Site icon Vistara News

Krishna Janmashtami̇ 2022 | ತಿಂಡಿ ಪ್ರಿಯ ಶ್ರೀಕೃಷ್ಣನಿಗೆ ನಿಮ್ಮ ಮನೆಯಲ್ಲಿ ಯಾವ ಉಂಡೆ ಮಾಡುವಿರಿ?

Krishna Janmashtami̇ 2022

ಶ್ರೀಕೃಷ್ಣ ಸರ್ವಜನ ಪ್ರಿಯ ದೇವರು. ಒಂದಿಲ್ಲೊಂದು ರೀತಿಯಲ್ಲಿ ಜನರ ಮನಸ್ಸಿನಲ್ಲಿ ನೆಲೆಸಿರುವ ಶ್ರೀಕೃಷ್ಣನಿಗೆ ಸಿಹಿ ಆವಲಕ್ಕಿ ಎಂದರೆ ಬಲು ಪ್ರೀತಿ. ಅಂತೆಯೇ ಕುರುಕಲು ತಿಂಡಿ ಪ್ರಿಯ ಕೂಡ. ಉಂಡೆ, ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು ಕೊಟ್ಟರೆ ಕೃಷ್ಣ ಬೇಡ ಎನ್ನಲಾರ! ಹೀಗಾಗಿಯೇ ಗೋಕುಲಾಷ್ಟಮಿಯಂದು (Krishna Janmashtami̇ 2022) ಬಗೆಬಗೆಯ ತಿನಿಸು ಸಿದ್ಧಪಡಿಸಿ ನೈವೇದ್ಯವಾಗಿ ಅರ್ಪಿಸುತ್ತಾರೆ.

ಕೃಷ್ಣನ ನೈವೇದ್ಯಕ್ಕೆ ಏನಿಲ್ಲದಿದ್ದರೂ ಉಂಡೆಗಳಂತೂ ಬೇಕೇಬೇಕು. ಉತ್ತರ ಭಾರತೀಯರು ಲಡ್ಡು ಇಟ್ಟೇ ಶ್ರೀ ಕೃಷ್ಣನ ಪೂಜೆ ಮಾಡುವುದು. ಶ್ರೀಕೃಷ್ಣನಿಗೆ ಇಷ್ಟವಾದ ಉಂಡೆಯನ್ನು ಮನೆಯಲ್ಲಿಯೇ ಮಾಡಿ, ನೈವೇದ್ಯ ಮಾಡಬಹುದು. ನಿಮ್ಮ ಮನೆಯ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಬಗೆ ಬಗೆಯ ಉಂಡೆಯನ್ನು ತಯಾರಿಸುವುದು ಹೇಗೆಂಬ ಮಾಹಿತಿ ಇಲ್ಲಿದೆ;

ಎಳ್ಳಿನ ಉಂಡೆ
ಎಳ್ಳಿನ ಉಂಡೆಯನ್ನು ಸಾಮಾನ್ಯವಾಗಿ ಎಲ್ಲಹಬ್ಬಗಳಲ್ಲಿಯೂ ಮಾಡಲಾಗುತ್ತದೆ. ಇದನ್ನು ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಉಂಡೆ ಹಾಳಾಗಬಹುದು. ಹೀಗಾಗಿ ಇದನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು.

ಬೇಕಾಗುವ ಸಾಮಗ್ರಿ: ಎಳ್ಳು-1/2, ಕೆಜಿ, ಒಣಕೊಬ್ಬರಿ-1 ಕಪ್, ಗೋಡಂಬಿ-ಒಣದ್ರಾಕ್ಷಿ-1/4 ಕಪ್, ಜಿಗುಟು ಬೆಲ್ಲ-1ಕಪ್, ಶೇಂಗಾ-1/2ಕಪ್, ತುಪ್ಪ-3ಚಮಚ, ಏಲಕ್ಕಿ ಪುಡಿ-1/2ಚಮಚ, ಜಾಯಿಕಾಯಿ ಪುಡಿ ಸ್ವಲ್ಪ.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಕರಗಿಸಿ ಶೇಂಗಾ, ಗೋಡಂಬಿ, ಒಣದ್ರಾಕ್ಷಿಯನ್ನು ಘಮ್‌ ಎನ್ನುವ ಹಾಗೆ ಹುರಿಯಿರಿ. ನಂತರ ಎಳ್ಳನ್ನು ತುಪ್ಪದಲ್ಲಿ ಹುರಿಯಿರಿ. ಬೇರೆ ಬಾಣಲೆಗೆ ಬೆಲ್ಲ ಹಾಕಿ. ಕಾಲು ಬಟ್ಟಲು ನೀರು ಸೇರಿಸಿ ಕುದಿಯಲು ಬಿಡಿ. ಬೆಲ್ಲ ಕರಗಿ ನೊರೆ ನೊರೆಯಂತೆ ಕಂಡು ಅಂಟು ಪಾಕವಾದಾಗ ಎಳ್ಳು, ಶೇಂಗಾ, ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿ ಪುಡಿ ಸೇರಿಸಿ ಕೆಳಗಿಳಿಸಿ. ಬಿಸಿಯಿರುವಾಗಲೆ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿ. ಆಗ ಶ್ರೀಕೃಷ್ಣನ ನೈವೇದ್ಯಕ್ಕೆ ಎಳ್ಳಿನ ಉಂಡೆ ರೆಡಿಯಾಗುತ್ತದೆ.

