Site icon Vistara News

Lunar Eclipse : ಚಂದ್ರ ಗ್ರಹಣ ಸೂತಕ ಆರಂಭ; ಗ್ರಹಣ ಕಾಲದಲ್ಲಿ ಮಗು ಹುಟ್ಟಿದ್ರೆ ರಾಜಯೋಗ

Lunar Eclipse

ಬೆಂಗಳೂರು: ಅಕ್ಟೋಬರ್‌ 28-29ರ ರಾತ್ರಿ 1.06 ಗಂಟೆಯಿಂದ 2.23ರ ಮಧ್ಯೆ ಭಾರತದಲ್ಲಿ ಚಂದ್ರಗ್ರಹಣ ಗೋಚರಿಸಲಿದ್ದು (Lunar Eclipse) ಗೋಚರಿಸಲಿದ್ದು ಈ ಕೌತುಕಗಳ ಕ್ಷಣಗಳಿಗಾಗಿ (celestial beauty) ಜಗತ್ತು ಕಾತರದಿಂದ ಕಾಯುತ್ತಿದೆ. ವಿಜ್ಞಾನದ ಆಸಕ್ತರು ಗ್ರಹಣ ಕಾಲದಲ್ಲಿ ಸಂಭವಿಸುವ ಆಕರ್ಷಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದರೆ ಗ್ರಹಣವನ್ನು ಭಕ್ತಿ ಭಾವಗಳಿಂದ ನೋಡುವವರು ಮನೆ ಸ್ವಚ್ಛತೆ, ಅಡುಗೆ ಮತ್ತು ಗ್ರಹಣ ಮೋಕ್ಷದ ನಂತರದ ಪೂಜೆಗಳಿಗೆ ಅಣಿಯಾಗುತ್ತಿದ್ದಾರೆ. ಮಧ್ಯಾಹ್ನ 2.55ಕ್ಕೆ ಗ್ರಹಣ ಸೂತಕ ಆರಂಭಗೊಂಡಿದೆ.

ಜಾಗತಿಕವಾಗಿ ಅಕ್ಟೋಬರ್‌ 28ರ ರಾತ್ರಿ 11.31ಕ್ಕೆ ಚಂದ್ರಗ್ರಹಣ ಆರಂಭವಾಗಿ ಅಕ್ಟೋಬರ್‌ 29ರ ಮಧ್ಯರಾತ್ರಿ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಭಾರತದಲ್ಲಿ ಅಕ್ಟೋಬರ್ 29ರಂದು ಭಾರತೀಯ ಕಾಲಮಾನ 1 ಗಂಟೆ 6 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 2 ಗಂಟೆ 23 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 1.45ರ ವೇಳೆಗೆ ಶೇ. 12ರಷ್ಟು ಚಂದ್ರ ಬಿಂಬವು ನೆರಳಿನಂತೆ ಇರಲಿದೆ ಎಂದು ಅಂದಾಜಿಸಲಾಗಿದೆ.

ಧಾರ್ಮಿಕವಾಗಿ ನೋಡುವುದಾದರೆ ಶೋಭಕೃತ್‌ ನಾಮ ಸಂವತ್ಸರ ಆಶ್ವಯುಜ ಶುಕ್ಲ ಪೌರ್ಣಿಮೆಯು ಶನಿವಾರ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ರಾಹುಗ್ರಸ್ತ ಖಂಡಗ್ರಾಸ ಚಂದ್ರಗ್ರಹಣವಾಗುತ್ತಿದೆ.

ವಿಜ್ಞಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಭಾಗಶಃ ಚಂದ್ರ ಗ್ರಹಣವು ಅಕ್ಟೋಬರ್ 28-29ರಂದು ಸಂಭವಿಸಲಿದೆ (6-7 ಕಾರ್ತಿಕ, 1945 ಶಕ ಯುಗ). ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರವನ್ನು ಒಳಗೊಂಡಿರುವ ಪ್ರದೇಶದಲ್ಲಿ ಗ್ರಹಣ ಗೋಚರಿಸುತ್ತದೆ.

