Site icon Vistara News

Maha Shivaratri 2023: ರಾಜ್ಯಾದ್ಯಂತ ಶಿವ ಭಜನೆ; ದೇಗುಲಗಳಲ್ಲಿ ಭಕ್ತರ ಪ್ರದಕ್ಷಿಣೆ

Special pujas at Shiva temples across the state on the occasion of Mahashivratri

Special pujas at Shiva temples across the state on the occasion of Mahashivratri

ಬೆಂಗಳೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ ಪ್ರಯುಕ್ತ (Maha Shivaratri 2023) ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ನಾನಾ ಹೆಸರುಗಳಿಂದ ಕರೆಯಲ್ಪಡುವ ಅಭಿಷೇಕ ಪ್ರಿಯ ಶಿವನಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಲಾಯಿತು. ರಾಜಧಾನಿ ಬೆಂಗಳೂರಿನಲ್ಲಿರುವ ಶಿವನ ದೇವಸ್ಥಾನಗಳಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ಮಲ್ಲೇಶ್ವರದ ಕಾಡು ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಹೂವಿನಿಂದ ಬೃಹತ್ ಶಿವಲಿಂಗವನ್ನು ನಿರ್ಮಾಣ ಮಾಡಲಾಗಿತ್ತು.

ಬಳೇಪೇಟೆಯಲ್ಲಿರುವ 400 ವರ್ಷಗಳ ಇತಿಹಾಸವಿರುವ ಕಾಶಿ ವಿಶ್ವೇಶ್ವರ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿತ್ತು. ಕಾಶಿಯಿಂದ ತಲೆ ಮೇಲೆ ಶಿವಲಿಂಗ ಇಟ್ಟು ನಡೆದು ಬರಲಾಗಿತ್ತು ಎಂಬ ಇತಿಹಾಸ ಇಲ್ಲಿದೆ. ಶಿವನನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು. ಇತ್ತ ಕಲಾಸಿಪಾಳ್ಯದಲ್ಲಿರುವ ಜಲಕಂಠೇಶ್ವರ ದೇಗುಲದಲ್ಲಿ ಶಿವಲಿಂಗಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಿವನ ದರ್ಶನ ಮಾಡಿದ ಕಾಂಗ್ರೆಸ್‌ ಟೀಂ

ವಿಜಯಪುರದ ಬಿಎಲ್‌ಡಿಈ ಬಳಿಯ ೭೭೦ ಲಿಂಗದಗುಡಿ, ಶಂಕರಲಿಂಗ ದೇವಸ್ಥಾನ, ಕಪಿಲೇಶ್ವರ ದೇವಸ್ಥಾನ, ಶ್ರೀಚಕ್ರ ಸುಂದರೇಶ್ವರ ದೇವಸ್ಥಾನ, ಶಿವಗಿರಿ ಸೇರಿದಂತೆ ನಗರದಾದ್ಯಂತ ಶಿವನ ದೇವಸ್ಥಾನಗಳಲ್ಲಿ ಶಿವನ ಮೂರ್ತಿಗೆ ವಿಶೇಷ ಅಲಂಕಾರ, ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಗರದ ಬಿಎಲ್‌ಡಿಈ ಆವರಣದಲ್ಲಿರುವ ಲಿಂಗದಗುಡಿ ದೇವಸ್ಥಾನಕ್ಕೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಭಕ್ತರು ಶಿವನ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ದರ್ಶನ ಪಡೆದು ಪುನೀತರಾದರು. ವಿಶೇಷವಾಗಿ ಅಲಂಕರಿಸಲಾಗಿದ್ದ ೭೭೦ ಲಿಂಗಗಳನ್ನು ದರ್ಶನ ಪಡೆದರು. ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಹಾಗೂ ವಿಷ್ಣುನಾಥನ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹಮದ್‌ ಅವರು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ಸೇರಿದಂತೆ ಇನ್ನಿತರ ಜಿಲ್ಲೆಯ ಕಾಂಗ್ರೆಸ್‌ ಮುಖಂಡರೊಂದಿಗೆ ಜತೆಗೂಡಿ ಶಿವಪೂಜೆಯಲ್ಲಿ ಭಾಗಿಯಾದರು.