ಡ್ರೈ ಫ್ರೂಟ್ಸ್‌ ಉಂಡೆ
ಇಂದು ಒಣ ಹಣ್ಣುಗಳನ್ನು ಮೊದಲಿಗಿಂತ ಹೆಚ್ಚಾಗಿ ಸಿಹಿ ತಿಂಡಿ ಸಿದ್ಧಪಡಿಸಲು ಬಳಸಲಾಗುತ್ತಿದೆ. ಇದು ಎಲ್ಲರಿಗೂ ಇಷ್ಟವಾಗುತ್ತದೆ ಮತ್ತು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು. ಒಣಹಣ್ಣುಗಳಿಂದ ಉಂಡೆಯನ್ನೂ ಮಾಡಬಹುದು.

ಬೇಕಾಗುವ ಸಾಮಾಗ್ರಿ : ಗೋಡಂಬಿ 1 ಕಪ್,ಬಾದಾಮಿ 1 ಕಪ್, ದ್ರಾಕ್ಷಿ 1 ಕಪ್, ಒಣ ಕೊಬ್ಬರಿ ತುರಿ 1 ಕಪ್, ಗಸಗಸೆ 2 ಚಮಚ, ಎಳ್ಳು 2 ಚಮಚ, ಬೆಲ್ಲ ರುಚಿಗೆ ತಕ್ಕಷ್ಟು, ತುಪ್ಪ ಸ್ವಲ್ಪ .

ಮಾಡುವ ವಿಧಾನ: ಗೋಡಂಬಿ, ಬಾದಾಮಿ ಮತ್ತು ಖರ್ಜೂರವನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪುಡಿ ಮಾಡಿ. ದಪ್ಪ ತಳವಿರುವ ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ ಅದಕ್ಕೆ ಗೋಡಂಬಿ ಹಾಕಿ ಹುರಿದು ತೆಗೆದಿಡಿ. ನಂತರ ಬಾದಾಮಿ, ದ್ರಾಕ್ಷಿ, ಖರ್ಜೂರ,ಕೊಬ್ಬರಿ ತುರಿ, ಎಲ್ಲವನ್ನು ಬೇರೆ ಬೇರೆಯಾಗಿ ಹುರಿದು ಒಂದು ಪಾತ್ರೆಗೆ ಹಾಕಿ ಮಿಶ್ರಣ ಮಾಡಿ. ನಂತರ ಎಳ್ಳು ಮತ್ತು ಗಸಗಸೆಯನ್ನು ಹುರಿದು ಸೇರಿಸಿ.
ಬೆಲ್ಲದ ಪಾಕವನ್ನು ಮಾಡಿ ಅದಕ್ಕೆ ಹುರಿದಿಟ್ಟ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಅದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಉಂಡೆಗಳನ್ನು ಕಟ್ಟಿ. ಶ್ರೀಕೃಷ್ಣನಿಗೆ ಒಣ ಹಣ್ಣುಗಳ ಉಂಡೆ ಅರ್ಪಿಸಿ, ಆತನಿಗೆ ಖಂಡಿತಾ ಇಷ್ಟವಾಗುತ್ತದೆ.

