರೆ. ಇಂತಹ ಪ್ರಾತಃಸ್ಮರಣೀಯರಲ್ಲಿ ಹನುಮನು ಓರ್ವ. ಆದರ್ಶ ಚಾರಿತ್ರ್ಯ, ಜಿತೇಂದ್ರಿಯತ್ವ, ಶಾಸ್ತ್ರಪಟುತ್ವ, ವಾಕ್ ಪಟುತ್ವ, ಸದಾಚಾರ ಸಂಪನ್ನತೆ, ಇವುಗಳ ಸಾಕಾರ ಮೂರ್ತಿ ಹನುಮಂತ ದೇವರು (Hanuman Vratham 2022).
ಮೇರುಮಂದಾರ ಗಾತ್ರನೂ, ಜಯಾಸಂಕರ್ಷಣ ಪುತ್ರನೂ, ಪರಮ ಪವಿತ್ರನೂ, ಸಾಧಕ ಜನರ ಗತಿಗೋತ್ರನೂ, ಚಿತ್ರ ಚರಿತ್ರನೂ, ಸೂತ್ರನಾಮಕನೂ, ಗೋತ್ರೋದ್ಧಾರಕನೂ ಆದ ಹನುಮಂತ ಯುಗಯುಗಗಳಲ್ಲಿಯೂ ಪೂಜಿತನಾಗಿದ್ದಾನೆ. ಭಾರತದಲ್ಲಿ ಹನುಮನಿಲ್ಲದ ಹಳ್ಳಿಯಿಲ್ಲ, ಕರ್ನಾಟಕ ಹನುಮ ಜನಿಸಿದ ನಾಡು, ಹಾಗಾಗಿ ಕರ್ನಾಟಕದ ಊರು ಊರುಗಳಲ್ಲಿ ಹನುಮಂತನ ದೇವಾಲಯಗಳು ರಾರಾಜಿಸುತ್ತಿವೆ.
ಎಲ್ಲಾರಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ, ನಮ್ಮ ಜೀವನ ಸಾರ್ಥಕವಾಗಿರಬೇಕು ಎಂದು ಯೋಚಿಸಿ ಕೆಲವು ಮಹಾತ್ಮರ ಆದರ್ಶವನ್ನು ಪಾಲಿಸಲು ಮುಂದಾಗುತ್ತೇವೆ. ಅವರು ನಡೆದ ಹಾದಿ ನಮಗೆ ಅನುಕರಣೀಯವಾಗುತ್ತದೆ. ಇಂತಹ ಮಹಾನ್ ಪುರುಷರಲ್ಲಿ ನಮಗೆ ಅಗ್ರಗಣ್ಯರಾಗಿ ಕಾಣುವುದು ರಾಮಾಯಣದ ಒಂದು ಪಾತ್ರವಾದ ಹನುಮಂತ. ಈತ ರಾಮಾಯಣವೆಂಬ ಮಹಾಕಾವ್ಯದ ವ್ಯಕ್ತಿ ಚಿತ್ರಣವಾಗಷ್ಟೇ ಉಳಿಯುವುದಿಲ್ಲ, ಬದಲಾಗಿ ಸಾಧಿಸಬೇಕೆಂಬುವವರಿಗೆ ಈತನೊಬ್ಬ ಮ್ಯಾನೇಜ್‌ಮೆಂಟ್ ಕೌಶಲ್ಯವನ್ನು ಕಲಿಸುವ ಗುರುವಾಗಿ ಕಾಣುತ್ತಾನೆ. ಹನುಮನನ್ನು ಬಂಧಿಸಿ ರಾವಣನ ಮುಂದೆ ಹಾಜರು ಪಡಿಸಿದಾಗ ನೀನು ಯಾರು ಎಂದು ಕೇಳಿದಾಗ ಹನುಮ ಹೇಳುತ್ತಾನೆ “ಅಹಂ ದಾಸಃ ಕೋಸಲೇಂದ್ರಸ್ಯ” ಅಂದರೆ ತನ್ನನ್ನು ರಾಮಚಂದ್ರನ ದಾಸನೆಂದು ಪರಿಚಯಿಸಿಕೊಳ್ಳುವ ಮೂಲಕ ದಾಸ ಪಂಥಕ್ಕೆ ಅಡಿಪಾಯ ಹಾಕಿದವನು ಹನುಮಂತನೆಂದರೆ ತಪ್ಪಾಗಲಾರದು. ಅವನ ಕಾಲದಿಂದ ದಾಸ ಪಂಥ ಉದಯವಾಗಿ “ಜಗದಿ ದಾಸತ್ವವೇ ಲೇಸು” ಎಂದು ಮುಂದಿನ ದಾಸವರೇಣ್ಯರೇ ಒಪ್ಪಿಕೊಂಡರು.
