Site icon Vistara News

ನಾಗರ ಪಂಚಮಿ | ಇಂದು ನಾಗದೇವರ ಪೂಜೆ ಮಾಡುವುದೇಕೆ?

nagara panchami

– ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ನಾಗರಪಂಚಮಿಯನ್ನು ನಾಡಿಗೆ ದೊಡ್ಡದು ಎಂದು ಹಿರಿಯರು ಸುಮ್ಮನೇ ಹೇಳಲಿಲ್ಲ. ಅದಕ್ಕೆ ಧಾರ್ಮಿಕ ಪ್ರಭಾವಳಿ, ಆಧ್ಯಾತ್ಮಿಕ ಪ್ರಭಾವಳಿಗಳೆಲ್ಲಾ ಸೇರಿಕೊಂಡಿವೆ. ನಾಗನೇ ಈ ಭೂಮಿಯನ್ನ ಹೊತ್ತವನು, ನಾಗನೇ ಈ ಭೂಮಿಯ ಆದಿನಿವಾಸಿ. ನಾಗನ ಕೃಪೆಯಿಂದಲೇ ನಾವು ಇಲ್ಲಿದ್ದೇವೆ. ಹೀಗಾಗಿ ನಾಗನಿಗೆ ಗೌರವ ನೀಡುವ ದಿನವಿಂದು.

ನಾಗಚತುರ್ಥಿ
ಶ್ರಾವಣಮಾಸದ ಶುಕ್ಲಪಕ್ಷದ ಚತುರ್ಥಿಯನ್ನು ನಾಗಚತುರ್ಥಿಯೆನ್ನುತ್ತಾರೆ. ಅಂದು ಬೆಳ್ಳಿ ಅಥವಾ ತಾಮ್ರದಲ್ಲಿ ಮಾಡಿದ ನಾಗನ ಪ್ರತಿಮೆಯನ್ನು ಒಳ್ಳೆಯ ಆಸನದಲ್ಲಿಟ್ಟು ಪೂಜೆ ಸಲ್ಲಿಸಬೇಕು ಮತ್ತು ಮನೆಯ ಗೋಡೆಯ ಮೇಲೆ ನಾಗನ ಚಿತ್ರ ಬರೆಯುತ್ತಾರೆ. ಅಣ್ಣಂದಿರ ಶ್ರೇಯಸ್ಸು ಬಯಸಿ ಉಪವಾಸ ಮಾಡುವ ಪದ್ಧತಿಯಿದೆ.

ನಾಗಪಂಚಮೀ

ಈ ದಿನ ಎಲ್ಲಾ ಸ್ತ್ರೀ ಪುರುಷರೂ ಅಭ್ಯಂಜನ ಸ್ನಾನ ಮಾಡಿ ಹಿಂದಿನ ದಿನ ಪೂಜಿಸಿದ ನಾಗದೇವರನ್ನೇ ಹರಿವಾಯುಗಳ ಪೂಜೆಯ ನಂತರ ಕ್ಷೀರಾಭಿಷೇಕದಿಂದ ಪೂಜಿಸಬೇಕು. ಪೂಜೆಯ ಈ ಫಲವನ್ನು ಶೇಷಾಂತರ್ಗತ ಸಂಕರ್ಷಣನಿಗೆ ಅರ್ಪಿಸಬೇಕು.

