Site icon Vistara News

Krishna Janmashtami | ವಿಟ್ಲಪಿಂಡಿಯೊಂದಿಗೆ ಉಡುಪಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಸಂಪನ್ನ

ಕೃಷ್ಣಾ ಜನ್ಮಾಷ್ಟಮಿ

ಉಡುಪಿ: ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗುವ ಸಾಂಪ್ರದಾಯಿಕ‌ ನಡೆ, ಕಣ್ಮಣಿಯಾದ ಕಡಗೋಲು ಕೃಷ್ಣನು ಅಷ್ಟಮಠಗಳ ರಥ ಬೀದಿಯಲ್ಲಿ ತನ್ನ ಲೀಲೋತ್ಸವಗಳನ್ನು ತೋರಿಸುತ್ತಾ ಸಾಗಿಬಂದಾಗ ಭಕ್ತರಿಗೆ ಖುಷಿಯೋ ಖುಷಿ. ಎರಡು ದಿನಗಳ ಕಾಲ ಉಡುಪಿಯಲ್ಲಿ ನಡೆದ ಕೃಷ್ಣಜನ್ಮಾಷ್ಟಮಿಯ (Krishna Janmashtami) ಸಂಭ್ರಮ ವಿಟ್ಲಪಿಂಡಿ ಮಹೋತ್ಸವ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.

ಉಡುಪಿಯ ಅಷ್ಟಮಿ ಮಹೋತ್ಸವ ಜಗತ್ಪ್ರಸಿದ್ಧಿ ಪಡೆದಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಸಲಾಗುವ ವಿಟ್ಲಪಿಂಡಿ ಮಹೋತ್ಸವವೆಂದರೆ ವೈಭವದ ಹಬ್ಬ. ಶನಿವಾರ ಚಿನ್ನದ ರಥದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಯಿತು.

ಚಾತುರ್ಮಾಸ್ಯ ಕಾಲವಾದ ಕಾರಣ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ, ಹಾಗಾಗಿ ಅಷ್ಟಮಿಗೆಂದೇ ತಯಾರಿಸಲಾಗುವ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಅಷ್ಟಮಠಗಳ ಸುತ್ತಲೂ ರಥ ಬೀದಿಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಇದನ್ನೂ ಓದಿ | ISKCON Janmashtami | ಅದ್ಧೂರಿಯಾಗಿ ನಡೆದ ರಾಧಾಕೃಷ್ಣರ ಅಭಿಷೇಕ

ಚಿನ್ನದ ರಥದಲ್ಲಿ ದೇವರ ಮೆರವಣಿಗೆ

ಸಾಂಪ್ರದಾಯಿಕ ವೇಷದಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗಿದಂತೆ ಪ್ರದಕ್ಷಿಣಕಾರವಾಗಿ ಚಿನ್ನದ ರಥದಲ್ಲಿ ದೇವರ ಮೆರವಣಿಗೆ ನಡೆಯಿತು. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೂಜೆ ನಡೆಸಿ, ಬಳಿಕ ರಥದ ಮುಂದೆ ಭಕ್ತರೊಡನೆ ಸಾಗಿ ಬಂದರು. ಹುಲಿ ವೇಷ ಸೇರಿದಂತೆ ಬಗೆ ಬಗೆಯ ವೇಷಧಾರಿಗಳು ಶ್ರೀ ಕೃಷ್ಣನ ಲೀಲೋತ್ಸವಕ್ಕೆ ಸಾಕ್ಷಿಯಾದರು. ಎಂಟು ಮಠಗಳ ಅಂಗಳದಲ್ಲಿ ನಿಂತ ಭಕ್ತರು ಕೃಷ್ಣ ಜಪ ಮಾಡುತ್ತಾ ಚಿನ್ನದ ರಥಕ್ಕೆ ಕೈಮುಗಿದರು.

ವಿಟ್ಲಪಿಂಡಿ ಕೃಷ್ಣನ ಹುಟ್ಟನ್ನು ಸಂಭ್ರಮಿಸುವ ಹಬ್ಬ. ಶುಕ್ರವಾರ ನಡುರಾತ್ರಿ 11:54ಕ್ಕೆ ಅರ್ಜೆಪ್ರದಾನ ನಡೆಸಿ ಬಳಿಕ ದೇವರಿಗೆ ಸಮರ್ಪಿಸಲಾದ ಉಂಡೆ ಚಕ್ಕುಲಿಗಳನ್ನು ಈ ವೇಳೆ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು. ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ ಸಾವಿರಾರು ಮಂದಿಗೆ ಮಧ್ಯಾಹ್ನದ ಅನ್ನದಾಸೋಹ ನಡೆಯಿತು.

ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ವಿಟ್ಲಪಿಂಡಿ ಮಹೋತ್ಸವ ಅದ್ಧೂರಿಯಾಗಿ ನಡೆದಿರಲಿಲ್ಲ. ಈ ಬಾರಿ ಅತಿ ಹೆಚ್ಚು ಜನರ ಭಾಗವಹಿಸುವಿಕೆಯೊಂದಿಗೆ ವೈಭವದಿಂದ ವಿಟ್ಲಪಿಂಡಿ ಮಹೋತ್ಸವ ಜರುಗಿತು. ಒಂದೆಡೆ ಮುದ್ದುಕೃಷ್ಣರ ಕಲರವ, ಮತ್ತೊಂದೆಡೆ ನೂರೆಂಟು ಮುಖವರ್ಣಿಕೆಯ ವೇಷಗಳು, ಈ ಬಾರಿಯ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದವು.

ಕಳೆದ ಎರಡು ದಿನಗಳಿಂದ ಉಡುಪಿಯ ಕಡಗೋಲು ಕೃಷ್ಣ ಲಕ್ಷಾಂತರ ಜನರ ಕಣ್ಮಣಿಯಾಗಿದ್ದಾನೆ. ಪರ್ಯಾಯ ಮಠಾಧೀಶರಿಂದ ಬಗೆ ಬಗೆಯ ಪೂಜೆಗಳನ್ನು ಸ್ವೀಕರಿಸಿ ಸಂಭ್ರಮಿಸಿದ್ದಾನೆ. ಕೃಷ್ಣದೇವರ ಕರುಣೆ ಸದಾ ನಮ್ಮ ಮೇಲಿರಲಿ ಎಂದು ಭಕ್ತರು, ಕೈಮುಗಿದು ಬೇಡಿಕೊಂಡು ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.

ಇದನ್ನೂ ಓದಿ | ಮಥುರಾ ದೇವಳದಲ್ಲಿ ಕೃಷ್ಣ ಜನ್ಮಾಷ್ಟಮಿ ವೇಳೆ ಗುಂಪಿನಲ್ಲಿ ಉಸಿರುಗಟ್ಟಿ ಇಬ್ಬರ ಬಲಿ

Exit mobile version