Site icon Vistara News

Deepavali 2023: ದೀಪದಿಂದ ದೀಪ ಹಚ್ಚುತ್ತಾ ಮುಂದೆ ಸಾಗೋಣ…

deepavali celebration

| ಅಲಕಾ ಕೆ, ಮೈಸೂರು
ಸದಾ ಬೆಳಕೇ ಇದ್ದಿದ್ದರೆ ಹೇಗಿರುತ್ತಿತ್ತು? ಎಂದಿಗೂ ಹಗಲೇ ಆಗಿದ್ದರೆ ಏನಾಗುತ್ತಿತ್ತು? ಬೆಳಕಿನ ಮಹತ್ವವೇ ತಿಳಿಯುತ್ತಿರಲಿಲ್ಲ. ಕತ್ತಲೆ ಆವರಿಸಿದಾಗ, ಇರುಳು ಕವಿದಾಗ ಮಾತ್ರವೇ ಬೆಳಕಿನ ಭವ್ಯತೆ, ದಿವ್ಯತೆ, ಅನಿವಾರ್ಯತೆ ಅರಿವಾಗುವುದಕ್ಕೆ ಸಾಧ್ಯ. ಇರುಳು ದೀರ್ಘವಾಗುತ್ತಿರುವ ಈ ದಿನಗಳಲ್ಲಿ ಬರುವ ದೀಪಾವಳಿಯಲ್ಲೂ (Deepavali 2023) ದೀಪ ನಮಗೆ ಮುಖ್ಯವಾಗುವುದು ಇದೇ ಕಾರಣಕ್ಕೆ; ಕತ್ತಲೆ ಕಳೆಯುವಂಥ ಈ ಬೆಳಕಿನ ಮಹತ್ವವೇನು ಎಂಬುದನ್ನು ಅರ್ಥ ಮಾಡಿಸುವುದಕ್ಕೆ.

ಹಿಂದೆಂದೋ ಆಕಸ್ಮಿಕವಾಗಿ ಮುಖಾಮುಖಿಯಾದ ಬೆಂಕಿ ಎನ್ನುವುದು ಮಾನವರಲ್ಲಿ ನಾಗರೀಕತೆಯನ್ನು ಹುಟ್ಟು ಹಾಕಿತು. ಸೂರ್ಯನ ಹೊರತಾಗಿ ಬೆಳಕನ್ನು ಹೀಗೂ ಸೃಷ್ಟಿಸಬಹುದು ಎಂಬ ತಿಳಿವಳಿಕೆಯೇ ಜ್ಞಾನದ ವಿಸ್ತಾರಕ್ಕೆ ಮೂಲವಾಯಿತು. ಹಗಲು-ಇರುಳು, ಬಿಸಿಲು-ನೆರಳು ಇದ್ದಂತೆ ಕತ್ತಲೆ-ಬೆಳಕು ಸಹ ಜೀವನದಲ್ಲಿ ವೈರುಧ್ಯಗಳ ಅಗತ್ಯವನ್ನು, ಸೌಂದರ್ಯವನ್ನು ತಿಳಿಹೇಳುವ ಕೆಲಸ ಮಾಡತೊಡಗಿದವು. ಸರಳವಾಗಿ ಹೇಳುವುದಾದರೆ, ಬೆಳಕೆಂಬುದು ತಿಳಿವನ್ನು ವಿಸ್ತರಿಸುತ್ತಿದೆ ಎಂಬುದನ್ನು ತಿಳಿಯಬೇಕಾದರೂ, ಅರಿವಿಲ್ಲದ ಸ್ಥಿತಿಯೇನು ಎಂಬುದರ ಅರಿವಿರಬೇಕಲ್ಲವೆ?

ಇದನ್ನೂ ಓದಿ | Deepavali 2023: ಲಕ್ಷ್ಮೀಪೂಜೆಯನ್ನು ದೀಪಾವಳಿಯ ಅಮಾವಾಸ್ಯೆಯಂದೇ ಮಾಡುವುದೇಕೆ?

