ಬೆಂಗಳೂರು: ಶಿವನ ಧರ್ಮಪತ್ನಿ ಸತಿಯ ೫೧ ಶಕ್ತಿಪೀಠದ ಮೂಲಪೀಠವೆಂದೇ ಹೇಳಲಾಗುವ ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಹಿಂಗ್ಲಾಜ್ ದೇವಸ್ಥಾನದ ಹಿಂಗ್ಲಾಜ್ ದೇವಿಯ ದರ್ಶನವನ್ನು ಇನ್ನು ಬೆಂಗಳೂರಿನಲ್ಲಿಯೂ ಪಡೆಯಬಹುದು. ಇಲ್ಲಿನ ಕಬ್ಬನ್‌ಪೇಟೆಯಲ್ಲಿ ಹಿಂಗ್ಲಾಜ್ ದೇವಿಯ ಮಂದಿರ (Hinglaj Devi Mandir) ನಿರ್ಮಾಣವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಇದೇ ಶುಕ್ರವಾರ (ಜನವರಿ ೨೭) ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.
ಭಾರತ ಸಹಿತ ಪಾಕಿಸ್ತಾನದಲ್ಲಿಯೂ ಹಿಂಗ್ಲಾಜ್ ದೇವಿಯ ಆರಾಧಕರಿದ್ದಾರೆ. ಅಲ್ಲದೆ, ಹಿಂಗ್ಲಾಜ್ ದೇವಿಯು ಕ್ಷತ್ರಿಯ ಧರ್ಮೀಯರ ಕುಲದೇವತೆಯಾಗಿದ್ದಾಳೆ. ಇದೀಗ ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹಿಂಗ್ಲಾಜ್ ದೇವಸ್ಥಾನದಲ್ಲಿ ಜನವರಿ ೨೭ರ ಶುಕ್ರವಾರದಂದು ದೇವಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದಲೇ (ಜ.೨೫) ವಿವಿಧ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದು, ಗಣಪತಿ ಪೂಜೆಯಿಂದ ಚಾಲನೆ ದೊರೆತಿದೆ.
ಬೆಂಗಳೂರಿನ ಅವಿನ್ಯೂ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಬುಧವಾರ ಕಲಶ ಯಾತ್ರೆಯನ್ನು ನಡೆಸಲಾಯಿತು. ಬಳಿಕ ಮಂಟಪ ಪೂಜೆ ಸಹಿತ ಇನ್ನಿತರ ಪೂಜೆ ಪುನಸ್ಕಾರಗಳು ನಡೆದವು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗುರುವಾರ (ಜ.೨೬) ಹಿಂಗ್ಲಾಜ್ ದೇವಿ ದೇವಸ್ಥಾನದಲ್ಲಿ ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ, ಪ್ರಧಾನ ಯಜ್ಞ-ಯಾಗ, ಮೂರ್ತಿ ಅಭಿಷೇಕ, ವಾಸ್ತು ಯಜ್ಞದಂತಹ ಪ್ರಮುಖ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಅಲ್ಲದೆ, ಸಮಾಜ ಹಲವು ಪ್ರಮುಖರಿಗೆ ಸೇರಿದಂತೆ ಕರ್ನಾಟಕದ ಕೆಲವು ಗಣ್ಯರಿಗೆ ಈ ಸಂದರ್ಭದಲ್ಲಿ ಸನ್ಮಾನವನ್ನೂ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ನಡೆಸಲಾಯಿತು.
ಶುಕ್ರವಾರ (ಜ.೨೭) ಪ್ರತಿಷ್ಠಾಪನೆ
ಶುಕ್ರವಾರ (ಜ.೨೭) ಹಿಂಗ್ಲಾಜ್ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಬೆಳಗ್ಗೆ ೭ ಗಂಟೆಯಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಹೋಮಗಳನ್ನು ನಡೆಸಲಾಗುತ್ತಿದ್ದು, ಪೂರ್ಣಾಹುತಿಯ ಬಳಿಕ ಸಂಪನ್ನಗೊಳ್ಳಲಿದೆ. ಈ ವೇಳೆ ಭಜನೆ, ಸಂಕೀರ್ತನೆ ಹಾಗೂ ಪ್ರವಚನಗಳೂ ನಡೆಯಲಿವೆ.