ರಾಮನಿಗೆ ಹೆಚ್ಚಿಗೆ ಸೇವೆ ಮಾಡಿದ ವ್ಯಕ್ತಿ ಎಂದರೆ ಹನುಮಂತ. ರಾಮನ ಭೇಟಿಯಾಗುವ ಮುಂಚೆ ಹನುಮ ಯಾರೊಡನಿದ್ದ ಎಂಬುದನ್ನು ನೋಡಿದರೆ ನಮಗೆ ಕಾಣುವ ವ್ಯಕ್ತಿ “ಸುಗ್ರೀವ” ಸುಗ್ರೀವ ಆಡಿದ್ದೇ ಮಾತು ಹಾಗೂ ಮಾಡಿದ್ದೇ ಶಾಸನ. ಸುಗ್ರೀವ ಹೊರಡಿಸಿದ ಆಜ್ಞೆ ಅಂದರೆ ಎಲ್ಲರೂ ಹೆದರುತ್ತಿದ್ದರು. ಸುಗ್ರೀವ ಒಬ್ಬ ಚರಿತ್ರಾರ್ಹ ವ್ಯಕ್ತಿ. ಇಂಥವನ ಬಳಿ ಇದ್ದ ಆಂಜನೇಯನದು ಅಪರಿಮಿತವಾದ ವ್ಯಕ್ತಿತ್ವ. ಧರ್ಮ, ಅರ್ಥ, ಮೋಕ್ಷ, ಕಾಮ ಎಂಬ ಪದಗಳಿಗೆ ಮೌಲ್ಯವನ್ನು ಕೊಟ್ಟವನು.
ಹನುಮ ಜಯಂತಿಯಲ್ಲ, ಹನುಮದ್ ವ್ರತ
ಮಾರ್ಗಶಿರ ಶುದ್ಧ ತ್ರಯೋದಶಿಯಂದು ದೇಶಾದ್ಯಂತ ಭಕ್ತಿಭಾವಗಳಿಂದ ಹನುಮದ್ ವ್ರತವನ್ನು ಆಚರಿಸಲಾಗುತ್ತದೆ (Hanuman Vratham 2022). ಆದರೆ ಕೆಲವರು ಇದನ್ನು ಹನುಮ ಜಯಂತಿಯೆಂದು ಆಚರಿಸುತ್ತಾರೆ. ಇದು ತಪ್ಪು ಹನುಮ ಜಯಂತಿ ಹನುಮ ಹುಟ್ಟಿದ ದಿನ, ಚೈತ್ರ ಶುದ್ಧ ಹುಣ್ಣಿಮೆಯಂದು ಹನುಮ ಜಯಂತಿಯನ್ನು ಆಚರಿಸುತ್ತಾರೆ. ಹನುಮದ್ ವ್ರತವನ್ನು ಬ್ರಹ್ಮದೇವರು ದೇವಾದಿದೇವತಿಗಳಿಗೆ ಉಪದೇಶಿಸಿದರೆಂದು ಪ್ರತೀತಿ ಇದೆ.
ವ್ರತದ ಹಿನ್ನೆಲೆ ಏನು?
