Site icon Vistara News

Jyeshtha Amavasya 2023 : ರೈತನ ಮಿತ್ರ ಎತ್ತುಗಳನ್ನು ಪೂಜಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

mannettina amavasya Bullock idols made of mud

ಓಂ || ಋಷಭಂ ಮಾ ಸಮಾನಾನಾಂ ಸಪತ್ನಾನಾಂ ವಿಷಾ ಸಹಿಂ |
ಹಂತಾರಂ ಶತೃಣಾಂ ಕೃಧಿ ವಿರಾಜಂ ಗೋಪತಿಂ ಗವಾಂ||

ಜ್ಯೇಷ್ಠ ಮಾಸದ ಅಮಾವಾಸ್ಯೆಯನ್ನು (Jyeshtha Amavasya 2023) ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಕೆಲವೆಡೆ ಬಸವನ ಅಮಾವಾಸ್ಯೆ ಎಂದೂ ಕರೆಯಲ್ಪಡುತ್ತದೆ. ಇದು ರಾಜ್ಯದ, ಅದರಲ್ಲೂ ಉತ್ತರ ಕರ್ನಾಟಕದ ರೈತಾಪಿ ಜನರು ಆಚರಿಸುವ ವಿಶೇಷ ಹಬ್ಬವಾಗಿದೆ. ಕಾರ ಹುಣ್ಣಿಮೆಯ ನಂತರ ಬರುವ ಅಮಾವಾಸ್ಯೆಯ ದಿನ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವುದು ಈ ಹಬ್ಬದ ವಿಶೇಷ.

ಎತ್ತುಗಳು ಕೃಷಿಕರ ಆಪ್ತ ಮಿತ್ರ. ಎತ್ತು ಇರದಿದ್ದರೆ ಕೃಷಿಯೇ ಇಲ್ಲ. ಒಕ್ಕಲುತನಕೆ ಮೂಲಾಧಾರ ಈ ಬಸವಣ್ಣ. ಹೀಗಾಗಿ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಮೊದಲು ಇವುಗಳಿಗೆ ಪೂಜೆ-ಪುನಸ್ಕಾರ ನಡೆಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ‘ಎತ್ತು ಎತ್ತಲ್ಲ, ಹತ್ತು ದಿಕ್ಕಿಗೆ ಸಲವೋನೆ ಬಸವಣ್ಣ, ಬಿತ್ತಿದ ಬೆಳವಲಕ ಬೆಳಗ್ಯಾನೊ’ ಎಂದು ಜಾನಪದರು ಹಾಡುವ ಮೂಲಕ ಎತ್ತಿನ ಮಹತ್ವವನ್ನು ಎತ್ತಿ ಹೇಳಿದ್ದಾರೆ. ದಿನವಿಡೀ, ವರ್ಷವಿಡೀ ತಮ್ಮ ಜೊತೆಗೆ ದುಡಿದು ಎಲ್ಲರಿಗೂ ಅನ್ನನೀಡುವ ಬಸವಣ್ಣನನ್ನು ಗೌರವಿಸುವ ಹಬ್ಬ ಈ ಮಣ್ಣೆತ್ತಿನ ಅಮಾವಾಸ್ಯೆ. ಇದನ್ನು ಮೃತ್ತಿಕಾ ವೃಷಭ ಪೂಜೆ ಎಂದೂ ಕೆಲವರು ಕರೆಯುತ್ತಾರೆ.

ಮಣ್ಣು ಒಕ್ಕಲು ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ಹೀಗಾಗಿಯೇ ನಮ್ಮ ಹಬ್ಬಗಳ ಆಚರಣೆಯಲ್ಲಿ ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಹಬ್ಬಗಳು ಬರುತ್ತವೆ. ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಈ ಹಬ್ಬಗಳು ಹಂಚಿಹೋಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಈ ಮೂರು ಮಾಸಗಳಲ್ಲಿ ಪೂಜಿಸಲಾಗುತ್ತದೆ.

ಮಣ್ಣಿನ ಎತ್ತುಗಳಿಗೆ ಪೂಜೆ

ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಹೊಲಗಳಿಗೆ ಹೋಗಿ ಜಿಗುಟಿನಿಂದ ಕೂಡಿದ ಮಣ್ಣನ್ನು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಭೂತಾಯಿಯನ್ನು ಉಳುವ ಸಂಕೇತವಾದ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಇಲ್ಲವೇ ಊರ ಕುಂಬಾರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಜೋಳ ಕಾಳು, ಹಣಕೊಟ್ಟು ಖರೀದಿಸುವ ಪದ್ಧತಿ ಈ ಹಿಂದೆ ಇತ್ತು. ಈಗ ದುಡ್ಡು ಕೊಟ್ಟು ಖರೀದಿಸಲಾಗುತ್ತದೆ. ಮಣ್ಣಿನ ಗಣಪತಿ ಮಾಡಿದಂತೆ ಎತ್ತುಗಳನ್ನು ಮಾಡಿ ಮಾರಾಟ ಮಾಡುವ ವ್ಯವಸ್ಥೆ ಇದೆ. ಎತ್ತುಗಳನ್ನು ಸಾಕದೇ ಇರುವವರೂ ಈ ಹಬ್ಬ ಆಚರಿಸುತ್ತಾರೆ, ಮಣ್ಣಿನ ಎತ್ತುಗಳನ್ನು ತಂದು ಪೂಜಿಸುತ್ತಾರೆ.

