ಬಣ್ಣಗಳ ಹಬ್ಬ ಹೋಳಿ (Holi 2023) ಆಡುವುದೆಂದರೆ ಖುಷಿ, ಉತ್ಸಾಹ, ಸಂತೋಷ. ಬದುಕಿನ ಎಲ್ಲ ಗಡಿಬಿಡಿ, ದುಗುಡ, ಜವಾಬ್ದಾರಿ, ಚಿಂತೆಗಳನ್ನು ಮರೆತು ಒಂದು ದಿನವಾದರೂ ಬಣ್ಣಗಳನ್ನು ಎರಚಿಕೊಂಡರೆ, ಮಕ್ಕಳಂತೆ ಯಾವ ಚಿಂತೆಯೂ ಇಲ್ಲದೆ ಕುಣಿದಾಡಿದರೆ ಆಗುವ ಸಂತಸವೇ ಬೇರೆ. ಕುದುರೆಯಂತೆ ನಾಗಾಲೋಟದಿಂದ ಓಡುತ್ತಿರುವ ಬದುಕಿಗೆ ಆಗಾಗ ಇಂತಹ ಖುಷಿಗಳು ಬೇಕು. ಹೋಳಿಯೆಂಬ ಹಬ್ಬ ಬಣ್ಣಗಳ ಮೂಲಕ ಎಲ್ಲ ಖುಷಿಗಳನ್ನೂ ಹೊತ್ತು ತರುತ್ತದೆ. ಬಣ್ಣಗಳ ಶಕ್ತಿಯೇ ಅಂಥದ್ದು. ಅದು ಬದುಕಿಗೆ ಬಣ್ಣಗಳ ತುಂತುರು ಮಳೆ ಹನಿಸಿ ವರ್ಷವಿಡೀ ಅದು ಜೀವಂತವಾಗಿರುವಂತೆ ನೋಡಿಕೊಳ್ಳುತ್ತದೆ. ಉತ್ತರ ಭಾರತದಲ್ಲಿ ಭಾರೀ ಸಡಗರ, ಗೌಜಿನಿಂದ ಅದ್ದೂರಿಯಾಗಿ ಆಚರಿಸಲ್ಪಡುವ ಈ ಹಬ್ಬವನ್ನು ನೋಡಬೇಕೆಂದರೆ, ನೋಡಿ ಅನುಭವಿಸಬೇಕೆಂದರೆ ಹೋಳಿಯನ್ನು ಅದ್ಭುತವಾಗಿ ಆಚರಿಸುವ ಜಾಗಗಳಿಗೆ ಹೋಗಬೇಕು. ಹೋಳಿಯನ್ನು ಕಣ್ಣಾರೆ ನೋಡಬೇಕು ಹಾಗೂ ಅದರಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯಿದ್ದರೆ, ಜೀವನದಲ್ಲಿ ಒಮ್ಮೆಯಾದರೂ ಈ ಜಾಗಗಳಿಗೆ ಹೋಗಬೇಕು. ಹೋಳಿಗೆ ಸಾಕ್ಷಿಯಾಗಬೇಕು. ಈ ಎಲ್ಲ ಜಾಗಗಳಲ್ಲದೆ, ದೆಹಲಿ, ಮುಂಬೈ ಸೇರಿದಂತೆ ಅನೇಕ ಮಹಾನಗರಗಳೂ, ಉತ್ತರ ಭಾರತದ ಎಲ್ಲ ಜಾಗಗಳೂ ಹೋಳಿಯ ರಂಗಿನಲ್ಲಿ ಮುಳುಗೇಳುತ್ತದೆ. ಆದರೂ, ಹೋಳಿಯ ನಿಜಬಣ್ಣ ಅರಿಯಬೇಕೆಂದರೆ, ಈ ಕೆಳಗಿನ ಜಾಗಗಳಿಗೆ ಪ್ರವಾಸ ಮಾಡಬೇಕು.