ನೆನಪಿಡಿ, ಆಹಾರ ಸೇವನೆಗೆ ಮಧ್ಯಾಹ್ನ 2.55ಕ್ಕೆ ಡೆಡ್‌ ಲೈನ್‌

-ಗ್ರಹಣವನ್ನು ನೀವು ಧಾರ್ಮಿಕ ದೃಷ್ಟಿಯಿಂದ ನೋಡುವುದಾದರೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದಾದರೆ ಶನಿವಾರ ಮಧ್ಯಾಹ್ನ 2.55ರೊಳಗೆ ಊಟ ಉಪಾಹಾರಾದಿಗಳನ್ನು ಮುಗಿಸಿಕೊಳ್ಳಬೇಕು. ಯಾಕೆಂದರೆ ಮಧ್ಯಾಹ್ನ 2.55ರಿಂದಲೇ ಗ್ರಹಣ ಸೂತಕ ಆವರಿಸಲಿದೆ. ಕೆಲವು ಕಡೆ ಸಂಜೆ 6 ಗಂಟೆಯವರೆಗೂ ಆಹಾರ ಸೇವನೆಗೆ ಅವಕಾಶವಿದೆ.

-ಚಿಕ್ಕ ಮಕ್ಕಳು, ವೃದ್ಧರು ಹಾಗೂ ರೋಗಗ್ರಸ್ತರು ರಾತ್ರಿ 7.30ರ ಮುಂಚಿತವಾಗಿ ಲಘು ಆಹಾರವನ್ನು ಸ್ವೀಕರಿಸಬಹುದು.
– ಮಧುಮೇಹ ಮೊದಲಾದ ಸಮಸ್ಯೆಗಳು ಇರುವವರು ಆಹಾರ ಸೇವಿಸಬಹುದು.

ಗ್ರಹಣ ಕಾಲದಲ್ಲಿ ಏನು ಮಾಡಬಹುದು? ಮಾಡಬಾರದು?

-ಗ್ರಹಣದ ಸೂತಕ ಕಾಲ ಆರಂಭವಾದ (ಮಧ್ಯಾಹ್ನ 2.55) ಆಹಾರ ಸೇವನೆ ಮಾಡದಿದ್ದರೆ ಒಳ್ಳೆಯದು.
-ಗ್ರಹಣ ಸಮಯದಲ್ಲಿ ವಿಶ್ರಾಂತಿ ಪಡೆಯಬಹುದು. ಹಾಗಂತ ನಿದ್ದೆ ಮಾಡುವುದು ಒಳ್ಳೆಯದಲ್ಲ.
– ಗ್ರಹಣ ಕಾಲದಲ್ಲಿ ಹೊರಗೆ ಓಡಾಡಬೇಡಿ, ಅದರಲ್ಲೂ ಗರ್ಭಿಣಿಯರು ಮನೆಯೊಳಗೇ ವಿಶ್ರಾಂತಿ ಪಡೆದರೆ ಉತ್ತಮ.
– ಗ್ರಹಣ ಕಾಲದಲ್ಲಿ ಅಡುಗೆ ಮಾಡುವುದು ಬೇಡ.
– ಗ್ರಹಣ ಸಂದರ್ಭದಲ್ಲಿ ದೇವರ ಪೂಜೆ ಮಾಡುವಂತಿಲ್ಲ. ದೇವರ ನಾಮಸ್ಮರಣೆ, ಶ್ಲೋಕ ಪಠಣ ಮಾಡಬಹುದು.

ಗ್ರಹಣ ಮೋಕ್ಷ ನಂತರ ಏನು ಮಾಡಬೇಕು?

ರಾತ್ರಿ 2.23ಕ್ಕೆ ಗ್ರಹಣ ಮೋಕ್ಷವಾಗುತ್ತದೆ. ಅದಾದ ಬಳಿಕ ಸ್ನಾನ ಮಾಡಿ ದೇವರಿಗೆ ದೀಪಹಚ್ಚಬೇಕು.
– ಸಾಧ್ಯವಾದರೆ ವಿಷ್ಣು ಅಥವಾ ಶಿವನ ದರ್ಶನ ಮಾಡಬಹುದು. ದುರ್ಗಿ, ಕಾಳಿ ದರ್ಶನ ಮಾಡಿದ್ರೆ ಒಳ್ಳೆಯದು.
– ದೇವಾಲಯಗಳಲ್ಲಿ ಅಕ್ಕಿ, ಉದ್ದಿನಬೇಳೆ ದಾನ ಮಾಡಬೇಕು. ಚಂಡಿಕಾ ಹೋಮ, ಪಾರಾಯಣದಲ್ಲಿ ಭಾಗಿಯಾದರೆ ಉತ್ತಮ.

ಯಾವ ರಾಶಿಗಳಿಗೆ ಯಾವ ಫಲ?

