ಉಡುಪಿ: ಇನ್ನು ಮುಂದೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾಧಾರಣೆ, ಜಯಂತಿ ಆಚರಣೆ ಸೇರಿದಂತೆ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ನಡೆಸುವಂತಿಲ್ಲ. ಇಂಥದ್ದೊಂದು ಆದೇಶವನ್ನು ಈಗ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಗೊಳಪಟ್ಟ ದೇವಾಲಯಗಳಲ್ಲಿ ಹಲವು ಆಚರಣೆಗೆ ತಡೆ ಬೀಳಲಿದೆ.
ಆಯಾ ದೇವಸ್ಥಾನಗಳಲ್ಲಿ ಕೆಲವು ಸಂಪ್ರದಾಯಕ್ಕೆ ತಕ್ಕಂತೆ ಮಾರ್ಪಾಡುಗಳನ್ನು, ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈ ಸಂಪ್ರದಾಯಗಳಿಗೆ ಈಗ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಇದು ಸಂಪ್ರದಾಯಸ್ಥ ಮಂದಿಯ ಕಣ್ಣು ಕೆಂಪಗಾಗಿಸಿದೆ.
ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದು ಸೇರಿದಂತೆ ಚಾಲ್ತಿಯಲ್ಲಿರುವ ಸಂಪ್ರದಾಯಗಳ ವಿರುದ್ಧವಾಗಿ ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಮುದ್ರಾಧಾರಣೆಗೆ ಸಂಬಂಧಪಟ್ಟಂತೆ ಇರುವ ಸೂಚನೆ ಹಿನ್ನೆಲೆಯಲ್ಲಿ ಈಗ ವೈಷ್ಣವ ಸಂಪ್ರದಾಯದ ಮಾಧ್ವರು ತೀವ್ರ ಆಕ್ರೋಶವನ್ನು ಹೊರಹಾಕುತ್ತಿದ್ದು, ಕೂಡಲೇ ಆದೇಶವನ್ನು ಹಿಂಪಡೆಯುಂತೆ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ | ಮುಜರಾಯಿ ದೇಗುಲದ ಅರ್ಚಕರಿಗೂ 65 ವರ್ಷಕ್ಕೆ ನಿವೃತ್ತಿ?
೨೦೨೨ರ ನವೆಂಬರ್ ೨ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ತೀರ್ಮಾನದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿರುವ ಧಾರ್ಮಿಕ ದತ್ತಿ ಇಲಾಖೆಯು, ಆಯಾ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ನಡೆಸುವಂತಿಲ್ಲ. ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು ತಪ್ಪು. ಹೀಗಾಗಿ ಚಾಲ್ತಿಯಲ್ಲಿರುವ ಸಂಪ್ರದಾಯಗಳ ವಿರುದ್ಧವಾಗಿ ಭಾವಚಿತ್ರ, ವಿಗ್ರಹಗಳನ್ನೂ ಅಳವಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಸೆಕ್ಷನ್ 58ರ ಅಡಿಯಲ್ಲಿ ವಿಧಿಸಲಾಗಿದ್ದ ಉಪಬಂಧಗಳ ಹೊರತಾಗಿ ಯಾವ ಹೊಸ ಪದ್ಧತಿ ಚಾಲ್ತಿಯಲ್ಲಿದ್ದರೂ ಅದನ್ನು ಆಚರಿಸುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಂಡಿದ್ದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ಆದೇಶದಲ್ಲಿ ಏನಿದೆ?
ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ಸೂಕ್ತ ಸಂಪ್ರದಾಯಗಳು, ಆಚರಣೆಗಳು ಮತ್ತು ಪದ್ಧತಿಗಳನ್ನು ಪಾಲಿಸಲು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಸೆಕ್ಷನ್ 58ರ ಅಡಿಯಲ್ಲಿ ಈ ಕೆಳಕಂಡಂತೆ ಉಪಬಂಧವನ್ನು ಕಲ್ಪಿಸಲಾಗಿದೆ.
