Site icon Vistara News

Hunasuru Hanuma Jayanthi | 7 ವರ್ಷಗಳ ನಂತರ ಹಿಂದು-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಹುಣಸೂರು ಹನುಮ ಜಯಂತಿ

Hunasuru Hanuma Jayanthi ಹುಣಸೂರು

ಮೈಸೂರು: ಇಲ್ಲಿನ ಹುಣಸೂರು ಪಟ್ಟಣದಲ್ಲಿ ಬುಧವಾರ (ಡಿ.7) ಹನುಮ ಜಯಂತಿ (Hunasuru Hanuma Jayanthi) ಅದ್ಧೂರಿಯಾಗಿ ನಡೆಯಿತು. ಧರ್ಮವನ್ನು ಮೀರಿ ಪಕ್ಷಾತೀತ, ಜಾತ್ಯತೀತವಾಗಿ ಎಲ್ಲರೂ ಮೆರವಣಿಗೆಯಲ್ಲಿ ಸಾಗಿದರು. ನಿರ್ಬಂಧಿತ ಜೆಎಲ್‌ಬಿ ರಸ್ತೆ, ಬಜಾರ್ ರಸ್ತೆಯಲ್ಲಿ ಮೆರವಣಿಗೆ ಸಾಗಿದರೂ ಶಾಂತಿಯುತವಾಗಿ ಶೋಭಾ ಯಾತ್ರೆ ಸಂಪನ್ನಗೊಂಡಿತು.

ಹುಣಸೂರು ಹನುಮ ಜಯಂತಿ ಎಂದರೆ ಮೈಸೂರು ಜಿಲ್ಲಾ ಪೊಲೀಸರಿಗೆ ತಲೆಬಿಸಿ ಎನ್ನುವ ಸನ್ನಿವೇಶವಿತ್ತು. 2017ರಲ್ಲಿ ನಡೆದ ಕೋಮು ಗಲಭೆ, ಲಾಠಿ ಚಾರ್ಜ್‌ನಂತಹ ಘಟನೆಗಳ ಕಹಿ ನೆ‌ನಪು ಇದಕ್ಕೆ ಕಾರಣವಾಗಿತ್ತು. ಆದರೆ ಈ ಬಾರಿಯ ಹನುಮ ಜಯಂತಿ ಅದ್ಧೂರಿ ಹಾಗೂ ಶಾಂತಿಯುತವಾಗಿ ನೆರವೇರಿತು.

ಗಾವಡಗೆರೆಯ ಗುರು ಲಿಂಗ ಜಂಗಮ ದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಶಾಸಕ ಎಚ್.ಪಿ.ಮಂಜುನಾಥ್, ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡ, ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸೇರಿದಂತೆ ಪಕ್ಷಾತೀತವಾಗಿ ಮುಖಂಡರು ಮತ್ತು ಪ್ರಮುಖರು ಪಾಲ್ಗೊಂಡರು. ರಂಗನಾಥ ಬಡಾವಣೆ ಸಮೀಪ ಹನುಮ ಮೂರ್ತಿಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಇದನ್ನೂ ಓದಿ | ಹನುಮ ಜಯಂತಿ| ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನಕ್ಕೆ ಜನಸಾಗರ

ಕಲ್ಕುಣಿಕೆ ವೃತ್ತ, ಹಳೇ ಸೇತುವೆ, ಸಂವಿಧಾನ ವೃತ್ತ, ಜೆ‌ಎಲ್‌ಬಿ ರಸ್ತೆ, ಬಜಾರ್ ರಸ್ತೆ, ಹುಣಸೂರು ಮುಖ್ಯ ರಸ್ತೆಯಲ್ಲಿ ಸಾಗಿದ ಶೋಭಾ ಯಾತ್ರೆ, ಪಟ್ಟಣದ ಹನುಮ ದೇವಾಲಯದ ಆವರಣದಲ್ಲಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ಯುವಕರು ಡಿಜೆ, ಕಲಾ ತಂಡಗಳ ಹಿಮ್ಮೇಳಕ್ಕೆ ಕುಣಿದು ಕುಪ್ಪಳಿಸಿದರು. ಇದೇ ವೇಳೆ ಮೆರವಣಿಗೆಯಲ್ಲಿ ಪುನೀತ್ ಫೋಟೊ ಹಿಡಿದು ಅಭಿಮಾನಿಗಳು ಸಾಗಿದ್ದೂ ಕಂಡುಬಂತು. ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿದರು. ಹುಣಸೂರಿನ ಜನ ಪ್ರೇರಣೆ ಆಗಬೇಕು, ಪ್ರಚೋದನೆಗೆ ಕಾರಣವಾಗಬಾರದು ಎಂದು ಶಾಸಕ ಎಚ್.ಪಿ. ಮಂಜುನಾಥ್ ಮನವಿ ಮಾಡಿದರು.