1. ಬರ್ಸಾನಾ, ಉತ್ತರ ಪ್ರದೇಶ: ಬ್ರಜ ಭೂಮಿಯ ಹೋಳಿಗೆ ಅದರದ್ದೇ ಆದ ವಿಶೇಷತೆಯಿದೆ. ಇಲ್ಲಿನ ಹೋಳಿಗೆ ಪುರಾಣಗಳ ಸಾಥ್ ಇದೆ. ಕೃಷ್ಣ ರಾಧೆಯರ ಕಾಲದ ಕಥೆಯಿದೆ. ಇಲ್ಲಿನ ಜನರು ಇಂದಿಗೂ ಕೃಷ್ಣ ರಾಧೆಯರ ಹೆಸರನ್ನೇ ಕಣ್ಣಿಗೊತ್ತಿಕೊಂಡು ಅಕ್ಷರಶಃ ಹೋಳಿಯ ಬಣ್ಣಗಳಲ್ಲಿ ಮುಳುಗೇಳುತ್ತಾರೆ. ರಾಧೆಯ ಹುಟ್ಟೂರಾದ ಬರ್ಸಾನಾದಲ್ಲಿ ವಾರವಿಡೀ ಹೋಳಿ ಆಚರಣೆಯಿದೆ. ಇಲ್ಲಿನ ಲಾತ್‌ಮಾರ್ ಹೋಳಿ ಎಂಬ ಹೊಡೆಯುವ ಆಟಕ್ಕೂ ಪುರಾಣದ ಕತೆಯಿದೆ. ಹೋಳಿಯ ಸಂದರ್ಭವೇ ಬರ್ಸಾನಾವನ್ನು ನೋಡಬೇಕು.
2. ಬೃಂದಾವನ ಹಾಗೂ ಮಥುರಾ, ಉತ್ತರ ಪ್ರದೇಶ: ಕೃಷ್ಣ ಹುಟ್ಟಿ ಬೆಳೆದ ಊರು ಮಥುರಾ ಮತ್ತು ಬೃಂದಾವನ ಎಂದರೆ ಈಗಲೂ ಹೋಳಿಯ ಸಂಭ್ರಮ ಇಲಿನ ಮಂದಿಗೆ ನಿಜದ ಖುಷಿ. ಎಂದೂ ಇಲ್ಲದಷ್ಟು ಅಂದರೆ ಲಕ್ಷಗಟ್ಟಲೆ ಪ್ರವಾಸಿಗರು ಪ್ರಪಂಚದ ನಾನಾ ಮೂಲೆಗಳಿಂದ ಪ್ರವಾಹೋಪಾದಿಯಲ್ಲಿ ಬ್ರಜಭೂಮಿ ಈ ಹೋಳಿಯನ್ನು ನೋಡಿ ಅನುಭವಿಸಿ ಆನಂದಿಸಲೆಂದೇ ಬರುತ್ತಾರೆ. ವಸಂತ ಪಂಚಮಿಯಂದೇ ಆರಂಭವಾಗುವ ಹೋಳಿ ಇಲ್ಲಿ ಸುಮಾರು ಹತ್ತು ದಿನಗಳಿಗಿಂತಲೂ ಹೆಚ್ಚು ಕಾಲ ನಡೆಯುತ್ತದೆ. ಇಲ್ಲಿನ ದೇವಸ್ಥಾನಗಳೂ ಸೇರಿದಂತೆ ಇಡೀ ಬೃಂದಾವನ ಮಥುರಾ ಹೋಳಿಯ ಬಣ್ಣದಲ್ಲಿ ಮುಳುಗೇಳುತ್ತದೆ. ಹೋಳಿಯೆಂದರೆ ಏನು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಮಥುರಾ, ಬೃಂದಾವನವಲ್ಲದೆ ಬೇರೆ ಉದಾಹರಣೆ ಸಿಗುವುದಿಲ್ಲ.
