ಕೃಷ್ಣ ಭಟ್ ಅಳದಂಗಡಿ
ಶ್ರೀ ಕೃಷ್ಣ ಎಲ್ಲರ ನೆಚ್ಚಿನ ದೇವರು. ಕೃಷ್ಣನಿಲ್ಲದ ಗ್ರಾಮವಿಲ್ಲ, ಆರಾಧಿಸದ ಜನರಿಲ್ಲ. ಕೃಷ್ಣನ ನೂರಾರು ದೇಗುಲಗಳು ನಮ್ಮ ದೇಶದಲ್ಲಿವೆ. ಅವುಗಳಲ್ಲಿ ಕೆಲ ಜನಪ್ರಿಯ ದೇಗುಲಗಳ ಪುಟ್ಟ ಅವಲೋಕನವನ್ನು ಇಲ್ಲಿ ಮಾಡಲಾಗಿದೆ.
೧. ಜಗನ್ನಾಥ ದೇವಳ ಪುರಿ, ಒಡಿಶಾ
ಪುರಿ ಜಗನ್ನಾಥ ದೇವಳ ಕೇವಲ ಹಿಂದೂಗಳಿಗಷ್ಟೇ ಅಲ್ಲ, ಮುಸ್ಲಿಮರೂ ಪವಿತ್ರ ಎಂದು ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಎಲ್ಲ ದೇವಾಲಯಗಳಲ್ಲಿ ಶಿಲಾ ಮೂರ್ತಿಗಳಿದ್ದರೆ ಇಲ್ಲಿರುವುದು ಮರದ ಮೂರ್ತಿ. ಕೃಷ್ಣನ ಅಕ್ಕಪಕ್ಕದಲ್ಲಿ ಅಣ್ಣ ಬಲರಾಮ, ತಂಗಿ ಸುಭದ್ರೆಯ ಪ್ರತಿಮೆಗಳೂ ಇವೆ. ಇಲ್ಲಿನ ಪೂಜಾ ವಿಧಾನಗಳೂ ಇತರ ಕಡೆಗಳಿಗಿಂತ ಭಿನ್ನ. ಈ ದೇವಾಲಯದ ವಾಸ್ತುಶೈಲಿ ಎಷ್ಟೊಂದು ಅದ್ಭುತ ಎಂದರೆ ಇದರ ನೆರಳನ್ನು ಯಾರೂ ಇದುವರೆಗೆ ಕಂಡವರಿಲ್ಲ. ಸಮುದ್ರಕ್ಕೆ ಅತ್ಯಂತ ಹತ್ತಿರದಲ್ಲಿದ್ದರೂ ಭೋರ್ಗರೆತ ಇಲ್ಲಿಗೆ ಕೇಳಿಸುವುದಿಲ್ಲ.
೨. ದ್ವಾರಕಾಧೀಶ ದೇಗುಲ, ಗುಜರಾತ್
ಕೃಷ್ಣನ ರಾಜ್ಯಭಾರಕ್ಕೆ ರಾಜಧಾನಿಯಾಗಿದ್ದ ದ್ವಾರಕಾ ಪಟ್ಟಣದಲ್ಲಿ ಕೃಷ್ಣನ ಮೊಮ್ಮಗ ವಜ್ರನಾಭ ಕಟ್ಟಿಸಿದ ದೇಗುಲವೇ ದ್ವಾರಕಾಧೀಶ ದೇವಾಲಯ. ದ್ವಾರಕಾ ಎಂದರೆ ಮೋಕ್ಷದ ದಾರಿ ಎಂದರ್ಥ. ಕರಿಶಿಲೆಯಿಂದ ರೂಪಿಸಿದ ಕೃಷ್ಣನ ಮೂರ್ತಿಗೆ ಕೌಸ್ತುಭ ಮಣಿಯ ಅಲಂಕಾರವಿದೆ. ಕೊರಳಲ್ಲಿ ಲಕ್ಷ್ಮೀದೇವಿ ಕೊಟ್ಟ ಹಾರವಿದೆ. ಒಂದು ಕೈಯಲ್ಲಿ ಸುದರ್ಶನ ಚಕ್ರ, ಮತ್ತೊಂದರಲ್ಲಿ ಪಾಂಚಜನ್ಯ. ಚಾಲುಕ್ಯ ಶೈಲಿಯ ದೇಗುಲವನ್ನು ಮೃದು ಸುಣ್ಣ ಕಲ್ಲು ಮತ್ತು ಗ್ರಾನೈಟ್‌ನಿಂದ ನಿರ್ಮಿಸಲಾಗಿದೆ. ಪ್ರಧಾನ ದೇಗುಲದ ಸಮೀಪದಲ್ಲಿ ರುಕ್ಮಿಣಿಯ ಮಂದಿರವೂ ಇದೆ.
೩. ಗುರುವಾಯೂರು ದೇವಾಲಯ, ಕೇರಳ
ದಕ್ಷಿಣದ ದ್ವಾರಕೆ ಎಂಬ ಹೆಸರು ಹೊತ್ತ ಗುರುವಾಯೂರು ದೇಗುಲ ನಿರ್ಮಾಣಗೊಂಡಿದ್ದು ೫೦೦೦ ವರ್ಷಗಳ ಹಿಂದೆ. ಇದು ಭೂವೈಕುಂಠ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ತುಳಸಿ ಮಾಲೆ ಮತ್ತು ಮುತ್ತಿನ ಸರ ಧರಿಸಿದ ಕೃಷ್ಣ ಭಕ್ತರ ಅಭೀಷ್ಟ ಈಡೇರಿಸುವ ದೇವರು. ಇಲ್ಲಿ ಶಿವನೇ ಪರಿವಾರ ಸಮೇತನಾಗಿ ವಿಷ್ಣುವನ್ನು ಪೂಜಿಸಿದ ಎಂಬ ಐತಿಹ್ಯವೂ ಇದೆ. ಗುರುವಾಯೂರು ಕೃಷ್ಣ ಆನೆಪ್ರಿಯ. ಪ್ರತಿದಿನವೂ ಹತ್ತಾರು ಆನೆಗಳಿಗೆ ಆನೆಯೂಟಂ ನೀಡುವ ಕ್ರಮವಿದೆ. ಇಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ. ಅದರಲ್ಲೂ ಪುರುಷರು ಧೋತಿ ಉಟ್ಟೇ ಬರಬೇಕು.
೪. ರಾಧಾ ಮೋಹನ ಮಂದಿರ, ವೃಂದಾವನ
ಉತ್ತರ ಪ್ರದೇಶದ ವೃಂದಾವನದಲ್ಲಿ ನಿರ್ಮಾಣಗೊಂಡ ಮೊದಲ ದೇಗುಲವಿದು. ಕೃಷ್ಣ ಇಲ್ಲಿ ರಾಧಾ ರಾಣಿ ಮತ್ತು ಲಲಿತಾ ಸಖಿಯ ಜತೆಗೂಡಿದ್ದಾನೆ. ವೃಂದಾವನದ ವಟವೃಕ್ಷ ವೊಂದರ ಅಡಿಯಲ್ಲಿ ಸಿಕ್ಕ ವಿಗ್ರಹವನ್ನು ದೇಗುಲ ಕಟ್ಟಿ ಪೂಜಿಸಲಾಗುತ್ತಿದೆ. ದ್ವಾದಶಾದಿತ್ಯ ತಿಲ ಎಂಬ ೫೦ ಅಡಿ ಎತ್ತರದ ಬೆಟ್ಟದ ಮೇಲೆ ದೇಗುಲವಿದೆ. ವೃಂದಾವನದಲ್ಲಿ ಬಂಕೇ ಬಿಹಾರಿ, ಜುಗಲ್ ಕಿಶೋರ್ ಸೇರಿದಂತೆ ಏಳು ಕೃಷ್ಣ ಮಂದಿರಗಳಿವೆ. ಕೃಪಾಳು ಮಹಾರಾಜರು ನಿರ್ಮೀಸಿದ ಪ್ರೇಮ ಮಂದಿರವೂ ಅತ್ಯಂತ ಮಹತ್ವದ ತಾಣ. ಇಲ್ಲಿ ಕೃಷ್ಣನ ಬದುಕೇ ತೆರೆದುಕೊಂಡಿದೆ.