ಅಂಟಿನುಂಡೆ
ಅಂಟಿನ ಉಂಡೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಗರ್ಭಿಣಿಯರಿಗೆ ನೀಡಲಾಗುತ್ತದೆ. ಅಧಿಕ ಪ್ರಮಾಣದಲ್ಲಿ ಪೌಷ್ಟಿಕಾಂಶಗಳಿರುವುದರಿಂದ ಇದು ಎಲ್ಲರಿಗೂ ಇಷ್ಟವಾಗುವ ಉಂಡೆಯಾಗಿದೆ.

ಬೇಕಾಗುವ ಸಾಮಗ್ರಿ: ಒಣ ದ್ರಾಕ್ಷಿ – ಗೋಡಂಬಿ, 1 ಬಟ್ಟಲು, ಬಾದಾಮಿ 1 ಬಟ್ಟಲು, ಖರ್ಜೂರ-1 ಬಟ್ಟಲು, ತುರಿದ ಕೊಬ್ಬರಿ-1 ಬಟ್ಟಲು, ಬೆಲ್ಲ-1/2 ಬಟ್ಟಲು (ಪುಡಿ ಮಾಡಿದ್ದು), ತುಪ್ಪ 1 ಬಟ್ಟಲು, ಏಲಕ್ಕಿ ಪುಡಿ 1 ಚಮಚ, ಕೇಸರಿ 3-4 ಎಳೆ, ಬಿಳಿ ಎಳ್ಳು 1 ಚಮಚ, ಅಡುಗೆ ಮಾಡುವ ಅಂಟು 1 ಸಣ್ಣ ಬಟ್ಟಲು.

ಮಾಡುವ ವಿಧಾನ: ಬಾದಾಮಿ, ಗೋಡಂಬಿ ಇವನ್ನು ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ ಬೆಚ್ಚಗೆ ಹುರಿದುಕೊಳ್ಳಿ. ಖರ್ಜೂರ, ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ಇವೆಲ್ಲವನ್ನೂ ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅಂಟನ್ನು ದಪ್ಪ ತಳದ ಪಾತ್ರೆಯಲ್ಲಿ, ಕಮ್ಮಿ ಉರಿಯಲ್ಲಿ ಹುರಿದುಕೊಳ್ಳಿ.
ಹುರಿಯುತ್ತಿದ್ದಂತೆ ಅಂಟಿನ ಸಣ್ಣ ಸಣ್ಣ ಉಂಡೆಗಳು ಪುರಿಯ ಥರ ಊದಿಕೊಳ್ಳುತ್ತವೆ. ಆಗ ಒಲೆ ಆರಿಸಿ. ಅದು ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ. ದಪ್ಪ ತಳದ, ಅಗಲ ಬಾಯಿಯ ಪಾತ್ರೆಯೊಂದರಲ್ಲಿ ತುಪ್ಪವನ್ನು ಕಾಯಿಸಿ ಎಲ್ಲ ಪದಾರ್ಥಗಳನ್ನೂ ಸಾವಕಾಶವಾಗಿ ಹಾಕಿ ಸರಿಯಾಗಿ ಬೆರೆಸಿ. ಹುರಿಯಿರಿ. ಬೆಲ್ಲ, ಅಂಟು ಎಲ್ಲವೂ ಕರಗುತ್ತವೆ.
ಆಗ ಒಲೆಯ ಉರಿಯನ್ನು ಪೂರಾ ಕಡಿಮೆ ಮಾಡಿಕೊಳ್ಳಿ. ಅಂಗೈಗೆ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ. ಮಿಶ್ರಣ ತಣ್ಣಗಾದರೆ ಮತ್ತೆ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಉಂಡೆಗಳನ್ನು ಕಟ್ಟಿದ ಮೇಲೆ ಆರಲು ಬಿಡಿ. ನಂತರ ಶ್ರೀಕೃಷ್ಣನಿಗೆ ಅರ್ಪಿಸಿ.

ಬೇಸನ್ ಉಂಡೆ
ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸಿಹಿ ತಿಂಡಿಗಳಲ್ಲಿ ಇದೂ ಒಂದು. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಕಡಿಮೆ ಸಮಯದಲ್ಲಿ ಉಂಡೆ ಮಾಡಬೇಕೆಂದಾದಾಗ ಈ ಉಂಡೆಯನ್ನು ಸಿದ್ಧಪಡಿಸಬಹುದು. ಮಕ್ಕಳಿಗೂ ಇದು ಇಷ್ಟವಾಗುತ್ತದೆ.