ಕೌರವರ ಮೋಸದಿಂದ ಸೋತ ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ವೇದವ್ಯಾಸರು ಅವರನ್ನು ಭೇಟಿಮಾಡುತ್ತಾರೆ. ಪಾಂಡವರ ಕಷ್ಟಕಾರ್ಪಣ್ಯದಿಂದ ಬಿಡುಗಡೆ ಹೊಂದಲು ವೇದವ್ಯಾಸರು ಅವರಿಗೆ ಹನುಮದ್ ವ್ರತದ ಉಪದೇಶವನ್ನು ಮಾಡುತ್ತಾರೆ. ಈವ್ರತವನ್ನು ಶ್ರದ್ಧೆಯಿಂದ ಮಾಡಿ ನಿಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ ನಿಮಗೆ ನಿಮ್ಮ ರಾಜ್ಯ ಮತ್ತೆ ಸಿಗುತ್ತದೆ ಎಂದು ಹೇಳುತ್ತಾನೆ. ಆಗ ಧರ್ಮರಾಜನ ವ್ರತದ ಹಿನ್ನೆಯೆಯನ್ನು ಕೇಳಲು ವೇದವ್ಯಾಸರು ಹೇಳುತ್ತಾರೆ, ಒಮ್ಮೆ ಹನುಮಂತ ರಾಹುಗ್ರಹಣವಾದ ಕೆಂಪುಬಣ್ಣದಿಂದ ಕೂಡಿದ್ದ ಸೂರ್ಯನನ್ನೇ ಹಣ್ಣೆಂದು ಹಿಡಿಯಲು ಹೋಗುವಾಗ ಇಂದ್ರನು ಹನುಮಂತ ಸೂರ್ಯನನ್ನು ಹಿಡಿಯಬಹುದೆಂದು ತಿಳಿದು, ಹನುಮಂತನ ಮೇಲೆ ವಜ್ರಾಯುಧವನ್ನು ಪ್ರಯೋಗಿಸುತ್ತಾನೆ. ಇದರಿಂದ ಪೆಟ್ಟಾದ ಹನುಮಂತ ಕೆಳಗೆ ಬೀಳುವಾಗ ವಾಯುದೇವರು ಹನುಮಂತನನ್ನು ಎತ್ತಿಕೊಂಡು ಒಂದು ಗುಹೆಯನ್ನು ಪ್ರವೇಶಿಸುತ್ತಾರೆ. ಆಗ ಪ್ರಪಂಚದಲ್ಲೆಲ್ಲಾ ಗಾಳಿಯಿಲ್ಲದೇ ಹಾಹಾಕಾರವಾಗುತ್ತದೆ.
ಆಗ ಎಲ್ಲಾ ದೇವತೆಗಳು ಬ್ರಹ್ಮದೇವನನ್ನು ಪ್ರಾರ್ಥಿಸಿದಾಗ್, ಬ್ರಹ್ಮದೇವರು ವಾಯುವಿನ ಬಳಿಗೆ ಬಂದು ನಿನ್ನ ಮಗನಿಗೆ ಯಾವ ಆಯುಧವೂ ಏನೂ ಮಾಡುವುದಿಲ್ಲ. ಅವನು ಚಿರಂಜೀವಿ, ಹಾಗೇಯೇ ಮಾರ್ಗಶಿರ ಶುದ್ಧ ತ್ರಯೋದಶಿ ದಿನದಂದು ಯಾರು ಹನುಮದ್ ವ್ರತವನ್ನು ಆಚರಿಸುತ್ತಾರೋ ಅವರಿಗೆ ಸಕಲ ಸೌಭಾಗ್ಯವೂ ಪ್ರಾಪ್ತವಾಗುತ್ತದೆ ಎಂದು ಹೇಳುತ್ತಾರೆ. ಆಂದಿನಿಂದ ಹನುಮದ್ ವ್ರತ ಮುನ್ನೆಲೆಗೆ ಬಂದಿತೆಂದು ಪ್ರತೀತಿ. ಶ್ರೀರಾಮಚಂದ್ರ ಹನುಮಂತನನ್ನು ಆನುಗ್ರಹಿಸಲು ಈ ವ್ರತವನ್ನು ಮಾಡಿದ್ದರು. ಸುಗ್ರೀವ, ದ್ರೌಪದಿ ತಮ್ಮ ಇಷ್ಟಾರ್ಥಕ್ಕಾಗಿ ಈ ವ್ರತವನ್ನು ಮಾಡಿದ್ದರು. ವಿಭೀಷಣನು ಈ ವ್ರತದ ಪ್ರಭಾವದಿಂದಲೇ ಲಂಕಾದಿಪತಿಯಾದನು.
ವ್ರತದ ಆಚರಣೆ ಹೇಗೆ?
