ಮಂಗಳೂರು: ಕೊರಗಜ್ಜ ತುಳುನಾಡಿನ ಕಾರಣಿಕ ದೈವವಾಗಿದ್ದು, ಹಲವಾರು ನಿದರ್ಶನಗಳಲ್ಲಿ ಕೊರಗಜ್ಜನ ಪವಾಡ ಮತ್ತು ಶಕ್ತಿ ಸಾಬೀತಾಗಿದೆ ಎಂಬುದು ಭಕ್ತರ ನಂಬಿಕೆ. ಇದೀಗ ಭಾರತ ಮಾತ್ರವಲ್ಲ ಉಕ್ರೇನ್ ಮೂಲದ ದಂಪತಿಯ ಬಾಳಲ್ಲೂ ಕೊರಗಜ್ಜ ಪವಾಡವನ್ನು ( ಕೊರಗಜ್ಜನ ಪವಾಡ ) ಮೆರೆದಿದ್ದಾರೆ. ಮಗನ ಅನಾರೋಗ್ಯ ಹಿನ್ನೆಲೆಯಲ್ಲಿ ಹರಕೆ ಹೇಳಿಕೊಂಡಿದ್ದ ದಂಪತಿಯು ಮಗ ಗುಣಮುಖನಾದ ಹಿನ್ನೆಲೆಯಲ್ಲಿ ಬಂಟ್ವಾಳದ ಕುಮ್ಡೇಲುವಿಗೆ ಬಂದು ಅದನ್ನು ತೀರಿಸಿದ್ದಾರೆ.
ತನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಕ್ಷಿಪ್ರ ಫಲಿತಾಂಶ ಪರಿಹಾರವನ್ನು ಒದಗಿಸುವ ಮೂಲಕ ಕಾರಣಿಕ ಶಕ್ತಿಯನ್ನು ಮೆರೆಯುತ್ತಿರುವ ಕೊರಗಜ್ಜನ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ಸಿಕ್ಕಿವೆ. ಇದೀಗ ಮಗನ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರಗಜ್ಜನಿಗೆ ಹರಕೆ ಹೇಳಿದ ವಿದೇಶಿ ಕುಟುಂಬದ ಸಂಕಷ್ಟವನ್ನು ಪರಿಹರಿಸಿ ಕೊರಗಜ್ಜ ಪವಾಡ ಮೆರೆದಿದ್ದಾರೆ. ಇದರಿಂದ ಸಂತಸಗೊಂಡ ಉಕ್ರೇನ್ ದಂಪತಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿ ಹರಕೆಯನ್ನೂ ತೀರಿಸಿದ್ದಾರೆ.
ಆಂಡ್ರ್ಯೋ ಹಾಗೂ ಅವರ ಪತ್ನಿ ಎಲೆನಾ ಉಕ್ರೇನ್ ಪ್ರಜೆಗಳಾಗಿದ್ದಾರೆ. ಅವರಿಗೆ ಮ್ಯಾಕ್ಸಿಂ ಎಂಬ 6 ವರ್ಷದ ಪುತ್ರನಿದ್ದು, ಈತ ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ. ಹತ್ತಾರು ಕಡೆ ಚಿಕಿತ್ಸೆ ಮಾಡಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಮಗನ ಅನಾರೋಗ್ಯದ ಹಿನ್ನೆಲೆಯಲ್ಲಿ 3 ತಿಂಗಳ ಹಿಂದೆ ಉಕ್ರೇನ್‌ನಿಂದ ಭಾರತ ಪ್ರವಾಸ ಕೈಗೊಂಡ ಕುಟುಂಬವು ನಾಡಿ ನೋಡಿ ಔಷಧಿ ಕೊಡುವ ಮಂಗಳೂರಿನ ಭಕ್ತಿ ಭೂಷಣ್ ದಾಸ್ ಅವರನ್ನು ಭೇಟಿ ಮಾಡಿತ್ತು.
ಇದನ್ನೂ ಓದಿ | ಬೀಡಾ, ಬೀಡಿ, ಶೇಂದಿ, ಬ್ರಾಂಡಿಪ್ರಿಯ ಈ ಪವಾಡಪುರುಷ ಕೊರಗಜ್ಜ ಯಾರು?