ಬೇಕಾಗುವ ಸಾಮಗ್ರಿ: ಕಡಲೆ ಹಿಟ್ಟು 1 ಕಪ್, ಸಕ್ಕರೆ ಪುಡಿ 3/4 ಕಪ್, ತುಪ್ಪ 1/2 ಕಪ್, ಗೋಡಂಬಿ ಚೂರುಗಳು ಸ್ವಲ್ಪ, ಏಲಕ್ಕಿ ಪುಡಿ ಸ್ವಲ್ಪ.

ಮಾಡುವ ವಿಧಾನ: ತುಪ್ಪವನ್ನು ದಪ್ಪ ತಳದ ಪಾತ್ರೆ ಅಥವಾ ಬಾಣಲೆಯಲ್ಲಿ ಕಾಯಲು ಇಟ್ಟು, ಅದಕ್ಕೆ ಕಡಲೆಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಡಲೆಹಿಟ್ಟಿನ ಹಸಿ ವಾಸನೆ ಹೋಗುವ ವರೆಗೆ ಹುರಿಯಿರಿ. ನಂತರ ಏಲಕ್ಕಿ ಪುಡಿ ಸೇರಿಸಿ ಆರಲು ಬಿಡಿ. ಸ್ವಲ್ಪ ಬೆಚ್ಚಗೆ ಇರುವಾಗ ಸಕ್ಕರೆ ಪುಡಿ ಹಾಗು ಗೋಡಂಬಿ ಚೂರುಗಳನ್ನು ಸೇರಿಸಿ, ಉಂಡೆ ಕಟ್ಟಿರಿ. ಶ್ರೀ ಕೃಷ್ಣನಿಗೆ ಇಷ್ಟವಾಗುವ ಉಂಡೆಗಳಲ್ಲಿ ಇದೂ ಒಂದು ಎಂಬುದನ್ನು ಮರೆಯಬೇಡಿ.

ರವೆ ಉಂಡೆ
ನಮ್ಮ ರಾಜ್ಯದ ಜನಪ್ರಿಯ ಉಂಡೆಗಳಲ್ಲಿ ಮೊದಲನೆಯದು ರವೆ ಉಂಡೆ. ಹೆಚ್ಚು ಕಷ್ಟಪಡದೆ ಮಾಡಬಹುದಾಗಿರುವು ದರಿಂದ ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಈ ಉಂಡೆಯನ್ನು ಸಾಮಾನ್ಯವಾಗಿ ಮಾಡುತ್ತಾರೆ.

ಬೇಕಾಗುವ ಸಾಮಗ್ರಿ: ರವೆ ಎರಡು ಕಪ್, ಸಕ್ಕರೆ ಎರಡು ಕಪ್, ಕೊಬ್ಬರಿ ತುರಿ ಒಂದು ಕಪ್, ಹಾಲು ಅರ್ಧ ಕಪ್, ಬಾದಾಮಿ, ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ, ರೋಸ್ ವಾಟರ್ ಒಂದು ಚಮಚ, ಕೇಸರಿ ದಳಗಳು, ಅರ್ಧ ಚಮಚ, ಏಲಕ್ಕಿ ಪುಡಿ ಸ್ವಲ್ಪ, ಹಾಲು ಅರ್ಧ ಕಪ್, ತುಪ್ಪ ನಾಲ್ಕು ಚಮಚ.

ಮಾಡುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಅದಕ್ಕೆ ಸಕ್ಕರೆ ಸೇರಿಸಿ,ಬೆರೆಸಿ,ಕೊಬ್ಬರಿ ತುರಿ ಮತ್ತು ಹಾಲಿನ ಪುಡಿ ಕೂಡ ಹಾಕಿ. ದ್ರಾಕ್ಷಿ, ಗೋಡಂಬಿ, ಬಾದಾಮಿ, ರೋಸ್ ವಾಟರ್, ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ, ಚೆನ್ನಾಗಿ ಬೆರೆಸಿ. ಅದಕ್ಕೆ ತುಪ್ಪ ಮತ್ತು ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ, ಒಂದೆರಡು ನಿಮಿಷ ಬೆರೆಸಿ, ಚೆನ್ನಾಗಿ ತಿರುವಿ, ಒಲೆಯಿಂದ ಕೆಳಗಿಳಿಸಿ.
ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಂಡು ಸೇರಿಸಿ. ಸ್ವಲ್ಪ ಆರಿದ ಮೇಲೆ ಕೈಗೆ ತುಪ್ಪ ಸವರಿಕೊಂಡು ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ಕಟ್ಟಿ. ಇದು ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ. ಉಂಡೆಗಳು ಮೆದುವಾಗಿ ಇರಬೇಕೆಂದರೆ ಇನ್ನೂ ಸ್ವಲ್ಪ ಹಾಲನ್ನು ಹೆಚ್ಚಿಗೆ ಬೆರೆಸಬಹುದು. ಸಕ್ಕರೆಯನ್ನು ಪುಡಿ ಮಾಡಿ ಸಹ ಹಾಕಬ ಹುದು.