ಜೈಪುರದಲ್ಲಿ ಹಿಂಗ್ಲಾಜ್ ದೇವಿ ಮೂರ್ತಿ ಕೆತ್ತನೆ
ಈಗ ಬೆಂಗಳೂರಿನಲ್ಲಿ ಪ್ರತಿಷ್ಠಾಪನೆಯಾಗುತ್ತಿರುವ ಹಿಂಗ್ಲಾಜ್ ದೇವಿ ಮೂರ್ತಿಯನ್ನು ಜೈಪುರ ಕಲಾವಿದರಿಂದ ಮೂರ್ತಿ ಕೆತ್ತನೆಯಾಗಿದೆ. ಇದು ಪಾಕ್ ಹಿಂಗ್ಲಾಜ್‌ನಲ್ಲಿರುವ ದೇವಿಯ ಪ್ರತಿರೂಪವಾಗಿದೆ. ಎಲ್ಲ ಹಿಂದು ಭಕ್ತರಿಗೂ ಹಿಂಗ್ಲಾಜ್‌ಗೆ ಭೇಟಿ ನೀಡಲು ಸಾಧ್ಯವಿಲ್ಲ. ಇಲ್ಲವೇ ರಾಜಸ್ಥಾನಕ್ಕೆ ಭೇಟಿ ನೀಡಲೂ ಆಗದಿರಬಹುದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಶಕ್ತಿ ದೇವತೆಯ ದೇಗುಲವನ್ನು ನಿರ್ಮಾಣ ಮಾಡಿದ್ದು, ಇಲ್ಲಿಂದಲೇ ತಾಯಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು ಎಂದು ಹೇಳುತ್ತಾರೆ ಬ್ರಹ್ಮಕ್ಷತ್ರಿಯ ಸಮಾಜದ ಸಂಜೀವ್ ಕುಮಾರ್.
ಪಾಕ್‌ನಿಂದ ಜ್ಯೋತಿ ತಂದಿದ್ದ ತರುಣ್ ವಿಜಯ್
ಮಾಜಿ ಸಂಸದ, ಪತ್ರಕರ್ತ, ಅಂಕಣಕಾರ ತರುಣ್ ವಿಜಯ್ ಅವರು ಸಹ ಹಿಂಗ್ಲಾಜ್ ದೇವಿ ಐತಿಹ್ಯದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅಲ್ಲದೆ, ಪಾಕಿಸ್ತಾನ ಸರ್ಕಾರದ ಅನುಮತಿ ಪಡೆದು ರಸ್ತೆ ಮಾರ್ಗವಾಗಿ ವಾಹನದ ಮೂಲಕ ಪಾಕ್‌ನ ಹಿಂಗ್ಲಾಜ್‌ಗೆ ತೆರಳಿದ್ದ ತರುಣ್ ವಿಜಯ್ ಹಾಗೂ ಬ್ರಹ್ಮ ಕ್ಷತಿಯ ಸಮಾಜ ಕೆಲವು ಮುಖಂಡರು ಅಲ್ಲಿನ ದೇಗುಲದಿಂದ ಜ್ಯೋತಿಯನ್ನು ಪಡೆದಿದ್ದಾರೆ. ಪುನಃ ರಸ್ತೆ ಮಾರ್ಗವಾಗಿ ಬಂದು ರಾಜಸ್ಥಾನದ ಬರ್ಮೇರ್‌ನಲ್ಲಿರುವ ಹಿಂಗ್ಲಾಜ್ ದೇವಸ್ಥಾನದಲ್ಲಿ ಹೊತ್ತಿಸುವ ಮೂಲಕ ನಿರಂತರವಾಗಿ ಜ್ಯೋತಿ ಬೆಳಗುವಲ್ಲಿ ಶ್ರಮ ವಹಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಹಿಂಗ್ಲಾಜ್ ದೇವಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರೂ ಭಾಗಿಯಾಗಿದ್ದಾರೆ.