ಶುಭ ಫಲ: ಮಿಥುನ, ಕರ್ಕಾಟಕ, ವೃಶ್ಚಿಕ, ಕುಂಭ
ಮಿಶ್ರ ಫಲ: ಸಿಂಹ, ತುಲಾ, ಧನು, ಮೀನ
ಅಶುಭ ಫಲ: ಮೇಷ, ವೃಷಭ, ಕನ್ಯಾ, ಮಕರ

ಅಶ್ವಿನಿ ನಕ್ಷತ್ರ ಮೇಷ ರಾಶಿಯವರಿಗೆ ಅತಿ ಹೆಚ್ಚು ಅಶುಭ ಫಲ ಇರುವುದರಿಂದ ಅವರು ಬಿಳಿ ಬಟ್ಟೆಯಲ್ಲಿ ಉದ್ದಿನ ಬೇಳೆ-ಅಕ್ಕಿ ಗಂಟು ಕಟ್ಟಿ ದೇವರ ಮನೆಯಲ್ಲಿಡಿ ಮನೆ ಮೇಲೆ ಅಥವಾ ಕಾಂಪೌಂಡ್ ಮೇಲೆ ಮೊಸರು ಅನ್ನ ಇಟ್ಟರೆ ಶಾಂತಿ. ಮಕರ, ಕುಂಭ, ತುಲಾ ರಾಶಿಯವರು ಮಹಾಲಕ್ಷ್ಮಿ ಪ್ರಾರ್ಥನೆ ಮಾಡಿ. ಶಿವನ ಆರಾಧನೆ ಮಾಡಿದ್ರೆ ಗ್ರಹಣದ ದೋಷ ನಿವಾರಣೆ ಆಗಲಿದೆ.

ಗ್ರಹಣದಿಂದ ಕೆಟ್ಟದ್ದೇ ಆಗುತ್ತದೆ ಎನ್ನುವ ಭಯ ಕೆಲವರಿಗೆ ಇದೆ. ಆದರೆ, ಅಂಥ ಭಯ ಬೇಕಾಗಿಲ್ಲ. ಕೆಲವು ನಕ್ಷತ್ರ, ರಾಶಿಗಳಿಗೆ ಸ್ವಲ್ಪ ಅಶುಭ ಫಲ ಇರಬಹುದು ಅಷ್ಟೆ. ನಿಜವೆಂದರೆ ಗ್ರಹಣ ಕಾಲದಲ್ಲಿ ಮಕ್ಕಳು ಹುಟ್ಟಿದರೆ ಆ ಮಕ್ಕಳಿಗೆ ರಾಜಯೋಗ ಲಭ್ಯವಾಗುತ್ತದೆಯಂತೆ.

ಗ್ರಹಣ ವೀಕ್ಷಣೆ ಆಸಕ್ತರು ಏನು ಮಾಡಬೇಕು?

ನೀವು ಚಂದ್ರ ಗ್ರಹಣದ ನೈಸರ್ಗಿಕ ಕೌತುಕವನ್ನು ವೀಕ್ಷಿಸಲು ಆಸಕ್ತರಾಗಿದ್ದರೆ ಇವತ್ತು ಬೇಗನೆ ಮಲಗಿಕೊಳ್ಳಿ. ರಾತ್ರಿ 1 ಗಂಟೆಗೆ ಅಲಾರಂ ಇಟ್ಟುಕೊಳ್ಳಿ. ಆ ಹೊತ್ತಿಗೆ ಎದ್ದು 1.06ಕ್ಕೆ ಆರಂಭವಾಗುವ ಗ್ರಹಣದ ಚೆಲುವನ್ನು ಕಣ್ತುಂಬಿಕೊಳ್ಳಿ. ಇದನ್ನು ಬರಿಗಣ್ಣಿನಿಂದಲೂ ನೋಡಬಹುದು.

ಇದನ್ನೂ ಓದಿ : Lunar Eclipse: ಇಂದು ಚಂದ್ರಗ್ರಹಣ; ಯಾವ ರಾಶಿಗೆ ಏನು ಪರಿಣಾಮ?

ಯಾವ ಭಾಗದಲ್ಲಿ ಚಂದ್ರೋದಯವಾಗುತ್ತದೆ? ಗ್ರಹಣ ಕಾಲದಲ್ಲಿ ಎಲ್ಲಿರುತ್ತದೆ ಎನ್ನುವುದನ್ನು ಗಮನಿಸಿ. ಎಲ್ಲ ನಿಂತರೆ ಚೆನ್ನಾಗಿ ಕಾಣುತ್ತದೆ ಎಂದು ಗುರುತು ಮಾಡಿಕೊಳ್ಳಿ. ಮೈದಾನ, ಬೀಚ್‌ ಮೊದಲಾದ ಪ್ರದೇಶಗಳು ಚಂದ್ರಗ್ರಹಣ ನೋಡಲು ಸೂಕ್ತವಾದ ಜಾಗ.

Exit mobile version