ಚಿಕ್ಕಮಗಳೂರು: ಭಾರತ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಗಡಿಯಲ್ಲಿರುವ ಕುಪ್ವಾರ ಜಿಲ್ಲೆಗೆ ಸೇರಿದ, ಕಿಶನ್ ಗಂಗಾ ನದಿ ತೀರದಲ್ಲಿರುವ ತೀತ್ವಾಲ್ ಎಂಬ ಚಿಕ್ಕ ಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಶಾರದಾದೇವಿಯ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲು ಶೃಂಗೇರಿಯಿಂದ ಕಾಶ್ಮೀರಕ್ಕೆ “ಕಾಶ್ಮೀರ ಪುರವಾಸಿನಿ ಶಾರದಾಂಬೆ”ಯ ನೂತನ ವಿಗ್ರಹವು (Sharada Devi Idol) ಮಂಗಳವಾರ (ಜ.೨೪) ಹೊರಟಿದೆ.
ವಿದ್ಯಾಧಿದೇವತೆ ಶ್ರೀ ಶಾರದಾ ದೇವಿಯ ವಾಸಸ್ಥಾನ ಕಾಶ್ಮೀರ. ʼನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ|ʼ ಎಂದೇ ಆಕೆಯನ್ನು ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತೀತ್ವಾಲ್ (ಶ್ರೀನಗರದಿಂದ 168 ಕಿ.ಮೀ. ದೂರದಲ್ಲಿದೆ) ಈ ದೇಗುಲ ನಿರ್ಮಾಣವಾಗುತ್ತಿದೆ. ಇದು ಸದ್ಯ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮೂಲ ಶ್ರೀ ಶಾರದಾ ಸರ್ವಜ್ಞ ಪೀಠಕ್ಕೆ ಹತ್ತಿರದಲ್ಲಿದೆ. ಹಿಂದೆ ಇಲ್ಲಿಂದಲೇ ಶ್ರೀ ಶಾರದಾ ಸರ್ವಜ್ಞ ಪೀಠಕ್ಕೆ ಪ್ರತಿ ವರ್ಷ ʼಚಾರಿ ಮುಬಾರಕ್ʼ ಎಂಬ ಯಾತ್ರೆ ಕೈಗೊಳ್ಳಲಾಗುತ್ತಿತ್ತು. ಹೀಗಾಗಿ ಈ ಜಾಗ ಐತಿಹಾಸಿಕವಾಗಿಯೂ ಗುರುತಿಸಲ್ಪಟ್ಟಿದೆ. ಈಗ ಇಲ್ಲಿ ಅಲ್ಲಿನ ಜನತೆಯ ಬೇಡಿಕೆ ಮೇರೆಗೆ ಶಾರದಾ ದೇವಿ ದೇಗುಲ ನಿರ್ಮಾಣವಾಗುತ್ತಿದ್ದು, ಶೃಂಗೇರಿಯಿಂದ ತಾಯಿ ಶಾರದೆಯ ವಿಗ್ರಹ ರವಾನೆಯಾಗಿದೆ. ಸುಮಾರು 4000 ಕಿ.ಮೀ.ವರೆಗೆ ಈ ವಿಗ್ರಹವನ್ನು ಹೊತ್ತೊಯ್ಯಲಾಗುತ್ತಿದೆ.
ಮಾರ್ಚ್ ೧೬ಕ್ಕೆ ತಲುಪಲಿರುವ ವಿಗ್ರಹ
ಶೃಂಗೇರಿಯಿಂದ ಮಂಗಳವಾರ (ಜ.೨೪) ಹೊರಟ ವಿಗ್ರಹವು ಮಾರ್ಚ್ 16ರಂದು ಕಾಶ್ಮೀರದ ತೀತ್ವಾಲ್ ತಲುಪಲಿದೆ. ಮಾರ್ಚ್ 24ರಂದು ದೇವಸ್ಥಾನದಲ್ಲಿ ಪ್ರತಿಷ್ಠಾಪನೆಯಾಗಲಿದೆ. ಈ ವಿಗ್ರಹಕ್ಕೆ ಶೃಂಗೇರಿಯಲ್ಲಿ ವಿಶೇಷ ಪೂಜೆ, ಕೈಂಕರ್ಯಗಳನ್ನು ನೆರವೇರಿಸಲಾಗಿದ್ದು, ಬಳಿಕ ವಿಗ್ರಹವನ್ನು ರವಾನೆ ಮಾಡಲಾಗಿದೆ.
