ಹಿಂದೂಗಳ ಮಹತ್ವದ ಹಬ್ಬಗಳಲ್ಲಿ ಮಹಾ ಶಿವರಾತ್ರಿ (Maha Shivaratri 2023) ಸಹ ಒಂದು. ಶಿವರಾತ್ರಿ ಬಂತೆಂದರೆ ಚಳಿಗಾಲ ಮುಗಿದು, ಬೇಸಿಗೆ ಪ್ರಾರಂಭವಾಗುತ್ತದೆ ಎಂದು ಸಹ ಹೇಳುತ್ತಾರೆ. ಶಿವ, ಶಂಕರ, ಮಹಾದೇವ, ಗಂಗಾಧರ, ಶಂಭು, ಮಹಾದೇವ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಶಿವನನ್ನು ಆರಾಧಿಸಲು ಪ್ರಶಸ್ತ ದಿನವೇ ಶಿವರಾತ್ರಿಯಾಗಿದೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ ಇದು. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಯಲ್ಲಿ ಹೇಳಿದ್ದಾನೆ ಎನ್ನುತ್ತದೆ ಶಿವಪುರಾಣ.
ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಈ ಸಾಲಿನಲ್ಲಿ 2023ರ ಫೆಬ್ರವರಿ 18ರ ಶನಿವಾರದಂದು ಆಚರಿಸಲಾಗುತ್ತದೆ. ಶಿವರಾತ್ರಿಯಂದು ಉಪವಾಸದಿಂದ ಇದ್ದು, ಶಿವ ಪೂಜೆಯನ್ನು ಮಾಡುತ್ತಾರೆ. ಈ ದಿನಕ್ಕಾಗಿ ಶಿವಭಕ್ತರು ಈಗ ತವಕದಿಂದ ಕಾಯುತ್ತಿದ್ದಾರೆ.
ಶಿವರಾತ್ರಿಯಂದು ಶಿವನ ದೇವಸ್ಥಾನಗಳಿಗೆ ತೆರಳಿ, ಶಿವನ ದರ್ಶನ ಮಾಡಿ ಪೂಜೆ, ಅರ್ಚನೆ ಮತ್ತು ಅಭಿಷೇಕಗಳನ್ನು ಮಾಡಿಸುತ್ತಾರೆ. ಶಿವರಾತ್ರಿಯು ಹೆಸರೇ ಹೇಳುವಂತೆ ವಿಶೇಷವಾಗಿ ರಾತ್ರಿ ಸಮಯದಲ್ಲಿಯೇ ಆಚರಿಸುವ ಹಬ್ಬವಾಗಿದೆ. ಹೌದು, ಶಿವರಾತ್ರಿಯಂದು ಶಿವನಿಗೆ ರಾತ್ರಿ ವೇಳೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಜೊತೆಗೆ ರಾತ್ರಿಯಿಡಿ ಜಾಗರಣೆ ಮಾಡುತ್ತಾ ಶಿವನ ಆರಾಧನೆ ಮಾಡಲಾಗುತ್ತದೆ.
ಶಿವರಾತ್ರಿ ಶುಭ ಮುಹೂರ್ತ
ಶಿವರಾತ್ರಿಯಂದು ರಾತ್ರಿಯ ನಾಲ್ಕು ಪ್ರಹರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂಬ ವಿಧಾನವಿದೆ. ಅದಕ್ಕೆ ‘ಯಾಮಪೂಜೆ’ ಎನ್ನುತ್ತಾರೆ. ಆದರೆ ಬಹುತೇಕ ಜನರು ತಮಗೆ ಅನುಕೂಲವಾದ ಸಮಯದಲ್ಲಿ ಪೂಜೆ ಸಲ್ಲಿಸಬಹುದಾಗಿದೆ. ಮಧ್ಯ ರಾತ್ರಿಯಲ್ಲಿ ಶಿವ ಪೂಜೆಯನ್ನು ಮಾಡುವುದು ಅತ್ಯಂತ ಶುಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಫೆಬ್ರವರಿ 18ರಂದು ಪೂರ್ತಿ ದಿನ ಪೂಜೆ ಸಲ್ಲಿಸಬಹುದಾಗಿದೆ. ಫೆಬ್ರವರಿ 19ರಂದು ಪಾರಾಯಣ ಮಾಡಲು ಮಧ್ಯಾಹ್ನದವರೆಗೂ ಸಮಯವಿರುತ್ತದೆ.