ಹಿಂಗ್ಲಾಜ್ ದೇವಿ ಮಹತ್ವವೇನು?
ಹಿಂಗ್ಲಾಜ್ ದೇವಿಗೆ ಪೌರಾಣಿಕ ಹಿನ್ನೆಲೆ ಇದ್ದು, ಹಿಂದುಗಳ ಶಕ್ತಿ ದೇವತೆ ಎಂಬ ನಂಬಿಕೆ ಇದೆ. ಶಿವನ ಪತ್ನಿ ಸತಿ ದೇವಿಯ ಪ್ರತಿರೂಪವೇ ಹಿಂಗ್ಲಾಜ್ ದೇವಿಯಾಗಿದ್ದಾಳೆ. ಇದಕ್ಕೆ ಇರುವ ಪೌರಾಣಿಕ ಕಥೆಯನ್ನು ನೋಡುವುದಾದರೆ, ದಕ್ಷ ಮಹಾರಾಜನು ಒಮ್ಮೆ ಯಜ್ಞವನ್ನು ಆಯೋಜನೆ ಮಾಡಿರುತ್ತಾನೆ. ಇದಕ್ಕೆ ದೇವಾನು ದೇವತೆಗಳಿಗೆಲ್ಲರಿಗೂ ಆಹ್ವಾನವನ್ನು ನೀಡಿರುತ್ತಾನೆ. ಆದರೆ, ಸ್ಮಶಾನವಾಸಿ, ಅಳಿಯ ಶಿವನಿಗೆ ಮಾತ್ರ ಆಹ್ವಾನವನ್ನು ನೀಡಿರುವುದಿಲ್ಲ. ಈ ವಿಷಯವು ದಕ್ಷನ ಮಗಳು, ಶಿವನ ಪತ್ನಿ ಸತಿ ದೇವಿಗೆ ತಿಳಿಯುತ್ತದೆ. ಸತಿಯು ತನಗೆ ಆಹ್ವಾನ ಇಲ್ಲದಿದ್ದರೂ ದಕ್ಷ ಆಯೋಜನೆ ಮಾಡಿದ್ದ ಯಜ್ಞ ಸ್ಥಳಕ್ಕೆ ಹೋಗುತ್ತಾಳೆ. ಆಗ ತನ್ನ ಪತಿಯನ್ನು ಕರೆಯುವಂತೆ ತಂದೆ ಬಳಿ ಮತ್ತೆ ಕೇಳಿಕೊಳ್ಳುತ್ತಾಳೆ. ಆದರೆ, ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ದಕ್ಷ ನಿರಾಕರಣೆ ಮಾಡಿದ್ದರಿಂದ ಮನನೊಂದು ಸತಿ ದೇವಿಯು ಯಜ್ಞ ಮಾಡುತ್ತಿದ್ದ ಅಗ್ನಿಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಈ ವಿಷಯ ತಿಳಿದ ಶಿವನಿಗೆ ಕೋಪ ಬಂದಿದ್ದೇ, ಯಜ್ಞ ಕುಂಡದಲ್ಲಿರುವ ಪತ್ನಿ ಸತಿ ದೇವಿಯ ಮೃತ ಶರೀರವನ್ನು ಹಿಡಿದು ರುದ್ರ ತಾಂಡವವಾಡುತ್ತಾನೆ. ಆಗ ಲೋಕ ನಾಶವಾಗುವ ಭೀತಿಯಿಂದ ಮತ್ತು ಶಿವನಿಗೆ ಸತಿಯ ಮೇಲಿನ ಮೋಹವು ಬಿಟ್ಟುಹೋಗಲಿ ಎಂಬ ಕಾರಣಕ್ಕೆ ವಿಷ್ಣುವು ತನ್ನ ಚಕ್ರದಿಂದ ಸತಿ ದೇವಿಯ ಮೃತ ಶರೀರವನ್ನು ತುಂಡರಿಸುತ್ತಾನೆ. ಇದು ೫೧ ಭಾಗಗಳಾಗಿ ಭೂಲೋಕದ ಹಲವು ಕಡೆ ಬೀಳುತ್ತದೆ. ಇವೆಲ್ಲವನ್ನೂ ಶಕ್ತಿಪೀಠವೆಂದು ಕರೆಯಲಾಗುತ್ತದೆ. ಅದರಲ್ಲಿ ಸತಿದೇವಿಯ ಶಿರ ಭಾಗವು ಪಾಕಿಸ್ತಾನದ ಬಲೂಚಿಸ್ಥಾನ ರಾಜ್ಯದ ಲಸ್ಬೆಲಾ ಜಿಲ್ಲೆಯ ಹಿಂಗ್ಲಾಜ್ ಎಂಬ ಪ್ರಾಂತ್ಯದಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಹಿಂಗ್ಲಾಜ್ ದೇವಿ ದೇಗುಲವನ್ನು ನಿರ್ಮಾಣ ಮಾಡಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಲೇ ಬಂದಿದ್ದಾರೆ.
