ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾದ ಕಡಿಮೆ ವೆಚ್ಚದಲ್ಲಿ ಪುಣ್ಯ ಕ್ಷೇತ್ರಗಳ ದರ್ಶನ (Holy places visit) ಮಾಡಲು ಅವಕಾಶ ನೀಡುವ ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ (Karnataka Bharat gourav Kashi Darshan) ಯೋಜನೆ ಕಾಂಗ್ರೆಸ್ ಸರ್ಕಾರದ (Congress Government) ಅವಧಿಯಲ್ಲೂ ಮುಂದುವರಿಯಲಿದೆ. ಈ ಯೋಜನೆಯಲ್ಲಿ ಈಗಾಗಲೇ ಮೂರು ಟ್ರಿಪ್‌ಗಳನ್ನು ಮುಗಿಸಿರುವ ಈ ಯೋಜನೆಯ ನಾಲ್ಕನೇ ಟ್ರಿಪ್ ಜುಲೈ 29ರಂದು (Kashi Darshan) ಆರಂಭವಾಗಲಿದೆ.
- 2022-23ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಪ್ಯಾಕೇಜ್ ರೂಪಿಸಲಾಗಿತ್ತು.
- “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯನ್ನು IRCTC ಮತ್ತು ಭಾರತೀಯ ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ ಕೈಗೊಳ್ಳಲಾಗಿದೆ.
- ಈ ಯೋಜನೆಯಡಿ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ತಲಾ ರೂ. 20,000/-ಗಳಂತೆ ಪ್ಯಾಕೇಜ್ ರೂಪಿಸಿದ್ದು, ಈ ಮೊತ್ತದಲ್ಲಿ ತಲಾ ರೂ. 5,000/-ಗಳನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಿ ಉಳಿದ ಮೊತ್ತ ರೂ. 15,000/-ಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗಿರುತ್ತದೆ.
- ಈ ವಿಶೇಷ ರೈಲಿನಲ್ಲಿ ತೆರಳುವ ಯಾತ್ರಾರ್ಥಿಗಳಿಗೆ ಉಪಹಾರ, ಊಟ, ತಂಗುವಿಕೆ, ಸ್ಥಳೀಯ ಸಾರಿಗೆ ಮತ್ತು ಸ್ಥಳೀಯ ವೀಕ್ಷಣೆ ಒಳಗೊಂಡಿದ್ದು, ಇದು ಒಟ್ಟು 07 ದಿನಗಳ ಪ್ರವಾಸವಾಗಿರುತ್ತದೆ.
- ಈ ಯೋಜನೆಯಡಿ ಈ ವರೆವಿಗೆ ಒಟ್ಟು 03 ಟ್ರಿಪ್‌ಗಳನ್ನು ಪೂರೈಸಿದ್ದು, ಸದರಿ ವಿಶೇಷ ರೈಲಿನಲ್ಲಿ ಒಟ್ಟು 1644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದಾರೆ.
- ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್‌ದರ ರೂ. 20,000/-ಗಳ ಪೈಕಿ ಸರ್ಕಾರದಿಂದ ತಲಾ ರೂ. 5,000/-ಗಳಂತೆ 82.20 ಲಕ್ಷಗಳ ಸಹಾಯಧನವನ್ನು ವಿತರಿಸಲಾಗಿದೆ.
ಹೊರಡಲು ರೆಡಿಯಾಗಿದೆ ಮುಂದಿನ ಟ್ರಿಪ್
ಈಗ ನಾಲ್ಕನೇ ಟ್ರಿಪ್ಪಿನ ವಿಶೇಷ ರೈಲು ದಿನಾಂಕ: 29.07.2023ರಂದು ಬೆಂಗಳೂರಿನಿಂದ ಹೊರಡಲಿದ್ದು, ಸದರಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ಅಥವಾ ಐ.ಆರ್.ಸಿ.ಟಿ.ಸಿ (IRCTC) ಪೋರ್ಟಲ್ ಮೂಲಕ ತಮ್ಮ ಟಿಕೇಟ್ ಅನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಈ ಬಾರಿ ಇನ್ನಷ್ಟು ವಿಶೇಷ ವ್ಯವಸ್ಥೆಗಳು
ಈಗ ಹೊಸದಾಗಿ ಸುಸಜ್ಜಿತ LHB ಕೋಚ್‌ಗಳನ್ನು ಅಳವಡಿಸಲಾಗಿದ್ದು, ಇದು ಸುಸಜ್ಜಿತವಾದ ಸ್ಥಳದಲ್ಲಿಯೇ ಅಡುಗೆ ತಯಾರು ಮಾಡುವ ಅಡುಗೆ ಮನೆ (PANTRY CAR) ಒಳಗೊಂಡಿರುತ್ತದೆ ಹಾಗೂ ಯಾತ್ರಾರ್ಥಿಗಳ ಹಿತ ದೃಷ್ಟಿಯಿಂದ ಇಬ್ಬರು ವೈದ್ಯರು ಸಹ ಪ್ರಯಾಣಿಸುವರು. (https://www.irctctourism.com) ಈ ಸೌಲಭ್ಯವನ್ನು ರಾಜ್ಯದ ಎಲ್ಲಾ ಭಕ್ತರು ಸದುಪಯೋಗ ಪಡಿಸಿಕೊಂಡು, ಶ್ರೀ ಕಾಶಿ ವಿಶ್ವನಾಥ ಸ್ವಾಮಿಗಳ ದರ್ಶನವನ್ನು ಪಡೆಯಬಹುದು ಎಂದು ರಾಮಲಿಂಗಾ ರೆಡ್ಡಿ ಅವರ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Free Bus Service : ಫ್ರೀ ಬಸ್ಸಲ್ಲಿ ಬಂದ ಮಹಿಳೆಯರಿಂದ ಧರ್ಮಸ್ಥಳದಲ್ಲಿ ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ!