Site icon Vistara News

Maha Shivaratri 2023: ಪತ್ನಿ ಜತೆ ಶಿವ ದರ್ಶನ ಪಡೆದ ಮಾಜಿ ಪ್ರಧಾನಿ ದೇವೇಗೌಡ; ಮೈಸೂರಿನಲ್ಲೂ ಅದ್ಧೂರಿ ಆಚರಣೆ

#image_title

ಬೆಂಗಳೂರು/ಮೈಸೂರು: ಮಾಜಿ ಪ್ರಧಾನಿ ದೇವೇಗೌಡರು ಮಹಾಶಿವರಾತ್ರಿ (Maha Shivaratri 2023) ಪ್ರಯುಕ್ತ ಬೆಂಗಳೂರಿನ ಪದ್ಮನಾಭನಗರ ಸಮೀಪ ಇರುವ ಶಿವನ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಂಡಿ ನೋವಿನಿಂದ ಬಳಲುತ್ತಿದ್ದ ಕಾರಣ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಪತ್ನಿ ಚನ್ನಮ್ಮ ಜತೆಗೆ ಬೆಂಗಳೂರಿನಲ್ಲಿಯೇ ಶಿವನ ದರ್ಶನವನ್ನು ಪಡೆದುಕೊಂಡರು.

ಬಳಿಕ ಮಾತನಾಡಿದ ಅವರು, ಈ ರಾಷ್ಟ್ರದಲ್ಲಿ ಮಹಾ ಶಿವರಾತ್ರಿಯನ್ನು ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಒಂದೊಂದು ಪಂಗಡದವರು ಒಂದೊಂದು ರೀತಿಯಲ್ಲಿ ಆಚರಣೆ ಮಾಡುತ್ತಾರೆ. ನಾವು ಈಶ್ವರನ ಆರಾಧಕರಾಗಿದ್ದು, ವಂಶ ಪಾರಂಪರ್ಯವಾಗಿ ಶಿವರಾತ್ರಿಯನ್ನು ಆಚರಣೆ ಮಾಡುತ್ತಾ ಬಂದಿದ್ದೀವೆ. ಪ್ರತಿ ವರ್ಷ ನಮ್ಮ ಊರಿನ ಭೈರವೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದೆ. ಆದರೆ ಈ ಬಾರಿ ಹೋಗಲು ಆಗದ ಕಾರಣಕ್ಕೆ ಬೆಂಗಳೂರಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ. ಈ ವಯಸ್ಸಿನಲ್ಲಿ ಊರಿಗೆ ಹೋಗಲು ಆಗಿಲ್ಲ. ಯಾರೂ ಅನ್ಯತಾ ಭಾವಿಸಬಾರದೆಂದು ಮನವಿ ಮಾಡಿದರು.

ಅರಮನೆ ನಗರೀ ಮೈಸೂರಿನಲ್ಲೂ ಶಿವ ನಾಮಸ್ಮರಣೆ

ಮಹಾ ಶಿವರಾತ್ರಿ ಹಬ್ಬವನ್ನು ಮೈಸೂರಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಮೈಸೂರು ಅರಮನೆ ಅಂಗಳದಲ್ಲಿರುವ ತ್ರಿನಯನೇಶ್ವರ ಲಿಂಗಕ್ಕೆ ಚಿನ್ನದ ಕೊಳಗ ಧಾರಣೆ ಮಾಡಲಾಯಿತು. ವರ್ಷಕ್ಕೆ ಒಮ್ಮೆ ಮಾತ್ರ ಈ ಕೊಳಗ ಧಾರಣೆ ಮಾಡುವುದು ವಿಶೇಷವಾಗಿದೆ.

ಬರೋಬ್ಬರಿ 11 ಕೆ.ಜಿ. ತೂಕದ ಅಪರಂಜಿ ಚಿನ್ನದ ಈ ಕೊಳಗ, ಚಿನ್ನದ ಜಟಾಮುಕುಟ, ಕರ್ಣಕುಂಡಲ, ತಾಟಂಕ, ಎರಡು ಲೋಲಕ, ಎರಡು ಕೆಂಪು ಹರಳಿನ ಓಲೆಗಳು, ಹಣೆಯಲ್ಲಿ ಬೆಲೆಬಾಳುವ ಕೆಂಪು ಕಲ್ಲಿನ ತಿಲಕ, ಸಣ್ಣ ಮೂಗುತಿಯುಳ್ಳ ಗಂಗೆ ಮೂರ್ತಿಯನ್ನು ಕೊಳಗ ಒಳಗೊಂಡಿದೆ. ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಅರಮನೆ ಆಡಳಿತ ಮಂಡಳಿ ಭಕ್ತರಿಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿತ್ತು.

ಇದನ್ನೂ ಓದಿ: Maha Shivaratri 2023: ಹರಕೆರೆ ರಾಮೇಶ್ವರ ದೇಗುಲದಲ್ಲಿ ಸಹಸ್ರ ಲಿಂಗಗಳಿಗೆ ಪೂಜೆ; 52 ಅಡಿ ಎತ್ತರದ ಬೃಹತ್ ಶಿವಮೂರ್ತಿಗೆ ನಮನ

ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಪುತ್ರ ಸಂತಾನ ಇರಲಿಲ್ಲ. 1953ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದರು. ಈ ಸಂತೋಷದ ಸವಿನೆನಪಿಗಾಗಿ ಜಯಚಾಮರಾಜೇಂದ್ರ ಒಡೆಯರ್ ಅಪರಂಜಿ ಚಿನ್ನದ ಕೊಳಗ ಮಾಡಿಸಿ ಕೊಟ್ಟಿದ್ದರು. ಬೆಲೆಬಾಳುವ ಈ ಅಪರೂಪದ ಕೊಳಗವನ್ನು ಶಿವರಾತ್ರಿ ದಿನ ಮಾತ್ರ ತ್ರಿನೇಶ್ವರ ಲಿಂಗಕ್ಕೆ ಧಾರಣೆ ಮಾಡುವ ವಾಡಿಕೆ ಇದೆ.

Exit mobile version