೫. ಉಡುಪಿ ಶ್ರೀಕೃಷ್ಣ ಮಠ, ಉಡುಪಿ
ದ್ವೈತ ಮತ ಸ್ಥಾಪಕ ಶ್ರೀ ಮಧ್ವಾಚಾರ್ಯರು ೧೩ನೇ ಶತಮಾನದಲ್ಲಿ ಕಟ್ಟಿದ ಮಠವಿದು. ಸಮುದ್ರದಲ್ಲಿ ಬಿರುಗಾಳಿಗೆ ಸಿಕ್ಕರೂ ದಡ ಸೇರಿದ ದೋಣಿಯೊಂದರಲ್ಲಿ ಮಧ್ವಾಚಾರ್ಯರಿಗೆ ಸಿಕ್ಕಿದ ಕಡೆಗೋಲು ಕೃಷ್ಣ ಇಲ್ಲಿ ಆರಾಧ್ಯಮೂರ್ತಿ. ಕನಕ ದಾಸರ ಭಕ್ತಿಗೆ ಒಲಿದು ಕೃಷ್ಣ ಪಶ್ಚಿಮಕ್ಕೆ ಮುಖ ತಿರುಗಿಸಿದ ಐತಿಹ್ಯ ಮತ್ತು ಅದಕ್ಕೆ ಪೂರಕವಾಗಿ ಕನಕನ ಕಿಂಡಿ ಇಲ್ಲಿದೆ. ದೇವಾಲಯದ ಪೂಜಾ ಕೈಂಕರ್ಯಕ್ಕೆ ಅಷ್ಟ ಮಠಗಳು ನಿಯೋಜಿತವಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಮಠಗಳ ಪಾಳಿ ಬದಲಾಗುವ ಪರ‍್ಯಾಯ ಇಲ್ಲಿನ ವಿಶೇಷ ಸಂಭ್ರಮ.
೬. ದ್ವಾರಕಾಧೀಶ ದೇಗುಲ ಮಥುರಾ
ಯಾದವ ಸಾಮ್ರಾಜ್ಯ ಆಳಿದ ಊರಿದು. ಕೃಷ್ಣನ ಜನ್ಮಸ್ಥಾನವಿದು. ಶ್ರೀ ದ್ವಾರಕಾಧೀಶ ಮಂದಿರ ಇಲ್ಲಿನ ಪುರಾತನ ದೇಗುಲಗಳಲ್ಲಿ ಒಂದು. ಕರಿಶಿಲೆಯ ಕೃಷ್ಣನ ಮೂರ್ತಿ ಅತ್ಯಾಕರ್ಷಕ. ರಾಜಸ್ಥಾನ ಶೈಲಿಯಲ್ಲಿ ನಿರ್ಮಾಣಗೊಂಡ ಪ್ರವೇಶ ದ್ವಾರ ಇಲ್ಲಿನ ಹೆಗ್ಗುರುತು. ರಾಮಾಯಣ ಕಾಲದಲ್ಲಿ ಶತ್ರುಘ್ನ ಲವಣಾಸುರನನ್ನು ಕೊಂದ ಜಾಗ ಇದಂತೆ. ಆಗ ಮಧುವನವಾಗಿದ್ದು ಬಳಿಕ ಮಥುರೆಯಾಗಿದೆ. ಇಲ್ಲಿ ಶ್ರೀಕೃಷ್ಣ ಸಾಲಿಗ್ರಾಮ ದೇವರೂ ಪೂಜೆಗೊಳ್ಳುತ್ತಾರೆ. ಹಿಂದೂಗಳು ಪವಿತ್ರ ಎಂದು ನಂಬಿರುವ ಸಪ್ತಪುರಿಗಳಲ್ಲಿ ಇದೂ ಒಂದು.