ವ್ರತವನ್ನು ಆಚರಿಸುವವರು ವ್ರತದ ದಿನ ಮನೆಯ ಸೂಕ್ತಜಾಗದಲ್ಲಿ ಹನುಮಂತನ ಫ಼ೋಟೊ ಇಟ್ಟು ಅಲಂಕಾರಾದಿಗಳನ್ನು ಮಾಡಿ ಹದಿಮೂರು ಗಂಟುಗಳುಳ್ಳ ದೋರವನ್ನು ದೇವರ ಮುಂದೆ ಇರಿಸಿ ಅದರಲ್ಲಿ ಹನುಮಂತದೇವರನ್ನು ಆವಾಹಿಸಿ ಷೋಡಶೋಪಚಾರ ಪೂಜೆಯನ್ನು ಮಾಡಿ ಧೂಪ ದೀಪ ನೈವೇದ್ಯವನ್ನು ಆರ್ಪಿಸಬೇಕು. ಇಂದು ವಿಶೇಷವಾಗಿ ಪೂಜೆಮಾಡಿಸುವ ಆಚಾರ್ಯರಿಗೆ ವಾಯನದಾನದಲ್ಲಿ ಗೋದಿಯನ್ನು ದಾನ ಮಾಡಬೇಕು. ಪೂಜೆಯನಂತರ ಹದಿಮೂರು ಗಂಟುಗಳುಳ್ಳ ಹಳದಿ ವರ್ಣದ ದೋರವನ್ನು ಕಟ್ಟಿಕೊಳ್ಳಬೇಕು. ಈ ವ್ರತವನ್ನು ಒಮ್ಮೆ ಪ್ರಾರಂಭಿಸಿದರೆ ಹದಿಮೂರು ವರ್ಷಗಳ ಪರ್ಯಂತ ಮಾಡಿ ನಂತರ ಉದ್ಯಾಪನೆಯನ್ನು ಮಾಡಬೇಕು. ಈ ವ್ರತವನ್ನು ಶ್ರದ್ದೆಯಿಂದ ಮಾಡುವುದರಿಂದ ಸಕಲ ಇಷ್ಟಾರ್ಥಗಳು ಲಭಿಸುವವು.
ನವವಿಧ ಭಕ್ತಿಯಲ್ಲೂ ಅಂದರೆ ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮ ನಿವೇದನೆಯಲ್ಲಿ ನಿಷ್ಣಾತವಾದ ವ್ಯಕ್ತಿತ್ವವೆಂದರೆ ಅದು ಹನುಮಂತನದೇ. ಈ ಒಂಭತ್ತು ವಿಧಗಳಲ್ಲೂ ತನ್ನ ಒಡೆಯ ಶ್ರೀರಾಮಚಂದ್ರನ ಅನುಸಂಧಾನ ಮಾಡಿದ ಮಹಾನುಭಾವ, ಈ ಗುಣಗಳೊಂದಿಗೆ ನಮನ, ಯಾಚನ, ಅರ್ಪಣಗಳೆಂಬ ತ್ರಿವಿಧವಾದ ಪ್ರಾರ್ಥನೆಯನ್ನು ಸದಾ ಸಲ್ಲಿಸಿದ ಸತ್ಪುರಷನೀತ. ಪೂರ್ತಿಯಾಗಿ ತನ್ನನ್ನು ಭಗವಂತನಿಗೆ ಅರ್ಪಿಸಿಕೊಂಡ ಅಸೀಮ ಭಕ್ತ, ಅಪೂರ್ವವಾದ ವ್ಯಕ್ತಿತ್ವ.
ಹನುಮಂತ, ಪವನಪುತ್ರ, ವಾಯುಪುತ್ರ, ಕೇಸರಿನಂದನ ಮುಂತಾದ ಹೆಸರುಗಳಿಂದ ಸ್ತುತಿಸಲ್ಪಡುವ ಹನುಮಂತ ತ್ರೇತಾಯುಗದಲ್ಲಿ ಇದ್ದ, ದ್ವಾಪರಯುಗದಲ್ಲಿ ಇದ್ದ, ಕಲಿಯುಗದಲ್ಲೂ ಇದ್ದು ಮುಂದೆ ಶ್ರೀರಾಮ ನಾಮ ಇರುವವರೆಗೂ ಸೂರ್ಯ ಚಂದ್ರರಿರುವವರೆಗೂ ಇದ್ದು ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾ ಚಿರಂಜೀವಿ ಯಾಗಿದ್ದಾನೆ. ದೂರ್ವಾಸ ಮುನಿಗಳಿಂದ ಹಿಡಿದು, ಜನಮೇಜಯ ರಾಜ, ಶ್ರೀವ್ಯಾಸ ತೀರ್ಥರು, ಬ್ರಹ್ಮಣ್ಯತೀರ್ಥರಲ್ಲದೇ ಅನೇಕ ಯತಿವರ್ಯರು ಭಕ್ತರ ಉದ್ಧಾರಕ್ಕಾಗಿ ಅನೇಕ ಹನುಮ ಮೂರ್ತಿಗಳನ್ನು ಸ್ಥಾಪಿಸಿದ್ದಾರೆ. ಅದರಲ್ಲೂ ಹದಿನೈದನೇ ಶತಮಾನದಲ್ಲಿ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ರಾಜಗುರುಗಳಾಗಿದ್ದ ಶ್ರೀವ್ಯಾಸರಾಜರು ದೇಶಾದ್ಯಂತ ಸುಮಾರು 732 ಮುಖ್ಯಪ್ರಾಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಇಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಭಕ್ತರ ಬಾಳು ಬೆಳಗುತ್ತಾ ಭಕ್ತರ ಪಾಲಿಗೆ ಕಲ್ಪವೃಕ್ಷವೆನಿಸಿಕೊಂಡಿದ್ದಾನೆ.