ಮಾರಾಟ ಮಾಡುವವರು ಮಣ್ಣಿನ ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ಎತ್ತುಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಬಣ್ಣಗಳ ಬ್ಯಾಗಡಿ ಚೂರು, ಬಣ್ಣದಲ್ಲಿ ತೋಯಿಸಿದ ಜೋಳ, ಕುಸುಬಿ ಕಾಳುಗಳಿಂದ ಎತ್ತುಗಳಿಗೆ ಕೊಂಬಣಸು, ಇಣಿಗವಚ, ಜೂಲು, ತೋಡೆ, ಗಂಟೆ ಸರಗಳಿಂದ ಸಿಂಗರಿಸುತ್ತಾರೆ. ಹೀಗೆ ಸಿಂಗರಿಸಿದ ಮಣ್ಣಿನ ಜೋಡೆತ್ತುಗಳನ್ನು ನೋಡುವುದೇ ಒಂದು ಸೊಗಸು.

ನಂತರ ದೇವರ ಕೋಣೆಯಲ್ಲಿ ಈ ಮಣ್ಣಿನ ಎತ್ತುಗಳನ್ನಿಟ್ಟು, ಅಲಂಕಾರ ಮಾಡಿ, ಪೂಜಿಸಲಾಗುತ್ತದೆ. ಹೋಳಿಗೆ, ಕಡುಬಿನ ಅಡುಗೆ ಸಿದ್ದಪಡಿಸಿ ನೈವೇದ್ಯ ಮಾಡುತ್ತಾರೆ. ಮನೆಯ ದನಕರುಗಳನ್ನೂ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ. ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಎಡೆ ಹಿಡಿದು ಪೂಜೆ ಮಾಡುತ್ತಾರೆ. ಸಕಲ ಜೀವ ರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ.

ಮನೆ ಮನೆಗೆ ತೆರಳಿ ಆರತಿ

ಕೆಲವು ಕಡೆ ಹಬ್ಬದ ದಿನ ಹೊಸ ಬಟ್ಟೆಗಳನ್ನು ತೊಟ್ಟು ಊರಲ್ಲಿ ದೇವರುಗಳಿಗೆ ಕಾಯಿ, ಕರ್ಪೂರದೊಂದಿಗೆ ಹೋಗಿ ಎಡೆಹಿಡಿದು ಬಂದು ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಆರತಿ ಹಿಡಿದ ಹೆಣ್ಣುಮಕ್ಕಳು ಮನೆ ಮನೆಗೆ ತೆರಳಿ ಪೂಜಿತ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಉತ್ತರ ಕರ್ನಾಟಕದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆಯನ್ನು ನಾವು ಕಾಣಬಹುದು. ಕೆಲವು ಕಡೆ ಹಬ್ಬದ ದಿನದಂದೇ ಮಣ್ಣೆತ್ತುಗಳ ವಿಸರ್ಜನೆ ಮಾಡುತ್ತಾರೆ.