ಸರ್ಪಗಳು ಮೊದಲು ತುಂಬಾ ದುಷ್ಟತರವಾಗಿದ್ದು ಜನರಿಗೆ ಪೀಡೆಯನ್ನುಂಟು ಮಾಡುತ್ತಿದ್ದವು. ದೇವತೆಗಳು ಇದನ್ನರಿತು ಬ್ರಹ್ಮನ ಬಳಿ ವಿನಂತಿಸಿದರು. ಬ್ರಹ್ಮನು ಸರ್ಪಗಳು ತಮ್ಮ ತಾಯಿ ಕದ್ರುವಿನ ಶಾಪದಿಂದಲೇ ವಿನಾಶ ಹೊಂದುವವೆಂದು ಸೂಚಿಸಿದನು. ಸರ್ಪಗಳು ಎಲ್ಲಾ ಸಹೋದರರಿಂದ ಒಟ್ಟುಗೂಡಿ ಬ್ರಹ್ಮನಿಗೆ ಶಾಪನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿದವು. ಅವರ ಅಪರಾಧೀ ಪ್ರಜ್ಞೆ ಪಶ್ಚಾತ್ತಾಪಗಳನ್ನು ಮನಗಂಡು ಬ್ರಹ್ಮನು ಮುಂದೆ ಆಸ್ತಿಕನೆಂಬುವನು ಸರ್ಪಕುಲ ರಕ್ಷಕನಾಗಿ ನಿಲ್ಲುತ್ತಾನೆ ಎಂದು ನುಡಿದನು. ಹಾಗೆ ಹೇಳುತ್ತಾ ಸರ್ಪಗಳು ಅತಲ, ವಿತಲ, ಪಾತಾಲಗಳಲ್ಲಿ ವಾಸಿಸಬೇಕೆಂದು, ನೋಯದೇ ಕಚ್ಚಬಾರದೆಂದೂ ಆದೇಶಿಸಿದನು. ಹೀಗಾಗಿ ಸರ್ಪಕುಲಗಳ ಒಗ್ಗಟ್ಟಿನ ಪ್ರಾರ್ಥನೆ– ರಕ್ಷಣೆ ಇವೆರಡೂ ಪ್ರತಿಫಲಿಸಿದ್ದು ಪಂಚಮಿಯ ಈ ಶುಭದಿನದಂದು. ಹೀಗಾಗಿ ಅವುಗಳಿಗೆ ಈ ದಿನ ಪರಮಪ್ರೀತಿಕರ. ಇಂದೇ ಅವುಗಳ ಪೂಜೆ ಮಾಡಬೇಕು. ಅದು ನಾನಾ ಪಾಪಗಳನ್ನೆಲ್ಲಾ ಪರಿಹರಿಸುವುದು.

ಏತತ್ಸರ್ವಂ ಚ ಪಂಚಮ್ಯಾ ತೇಷಾಂ ಜಾತಂ ಮಹಾತ್ಮನಾಂ |
ಆತಸ್ತಿರ್‌ವಯಂ ತಿಥಿರ್ಧನ್ಯಾ ಸರ್ವಪಾಪಹರಾ ಶುಭಾ || ವರಾಹಪುರಾಣ)
ಮತ್ಪೂಜಾಽನಂತರ ಶೇಷಂ ವಾಸುಕೀಂ ತಕ್ಷಕಂ ತಥಾ || (ವರಾಹ ಪುರಾಣ)

ಹರಿವಾಯುಗಳ ಪೂಜೆಯ ಅನಂತರ ಶೇಷ, ವಾಸುಕಿ, ತಕ್ಷಕ ಇವರನ್ನು ಪೂಜಿಸಬೇಕು. ನಾಗಗಳನ್ನು ಪೂಜಿಸಬೇಕು. ಏಕೆಂದರೆ ಸಂಕರ್ಷಣ ರೂಪಿಯಾದ ಪರಮಾತ್ಮನೇ ಪೂಜೆಯನ್ನು ನೇರವಾಗಿ ಸ್ವೀಕರಿಸುವನು. ಅಂದು ಶೇಷದೇವರ ಸ್ತೋತ್ರ ಈ ರೀತಿ ಇದೆ.

