Site icon Vistara News

ಸೌಹಾರ್ದ ಸಂಭ್ರಮ| ಈ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ, ಹಿಂದೂಗಳಿಂದಲೇ ಮೊಹರಂ!

moharram by hindus

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಚಿಕ್ಕ ಗ್ರಾಮವಾದ ಹರ್ಲಾಪುರದಲ್ಲಿ ಮಂಗಳವಾರ ಮೊಹರಂ ಹಬ್ಬದ ಆಚರಣೆ ನಡೆಯಿತು. ಸಾಮಾನ್ಯವಾಗಿ ಏನೆಲ್ಲ ಪ್ರಕ್ರಿಯೆಗಳು ನಡೆಯಬೇಕೋ ಅದೆಲ್ಲವನ್ನೂ ಭಕ್ತಿಯಿಂದ ನಡೆಸಲಾಯಿತು. ವಿಶೇಷವೆಂದರೆ ಇದೆಲ್ಲವನ್ನೂ ಮಾಡಿದ್ದು ಮುಸ್ಲಿಮರಲ್ಲ.. ಹಿಂದೂಗಳು. ಯಾಕೆಂದರೆ, ಈ ಊರಿನಲ್ಲಿ ಒಬ್ಬೇ ಒಬ್ಬ ಮುಸ್ಲಿಮರಿಲ್ಲ. ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ!

ಸಮಾಜದ ಬಹುವರ್ಗ ಬೇಕು ಬೇಕು ಎಂದು ಹಪಹಪಿಸುವ ಧಾರ್ಮಿಕ ಸೌಹಾರ್ದತೆಗೆ ಸಾಕ್ಷಿಯಾಗಿದೆ ಈ ಊರು. ಇಲ್ಲಿನ ಜನರ ಮನಸ್ಸು ಅದೆಷ್ಟು ದೊಡ್ಡದು ಎಂದರೆ, ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದೆ ಹೋದರೂ ಹಿಂದೂಗಳೇ ಇಲ್ಲಿ ಫಕೀರಸ್ವಾಮಿ ದರ್ಗಾ ಕಟ್ಟಿಸಿ, ಮೊಹರಂ ಆಚರಿಸುತ್ತಿದ್ದಾರೆ. ಮಂಗಳವಾರ ತುಂತುರು ಮಳೆ ಮಧ್ಯೆಯೂ‌ ಮೊಹರಂ ಆಚರಣೆ ನಡೆಯಿತು.

ಮೊಹರಂ ಭಾಗವಾಗಿ ತಾಯಿತ ಕಟ್ಟುತ್ತಿರುವುದು.

ಇಲ್ಲಿ ಪ್ರತಿ ವರ್ಷ ವೈಭವದಿಂದ ಮೊಹರಂ ಆಚರಿಸಲಾಗುತ್ತದೆ. ಪಂಜಾಗಳನ್ನು ಪ್ರತಿಷ್ಠಾಪನೆ ಮಾಡುವುದು, ಪೂಜೆ, ಡೋಲಿಗಳ ನಿರ್ಮಾಣ ಹಾಗೂ ಅವುಗಳನ್ನು ಮೆರವಣಿಗೆ ಮಾಡಿ ಹೊಳೆಗೆ ಸೇರಿಸುವವರೆಗೆ ಮುಸ್ಲಿಂ ಧರ್ಮದ ಎಲ್ಲ ಆಚರಣೆಗಳನ್ನೂ ಇಲ್ಲಿ ಹಿಂದೂಗಳೇ ಮಾಡುತ್ತಾರೆ.