ಯಾವಾಗಿನಿಂದ ಈ ಹಬ್ಬ ಆಚರಣೆ?
‘ಮಣ್ಣೆತ್ತು’ ಎಂಬ ಪದ ಪ್ರಯೋಗವು ಕಾಣಿಸಿಕೊಳ್ಳುವುದು ಮೊತ್ತ ಮೊದಲು ಹನ್ನೆರಡನೆಯ ಶತಮಾನದ ಶರಣ ವಚನಗಳಲ್ಲಿ. ‘‘ಸದಾಚಾರದ ಕಂಡು ಲಾಂಛನ ಪಕ್ಷವ ನೋಡದವರಿಗೆ ಇಹದೊಳು ಪರದೊಳು ಗತಿಯಿಲ್ಲ, ಕಾಣಿರೋ. ಮಣ್ಣೆತ್ತಾದಡೇನು, ತನ್ನೆತ್ತು ಗೆಲಬೇಕೆಂಬುದಕ್ಕೊಲಿವ ನಮ್ಮ ಕೂಡಲಸಂಗಯ್ಯ.’’ ಬಸವಣ್ಣನವರ ಈ ವಚನದಲ್ಲಿ ಬರುವ ’ಮಣ್ಣೆತ್ತು’ ಎಂಬ ಪದವು ಮಣ್ಣೆತ್ತಿನ ಪೂಜೆಗೆ ಸಂಬಂಧಿಸಿದುದಲ್ಲವಾದರೂ ಅವರ ಜೀವಿತ ಕಾಲದಲ್ಲಿ ಮಣ್ಣಿನಿಂದ ಎತ್ತಿನ ಮೂರ್ತಿಯನ್ನು ಸಿದ್ಧಗೊಳಿಸುವ ಪದ್ಧತಿ ಇತ್ತೆಂಬುದಕ್ಕೆ ದೊರೆಯುವ ಪುರಾವೆಯಾಗಿದೆ. ವಚನಕಾರ ಏಲೇಶ್ವರ ಕೇತಯ್ಯನವರ ವಚನದಲ್ಲಿಯೂ ಮಣ್ಣೆತ್ತಿನ ಉಲ್ಲೇಖವಿದೆ. ಹೀಗಾಗಿ 12 ಶತಮಾನಕ್ಕಿಂತಲೂ ಮೊದಲು ಈ ಆಚರಣೆ ಇದ್ದಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಕೆಲವು ಕಡೆ ಮರುದಿನ ಮಕ್ಕಳು ಎತ್ತುಗಳನ್ನು ತೆಗೆದುಕೊಂಡು ಅದರಲ್ಲಿ ಒಂದು ಎತ್ತಿನ ಕಾಲು ಮುರಿದು ತಟ್ಟೆಯಲ್ಲಿಟ್ಟು ಕೊಂಡು ಮನೆ ಮನೆಗೆ ತೆರಳಿ ಎಂಟತ್ತಿನ್ಯಾಗ ಒಂದ ʼಕುಂಟೆತ್ತ ಬಂದೈತಿ ಜ್ವಾಳಾ ನೀಡಿರಿʼ ಎಂದು ತಿರುಗುತ್ತಾರೆ. ಮನೆಯವರು ಜೋಳ, ಗೋಧಿ, ಸಜ್ಜೆ , ಅಕ್ಕಿ , ಹಣ ನೀಡಿ ಕಳಿಸುತ್ತಾರೆ. ಸಂಗ್ರಹಿಸಿದ ದವಸ ಧಾನ್ಯಗಳನ್ನು ಊರ ಅಂಗಡಿಗೆ ಹಾಕಿ ಪಂಚ ಪಳಾರ, ಊದಬತ್ತಿ, ಕುಂಕುಮ, ವಿಭೂತಿ, ತೆಂಗಿನಕಾಯಿ,ಬೆಲ್ಲ, ಚುರು ಮುರಿ ಖರೀದಿಸುತ್ತಾರೆ. ಎತ್ತುಗಳನ್ನು ತೆಗೆದುಕೊಂಡು ಹೊಳೆ, ಕೆರೆ, ಹಳ್ಳದ ದಂಡೆಗೆ ಹೋಗಿ ಅಲ್ಲಿ ಎಲ್ಲ ಮಣ್ಣೆತ್ತುಗಳಿಗೆ ಮುಖ ತೊಳೆದು ವಿಭೂತಿ, ಕುಂಕುಮ ಹಚ್ಚಿ ಊದುಬತ್ತಿ ಬೆಳಗಿ ಪಂಚ ಪಳಾರು ಹಾಕಿ, ಕಾಯಿ ಒಡೆದು ಕಾಲು ಮುಗಿದು ಊರ ಸಮೃದ್ಧಿಗೆ ಬೇಡಿಕೊಂಡು ಎತ್ತುಗಳನ್ನು ಹೊಳೆಗೆ ಬಿಡುತ್ತಾರೆ. ನಂತರ ದಾರಿಯಲ್ಲಿ ಸಿಕ್ಕವರಿಗೆ ಪಳಾರು ಹಂಚುತ್ತಾರೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭೂಮಿತಾಯಿಯ ಮಕ್ಕಳಾದ ರೈತನ ಮತ್ತು ಉಳುವ ಎತ್ತುಗಳ ನಡವನ ವಿಶೇಷ ಬಾಂಧವ್ಯವನ್ನು ಈ ಹಬ್ಬ ಎತ್ತಿ ಹಿಡಿಯುತ್ತದೆ. ಈ ಹಬ್ಬದ ಸಂದರ್ಭದಲ್ಲಿ ನಿಜ ಎತ್ತುಗಳಿಗೂ ವಿಶೇಷ ಪೂಜೆ ನಡೆಯುತ್ತದೆ. ನಿಜ ಎತ್ತುಗಳು ಭೂಮಿಯನ್ನು ಹಸನು ಮಾಡಿ ಬೆಳೆ ಬೆಳೆಯಲು ಕಾರಣವಾದರೆ, ಮಣ್ಣೆತ್ತುಗಳು ಆ ಬೆಳೆಗಳಿಗೆ ಮಳೆ ತರಿಸಿ, ನೀರು ಒದಗಿಸುತ್ತವೆಂಬ ನಂಬಿಕೆ ರೈತಾಪಿ ಜನರದ್ದು.

ಇದನ್ನೂ ಓದಿ : Prerane : ಮೋಹ-ಮಮಕಾರ; ಏನಿದರ ನಿಜ ಸಾರ?

Exit mobile version