Site icon Vistara News

Maha Shivaratri 2023 : ಪೂಜೆ ಮಾಡುವಾಗ ಅರಿಶಿನ-ಕುಂಕುಮ ಶಿವನಿಗೇಕೆ ಬೇಡ?

Maha Shivaratri 2023

Maha Shivaratri 2023

ನಾವು ಸಾಮಾನ್ಯವಾಗಿ ದೇವರನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಪೂಜಿಸುತ್ತೇವೆ. ಅದೇ ರೀತಿ ಆಯಾ ದೇವರಿಗೆ ಪ್ರಿಯವಾದ ವಸ್ತುಗಳನ್ನೇ ಅರ್ಪಣೆ ಮಾಡುತ್ತೇವೆ. ವಿಷ್ಣುವಿಗೆ ತುಳಸಿ, ಶಿವನಿಗೆ ಬಿಲ್ವಪತ್ರೆ (Maha Shivaratri 2023), ಗಣಪತಿಗೆ ದೂರ್ವೆ ಹೀಗೆ ಆಯಾ ದೇವರಿಗೆ ಪ್ರಿಯವಾದದ್ದನ್ನೇ ಅರ್ಪಿಸಿ ದೇವರ ಪ್ರಸನ್ನತೆಗೆ ಪಾತ್ರರಾಗಲು ಹಂಬಲಿಸುತ್ತೇವೆ.

ದೇವಾನು ದೇವತೆಗಳಿಗೆ ಪ್ರಿಯವಾದ ವಸ್ತುಗಳು ಹೇಗೆ ಇವೆಯೋ, ಹಾಗೇಯೇ ಕೆಲವು ವಸ್ತುಗಳು ಅಪ್ರಿಯವಾಗಿರುತ್ತವೆ. ಗಣಪತಿಗೆ ತುಳಸಿಯನ್ನು ಅರ್ಪಿಸುವುದಿಲ್ಲ. ಅದೇ ರೀತಿ ದೇವಿಯ ಅಲಂಕಾರದಲ್ಲೂ ಕೂಡಾ ತುಳಸಿಯನ್ನು ಬಳಸುವುದಿಲ್ಲ. ಆಯಾ ದೇವತೆಗಳಿಗೆ ಅಪ್ರಿಯವಾದ ವಸ್ತುಗಳು ಯಾವವು ಎಂಬುದನ್ನು ನೋಡಿಕೊಂಡು ಅವುಗಳನ್ನು ಪೂಜೆ-ಪುನಸ್ಕಾರದ ಸಂದರ್ಭದಲ್ಲಿ ದೂರವಿಡಲಾಗುತ್ತದೆ.

ಶಾಸ್ತ್ರಗಳ ಪ್ರಕಾರ ಯಾವ ದೇವರಿಗೆ ಯಾವ ವಸ್ತುಗಳು ಪ್ರಿಯವಾಗಿರುತ್ತವೆಯೋ ಅಂಥದ್ದನ್ನೇ ಬಳಸಿ ಪೂಜೆ ಮಾಡುವುದರಿಂದ ದೇವರು ಪ್ರಸನ್ನರಾಗುತ್ತಾರಂತೆ. ಶಿವನ ಕೃಪೆ ಪಡೆಯಲು ಬಿಲ್ವ ಪತ್ರೆ, ಎಕ್ಕ, ದತ್ತೂರಿ ಪತ್ರೆಗಳನ್ನು ಅರ್ಪಿಸಲಾಗುತ್ತದೆ. ವಿಶೇಷವಾಗಿ ಶಿವರಾತ್ರಿಯಲ್ಲಿ ತಿಲಿಗೆ ಹೂವು ಅರ್ಪಿಸುವುದುಂಟು. ಶಿವನನ್ನು ಅನೇಕ ಸ್ವರೂಪಗಳಲ್ಲಿ ಪೂಜಿಸಲಾಗುತ್ತದೆ. ಆದರೆ ಯಾವುದೇ ಸ್ವರೂಪದ ಪೂಜೆಯಲ್ಲಿಯೂ ಅರಿಶಿಣ ಸೇರಿದಂತೆ ಕೆಲವು ವಸ್ತುಗಳನ್ನು ಪೂಜೆಯಲ್ಲಿ ಬಳಸುವುದಿಲ್ಲ. ಇದಕ್ಕೇನು ಕಾರಣ ಎಂಬು ಕೂಡ ಕುತೂಹಲಕಾರಿಯಾದ ವಿಷಯ.

