Site icon Vistara News

Krishna Janmashtami 2022 | ಶ್ರೀಕೃಷ್ಣ ಜನ್ಮಾಷ್ಟಮಿ ಎಂದು? ವಿಶೇಷತೆ ಏನು?

Krishna Janmashtami 2022

ಬೆಂಗಳೂರು: ದೇಶದೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಟಮಿಗೆ (Krishna Janmashtami 2022) ದಿನಗಣನೆ ಆರಂಭವಾಗಿದೆ. ಶ್ರೀ ಕೃಷ್ಣನ ಜನ್ಮಭೂಮಿ ಮಥುರಾ ಸೇರಿದಂತೆ ದೇಶದ ಬಹುತೇಕ ಕಡೆ ಆಗಸ್ಟ್‌ 19 ರಂದು ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಆದರೆ ಜನ್ಮಾಷ್ಟಮಿಯನ್ನು ಎಂದು ಆಚರಿಸಬೇಕೆಂಬ ಕುರಿತು ಕೆಲವರಲ್ಲಿ ಗೊಂದಲವೂ ಇದೆ.

ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸಲಾಗುತ್ತದೆ. “ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸ್ಮಾರ್ಥರು ಮತ್ತು ವೈಷ್ಣವರು ಬೇರೆ ಬೇರೆ ದಿನ ಆಚರಿಸುವುದುಂಟು. ಆದರೆ ಈ ಬಾರಿ ಎಲ್ಲರೂ ಒಂದೇ ದಿನ, ಧರ್ಮ ಕಾಪಾಡಲು ಅವತರಿಸಿದ ಭಗವಂತ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸಲಿದ್ದಾರೆʼʼ ಎಂದು ಜ್ಯೋತಿಷಿ ನರಹರಿ ಕಾರಂತ ತಿಳಿಸಿದ್ದಾರೆ.

ಶ್ರೀ ಕೃಷ್ಣ ನೆಲೆ ನಿಂತ ಉಡುಪಿಯ ಅಷ್ಟಮಠಗಳ ಪೈಕಿ ಎಂಟು ಮಠಗಳು ಆಗಸ್ಟ್‌ 19 ಮತ್ತು 20 ರಂದು ಜನ್ಮಾಷ್ಟಮಿ ಆಚರಿಸಲಾಗುತ್ತದೆ ಎಂದು ಈಗಾಗಲೇ ತಿಳಿಸಿವೆ. ಉಳಿದ ಮೂರು ಮಠಗಳಲ್ಲಿ ಆಗಸ್ಟ್‌ 18 ರಿಂದಲೇ ಆಚರಣೆ ಆರಂಭವಾಗಲಿದ್ದು, ಆಗಸ್ಟ್‌ 20ರ ವರೆಗೂ ನಡೆಯಲಿದೆ.

ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.
ಅರ್ಧರಾತ್ರೇತುರೋಹಿಣ್ಯಾಂಯದಾ ಕೃಷ್ಣಾಷ್ಟಮೀ ಭವೇತ್‌|
ತಾಸ್ಯಾಮಭ್ಯರ್ಚನಂ ಶೌರೇರ್ಹಂತಿ ಪಾಪಂ ತ್ರಿಜನ್ಮಜಮ್‌||

ಎಂಬ ಭವಿಷ್ಯ ಪುರಾಣದ ವಚನದಂತೆ ಕೃಷ್ಣಾಷ್ಟಮೀಯಂದು ಕೃಷ್ಣನನ್ನು ಅರ್ಚಿಸಿದರೆ ಮೂರು ಜನ್ಮಗಳಲ್ಲಿ ಮಾಡಿದ ಪಾಪಗಳು ನಾಶ ಹೊಂದುತ್ತವೇ ಎಂಬ ನಂಬಿಕೆಯಿಂದ ಕೃಷ್ಣನ ಹುಟ್ಟುಹಬ್ಬವನ್ನು ಜಗತ್ತಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ.

ಕಡಗೋಲು ಕೃಷ್ಣ

ಉಡುಪಿಯಲ್ಲಿ ಸಂಭ್ರಮಾಚರಣೆ ಶುರು
ಶ್ರೀಕೃಷ್ಣನ ಉಡುಪಿಯ ಶ್ರೀಕೃಷ್ಣಮಠ, ಪರ್ಯಾಯ ಕೃಷ್ಣಾಪುರ ಮಠ ಈಗಾಗಲೇ ಶ್ರೀಕೃಷ್ಣ ಜನ್ಮಾಷ್ಟಮಿಯ ಅಷ್ಟದಿನೋತ್ಸವ ಕಾರ್ಯಕ್ರಮಗಳನ್ನು ಆರಂಭಿಸಿವೆ. ಮಠದ ರಾಜಾಂಗಣದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಸ್ಟ್‌ 14ರಿಂದಲೇ ನಡೆಯುತ್ತಿದ್ದು, ಆಗಸ್ಟ್‌ 21ರವರೆಗೆ ಮುಂದುವರಿಯಲಿವೆ.

ಜನ್ಮಾಷ್ಟಮಿಯ ಮಾರನೇದಿನ ಎಂದರೆ ಆಗಸ್ಟ್‌ 20 ರಂದು ಪ್ರಸಿದ್ಧ ವಿಟ್ಲಪಿಂಡಿ ನಡೆಯುತ್ತದೆ. ಮೊಸರು ಕುಡಿಕೆ ಒಡೆಯುವ ಈ ಉತ್ಸವಕ್ಕೆ ಯುವಕ-ಯುವತಿಯರು ಸಿದ್ಧವಾಗಿದ್ದಾರೆ. ವಿಟ್ಲಪಿಂಡಿಯ ಇನ್ನೊಂದು ವಿಶೇಷವೆಂದರೆ ಹುಲಿವೇಶ. ಉಡುಪಿ ಜಿಲ್ಲೆಯಲ್ಲಿನ 35ಕ್ಕೂ ಅಧಿಕ ಹುಲಿ ವೇಷ ತಂಡಗಳು ಶ್ರೀ ಕೃಷ್ಣನ ಲೀಲೋತ್ಸವ ಎಂದೇ ಕರೆಯಲಾಗುವ ಈ ವಿಟ್ಲಪಿಂಡಿಯ ಉತ್ಸವದಲ್ಲಿ ಭಾಗವಹಿಸಿ, ಹುಲಿಕುಣಿತ ಪ್ರದರ್ಶಿಸಲಿವೆ.

ಇದನ್ನೂ ಓದಿ| Shravan| ಶ್ರಾವಣ ಮಾಸ ಬರಲು ಹಬ್ಬಗಳ ಸಾಲು ಸಾಲು!

Exit mobile version