Site icon Vistara News

Mantralaya | ಮಂತ್ರಾಲಯ ರಾಯರ ದರ್ಶನಕ್ಕೆ ಬಂದ ಭಕ್ತರಿಗೆ ವಿಶೇಷ ಅತಿಥಿಗಳ ಸ್ವಾಗತ!

ಮಂತ್ರಾಲಯ

ರಾಯಚೂರು: ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆಂದು ಮಂತ್ರಾಲಯಕ್ಕೆ ಆಗಿಮಿಸುವ ಭಕ್ತರು ಈ ವಿಶೇಷ ಅತಿಥಿಗಳ ಸ್ವಾಗತಕ್ಕೆ ಬೆಚ್ಚಿಬಿದಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ನದಿ ದಡಕ್ಕೆ ಬರುತ್ತಿರುವ ಭಕ್ತರನ್ನು ಹಾವುಗಳು ಬರಮಾಡಿಕೊಳ್ಳುತ್ತಿವೆ.

ಪುಣ್ಯ ಸ್ನಾನ ಮಾಡುತ್ತಿದ್ದ ಕಡೆಗಳಲ್ಲಿ ಹಾವುಗಳ‌ ಕಾಟ ಶುರುವಾಗಿದ್ದು, ಈ ಕಾರಣದಿಂದಾಗಿ ಮುನ್ನೆಚ್ಚರಿಕಾ ದೃಷ್ಟಿಯಿಂದ ನದಿ ದಡಕ್ಕೆ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ನದಿ ದಡಕ್ಕೆ ಬಂದವರನ್ನು ವಾಪಸ್‌ ಕಳಿಸುತ್ತಿದ್ದಾರೆ.

ತುಂಗಭದ್ರಾ ಅಣೆಕಟ್ಟಿನಿಂದ ನಿರಂತರವಾಗಿ ನೀರು ಬಿಡುತ್ತಿರುವುದರಿಂದ ನದಿ ತುಂಬಿ ಹರಿಯುತ್ತಿದೆ. ಈ ನದಿಯಲ್ಲಿದ್ದ ಹಾವುಗಳು ಈಗ ದಡ ಸೇರಿದ್ದು, ಮಂತ್ರಾಲಯದಲ್ಲಿ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ಸ್ಥಳೀಯರು, ಭಕ್ತರು ಆತಂಕಗೊಂಡಿದ್ದಾರೆ.

ನದಿ ದಡದಲ್ಲಿ ಹಾವುಗಳ ಕಾಟ

ಮಳೆ ಅಬ್ಬರಕ್ಕೆ ಬಿಕೋ ಎನ್ನುತಿದೆ ಮಂತ್ರಾಲಯ

ಮಂತ್ರಾಲಯದ ರಾಯರ ಮಠಕ್ಕೂ ಆರಿದ್ರಾ ಮಳೆ ಎಫೆಕ್ಟ್ ತಟ್ಟಿದ್ದು, ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಮಂತ್ರಾಲಯ ಸಮೀಪದ ಎಲೆಬಿಚ್ಚಾಲೆಯಲ್ಲಿ ರಾಯರ ಜಪದಕಟ್ಟೆ ಮುಳುಗಡೆಯಾಗಿದೆ. ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ಪ್ರವಾಹದ ಭೀತಿಯಿಂದ ಮಠಕ್ಕೆ ಬರಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.

ನಷ್ಟದಲ್ಲಿ ವ್ಯಾಪಾರಸ್ಥರು

ರಾಯರ ಮಠದ ಬೀದಿಗಳು ಜನರಿಲ್ಲದೇ ಬಣಗುಡುತ್ತಿದ್ದರೆ ಇತ್ತ ಹೋಟೆಲ್‌ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು ಖಾಲಿ ಖಾಲಿ ಹೊಡೆಯುತ್ತಿದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರು ನಷ್ಟದ ಲೆಕ್ಕ ಎಣಿಸುವಂತಾಗಿದೆ.

ಮೂಲ ವೃಂದಾವನಕ್ಕೆ ಧಕ್ಕೆಯಾಗಿಲ್ಲ

ರಾಘವೇಂದ್ರ ಸ್ವಾಮಿಗಳು ಜಪ ಮಾಡಿದ ಸ್ಥಳ ಮುಳುಗಡೆಯಾಗಿದೆ. ಆದರೆ ಮಂತ್ರಾಲಯ ಪಟ್ಟಣ ಹಾಗೂ ಮಂತ್ರಾಲಯದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ಯಾವುದೇ ಧಕ್ಕೆಯಾಗಿಲ್ಲವೆಂದು ಆಡಳಿತ ಮಂಡಳಿ ತಿಳಿಸಿದೆ. ಕೆಲವು ಕಡೆ ಮಂತ್ರಾಲಯ ಪಟ್ಟಣವು ನೀರಿನಲ್ಲಿ ಮುಳುಗಿದೆ ಎಂದು ಸುದ್ದಿ ಹರಿದಾಡುತ್ತಿದ್ದು, ಅದು ಸತ್ಯಕ್ಕೆ ದೂರವಾದ ವರದಿಯಾಗಿದೆ. ರಾಯರ ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ತುಂಗಾಭದ್ರಾ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ನದಿ ತುಂಬಿ ಹರಿದಿದೆ. ಆದರೆ ಅದು ನದಿ ದಂಡೆಯ ಮಿತಿಯೊಳಗೇ ಇದೆ ಎಂದು ಮಠವು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ| Rain News | ರಾಜ್ಯದಲ್ಲಿ ಮುಂದುವರಿದ ಧಾರಾಕಾರ ಮಳೆ; ಹಲವೆಡೆ ಪ್ರವಾಹ

Exit mobile version