ಡ್ರೋಣ್‌ ಕ್ಯಾಮೆರಾ ಕಣ್ಗಾವಲು
7 ವರ್ಷಗಳ ಹಿಂದೆ ಹನುಮ ಜಯಂತಿ ಮೆರವಣಿಗೆ ವೇಳೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 1,500 ಪೊಲೀಸ್ ಸಿಬ್ಬಂದಿ, 7 ಡಿಎಆರ್ ತುಕಡಿ, 70 ಸಿಸಿ ಕ್ಯಾಮರಾ, ಮೊಬೈಲ್ ಕಮಾಂಡಿಂಗ್ ವಾಹನ, ಡ್ರೋಣ್ ಕ್ಯಾಮರಾಗಳ ಕಣ್ಗಾವಲು ಇಡಲಾಗಿತ್ತು. ಜತಗೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಾದ್ಯಂತ ಮೂರು ದಿನ ಮದ್ಯ ಮಾರಾಟ ನಿಷೇಧ ಮಾಡಿ, ಹುಣಸೂರಿನಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆರೇಳು ವರ್ಷಗಳಿಂದಲೂ ಜೆಎಲ್‌ಬಿ ರಸ್ತೆ ಹಾಗೂ ಬಜಾರ್ ರಸ್ತೆಗಳಲ್ಲಿ ಶೋಭಾ ಯಾತ್ರೆ ನಡೆಸಲು ಅನುಮತಿ ನೀಡಿರಲಿಲ್ಲ. ಆದರೆ, ಚುನಾವಣೆ ಹೊಸ್ತಿಲಲ್ಲಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾದ ಎರಡೂ ರಸ್ತೆಗಳಲ್ಲಿ ಮೆರವಣಿಗೆ ಸಾಗಲು ಈ ಬಾರಿ ಪೊಲೀಸರು ಅನುಮತಿ ನೀಡಿದ್ದರು.

ಮುಸ್ಲಿಂ ಬಾಂಧವರಿಂದ ಶರಬತ್ತು ವಿತರಣೆ
ಹಳೇ ಸೇತುವೆ ಬಳಿ ಮುಸ್ಲಿಂ ಸಮುದಾಯದವರೇ ಸೇರಿ ಹನುಮ ಭಕ್ತರಿಗೆ ಶರಬತ್ತು, ಮಜ್ಜಿಗೆ, ಬಾಳೆಹಣ್ಣುಗಳನ್ನು ವಿತರಿಸಿ ಗಮನ ಸೆಳೆದರು. ಅಲ್ಲದೆ, ನಾವೆಲ್ಲರೂ ಒಂದೇ, ಅಣ್ಣ-ತಮ್ಮಂದಿರಂತೆ ಜೀವಿಸುತ್ತಿದ್ದು, ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದೇವೆ. ಒಗ್ಗಟ್ಟಾಗಿ ಬಾಳ್ವೆ ಮಾಡುತ್ತಿದ್ದೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ಮಾಧ್ಯಮಗಳ ಎದುರು ಹೇಳಿದರು.

ಗಮನ ಸೆಳೆದ ಹರೀಶ್‌ ಗೌಡ ಡ್ಯಾನ್ಸ್‌
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹುಣುಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್ ಗೌಡ ಹನುಮ ಜಯಂತಿ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಭರ್ಜರಿ ಡ್ಯಾನ್ಸ್‌ ಮಾಡಿದರು. ಬಜಾರ್ ರಸ್ತೆಯ ಮಸೀದಿ ಬಳಿ ಹೆಚ್ಚು ಹೊತ್ತು ಯುವಕರು ಡ್ಯಾನ್ಸ್ ಮಾಡಿ ಮುಂದೆ ಸಾಗಿದರು. ಧಾರ್ಮಿಕ ಸೌಹಾರ್ದತೆಯ ಸಂದೇಶದೊಂದಿಗೆ ಹುಣಸೂರು ಹನುಮ ಜಯಂತಿ ಸಂಪನ್ನಗೊಂಡಿತು.

ಇದನ್ನೂ ಓದಿ | Student missing | 10ನೇ ತರಗತಿ ವಿದ್ಯಾರ್ಥಿ ನಿಗೂಢ ಕಣ್ಮರೆ: ಕೇಕ್‌, ಕೂಲ್‌ ಡ್ರಿಂಕ್ಸ್‌ ತಂದಿದ್ದನ್ನು ಪ್ರಶ್ನಿಸಿದ್ದ ಶಿಕ್ಷಕರು

Exit mobile version