ಮಂಗಳೂರು ಹೊರವಲಯದ ಬಂಟ್ವಾಳದ ಪುದು ಗ್ರಾಮದ ಬ್ರಹ್ಮಗಿರಿ ಗೋವಿನತೋಟ ಎಂಬಲ್ಲಿರುವ ಶ್ರೀ ರಾಧಾ ಸುರಭಿ ಗೋಶಾಲೆಯಲ್ಲಿ ಮ್ಯಾಕ್ಸಿಂಗೆ ಚಿಕಿತ್ಸೆ ನೀಡಲಾಗುತ್ತಿತ್ತು. ದೇಸಿ ದನದ ಜತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ನೀಡಿದ್ದರು. ಈ ವೇಳೆ ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಮಗನ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ದಂಪತಿ ಪ್ರಾರ್ಥಿಸಿದ್ದರು. ಜತೆಗೆ ಸಮಸ್ಯೆಗೆ ಪರಿಹಾರ ದೊರೆತರೆ ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಈ ವೇಳೆ ಮಗನ ಅನಾರೋಗ್ಯ ದೂರ ಮಾಡುವ ಅಭಯ ನೀಡಿದ್ದ ಕೊರಗಜ್ಜ ಪವಾಡ ತೋರಿದ್ದಾರೆ. ಕೆಲವೇ ದಿನಗಳಲ್ಲಿ ಮ್ಯಾಕ್ಸಿಂಗೆ ಕಾಣಿಸಿಕೊಂಡಿದ್ದ ಹೈಶುಗರ್ ಕಡಿಮೆಯಾಗಿದೆ ಎಂದು ಕ್ಷೇತ್ರದ ಪ್ರಧಾನ ಸೇವಕ ಭಕ್ತಿ ಭುವನ್ ದಾಸ್ ಪ್ರತಿಕ್ರಿಯೆ ನೀಡಿದರು.
ಈಗ ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಸದ್ಯ ಆಂಡ್ರ್ಯೋ ಕುಟುಂಬವು ಉಕ್ರೇನ್‌ಗೆ ಮರಳಿದ್ದು, ಕೆಲವು ತಿಂಗಳು ಬಳಿಕ ಮತ್ತೆ ಭಾರತಕ್ಕೆ ಬರುವುದಾಗಿ ಹೇಳಿಕೊಂಡಿದೆ.
ನಿಜಕ್ಕೂ ಇದು ಪವಾಡದ ಸಂಗತಿ
ನಮ್ಮ ಮಗ ಮ್ಯಾಕ್ಸಿಂಗೆ ತುಂಬಾ ಅನಾರೋಗ್ಯವಿತ್ತು. ಅವನಿಗೆ ಯಾವುದೇ ಚಿಕಿತ್ಸೆ ನೀಡಿದರೂ ಸಕ್ಕರೆ ಕಾಯಿಲೆ ವಾಸಿಯಾಗುತ್ತಿರಲಿಲ್ಲ. ಆದರೆ, ಕೊರಗಜ್ಜನಿಗೆ ಹರಕೆ ಕಟ್ಟಿಕೊಂಡಿದ್ದೇ ಅವನು ಗುಣಮುಖನಾಗಲು ಕಾರಣವಾಯಿತು. ನಾವು ಎಂದಿಗೂ ಕೊರಗಜ್ಜನಿಗೆ ಋಣಿಯಾಗಿರುತ್ತೇವೆ. ಈಗ ಮಗ ಸಂಪೂರ್ಣ ಗುಣಮುಖನಾಗಿದ್ದಾನೆ. ಈಗ ನಾವು ಉಕ್ರೇನ್‌ಗೆ ವಾಪಸಾಗುತ್ತಿದ್ದು, ಕೆಲವು ದಿನಗಳ ನಂತರ ಪುನಃ ವಾಪಸಾಗುತ್ತೇವೆ ಎಂದು ತಾಯಿ ಎಲೆನಾ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | ಕೊರಗಜ್ಜನ ಪವಾಡ | ಮಗು ಬದುಕುಳಿಯುವುದು ಕಷ್ಟ ಎಂದಿದ್ದ ವೈದ್ಯರು; ಮತ್ತೆ ಕಿಲಕಿಲನೆ ನಗುವಂತೆ ಮಾಡಿದ ಕೊರಗಜ್ಜ!