3. ಬಸಂತ್ ಉತ್ಸವ್, ಶಾಂತಿನಿಕೇತನ, ಪಶ್ಚಿಮ ಬಂಗಾಳ: ಬಸಂತ್ ಉತ್ಸವದ ಆಚರಣೆಗೆ ಶಾಂತಿನಿಕೇತನದಲ್ಲಿ ರವೀಂದ್ರನಾಥ ಠಾಗೋರರು ಒಂದು ಸಾಂಸ್ಕೃತಿಕ ಉತ್ಸವದ ರೂಪ ಕೊಟ್ಟರು. ಹೀಗಾಗಿ ಹೋಳಿಯ ದಿನ ಶಾಂತಿನಿಕೇತನದ ಮಕ್ಕಳೆಲ್ಲ ಕೇಸರಿ ಉಡುಗೆ ತೊಟ್ಟು ರವೀಂದ್ರನಾಥ ಠಾಗೋರರ ಹಾಡುಗಳನ್ನು ಹಾಡುತ್ತಾರೆ. ಹಬ್ಬವಾಗಿ ಆಚರಿಸುತ್ತಾರೆ. ಬಣ್ಣಗಳನ್ನೆರಚಿ ಹೋಳಿ ಆಡುತ್ತಾರೆ. ರಾಧಾ ಕೃಷ್ಣರ ವಿಗ್ರಹವನ್ನು ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಬಣ್ಣಗಳ ಹಬ್ಬಕ್ಕಿಂತಲೂ ಹೆಚ್ಚಾಗಿ ಬಂಗಾಳದ ಮಂದಿಗೆ ಇದೊಂದು ಸಾಂಸ್ಕೃತಿಕ ಸಂಗೀತ ಹಬ್ಬವಾಗಿ ಆಚರಿಸಲ್ಪಡುತ್ತದೆ.
ಇದನ್ನೂ ಓದಿ: Holi 2023: ಹೋಳಿ ಹಬ್ಬ ಸಂಭ್ರಮಿಸಲು ಸುರಕ್ಷತೆಯ ಹತ್ತು ಸೂತ್ರಗಳು!
4. ಉದಯಪು ಹಾಗೂ ಜೈಪುರ, ರಾಜಸ್ಥಾನ: ಹೋಳಿಯ ಮುನ್ನಾ ದಿನ ಹೋಲಿಕಾ ದಹನ ಕೂಡಾ ಬಹಳ ಮುಖ್ಯವಾದದ್ದು. ಅರಮನೆ ಹಾಗೂ ಕೋಟೆ ಕೊತ್ತಲಗಳ ಊರು ಜೈಪುರ ಹಾಗೂ ಉದಯಪುರದಲ್ಲಿ ಊರಿಡೀ ಬಣ್ಣದಲ್ಲಿ ಮುಳುಗೇಳುತ್ತದೆ. ಊರು ತುಂಬಾ ರಾಜ ಮರ್ಯಾದೆಯ ಝಲಕ್ ಕಾಣಸಿಗುತ್ತದೆ. ಆನೆ, ಕುದುರೆಗಳಿರುವ ರಾಜಗಾಂಭೀರ್ಯದ ಮೆರವಣಿಗೆಗಳು, ಮೆರವಣಿಗೆಯಲ್ಲಿ ಒಬ್ಬರ ಮೇಲೊಬ್ಬರು ಬಣ್ಣ ಎರಚುತ್ತಾ ಖುಷಿಯಿಂದ ಹಬ್ಬ ಆಚರಿಸುತ್ತಾರೆ. ಹಾಗಾಗಿ ರಾಜಸ್ಥಾನದ ಹೋಳಿಯ ಖದರ್ರೇ ಬೇರೆ.
5. ಹಂಪಿ, ಕರ್ನಾಟಕ: ಹೋಳಿ ಹಬ್ಬ ಉತ್ತರ ಭಾರತದ ಪ್ರಮುಖ ಹಬ್ಬವಾದರೂ, ದಕ್ಷಿಣದಲ್ಲಿ ಈ ಹಬ್ಬ ಅಷ್ಟಾಗಿ ಆಚರಣೆ ಇಲ್ಲದಿದ್ದರೂ, ಈ ಹಬ್ಬದ ಝಲಕ್ ನೋಡಲು, ಭಾಗವಹಿಸಲು ಉತ್ತರ ಭಾರತದೆಡೆಗೆ ಹೋಗಲು ಸಮಯವಿಲ್ಲದಿದ್ದರೆ, ಹಂಪಿಗೆ ಹೋಗಬಹುದು. ಹಂಪಿಯಲ್ಲಿ ಹೋಳಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.
ಇದನ್ನೂ ಓದಿ: Holi 2023 : ದ್ವೇಷ ಮರೆಸಿ, ಉತ್ಸಾಹ ತುಂಬುವ ಹೋಳಿ ಹುಣ್ಣಿಮೆ