ಸಹಸ್ರಶೀರ್ಷಂ ಜಗದೇಕ ಕುಂಡಲಂ ಪೀತಾಂಬರಂ ಧೂಮ್ರಸಹಸ್ರಲೋಚನಂ |
ಉದಾರವೀರ್ಯಂ ವಿಷದಂಷ್ಟ್ರಕಾನನಂ ನಮಾಮ್ಯನಂತಂ ಜಗದೇಕನಾಥಂ ||

(ಸಾವಿರ ಹೆಡೆಗಳುಳ್ಳ, ಜಗದೇಕಕುಂಡಲನಾದ, ಪೀತಾಂಬರ ತೊಟ್ಟಿರುವ ಹೊಗೆಕಾರುವ ಕಣ್ಣುಗಳುಳ್ಳ, ಅಪರಿಮಿತ ಪರಾಕ್ರಮನಾದ, ವಿಷದ ಕೋರೆದಾಡುಗಳುಳ್ಳ, ಮುಖವುಳ್ಳ, ಜಗದೊಡೆಯನಾದ ಅನಂತನಿಗೆ ನಾನು ನಮಿಸುವೆ)

ಇದನ್ನೂ ಓದಿ: Shravan| ಶ್ರಾವಣ ಮಾಸ ಬರಲು ಹಬ್ಬಗಳ ಸಾಲು ಸಾಲು!

ಕಣ್ಣಲ್ಲೇ ಕಿವಿಯ ಕೆಲಸವನ್ನು ನಿರ್ವಹಿಸುವ ಸರ್ಪದ ಜಾಣ್ಮೆ ಯಾರಿಗಿದೆ? ಅದರಂತೆಯೇ ಚಕ್ಷುರಿಂದ್ರಿಯ- ಶ್ರವಣೇಂದ್ರಿಯವನ್ನು ಸಮರ್ಥವಾಗಿ ವಿನಿಯೋಗಿಸಿಕೊಳ್ಳುವ ಜಾಡು ನಮ್ಮದಾಗಬೇಕು. ಬೇಗನೇ ಹರಿದುಹೋಗಿಬಿಡುವ ಅದರ ಸ್ವಭಾವ ಶೀಘ್ರವಾಗಿ ಪ್ರವೃತ್ತರಾಗಬೇಕಾದ ನಮ್ಮ ಕ್ರಿಯಾಶೀಲತೆಗೆ ಪ್ರೇರಕವಾಗಿದೆ.

ಕಾಲಿಲ್ಲದಿದ್ದರೂ ತೆವಳಿ ಸರಿದು ಹೋಗುವವು ಭುಜಂಗಗಳು. ಅವುಗಳಂತೆ ನಾವು ಶಕ್ತಿಮೀರಿ ಧರ್ಮಮಾರ್ಗಗಾಮಿಗಳಾಗಬೇಕು ಎಂಬುದನ್ನು ಹೇಳುತ್ತವೆ. ಒಂದೇ ಹುತ್ತದಲ್ಲಿ ಹಲವು ಸರ್ಪಗಳು ನೆಲೆಸುವ ಆ ಅನ್ಯೋನ್ಯತೆ, ಒಟ್ಟಾಗಿ ಬ್ರಹ್ಮನನ್ನು ಪ್ರಾರ್ಥಿಸಿದ ಆ ಧಾರ್ಮಿಕ ಒಗ್ಗಟ್ಟು, ಸಹೋದರ ಭಾವ ನಮಗೆ ಆದರ್ಶಪ್ರಾಯ. ಹೀಗಾಗಿ ಇದು ಅಣ್ಣತಮ್ಮಂದಿರ ಹಬ್ಬವೂ ಹೌದು. ಅಂದು ಸಹೋದರರು ಪರಸ್ಪರ ಬೆನ್ನಿಗೆ ಹಾಲನ್ನು ತಿಕ್ಕುವ, ಶ್ರೇಯಸ್ಸು ಬಯಸುವ ಪದ್ಧತಿಯೂ ಇದೆ. ಅಂದಿನ ಪೂಜೆಯಿಂದ ವರ್ಷವಿಡೀ ನಮಗೆ ಸರ್ವಭೀತಿ ನಿವಾರಣೆಯಾಗುತ್ತದೆ. ಮೂಳೆಗಳಿಲ್ಲದೆ, ನರಗಳಿಂದಲೇ ಎಲ್ಲೆಡೆ ಹರಿದಾಡುವ ಆ ಪ್ರಾಣಿ ನಮ್ಮ ನರನಾಡಿಗಳನ್ನು ಚೆನ್ನಾಗಿಡಲಿ ಎಂದು ಪ್ರಾರ್ಥನೆಯೂ ಸಹ ಇಲ್ಲಿದೆ.