ರಾಮನ ಗುಡಿಯಿಲ್ಲದ ಊರಿರಬಹುದು, ಆದರೆ ಹನುಮನ ಗುಡಿಯಿಲ್ಲದ ಊರಿಲ್ಲವೆಂದೇ ಹೇಳಬೇಕು. ಕಲಿಯುಗದಲ್ಲಿ ಹನುಮನಿಗೆ ಸಲ್ಲುವಷ್ಟು ಪೂಜೆ ಪುನಸ್ಕಾರಗಳು ಬೇರೆ ಯಾವ ದೇವರಿಗೂ ಸಲ್ಲುವುದಿಲ್ಲವೆಂದರೆ ತಪ್ಪಾಗಲಾರದು, ಜಾತಿ, ಮತ ಪಂಥದ ಭೇದವಿಲ್ಲದೆ ಎಲ್ಲರಿಂದಲೂ ಪೂಜೆಗೊಳ್ಳುತ್ತಿರುವ ದೇವರು ಹನುಮಂತ. ದೇಶಾದ್ಯಂತ ಸಾವಿರಾರು ಜಾಗೃತ ಹನುಮ ಕ್ಷೇತ್ರಗಳು ಈ ನಿಟ್ಟಿನಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹಲವು ದೇವಸ್ಥಾನಗಳಲ್ಲಿ ಹಲವು ಬಗೆಯ ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಹನುಮಂತ ಪರಿಹಾರ ನೀಡುತ್ತಾ ಆಶೀರ್ವದಿ ಸುತ್ತಿದ್ದಾನೆ. ಯುಗಯುಗಗಳಿಂದಲೂ ಪೂಜೆಗೊಳ್ಳುತ್ತಿರುವ “ಹನುಮ ದೇಹಿʼʼ ಎಂದು ಬಂದ ಭಕ್ತರನ್ನು ತನ್ನ ಮಕ್ಕಳಂತೆ ಪೊರೆಯುತ್ತಾನೆ. ಅಂತೆಯೇ ದಾಸರು ಇವನನ್ನು ಹನುಮ ನಮ್ಮ ತಾಯಿ ತಂದೆ ಎಂದು ಸ್ತುತಿಸಿದ್ದಾರೆ. ಹನುಮದ್ ವ್ರತದ ಈ ಶುಭಸಂದರ್ಭದಲ್ಲಿ ಹನುಮಂತನನ್ನು ಧ್ಯಾನಿಸಿ ಪುನೀತರಾಗೋಣ.
ಲೇಖಕರು “ಭಕ್ತರ ಪ್ರಾಣ ಮುಖ್ಯ ಪ್ರಾಣʼʼ (ಭಾರತೀಯ ಸಂಸ್ಕೃತಿಯಲ್ಲಿ ಹನುಮ)
ಎಂಬ ಕೃತಿಯನ್ನು ಬರೆದಿದ್ದಾರೆ.
ಇದನ್ನೂ ಓದಿ| Hanuma Jayanti | ಹನುಮ ಜಯಂತಿಗೆ ಸಕಲ ರೀತಿಯಲ್ಲಿ ಸಜ್ಜಾದ ಅಂಜನಾದ್ರಿ ಬೆಟ್ಟ; ಪೊಲೀಸ್ ಬಿಗಿ ಬಂದೋಬಸ್ತ್