ದೇಗುಲ ನಿರ್ಮಾಣಕ್ಕೆ ಕರ್ನಾಟಕದ ಕಾರ್ಮಿಕರು
ಈ ದೇಗುಲ ನಿರ್ಮಿಸುತ್ತಿರುವವರು ಕರ್ನಾಟಕದ ಕಾರ್ಮಿಕರು ಎಂಬುದು ಮತ್ತೊಂದು ವಿಶೇಷ. ಕರ್ನಾಟಕದಿಂದ ಸಾಗಿಸಲಾಗಿರುವ ಗ್ರಾನೈಟ್ ಕಲ್ಲುಗಳನ್ನು ಬಳಸಿಯೇ ಈ ದೇಗುಲದ ಗರ್ಭಗುಡಿ ನಿರ್ಮಿಸಲಾಗುತ್ತಿದೆ. ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಶಾರದಾಂಬೆಯ ವಿಗ್ರಹವನ್ನು ಶೃಂಗೇರಿಯ ಶ್ರೀ ಶಾರದಾ ಪೀಠವೇ ಪಂಚಲೋಹದ ಈ ವಿಗ್ರಹವನ್ನು ಸಿದ್ಧಪಡಿಸಿದೆ. ಈ ವಿಗ್ರಹವು ಶೃಂಗೇರಿಯ ಶಾರದಾಂಬೆಯ ವಿಗ್ರಹವನ್ನೇ ಹೋಲಲಿದೆ.
ದೇಗುಲದ ನೀಲಿ ನಕ್ಷೆ ಮತ್ತು ಮಾದರಿಯನ್ನು ಶೃಂಗೇರಿಯ ಶ್ರೀಗಳೇ ಅಂತಿಮಗೊಳಿಸಿದ್ದಾರೆ. ಅವರ ಮಾರ್ಗದರ್ಶನ ಪಡೆದೇ ಈ ದೇಗುಲವನ್ನು ನಿರ್ಮಿಸಲಾಗುತ್ತಿದೆ. ಕಳೆದ ೨೦೨೨ರ ಡಿಸೆಂಬರ್‌ನಲ್ಲಿ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ.
ಮುಸ್ಲಿಮರ ಜಾಗದಲ್ಲಿ ನಿರ್ಮಾಣ
ಈ ದೇಗುಲ ನಿರ್ಮಾಣಕ್ಕೆ ಸ್ಥಳೀಯ ಮುಸ್ಲಿಮರು ಜಾಗ ನೀಡಿದ್ದು, ನಿರ್ಮಾಣ ಕಾರ್ಯದಲ್ಲಿ ಅವರೂ ಭಾಗಿಯಾಗುತ್ತಿದ್ದಾರೆ. ಶಾರದಾ ದೇಗುಲದ ಜತೆಗೆ ಈ ಹಿಂದೆ ಇದ್ದ ಗುರುದ್ವಾರ ಮತ್ತು ಮಸೀದಿಯನ್ನೂ ನಿರ್ಮಿಸಲು ಉದ್ದೇಶಿಸಲಾಗಿದೆ. ಕಾಶ್ಮೀರದಲ್ಲಿದ್ದ ಸೌಹಾರ್ದತೆಯ ಬಗ್ಗೆ ಇಲ್ಲಿಂದಲೇ ನಾವು ಜಗತ್ತಿಗೆ ಸಂದೇಶ ರವಾನಿಸಲಿದ್ದೇವೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೇಗಿರಲಿದೆ ದೇಗುಲ?
ಈ ಹಿಂದೆ ಇದ್ದ ಶ್ರೀ ಶಾರದಾ ಸರ್ವಜ್ಞ ಪೀಠದ ಮಾದರಿಲ್ಲಿಯೇ ಈ ದೇಗುಲವನ್ನು ನಿರ್ಮಿಸಲಾಗುತ್ತಿದ್ದು, ದೇಗುಲಕ್ಕೆ ನಾಲ್ಕು ದಿಕ್ಕುಗಳಲ್ಲಿಯೂ ಬಾಗಿಲುಗಳಿರಲಿವೆ. ವಾಸ್ತು ಶಿಲ್ಪದ ವೈಭವದೊಂದಿಗೆ ಕಂಗೊಳಿಸುವಂತೆ ದೇಗುಲ ನಿರ್ಮಿಸಲಾಗುತ್ತಿದೆ.