ದೇಶದಲ್ಲೇ ವಿಶೇಷವಾಗಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರದ ಹರಣಶಿಕಾರಿ ಕಾಲೋನಿಯಲ್ಲಿರುವ ಶ್ರೀಚಕ್ರ ಸುಂದರೇಶ್ವರ ದೇವಸ್ಥಾನದಲ್ಲೂ ಶಿವರಾತ್ರಿಯ ನಿಮಿತ್ತ ವಾಘಿ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಲಿಂಗದ ನೆತ್ತಿಯ ಮೇಲೆ ಶ್ರೀಚಕ್ರವನ್ನು ಹೊಂದಿರುವ ಶಿವಲಿಂಗವಿರುವುದು ಇಲ್ಲಿನ ವಿಶೇಷತೆ ಆಗಿದೆ.

ವಿಜಯಪುರ ನಗರದ ಹೊರವಲಯದಲ್ಲಿ ಕಳೆದ 19 ವರ್ಷಗಳ ಹಿಂದೆ ನಿರ್ಮಿಸಲಾದ ದೇಶದ ಎರಡನೇ ಅತಿದೊಡ್ಡ ಹಾಗೂ ವಿಶ್ವದ ನಾಲ್ಕನೇ ಅತಿ ಎತ್ತರದ ಶಿವಗಿರಿಯಲ್ಲಿ ಸ್ಥಾಪಿಸಲಾಗಿರುವ 85 ಅಡಿ ಎತ್ತರದ ಶಿವನಮೂರ್ತಿ ದರ್ಶನಕ್ಕಾಗಿ ಜಿಲ್ಲೆ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಸಹ ಶಿವಭಕ್ತರು ಬೆಳಗಿನ ಜಾವದಿಂದಲೇ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಶಿವಗಿರಿ ಚಾರಿಟೇಬಲ್‌ ಟ್ರಸ್ಟಿ ಆರತಿ ಪಾಟೀಲ್‌ ಮತ್ತು ಚೇರ್ಮನ್‌ ಬಸಂತಕುಮಾರ್‌ ಪಾಟೀಲ್‌ ಇದೊಂದು ಐತಿಹಾಸಿಕ ಪುಣ್ಯಕ್ಷೇತ್ರವಾಗಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಸಂಜೆ ರಥೋತ್ಸವ ನಡೆಯಲಿದೆ ಎಂದು ತಿಳಿಸಿದರು. ಇದಲ್ಲದೇ ನೂರು ಮಂದಿ ಮುತ್ತೈದೆಯರು ಒಂದು ಬದಿಯಲ್ಲಿ ಹಾಗೂ ಇನ್ನೊಂದು ಬದಿಯಲ್ಲಿ ನೂರು ಮಂದಿ ಸೊಸೆಯಂದಿರು ಸೇರಿ ಈ ರಥವನ್ನು ಎಳೆಯುವುದು ವಿಶೇಷ ಎಂದು ಮಾಹಿತಿ ನೀಡಿದರು. ಈ ಬಾರಿ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಯಾವುದೇ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ ಎಂದು ತಿಳಿಸಿದರು.

ಹಾವೇರಿಯಲ್ಲಿ ಜ್ಯೋತಿರ್ಲಿಂಗಗಳಿಗೆ ಅಭಿಷೇಕ

ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಹಾವೇರಿಯಲ್ಲಿಯೂ ಶ್ರದ್ಧಾಭಕ್ತಿಯಿಂದ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ಮೂಲಕ ಜನರು ಶಿವರಾತ್ರಿ ಆಚರಣೆ ಮಾಡಿದರು. ನಗರದ ಬಸವೇಶ್ವರನಗರದ ಸಿ ಬ್ಲಾಕ್‌ನಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ಗುಡಿಯಲ್ಲಿ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು. ಜ್ಯೋತಿರ್ಲಿಂಗಗಳಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು.