ಬಲೂಚಿಸ್ತಾನದ ಹಿಂಗ್ಲಾಜ್ ದೇಗುಲ ಹೇಗಿದೆ?
ಹಿಂಗ್ಲಾಜ್ ದೇವಸ್ಥಾನದ ಮಾರ್ಗವು ದುರ್ಗಮ ರಸ್ತೆಯಿಂದ ಕೂಡಿದೆ. ಈ ಮಾರ್ಗದಲ್ಲಿ ದಟ್ಟ ಕಾಡುಗಳು, ಮರುಭೂಮಿ ಸಹಿತ 1000 ಅಡಿ ಎತ್ತರದ ಪರ್ವತಗಳು ಸಿಗುತ್ತವೆ. ಕರಾಚಿಯಿಂದ 60 ಕಿ.ಮೀ. ದೂರದಲ್ಲಿದೆ.
ಧಾರ್ಮಿಕ ನಂಬಿಕೆ ಏನು?
ಹಿಂಗ್ಲಾಜ್ ಕ್ಷೇತ್ರದಲ್ಲಿ ದೇವಿ ದರ್ಶನ ಪಡೆದರೆ ಹಿಂದಿನ ಜನ್ಮದ ಕರ್ಮಗಳೂ ವಿಮೋಚನೆಯಾಗಲಿದೆ ಎಂಬ ನಂಬಿಕೆ ಇದೆ. ಅಲ್ಲದೆ, ಗುರು ಶ್ರೀ ಗೋರಖನಾಥ್, ಗುರು ನಾನಕ್ ದೇವ್, ದಾದಾ ಮಖಾನ್ ಮುಂತಾದ ಆಧ್ಯಾತ್ಮಿಕ ಸಂತರು ಸಹ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು ಎನ್ನಲಾಗಿದೆ. ಇನ್ನು ಈ ಪೀಠಕ್ಕೆ ಶ್ರೀರಾಮ ಸಹ ಭೇಟಿ ನೀಡಿ ತನ್ನ ಪಾಪವನ್ನು ತೊಳೆದುಕೊಂಡಿದ್ದಾನೆಂಬ ಕತೆಯೂ ಇದೆ. ರಾವಣನ ವಧೆ ನಂತರ ಶ್ರೀರಾಮನ ಮೇಲೆ ಬ್ರಹ್ಮ ಹತ್ಯೆ ದೋಷ ಬರುತ್ತದೆ. ಈ ದೋಷ ನಿವಾರಣೆಗೆ ಶ್ರೀರಾಮನು ಇಲ್ಲಿ ಯಾಗ ನಡೆಸಿದ್ದನು ಎಂಬ ಪ್ರತೀತಿ ಇದೆ.
ಇದನ್ನೂ ಓದಿ: S L Bhyrappa: 2024, 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿಯೇ ಗೆಲ್ಲಲಿ: ಡಾ. ಎಸ್.ಎಲ್.ಭೈರಪ್ಪ