ಮಹಾದೇವ ಶಿವನು ಅಭಿಷೇಕ ಪ್ರಿಯ ಹಾಗಾಗಿ ಶಿವರಾತ್ರಿಯಂದು ದೇವಸ್ಥಾನಗಳಲ್ಲಿ ನಿರಂತರ ವಿವಿಧ ರೀತಿಯ ಭಿಷೇಕಗಳು ನಡೆಯುತ್ತಿರುತ್ತವೆ. ಜೊತೆಗೆ ರುದ್ರಾಭಿಷೇಕವೂ ಈ ದಿನ ನಡೆಯುತ್ತವೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಅರ್ಪಿಸುತ್ತಾ ‘ಓಂ ನಮಃ ಶಿವಾಯ’ ಮಂತ್ರವನ್ನು ಪಠಿಸಲಾಗುತ್ತದೆ. ಶಿವರಾತ್ರಿಯಂದು ಎಚ್ಚರವಾಗಿದ್ದು ಶಿವ ಸ್ಮರಣೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಶಿವರಾತ್ರಿಯ ಜಾಗರಣೆ ಮತ್ತು ಶಿವನ ಧ್ಯಾನ ಮಾಡುವುದರಿಂದ ನಮ್ಮೊಳಗಿನ ಆತ್ಮದಲ್ಲಿ ಹೊಸ ಚೈತನ್ಯ ಜಾಗೃತವಾಗುತ್ತದೆ.
ಶಿವರಾತ್ರಿಯಂದು ಸಾಮಾನ್ಯವಾಗಿ ಉಪವಾಸದಿಂದ ಇದ್ದು ವ್ರತಾಚರಣೆ ಮಾಡುತ್ತಾರೆ. ಉಪವಾಸ ಮಾಡದೇ ಇದ್ದವರು ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. ವಿಶೇಷವಾಗಿ ಅವಲಕ್ಕಿ ಮತ್ತು ಹೆಸರು ಕಾಳಿನ ಪಾಯಸವನ್ನು ತಯಾರಿಸುತ್ತಾರೆ. ಶಿವರಾತ್ರಿಯಂದು ರಾತ್ರಿ ಹೊತ್ತು ಯಾರೂ ಊಟ ಮಾಡುವುದಿಲ್ಲ. ಉಪಾಹಾರವನ್ನು ಸ್ವೀಕರಿಸಿ ಜಾಗರಣೆ ಮಾಡುತ್ತಾರೆ.
ಶಿವರಾತ್ರಿ ಆಚರಣೆಯ ವಿಶೇಷ
ಪೌರಾಣಿಕ ಕತೆಯ ಅನುಸಾರ ಮಹಾ ಶಿವರಾತ್ರಿಯ ದಿನ ಶಿವ ಮತ್ತು ಶಕ್ತಿಯ ಮಿಲನವಾಗಿತ್ತೆಂದು ಹೇಳಲಾಗುತ್ತದೆ. ಹಾಗಾಗಿ ಶಿವ ಭಕ್ತರು ಈ ದಿನ ಶಿವನ ವಿವಾಹದ ಉತ್ಸವವನ್ನು ಆಚರಿಸುತ್ತಾರೆ. ಶಿವರಾತ್ರಿಯ ದಿನ ಶಿವನೊಂದಿಗೆ ಶಕ್ತಿಯ ವಿವಾಹವಾಗಿತ್ತು ಎಂಬ ನಂಬಿಕೆ ಇದೆ. ಶಿವರಾತ್ರಿಯಂದೇ ಶಿವನು ಹಾಲಾಹಲ ವಿಷವನ್ನು ಕುಡಿದಿದ್ದ ಎನ್ನಲಾಗುತ್ತದೆ. ಜೊತೆಗೆ ಶಿವರಾತ್ರಿಯಂದೇ ಶಿವ ಮತ್ತು ಪಾರ್ವತಿ ಮತ್ತೊಮ್ಮೆ ಮದುವೆಯಾಗಿದ್ದರು ಎಂದು ಸಹ ಕೆಲವು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶಿವನು ತಾಂಡವ ನೃತ್ಯ ಮಾಡಿದ್ದ ದಿನವೂ ಇದೇ ಆಗಿದೆ ಎಂದು ಹೇಳಲಾಗುತ್ತದೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ.
ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ.
ಇದನ್ನೂ ಓದಿ: Prerane : ನಾವು ಕೋಪ ಮಾಡಿಕೊಳ್ಳಬಾರದು; ಕೃತಜ್ಞರಾಗಿರಬೇಕು