ಪುರಿ ಉಂಡೆ
ರವೆಯುಂಡೆಯಷ್ಟೇ ಜನಪ್ರಿಯವಾದ ಮತ್ತೊಂದು ಉಂಡೆ ಎಂದರೆ ಪುರಿ ಉಂಡೆ. ಇದನ್ನು ಮನೆಯ ವಿಶೇಷ ಸಂದರ್ಭದಲ್ಲೆಲ್ಲಾ ಮಾಡಲಾಗುತ್ತದೆ. ಪುರಿಯನ್ನು ಬಳಸಿ ಹೆಚ್ಚು ಖರ್ಚಿಲ್ಲದೆ ಈ ಉಂಡೆಯನ್ನು ಮಾಡಬಹುದು.

ಬೇಕಾಗುವ ಸಾಮಗ್ರಿ: ಹುರಿದ ಪುರಿ-2ಕಪ್, ಹುರಿದು ಬಿಡಿಸಿದ ಶೇಂಗಾಬೀಜ-1/4 ಕಪ್, ಎಳ್ಳು-2 ಚಮಚ, ಹುರಿಗಡಲೆ- 3ಚಮಚ, ತುರಿದ ಕೊಬ್ಬರಿ – 3ಚಮಚ, ಪುಡಿ ಬೆಲ್ಲ-1ಕಪ್, ನೀರು-5 ಚಮಚ.

ತಯಾರಿಸುವ ವಿಧಾನ: ಎಳ್ಳು ಹಾಗೂ ಶೇಂಗಾವನ್ನು ಹುರಿದುಕೊಳ್ಳಿ. ಶೇಂಗಾವನ್ನು ಸಿಪ್ಪೆ ತೆಗೆದು ಬಿಡಿ ಮಾಡಿಕೊಳ್ಳಿ. ಪುರಿಯನ್ನು ಬಿಸಿ ಮಾಡಿಕೊಂಡು ಗರಿಗರಿಯಾಗಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಪುರಿ,ಹುರಿದಿಟ್ಟುಕೊಂಡ ಶೇಂಗಾ, ತುರಿದ ಕೊಬ್ಬರಿ, ಹುರಿಗಡಲೆ ಸೇರಿಸಿ. ಎಳ್ಳನ್ನು ಕೊನೆಗೆ ಸೇರಿಸಿ.
ಬೆಲ್ಲದ ಪಾಕ ತಯಾರಿಸಿಕೊಳ್ಳಿ: ಬೆಲ್ಲಕ್ಕೆ 4ರಿಂದ 5 ಚಮಚ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ. ಬೆಲ್ಲ ಪೂರ್ಣವಾಗಿ ಕರಗುವವರೆಗೆ ಬಿಸಿ ಮಾಡಿ. ನಂತರ ಬಟ್ಟೆಯಲ್ಲಿ ಸೋಸಿ. ನಂತರ ಬೆಲ್ಲದ ನೀರನ್ನು ಜೇನಿನ ರೂಪಕ್ಕೆ ಬರುವವರೆಗೆ ಬಿಸಿ ಮಾಡಿ. ಮಾಡಿಟ್ಟುಕೊಂಡಿರುವ ಮಿಶ್ರಣಕ್ಕೆ ಬೆಲ್ಲದ ಪಾಕವನ್ನು ಸೇರಿಸಿ. ಬಿಸಿ ಹದವಾಗಿರುವಾಗಲೇ ಉಂಡೆ ಕಟ್ಟಿ. ರಾಜ್ಯದ ಕೆಲವು ಭಾಗದಲ್ಲಿ ಪುರಿ ಉಂಡೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.

ಇದನ್ನೂ ಓದಿ|Krishna Janmashtami 2022 | ಶ್ರೀಕೃಷ್ಣ ಜನ್ಮಾಷ್ಟಮಿ ಎಂದು? ವಿಶೇಷತೆ ಏನು?

Exit mobile version