ಉಡುಪಿಯ ಅನಂತೇಶ್ವರನ ಕಣ್ತುಂಬಿಕೊಂಡ ಭಕ್ತರು

ಉಡುಪಿಯ ಶ್ರೀ ಅನಂತೇಶ್ವರ ದೇವಾಲಯದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಉಡುಪಿಯ ರಥಬೀದಿಯ ಮಧ್ಯೆ ಇರುವ ಅನಂತೇಶ್ವರ ದೇವಾಲಯ ಅತ್ಯಂತ ಪುರಾತನ ದೇವಾಸ್ಥಾನಗಳಲ್ಲಿ ಒಂದು. ಶಿವರಾತ್ರಿ ವಿಶೇಷದ ಅಂಗವಾಗಿ ದೇವಳದ ಧ್ವಜಸ್ತಂಭಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಧ್ವಜಾರೋಹಣ ಮಾಡಲಾಯಿತು. ಕಲಶಾಭಿಷೇಕ ಮಾಡಿ ಮಹಾಪೂಜೆ ಮಾಡಲಾಯಿತು. ಈ ಸಂದರ್ಭ ನೂರಾರು ಜನ ಭಕ್ತರು ಶ್ರೀ ಅನಂತೇಶ್ವರನ ದರ್ಶನ ಪಡೆದರು.

ಜತೆಗೆ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಅಭಿಷೇಕದೊಂದಿಗೆ ಸಹಸ್ರ ರುದ್ರ ಪಾರಾಯಣದೊಂದಿಗೆ ರುದ್ರಾಭಿಷೇಕವನ್ನು ಮಾಡಿ ಮಹಾಪೂಜೆ ನೆರವೇರಿಸಲಾಯಿತು. ಉಡುಪಿಯ ಚಂದ್ರಮೌಳೀಶ್ವರ ದೇಗುಲವು ಅತ್ಯಂತ ಪುರಾತನ ದೇವಸ್ಥಾನ. ಕೃಷ್ಣ ದೇವಸ್ಥಾನಕ್ಕೆ ಹೋಗುವ ಮುನ್ನ ಈ ದೇಗುಲಕ್ಕೆ ಹೋಗಬೇಕು ಎಂಬ ನಂಬಿಕೆ ಇದೆ. ಚಾಲುಕ್ಯರ ವಾಸ್ತುಶಿಲ್ಪವಿರುವ ಈ ದೇವಳದಲ್ಲಿ ಶಿವರಾತ್ರಿ ಎಂದರೆ ಸಡಗರ. ಈ ಹಿನ್ನಲೆಯಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀ ಚಂದ್ರಮೌಳೇಶ್ವರ ದೇವರ ದರ್ಶನ ಪಡೆದರು.

ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ

ಸುಪ್ರಸಿದ್ದ ಮಾರ್ಕಂಡೇಶ್ವರನಿಗೆ ಪುಷ್ಪಲಂಕಾರ

ಮಹಾ ಶಿವರಾತ್ರಿ ಪ್ರಯುಕ್ತ ಬಾಗಲಕೋಟೆಯ ಸುಪ್ರಸಿದ್ದ ಮಾರ್ಕಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಪದ್ಮಶಾಲಿ ಸಮಾಜದವರಿಂದ ಪೂಜಾ ಕೈಂಕರ್ಯ‌ ನೆರವೇರಿಸಲಾಯಿತು. ಮಾರ್ಕಂಡೇಶ್ವರ ಸ್ವಾಮಿಗೆ ಬಗೆ ಬಗೆಯ ಹೂಗಳಿಂದ ಅಲಂಕಾರಗಳನ್ನು ಮಾಡಲಾಗಿತ್ತು. ಇದಕ್ಕೂ ಮೊದಲು ಮಾರ್ಕಂಡೇಶ್ವರನಿಗೆ ಬಿಲ್ವಾರ್ಚನೆ, ಅಭಿಷೇಕ ಪೂಜೆ ನೆರವೇರಿಸಲಾಯಿತು.