೭. ಬಿರ್ಲಾ ಮಂದಿರ, ಕುರುಕ್ಷೇತ್ರ
ಹರಿಯಾಣದ ಕುರುಕ್ಷೇತ್ರದಲ್ಲಿರುವ ಬಿರ್ಲಾ ಮಂದಿರ ಆಧುನಿಕ ಸುಂದರ ದೇಗುಲ. 1950ರಲ್ಲಿ ದಿ. ಜುಗಲ್ ಬಿರ್ಲಾರಿಂದ ನಿರ್ಮಾಣಗೊಂಡ ಇದು ತನ್ನ ಭವ್ಯ ವಾಸ್ತುಶಿಲ್ಪಕ್ಕೆ ಹೆಸರುವಾಸಿ. ಅಮೃತ ಶಿಲೆಯಿಂದ ನಿರ್ಮಿಸಿದ ಗೀತೋಪದೇಶದ ಚಿತ್ರಣ ಹೃದಯಂಗಮ. ನಾಲ್ಕು ಕುದುರೆಗಳು ಎಳೆಯುತ್ತಿರುವ ರಥದಲ್ಲಿ ನಿಂತು ಕೃಷ್ಣ ಅರ್ಜುನನಿಗೆ ಉಪದೇಶ ಮಾಡುವುದನ್ನು ತೋರಿಸಲಾಗಿದೆ. ಬಿಳಿ ಅಮೃತಶಿಲೆಯಿಂದಲೇ ನಿರ್ಮಾಣಗೊಂಡ ಉದ್ಯಾನವೂ ಇಲ್ಲಿನ ವಾಸ್ತುವೈಭವಕ್ಕೆ ಪರಮ ಸಾಕ್ಷಿ.
೮. ಇಸ್ಕಾನ್, ಬೆಂಗಳೂರು
ಕೃಷ್ಣ ಪರಮಾತ್ಮನ ಆಧುನಿಕ ದೇಗುಲಗಳಲ್ಲಿ ಬೆಂಗಳೂರಿನ ಇಸ್ಕಾನ್ ಕೂಡಾ ಒಂದು. ಇಸ್ಕಾನ್ ದೇಶದ ನಾನಾ ಕಡೆ ದೇಗುಲಗಳನ್ನು ಸ್ಥಾಪಿಸಿದ್ದು, ಬೆಂಗಳೂರಿನ ವೈಭವೋಪೇತ ಮಂದಿರ ಸ್ಥಾಪನೆಯಾಗಿದ್ದು1997ರಲ್ಲಿ. ಜಗತ್ತಿನೆಲ್ಲೆಡೆ ಕೃಷ್ಣ ತತ್ವ ಪ್ರಚಾರ ಮಾಡುತ್ತಿರುವ ಇಸ್ಕಾನ್‌ನ ಈ ದೇಗುಲ ವೈಕುಂಠ ಬೆಟ್ಟದಲ್ಲಿದೆ. ಪ್ರಧಾನ ದೇವಾಲಯದಲ್ಲಿ ರಾಧಾ-ಕೃಷ್ಣ ಕೃಷ್ಣ ಬಲರಾಮ, ಶ್ರೀನಿವಾಸ ಗೋವಿಂದ, ಚೈತನ್ಯ ಮಹಾಪ್ರಭು-ನಿತ್ಯಾನಂದ, ಪ್ರಹ್ಲಾದ ನರಸಿಂಹ, ಶ್ರೀಲಾ ಪ್ರಭುಪಾದ ಹೀಗೆ ಆರು ಗರ್ಭಗುಡಿಗಳಿವೆ. ಚಿನ್ನ ಲೇಪಿತ ಧ್ವಜಸ್ತಂಭ ಇಲ್ಲಿನ ಆಕರ್ಷಣೆ.
