ರಾಯಚೂರು: ಮಂತ್ರಾಲಯದಲ್ಲಿ ೫೦ ಕೊಠಡಿಗಳ ಯಾತ್ರಿ ನಿವಾಸ (ಕರ್ನಾಟಕ ಛತ್ರ)ವನ್ನು ಮಂಗಳವಾರ (ಆ.೯) ಲೋಕಾರ್ಪಣೆಗೊಳಿಸಿದ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಅಯೋಧ್ಯೆಯಲ್ಲಿ “ಕರ್ನಾಟಕ ಯಾತ್ರಿ ನಿವಾಸ” ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವಂತೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಬಂಧ ಉತ್ತರಪ್ರದೇಶ ರಾಜ್ಯದೊಂದಿಗೆ ಪತ್ರ ವ್ಯವಹಾರ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ ಹೊರ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೂ ನಮ್ಮ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಲು ಎಲ್ಲ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ರಾಜ್ಯದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಮಹತ್ವ ನೀಡುತ್ತಿದೆ. ಕಳೆದ 10 ವರ್ಷಗಳಲ್ಲೇ ಅತಿ ಹೆಚ್ಚು ಅನುದಾನವನ್ನು ನಮ್ಮ ಇಲಾಖೆಗೆ ನೀಡಲಾಗಿದೆ. ರಾಜ್ಯದಿಂದ ಹೊರರಾಜ್ಯಕ್ಕೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೊರರಾಜ್ಯಗಳಲ್ಲೂ ಕರ್ನಾಟಕ ಛತ್ರಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಇದನ್ನೂ ಓದಿ | Mantralaya | ಮಂತ್ರಾಲಯ ರಾಯರ ದರ್ಶನಕ್ಕೆ ಬಂದ ಭಕ್ತರಿಗೆ ವಿಶೇಷ ಅತಿಥಿಗಳ ಸ್ವಾಗತ!
ಕೆಲವು ದಿನಗಳ ಹಿಂದೆ ಕೇರಳ ರಾಜ್ಯದ ಶಬರಿಮಲೆಯಲ್ಲಿ ಕರ್ನಾಟಕ ಛತ್ರ ನಿರ್ಮಾಣಕ್ಕಾಗಿ 5 ಕೋಟಿ ರೂ., ಮಹಾರಾಷ್ಟ್ರ ರಾಜ್ಯದ ಪಂಡರಾಪುರದಲ್ಲಿ ಛತ್ರಕ್ಕಾಗಿ 3 ಕೋಟಿ ರೂ., ಮಂತ್ರಾಲಯದಲ್ಲಿ ಛತ್ರಗಳ ಅಭಿವೃದ್ದಿಗಾಗಿ 4 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಹಿಂದೆ ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 232 ಕೋಟಿ ರೂಪಾಯಿಗಳ ಬೃಹತ್ ಅನುದಾನ ನೀಡಲಾಗಿದ್ದು, ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.
50 ಕೊಠಡಿಗಳ ನೂತನ ಕಟ್ಟಡ:
4 ಕೋಟಿ ರೂಪಾಯಿಗಳ ಅನುದಾನದಲ್ಲಿ 0.5 ಗುಂಟೆಯಲ್ಲಿ ಮಂತ್ರಾಲಯದಲ್ಲಿ 50 ಕೊಠಡಿಗಳ ಕರ್ನಾಟಕ ಛತ್ರ ನಿರ್ಮಾಣವಾಗಿದೆ. 40 ಡಿಲಕ್ಸ್ ಹಾಗೂ 10 ವಿಐಪಿ ಕೊಠಡಿಗಳಿವೆ. ಮುಜರಾಯಿ ಇಲಾಖೆಯ ವತಿಯಿಂದ ನೀಡಲಾಗಿರುವ 54 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಪಿಠೋಪಕರಣಗಳನ್ನು ಒದಗಿಸಲಾಗಿದೆ. ಛತ್ರಗಳ ಅಭಿವೃದ್ಧಿಗೆ ಜುಲೈ 23, 2022 ರಂದು 4 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನ ಒದಗಿಸಲಾಗಿದ್ದು, ಸದ್ಯದಲ್ಲೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ಮಂತ್ರಾಲಯ ಕರ್ನಾಟಕ ಛತ್ರದ ವ್ಯವಸ್ಥಾಪಕರಾದ ತ್ರಿವೇಣಿ ಉಪಸ್ಥಿತರಿದ್ದರು.
ಇದನ್ನೂ ಓದಿ | ಮಂತ್ರಾಲಯ: ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಶ್ರೀಮಠ