Site icon Vistara News

Jewel Trend | ಟ್ರೆಂಡಿಯಾಯ್ತು ಲಕ್ಷ್ಮಿ ವಿನ್ಯಾಸದ ಆಭರಣ

Jewel Trend, ನಟಿ ಹಾಗೂ ಮಾಡೆಲ್‌

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ನಾನಾ ವಿನ್ಯಾಸದ ಆಭರಣಗಳು ಜುವೆಲರಿ ಲೋಕಕ್ಕೆ ಕಾಲಿಟ್ಟಿದ್ದು, ಅವುಗಳಲ್ಲಿ ಲಕ್ಷ್ಮಿ ವಿನ್ಯಾಸದ ಆಭರಣಗಳು ಹೆಚ್ಚು ಟ್ರೆಂಡಿಯಾಗಿವೆ.

ಲಕ್ಷ್ಮಿಯ ನಾನಾ ರೂಪ

ಒಂದೇ ಎರಡೇ, ನಾನಾ ಡಿಸೈನ್‌ನಲ್ಲಿ ಲಕ್ಷ್ಮಿ ವಿನ್ಯಾಸದ ಆಭರಣಗಳು ಮೇಳೈಸುತ್ತಿವೆ. ನೆಕ್‌ಲೇಸ್, ಚೋಕರ್‌, ಲಾಂಗ್‌ ಹಾರ, ಬಳೆ, ಕಡಗ, ಕಿವಿಯೊಲೆ, ಜುಮಕಿ, ಬೈತಲೆ ಬೊಟ್ಟು, ಉಂಗುರ ಹೀಗೆ ಮಾನಿನಿಯರು ಧರಿಸುವಂತಹ ಬಹುತೇಕ ಜುವೆಲ್‌ಗಳಲ್ಲಿ ಇವು ಇಂದು ಸಾಮಾನ್ಯವಾಗಿವೆ. ಅಷ್ಟೇ ಏಕೆ? ಮುತ್ತು, ಹವಳ ಹಾಗೂ ರತ್ನದ ಹಾರದ ಪೆಂಡೆಂಟ್‌ಗಳಾಗಿ ಸ್ತ್ರೀಯರ ಮನಸೂರೆಗೊಂಡಿವೆ.

“ಲಕ್ಷ್ಮಿ ವಿನ್ಯಾಸದ ಆಭರಣಗಳು ಈ ಹಬ್ಬಕ್ಕೆ ಹೇಳಿ ಮಾಡಿಸಿದಂತಿವೆ. ನೋಡಲು ಆಕರ್ಷಕವಾಗಿ ಕಾಣುತ್ತವಲ್ಲದೇ ಭಕ್ತಿ-ಭಾವ ಮೂಡಿಸುತ್ತವೆ. ಇವನ್ನು ಮದುವೆ ಹಾಗೂ ಇತರೇ ಸಮಾರಂಭಗಳಿಗೂ ಧರಿಸಬಹುದಾಗಿರುವುದರಿಂದ ಇಷ್ಟ ಪಡುವವರು ಹೆಚ್ಚಾಗಿದ್ದಾರೆ. ಹಾಗಾಗಿ ಮಹಿಳೆಯರ ಜುವೆಲರಿ ಕಲೆಕ್ಷನ್‌ನಲ್ಲಿ ಒಂದಾದರೂ ಲಕ್ಷ್ಮಿಆಭರಣಗಳು ಇದ್ದೇ ಇರುತ್ತವೆ” ಎನ್ನುತ್ತಾರೆ ನಟಿ, ಮಾಡೆಲ್‌ ಸಾಕ್ಷಿ ಮೇಘನಾ.