೯. ಗೋವಿಂದ ದೇವ್‌ಜಿ ದೇವಳ, ಜೈಪುರ
ರಾಜಸ್ಥಾನ ಪ್ರಮುಖ ಕೃಷ್ಣ ಮಂದಿರವಾಗಿರುವ ಇದನ್ನು ಕಟ್ಟಿದ್ದು ಅಕ್ಬರ್ ಎಂಬ ಐತಿಹ್ಯವಿದೆ. ಜೈಪುರದ ಸ್ಥಾಪಕ ರಾಜಾ ಸವಾಯಿ ಜೈ ಸಿಂಗ್ 2 ವೃಂದಾವನದಿಂದಲೇ ಕೃಷ್ಣನ ಪ್ರತಿರೂಪದಂಥ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದರು. ಕೃಷ್ಣ ಭೂಮಿಯಲ್ಲಿ ಅವತರಿಸಿದ ರೂಪದಲ್ಲೇ ಇಲ್ಲಿ ನೆಲೆಯಾಗಿದ್ದಾನೆ ಎಂಬುದು ಪ್ರತೀತಿ. ದೇವಾಲಯದ ಭವ್ಯ ವಾಸ್ತುಶಿಲ್ಪ, ಅಲಂಕಾರಗಳು ಕಣ್ಮನ ಸೆಳೆಯುತ್ತವೆ. ಅತ್ಯಂತ ಮನೋಹರ ಮೂರ್ತಿಯನ್ನು ಕಾಣಲು ಭಾರಿ ಸಂಖ್ಯೆಯಲ್ಲಿ ಜನ ಬರುತ್ತಾರೆ.
೧೦. ಅರುಳ್ಮಿಗು ರಾಜಗೋಪಾಲಸ್ವಾಮಿ ದೇವಳ ತಿರುವೂರು
ತಮಿಳುನಾಡಿನ ತಿರುವೂರಿನಲ್ಲಿರುವ ರಾಜಗೋಪಾಲಸ್ವಾಮಿ ದೇವಾಲಯವೂ ದಕ್ಷಿಣದ ದ್ವಾರಕೆ ಎಂದೇ ಪ್ರಸಿದ್ಧ. ೧೬ ಗೋಪುರಗಳು, 7ಪ್ರಾಕಾರಗಳು, ೨೪ ಮೂರ್ತಿಗಳು, ಸಪ್ತ ಮಂಟಪಗಳು, ನವ ಪವಿತ್ರ ತೀರ್ಥಗಳು ಇರುವ ದೇಗುಲ ಭಕ್ತಿ ಮತ್ತು ಐತಿಹ್ಯಕ್ಕೆ ಹೆಸರುವಾಸಿ. ಇಲ್ಲಿ ಪೂಜೆಗೊಳ್ಳುವ ಮೂರ್ತಿಗೆ ರಾಜಮನ್ನಾರ್ ಎಂದು ಹೆಸರು. ಇದರ ಎತ್ತರ ೧೫೬ ಅಡಿ. ಇಲ್ಲಿನ ಪ್ರಧಾನ ಕೆರೆ ಹರೀಂದ್ರ ನದಿ ದೇಶದಲ್ಲೇ ಅತ್ಯಂತ ವಿಸ್ತಾರವಾದ ತೀರ್ಥ ಕೆರೆ. ದೇಗುಲ ಒಳರಚನೆಗಳು, ವಾಸ್ತುಶಿಲ್ಪ ಅತ್ಯಂತ ವೈಭವದಿಂದ ಕೂಡಿದೆ.
ಇದನ್ನೂ ಓದಿ| Krishna Janmashtami̇ 2022 | ತಿಂಡಿ ಪ್ರಿಯ ಶ್ರೀಕೃಷ್ಣನಿಗೆ ನಿಮ್ಮ ಮನೆಯಲ್ಲಿ ಯಾವ ಉಂಡೆ ಮಾಡುವಿರಿ?