“ಆಯುಕ್ತ ಮುಂತಾದವರು ಸೂಕ್ತ ಸಂಪ್ರದಾಯಗಳು, ಆಚರಣೆಗಳು ಮತ್ತು ಸಮ್ಮತಿಗಳನ್ನು ಪಾಲಿಸುವುದು:- ಈ ಅಧಿನಿಯಮದ ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸುತ್ತಿರುವ ಅಥವಾ ಪ್ರಕಾರ್ಯಗಳನ್ನು ನಿರ್ವಹಿಸುತ್ತಿರುವ ಆಯುಕ್ತರ ಉಪ-ಆಯುಕ್ತ ಮತ್ತು ಸಹಾಯಕ ಆಯುಕ್ತರು ಮತ್ತು ಇತರ ಪ್ರತಿಯೊಬ್ಬ ವ್ಯಕ್ತಿಯು ಯುವ ಅಧಿಸೂಚಿತ ಸಂಖ್ಯೆ ಅಥವಾ ಪೋಷಿತ ಸಂಖ್ಯೆಯ ಸಂಬಂಧದಲ್ಲಿ ಅಂಥ ಅಧಿಕಾರಗಳನ್ನು ಚಲಾಯಿಸಲಾಗುತ್ತಿದೆಯೋ ಅಂಥ ಸಂಖ್ಯೆಗೆ ಸೂಕ್ತವಾದ ಸಂಪ್ರದಾಯ ಆಚರಣೆ ಸಮಾರಂಭ ಮತ್ತು ಪದ್ಧತಿಗಳಲ್ಲಿ ಹಸ್ತಕ್ಷೇಪ ಮಾಡತಕ್ಕದ್ದಲ್ಲ ಮತ್ತು ಅವುಗಳನ್ನು ಪಾಲಿಸತಕ್ಕದ್ದು”
ಮೇಲ್ಕಂಡ ಉಪಬಂಧದ ಅನ್ವಯ ಆಯಾಯ ಅಧಿಸೂಚಿತ ಸಂಸ್ಥೆಗಳಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ, ಆಚರಣೆ ಸಮಾರಂಭ ಮತ್ತು ಪದ್ಧತಿಗಳನ್ನು ಆಯಾಯ ದೇವಾಲಯಗಳ ಆಗಮ ಶಾಸ್ತ್ರಕ್ಕೆ ಅನುಗುಣವಾಗಿ ಪಾಲಿಸಬೇಕಾಗಿರುತ್ತದೆ.
ಆದರೆ, ಇತ್ತೀಚಿನ ದಿನಗಳಲ್ಲಿ, ದೇವಾಲಯದಲ್ಲಿ ನಡೆದು ಬಂದಿರುವ ಪದ್ಧತಿಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸುವುದು, ನಾಮಫಲಕ, ಫೋಟೋ ಇತ್ಯಾದಿಗಳನ್ನು ಅಳವಡಿಸುತ್ತಿರುವ ಬಗ್ಗೆ, ಆಕ್ಷೇಪಗಳು/ದೂರುಗಳು ಬಂದಿರುತ್ತವೆ.
ದಿನಾಂಕ: 02.11.2022 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಈ ವಿಚಾರವು ಪ್ರಸ್ತಾಪವಾಗಿ ಆಯಾಯ ದೇವಾಲಯದಲ್ಲಿ ಆಚರಿಸಲಾಗುತ್ತಿರುವ ಹಾಗೂ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಆಚರಣೆ ನಡೆಸುವುದು, ಮುದ್ರಾಧಾರಣೆ ಮಾಡುತ್ತಿರುವುದು, ಜಯಂತಿಗಳನ್ನು ಆಚರಿಸುವುದು, ಭಾವಚಿತ್ರಗಳನ್ನು ಅಳವಡಿಸುತ್ತಿರುವುದಕ್ಕೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಆಯಾಯ ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಧಾರ್ಮಿಕ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾಗಿ ಧಾರ್ಮಿಕ ಸಮ್ಮತಿ, ಸಂಪ್ರದಾಯಗಳನ್ನು ಅನುಸರಿಸುವುದು, ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವುದು, ಮುದ್ರಾಧಾರಣೆ ಮಾಡುವುದು, ಜಯಂತಿಗಳನ್ನು ಆಚರಿಸುವುದನ್ನು ನಡೆಸದಂತೆ ಹಾಗೂ ಇದಕ್ಕೆ ವಿರುದ್ಧವಾಗಿ ಈಗಾಗಲೇ ನಡೆಸಲಾಗಿರುವ ಭಾವಚಿತ್ರ ಬೋರ್ಡ್‌ಗಳನ್ನು ತೆರವುಗೊಳಿಸಲು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ | ಬೆಂಗಳೂರು | ದೊಡ್ಡ ಗಣಪತಿ ದೇವಸ್ಥಾನದ ವಿವಾದಾತ್ಮಕ ಟೆಂಡರ್ ರದ್ದು