ಸಾಮಾಜಿಕ ಆಯಾಮಗಳು

ಎಲ್ಲ ಹಬ್ಬಗಳಂತಲ್ಲ ನಮ್ಮ ದೀವಳಿಗೆ ಹಬ್ಬ. ಕೃಷಿಯಲ್ಲಿ ತೊಡಗಿಸಿಕೊಂಡ ಶ್ರಮಜೀವಿಗಳಿಗೆ ಸುಗ್ಗಿಯ ಕೆಲಸವೆಲ್ಲ ಮುಗಿಯುತ್ತಿರುವ ಈ ಹೊತ್ತಲ್ಲಿ, ಮೈ-ಮನಗಳಿಗೆ ಚೆನ್ನಾಗಿ ಎಣ್ಣೆ ನೀವಿ, ಹೊಸದಾಗಿ ತುಂಬಿಸಿಟ್ಟ ಹಂಡೆಯ ಭರ್ತಿ ಬಿಸಿ ನೀರು ಎರೆದು, ಈವರೆಗಿನ ನೋವು ಬಳಲಿಕೆಗಳಿಗೆಲ್ಲ ಸಾಂತ್ವನ ಹೇಳುವ ಕಾಲ. ಆಗಷ್ಟೇ ಮಳೆಗಾಲ ಮುಗಿಸಿ, ತುಂಬಿ ತುಳುಕುವ ನೀರಿನಾಶ್ರಯಗಳನ್ನು ಗಂಗೆಯೆಂದು ಕರೆದು ಕೈ ಮುಗಿಯುವ ಕಾಲ. ಕಾಡಾಡಿ ಗಡ್ಡೆ-ಗೆಣಸುಗಳೆಲ್ಲ ಎದ್ದು ಬರುವ ಈ ಸಮಯದಲ್ಲಿ, ದೇಹಧರ್ಮಕ್ಕೆ ಅದುವೇ ಶ್ರೇಷ್ಠವೆಂದು ಅರಿಶಿನ, ಕೆಸುವಿನ ಗಡ್ಡೆ, ಸುವರ್ಣ ಗಡ್ಡೆ ಮುಂತಾದವನ್ನು ಕಿತ್ತು ಬಳಸುವ ಕಾಲ. ಪ್ರಕೃತಿಯೊಂದಿಗಿನ ಸಮನ್ವಯವೆಂದರೆ ಮೈ-ಮನಗಳಿಗೆಲ್ಲ ಹಿತವೆಂಬುದನ್ನು ಮಿತವಾಗಿ ತಿಳಿಸಿಕೊಡುವ ಕಾಲ.

ಹಾಗೆಂದು ಇದು ಕೇವಲ ನೆಲದಮ್ಮನ ಜೊತೆಗಿನ ನಂಟಿನ ಹಬ್ಬವೂ ಅಲ್ಲ. ಸಂಪತ್ತಿನ ಸಮೃದ್ಧಿಯನ್ನು ನೀಡಿದ ʻಸಿರಿʼಯನ್ನು ಆರಾಧಿಸುವಲ್ಲಿ ಉದ್ದಿಮೆ, ವ್ಯಾಪಾರ, ವಹಿವಾಟುಗಳು ವ್ಯಸ್ತ. ಲಕ್ಷ್ಮೀಪೂಜೆಗೆಂದು ಬಂಧು-ಮಿತ್ರರನ್ನು ಆಹ್ವಾನಿಸಿ, ಸಾಮಾಜಿಕ ನಂಟುಗಳ ವಿಸ್ತರಣದ ಎಡೆಯಲ್ಲೇ ಸಿರಿಯ ಸಮೃದ್ಧಿಯನ್ನೂ ಹಾರೈಸುವ ಚತುರತೆಯನ್ನೂ ಕಾಣಬಹುದು. ಸಂಪತ್ತಿನ ಝಗಮಗದಲ್ಲೇ ಬೆಳಕನ್ನು ಕಾಣುವ ಯತ್ನವಿದು. ಬದುಕಿಗೆ ಎಲ್ಲವೂ ಬೇಕಲ್ಲವೇ?
ವರ್ಷವಿಡೀ ನಮ್ಮನ್ನು ಹಾಲಿತ್ತು ಪೊರೆಯುವ ರಾಸುಗಳಿಗೆ ಕೃತಜ್ಞತೆ ಹೇಳುವುದಕ್ಕೊಂದು ದಿನವಿದೆ ದೀಪಾವಳಿಯಲ್ಲಿ. ಅವನ್ನೆಲ್ಲ ಅಲಂಕರಿಸಿ, ಊರ ಬಯಲಿಗೆ ತಂದು ಸಂಭ್ರಮಿಸುವ ಕ್ರಮಗಳು ಎಷ್ಟೋ ಪ್ರಾಂತ್ಯಗಳಲ್ಲಿವೆ. ಊರ ಪೋರರ ಸಾಹಸ, ಉತ್ಸಾಹಿಗಳ ಚಾತುರ್ಯ ಪ್ರದರ್ಶನಕ್ಕೂ ವೇದಿಕೆಗಳಿಲ್ಲಿ ಸೃಷ್ಟಿಯಾಗುತ್ತವೆ. ತವರಿಗೆ ಬರುವ ಹೆಮ್ಮಕ್ಕಳು, ಹೊಸ ಸೊಸೆಯಂದಿರು ಊರ ಮಂದಿಯನ್ನೆಲ್ಲ ಭೇಟಿ ಮಾಡುವ ತಾಣವೂ ಹೌದು. ಈ ಮೂಲಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯಷ್ಟಕ್ಕೆ ಸೀಮಿತಗೊಳ್ಳದೆ, ತಲೆಮಾರುಗಳ ನಡುವೆ ಕೊಂಡಿ ಬೆಸೆದು, ಆಪ್ತವಾದ ಸಮಷ್ಟಿ ಪ್ರಜ್ಞೆಯೊಂದು ರೂಪುಗೊಳ್ಳುವ ವೇದಿಕೆಯಾಗಿ ಈ ಹಬ್ಬ ಕಂಡುಬರುತ್ತದೆ.