ಬಾಗಲಕೋಟೆ ಹಳೆ ನಗರದಲ್ಲಿ ಲರುವ ಸತ್ಯಂ ಶಿವಂ ಸುಂದರಂ ದೇವಾಲಯಕ್ಕೆ ಬೆಳಗ್ಗೆ 5 ಗಂಟೆಯಿಂದ ಭಕ್ತರ ದಂಡು ಹರಿದುಬರುತ್ತಿದೆ‌. ನವನಗರದ 25ನೇ ಸೆಕ್ಟರ್‌ನಲ್ಲಿರುವ ಸೌರಾಷ್ಟ್ರ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ಶಿವನಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಇದಲ್ಲದೇ ಹಳೇ ಬಾಗಲಕೋಟೆಯ ಎಂ.ಜಿ‌.ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯವನ್ನು ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಿದ್ದು, ಭಕ್ತರ ಆಕರ್ಷಣೆಗೆ ಕಾರಣವಾಗಿತ್ತು. ಅಲ್ಲದೇ ಈ ದೇವಸ್ಥಾನದಲ್ಲೂ ಸಹ ಮಹಾಶಿವರಾತ್ರಿ ಹಿನ್ನೆಲೆ ವಿವಿಧ ಪೂಜೆಗಳನ್ನು ಸಲ್ಲಿಸಲಾಯಿತು.

ಹಂಪಿಯ ವಿರೂಪಾಕ್ಷ ದೇವಸ್ಥಾನದಕ್ಕೆ ಭಕ್ತರ ದಂಡು

ವಿರೂಪಾಕ್ಷ ದೇಗುಲದ ಆವರಣದಲ್ಲಿ ಶಿವರಾತ್ರಿಯ ಜಾಗರಣೆ

ದಕ್ಷಿಣ ಕಾಶಿ ವಿಶ್ವವಿಖ್ಯಾತ ಹಂಪಿಯಲ್ಲಿ ಮಹಾಶಿವರಾತ್ರಿ ಸಂಭ್ರಮ ಜೋರಾಗಿದೆ. ಹಂಪಿಯ ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ ಭಕ್ತರ ದಂಡು ಭೇಟಿ ನೀಡುತ್ತಿದೆ. ಹಂಪಿಯ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಕೈಗೊಂಡು ಶಿವನ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು. ವಿವಿಧ ಭಾಗಗಳಿಂದ ಕಾಲ್ನಡಿಗೆ ಮೂಲಕವೂ ಹಂಪಿಗೆ ಭಕ್ತರು ಆಗಮಿಸಿದ್ದರು. ರಾತ್ರಿ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದ ಆವರಣದಲ್ಲಿ ಶಿವರಾತ್ರಿಯ ನಿಮಿತ್ತ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸರ್ವಾಲಂಕಾರದಲ್ಲಿ ಅರಕೇಶ್ವರ ಸ್ವಾಮಿ ದೇಗುಲ

ಡ್ರೋಣ್‌ ಕ್ಯಾಮೆರಾದಲ್ಲಿ ಅರಕೇಶ್ಚರ ದೇಗುಲ ಸೆರೆ

ಮಂಡ್ಯ ನಗರದ ಗುತ್ತಲಿನ ಅರಕೇಶ್ಚರ ದೇಗುಲದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಡ್ರೋಣ್ ಕ್ಯಾಮೆರಾದಲ್ಲಿ ಅರಕೇಶ್ಚರ ದೇಗುಲದ ಪುಷ್ಪಾಂಲಕಾರದ ಸೌಂದರ್ಯದ ಸೊಬಗು ಸೆರೆಯಾಗಿತ್ತು.

ಶಿವರಾತ್ರಿಯ ವಿಶೇಷ ಸುದ್ದಿಗಳನ್ನು ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version