ವೆರೈಟಿ ಡಿಸೈನ್‌ನಲ್ಲಿ ಲಕ್ಷ್ಮಿ ಸರ

ಲಕ್ಷ್ಮಿ ಸರಗಳಲ್ಲಿ ವಿವಿಧ ಬಗೆ ಹಾಗೂ ವಿನ್ಯಾಸಗಳು ಲಭ್ಯ. ಮೋಹನಮಾಲೆ, ಮುತ್ತಿನ ಸರ ಹಾಗೂ ಅವಲಕ್ಕಿ ಸರಕ್ಕೂ ಲಕ್ಷ್ಮಿ ಪೆಂಡೆಂಟ್‌ ಬಳಸುವುದು ಸಾಮಾನ್ಯವಾಗಿದೆ. ಅಷ್ಟಲಕ್ಷ್ಮಿಯ ಸರಗಳು ಈಗ ಹೆಚ್ಚು ಪಾಪುಲರ್‌ ಆಗಿವೆ. ಇವು ಲೈಟ್‌ವೇಟ್‌ನಲ್ಲಿ ದೊರಕುತ್ತಿರುವುದು ಎಲ್ಲಾ ವರ್ಗದ ಮಹಿಳೆಯರು ಕೊಳ್ಳಲು ಸಾಧ್ಯವಾಗಿದೆ ಎನ್ನುತ್ತಾರೆ ಜುವೆಲರಿ ಶಾಪ್‌ವೊಂದರ ಮಾರಾಟಗಾರರು. ಇದರೊಂದಿಗೆ ನೆಕ್‌ಲೇಸ್‌ ಮಾದರಿಯ ಲಕ್ಷ್ಮಿ ಚೋಕರ್‌ಗಳು ಯುವತಿಯರ ಮನಸೆಳೆದಿವೆ.

ಲಕ್ಷ್ಮಿಯ ಗ್ರ್ಯಾಂಡ್‌ ಕಿವಿಯೋಲೆಗಳು

ನವಿಲು, ಆನೆ, ಗಂಡಭೇರುಂಡ ಹೀಗೆ ಅನೇಕ ವಿನ್ಯಾಸದೊಂದಿಗೆ ಲಕ್ಷ್ಮಿ ಮಧ್ಯ ಭಾಗದಲ್ಲಿ ಇರುವಂತಹ ಕಿವಿಯೊಲೆಗಳು ಹಾಗೂ ಭಾರಿ ಗಾತ್ರದ ಜುಮಕಿಗಳು ಹೆಚ್ಚು ಟ್ರೆಂಡಿಯಾಗಿವೆ. ಹವಳ ಹಾಗೂ ನವರತ್ನಗಳಿರುವ ದೊಡ್ಡ ಓಲೆಗಳು ಹಿರಿಯರಿಗೆ ಪ್ರಿಯವಾಗಿವೆ. ಹೆಚ್ಚು ಬೇಡಿಕೆಯಲ್ಲಿದೆ.

ಡಾಬಿನ ಸೌಂದರ್ಯ ಹೆಚ್ಚಿಸಿದ ಅಷ್ಟಲಕ್ಷ್ಮಿ ವಿನ್ಯಾಸ

ಸೊಂಟಕ್ಕೆ ಹಾಕುವ ಡಾಬಿನಲ್ಲೂ ಲಕ್ಷ್ಮಿಯ ನಾನಾ ರೂಪ ಕಾಣಬಹುದು. ಗ್ರ್ಯಾಂಡ್‌ ಆಗಿ ಕಾಣುವ ಅಷ್ಟ ಲಕ್ಷ್ಮಿಯಿಂದಿಡಿದು ಸಿಂಪಲ್‌ ಆಗಿ ಕಾಣುವ ಲಕ್ಷ್ಮಿಯವರೆಗೂ ನಾನಾ ವಿನ್ಯಾಸ ಕಾಣಬಹುದು. ಇದೇ ರೀತಿ ಬಾಜುಬಂದ್‌ಗಳಲ್ಲೂ ಸಾಕಷ್ಟು ವಿನ್ಯಾಸ ಕಾಣಬಹುದು.

ಲಕ್ಷ್ಮಿ ವಿನ್ಯಾಸದ ಬಳೆ-ಕಡಗ

ಮುತ್ತು ರತ್ನಗಳನ್ನೊಳಗೊಂಡ ಲಕ್ಷ್ಮಿ ವಿನ್ಯಾಸದ ಕಡಗ ಹಾಗೂ ಬಳೆಗಳು ನಾನಾ ಡಿಸೈನ್‌ನಲ್ಲಿ ಟ್ರೆಂಡಿಯಾಗಿವೆ. ಬೈತಲೆಬೊಟ್ಟು ಕೂಡ ಲಭ್ಯ. ಅಷ್ಟೇಕೆ! ಇದೀಗ ಉಂಗುರಗಳು ಕಾಣ ಸಿಗುತ್ತಿವೆ ಎನ್ನುತ್ತಾರೆ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Wedding Season: ವೆಡ್ಡಿಂಗ್‌ ಆಭರಣಗಳಿಗೆ ಹೆಚ್ಚಿದ ಬೇಡಿಕೆ

Exit mobile version