ಇದನ್ನೂ ಓದಿ | Deepavali 2023: ಭಾರತದ ಈ ಊರುಗಳ ದೀಪಾವಳಿಯ ಸಂಭ್ರಮ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು!

ಅಂತರಂಗದ ಬೆಳಕು

ಹೊರಗಿನ ಬೆಳಕು ಕಡಿಮೆಯಾದಾಗ, ಕೈ ಹಿಡಿದು ನಡೆಸುವುದಕ್ಕೆ ಒಳಗಿನ ಬೆಳಕು ಬೇಕು. ಬೆಳಕೆಂದರೆ ಮೂಲವೊಂದು ಸೂಸುವ ಪ್ರಭೆಯಷ್ಟೇ ಅಲ್ಲ, ಅದೊಂದು ಭರವಸೆ. ವನವಾಸವನ್ನು ಮುಗಿಸಿ ಶ್ರೀರಾಮ ಮರಳಿದ ಕಥೆ, ನರಕಾಸುರನನ್ನು ಕೃಷ್ಣ ಕೊಂದ ಕಥೆ, ಬಲಿಯನ್ನು ವಾಮನ ಪಾತಾಳಕ್ಕೆ ತಳ್ಳಿದ ಕಥೆ, ಗೋವರ್ಧನವನ್ನೆತ್ತಿ ಗೋಕುಲವಾಸಿಗಳನ್ನು ಕಾಪಾಡಿದ ಕಥೆ- ಇಂಥ ಎಲ್ಲವೂ ಮನದಲ್ಲಿ ಮೂಡಿಸುವುದು ಈ ಭರವಸೆಯೆಂಬ ಬೆಳಕನ್ನೇ. ಎಲ್ಲವನ್ನೂ ತಾನೇ ಮಾಡುತ್ತೇನೆಂಬ ಭಾವವನ್ನು ಮೀರಿ, ಸದಾ ಕೈ ಹಿಡಿದು ನಡೆಸುವ ಬೆಳಕಿನ ಬಗ್ಗೆ ಚಿಂತನೆ ಮೂಡುವುದು ಇಲ್ಲಿಯೇ. ʻಜ್ಯೋತಿಷಾಂ ಜ್ಯೋತಿರುತ್ತಮಂʼ ಎನ್ನುವ, ಅಂದರೆ ಎಲ್ಲ ಬೆಳಕುಗಳಿಗಿಂತ ಉತ್ಕೃಷ್ಟವಾದ ಬೆಳಕೆಂದರೆ ಪರಂಜ್ಯೋತಿ ಎಂಬತ್ತ ಬುದ್ಧಿಯನ್ನು ಪ್ರಚೋದಿಸುವುದು ಇದೇ ಭಾವವೇ ತಾನೆ?
ʻಕುಂಬಾರ ಮಾಡಿದ ಹಣತೆಗೆ ಗಾಣಿಗ ತಯಾರಿಸಿದ ಎಣ್ಣೆ ಹಾಕಿ, ರೈತ ಬೆಳೆದ ಬತ್ತಿಗೆ ಜ್ಯೋತಿ ಮುಟ್ಟಿಸಲು ಕುಲವಿಲ್ಲದ ಬೆಳಕು ನೋಡಾʼ ಎಂಬ ವಚನ ನೆನಪಾಗುತ್ತಿದೆ. ಬೆಳಕಿಗೆಲ್ಲಿಯ ಗಡಿ, ಬೇಲಿ, ಕಟ್ಟುಪಾಡುಗಳು? ಹಾಗೆ ನೋಡಿದರೆ, ಬೆಳಕೆಂಬುದು ಬಿಡುಗಡೆಯ ಸಂಕೇತವೂ ಹೌದು. ಎಲ್ಲ ಕಟ್ಟುಪಾಡುಗಳನ್ನು ಮೀರಿದಷ್ಟಕ್ಕೂ ಬಿಡುಗಡೆಯ ಹಾದಿ ನಿಚ್ಚಳವಾಗುತ್ತದೆ; ಬೆಳ್ಳಂಬೆಳಕಿನ ಹಾದಿ ತೆರೆಯುತ್ತದೆ. ನಮ್ಮೆದೆಯ ಅರಿವನ್ನು ವಿಸ್ತರಿಸುತ್ತಾ, ಜಗದಗಲಕ್ಕೆ ಏರುತ್ತಾ, ಲೋಕವನೆಲ್ಲ ಬೆಳಗುವ ಚೈತನ್ಯ ಸ್ವರೂಪಿಯಾದ ಬೆಳಕು ನಮ್ಮೆಲ್ಲರಿಗೂ ಹಾದಿ ತೋರಲಿ. ದೀಪದಿಂದ ದೀಪ ಹಚ್ಚುತ್ತಾ ಮುಂದೆ ಸಾಗೋಣ. ದೀಪಾವಳಿಯ ಶುಭಾಶಯಗಳು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version