ಮೊಹರಂ ಪ್ರಯುಕ್ತ ಹಿಂದುಗಳಿಂದಲೇ ಮೆರವಣಿಗೆ

ಇಲ್ಲಿ ಎಲ್ಲ ದೇವರೂ ಇದ್ದಾರೆ!
ಹಿರಿಯರಿಗೆ ಗೊತ್ತಿರುವ ಹಾಗೆ ನಾಲ್ಕು ತಲೆಮಾರುಗಳಿಂದ ಇಲ್ಲಿ ಮೊಹರಂ, ಉರೂಸ್‌ ಆಚರಿಸಲಾಗುತ್ತಿದೆ. ದಶಕದ ಹಿಂದೆ ಗುರು ಹಿರಿಯರು, ಯುವಜನರು ದೇಣಿಗೆ ಸಂಗ್ರಹಿಸಿ, 8 ಲಕ್ಷ ರೂ. ವೆಚ್ಚದಲ್ಲಿ ಫಕೀರಸ್ವಾಮಿ ದರ್ಗಾ ನಿರ್ಮಿಸಿದ್ದಾರೆ. ಈ ದರ್ಗಾದಲ್ಲಿ ಹಿಂದೂ, ಬೌದ್ಧ, ಕ್ರೈಸ್ತ, ವೀರಶೈವ– ಲಿಂಗಾಯತ ಧರ್ಮಗಳ ದೇವರು, ಮಹಾತ್ಮರ ಫೋಟೊಗಳನ್ನೂ ಪೂಜಿಸಲಾಗುತ್ತಿದೆ.

ಮೌಖಿಕ ಇತಿಹಾಸ
ಹಿಂದೆ ಮುಸ್ಲಿಂ ಸಮುದಾಯದ ಫಕೀರರೊಬ್ಬರು ಈ ಊರಿನಲ್ಲಿ ನಾಲ್ಕು ದೇವರ ಮೂರ್ತಿಗಳನ್ನು ಪೂಜೆ ಮಾಡುತ್ತಿದ್ದರು. ಅವರು ನಿಧನರಾದ ನಂತರ ರಾಮಚಂದ್ರ ನಿಂಬಾಳಕರ ಎನ್ನುವವರ ಹೊಲದಲ್ಲಿ ದಫನ ಮಾಡಲಾಯಿತು. ಅಲ್ಲಿಂದ ಹಿಡಿ ಮಣ್ಣು ತಂದು ಊರಿನ ಮುಖ್ಯಭಾಗದಲ್ಲಿ ಗೋರಿ ಕಟ್ಟಿದರು. 2012ರಲ್ಲಿ ಅದಕ್ಕೆ ಹೊಂದಿಕೊಂಡೇ ದರ್ಗಾ ತಲೆ ಎತ್ತಿದೆ. ಆದರೆ, ಫಕೀರ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ.
ಫಕೀರ ಅವರು ಊರಿನ ಜನರಿಗೆ ಮಾರ್ಗದರ್ಶಿ ಆಗಿದ್ದರು. ಮುಸ್ಲಿಮರಿಗೆ ಫಕೀರ– ಹಿಂದೂಗಳಿಗೆ ಈಶ್ವರ ಎಂದು ಪರಿಗಣಿಸಿ ಅವರಿಗೆ ಫಕೀರೇಶ್ವರ ಎಂದು ಹಿರಿಯರು ಕರೆದಿದ್ದಾರೆ.

ದರ್ಗಾ ಪಕ್ಕದಲ್ಲೇ ದೊಡ್ಡ ಬೇವಿನಮರವಿದೆ. ಹಾವು ಕಚ್ಚಿದವರಿಗೆ ಈ ಬೇವಿನ ಮರದ ಎಲೆ ಹಾಗೂ ದರ್ಗಾದ ಪ್ರಸಾದ ಸೇರಿಸಿ ತಿನ್ನಿಸುತ್ತೇವೆ. ತಕ್ಷಣ ವಾಂತಿಯಾಗಿ, ಹಾವು ಕಚ್ಚಿದ ವ್ಯಕ್ತಿಯ ಪ್ರಾಣ ಉಳಿಯುತ್ತದೆ ಎನ್ನುತ್ತಾರೆ ಇಲ್ಲಿನ ಜನರು. ಒಟ್ಟಿನಲ್ಲಿ ಧಾರ್ಮಿಕ ಸೌಹಾರ್ದಕ್ಕೆ ಚಂದದ ಉದಾಹರಣೆಯೊಂದು ಮನಸು ತುಂಬುತ್ತಿದೆ.

ಇದನ್ನೂ ಓದಿ| Muharram 2022 | ಭಾವೈಕ್ಯತೆಯೊಂದಿಗೆ ಹಿಂದೂಗಳಿಂದ ಮೊಹರಂ ಆಚರಣೆ

Exit mobile version