ಅವುಗಳ ವಂಶ ನಾಶದ ಅಂಚಿನಲ್ಲಿದ್ದಾಗ ಆಸ್ತಿಕನಿಂದ ಉಳಿದು ಬೆಳೆಯಲಿಲ್ಲವೇ? ಹಾಗೆ ಪ್ರತಿಯೊಬ್ಬರ ವಂಶವೂ ಬೆಳೆಯಬೇಕಲ್ಲವೇ? ಹೀಗಾಗಿ ನಾಗಪ್ರತಿಷ್ಠೆಯನ್ನು ನಡೆಸುವುದು, ನಾಗವನ್ನು ಪೂಜಿಸುವುದು ವಂಶೋದ್ಧಾರಕ ಪದ್ಧತಿಯೂ ಹೌದು. ಇದರಿಂದ ಮಕ್ಕಳ ಪ್ರಾಪ್ತಿಯಾಗುವುದು ನಿಶ್ಚಯ. ಇಷ್ಟೆಲ್ಲಾ ಗುಣಗಳಿರುವ ಪರಮಪವಿತ್ರವಾದ ಈ ದಿನ ಸರ್ಪದ ಸಂಹಾರದ ಆಲೋಚನೆಯೂ ಸಲ್ಲದು.

ಆದ್ದರಿಂದ ಅದರ ಕಣ್ಣುಗಳನ್ನೇ ಹೋಲುವ ಸಾಸುವೆಯ ಬಳಕೆ ಅಂದು ಸಂಪ್ರದಾಯ ಸಮ್ಮತವಲ್ಲ. ಅಂತೆಯೇ ಅತಿಯಾದ ಶಾಖದಿಂದ ಅದರ ಚರ್ಮಗಳು ಸುಟ್ಟುಹೋಗುವುದಿಲ್ಲವೇ? ಅದಕ್ಕಾಗಿ ಅಂದು ಅತಿಶಾಖ ನೀಡುವ ಹುರಿಯುವ ಕ್ರಿಯೆಯಾಗಲೀ, ಎಣ್ಣೆಯಲ್ಲಿ ಕರಿಯುವ ನೀತಿಯಾಗಲೀ ನಿಷಿದ್ಧ. ಒಳಗಡೆ ಹಬೆಯಿಂದಲೇ ಬೆಂದ ಕಡುಬು, ಹುರಿಯದ ಎಳ್ಳಿನ ಚಿಗಳಿ, ತಂಬಿಟ್ಟು ಮಾಡುವ ಸಂಪ್ರದಾಯವಿದೆ. ಅಂದು ಅಷ್ಟನ್ನು ದೇವರಿಗೆ ನಿವೇದಿಸಿ 13 ಗಂಟುಗಳುಳ್ಳ ದಾರವನ್ನು ಶೇಷಾಂತರ್ಗತ ಸಂಕರ್ಷಣನಿಗೆ ಸಮರ್ಪಿಸಿ ಕೈಯಲ್ಲಿ ಕಟ್ಟಿಕೊಳ್ಳಬೇಕು.
ಅಂದೂ ಸರ್ಪದ ಆಕಾರವಿರುವ ಪಡವಲಕಾಯಿ, ಸೋರೆಕಾಯಿ, ಶಾವಿಗೆಗಳ ಬಳಕೆಯೂ ಸಲ್ಲದು. ಇದನ್ನೆಲ್ಲಾ ಗಮನಿಸಿದಾಗ ಇದು ಅಂಧಶ್ರದ್ಧೆಯಲ್ಲ ಎಂಬ ಅಂಶ ಮನವರಿಕೆಯಾಗುವುದು.

ಇದನ್ನೂ ಓದಿ: Guru Purnima 2022 | ಗುರು ಪದದ ಅರ್ಥ ಅರಿತವರಿಗಷ್ಟೇ ಮುಕ್ತಿ

Exit mobile version