ಅರಿಶಿನವೆಂದರೆ ಶಿವನಿಗಾಗದು!

ಶಿವನು ದಯಾಮಯಿ, ಕರುಣಾಮಯಿ, ಸ್ಮಶಾನ ವಾಸಿ. ಆತನಿಗೆ ಭಸ್ಮವೆಂದರೆ ಇಷ್ಟ. ಸರಳವಾಗಿರುವ ಶಿವನಿಗೆ ಆಡಂಬರದ ಪೂಜೆ ಸರಿ ಹೊಂದದು. ಶಾಸ್ತ್ರದ ಪ್ರಕಾರ ಶಿವಲಿಂಗವು ಪುರುಷ ತತ್ವದ ಪ್ರತೀಕವಾಗಿದೆ. ಹಾಗಾಗಿಯೇ ಶಿವನಿಗೆ ಅರಿಶಿನ ಮತ್ತು ಕುಂಕುಮದಿಂದ ಪೂಜೆ ಮಾಡಬಾರದು. ಅರಿಶಿನ ಮತ್ತು ಕುಂಕುಮವು ಸೌಭಾಗ್ಯ ಸಂಕೇತವಾಗಿದೆ ಎಂಬುದು ಇದನ್ನು ಶಿವನ ಪೂಜೆಗೆ ಬಳಸದೇ ಇರಲು ಇನ್ನೊಂದು ಕಾರಣ. ಅಲ್ಲದೆ ಅರಿಶಿನವು ವಿಷ್ಣುವಿಗೆ ಇಷ್ಟ ಎಂಬ ಕಾರಣಕ್ಕೆ ಇದನ್ನು ಶಿವನ ಪೂಜೆಯಲ್ಲಿ ಬಳಸುವುದಿಲ್ಲ.

ಶಿವನದು ರುದ್ರರೂಪ. ಅವನಿಗೆ ದೇಹ ತಂಪಾಗಿಸುವಂತಹ ಶ್ರೀಗಂಧ, ಹಾಲು, ಭಸ್ಮ, ಪತ್ರೆಗಳಂತಹ ವಸ್ತುಗಳನ್ನು ಅರ್ಪಿಸಬೇಕು. ಅರಿಶಿನ ತಂಪಾಗಿಸುವುದಿಲ್ಲವಾದ್ದರಿಂದ ಅದನ್ನು ಪೂಜೆಯಲ್ಲಿ ಬಳಸುವುದಿಲ್ಲ ಎಂದೂ ಪುರಾಣಗಳಲ್ಲಿ ಹೇಳಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ ಶಿವನಿಗೆ ಅರಿಶಿನವನ್ನು ಅರ್ಪಣೆ ಮಾಡುವುದರಿಂದ ಅರ್ಪಣೆ ಮಾಡಿದವರ ಜಾತಕದಲ್ಲಿ ಚಂದ್ರ ಯಾವ ಸ್ಥಿತಿಯಲ್ಲಿದ್ದರೂ ನೀಚ ಸ್ಥಿತಿಯಫಲ ನೀಡುತ್ತಾನಂತೆ.

ತುಳಸಿಯಿಂದಲೂ ಶಿವ ದೂರ

ಪುರಾಣ ಕತೆಯೊಂದರ ಪ್ರಕಾರ ಜಲಂಧರ ಎನ್ನುವ ರಾಕ್ಷಸನೊಬ್ಬನ ಪತ್ನಿ ವೃಂದ. ಮಹಾಪತಿವ್ರತೆಯಾದ ವೃಂದಾಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾಗಿದ್ದನಂತೆ. ಮೂರು ಲೋಕದಲ್ಲಿಯೂ ಆತನನ್ನು ಸೋಲಿಸುವವರು ಯಾರೂ ಇರಲಿಲ್ಲ. ಜಲಂಧರನ ಉಪಟಳವನ್ನು ತಾಳಲಾರದೆ ಜನರೆಲ್ಲರೂ ಶಿವ ಮತ್ತು ವಿಷ್ಣುವನ್ನು ಪ್ರಾರ್ಥನೆಯ ಮೂಲಕ ತಮ್ಮನ್ನು ಕಾಪಾಡುವಂತೆ ಕೇಳಿಕೊಂಡರು.

ಆಗ ಶಿವ ಮತ್ತು ವಿಷ್ಣು ಜಲಂಧರನನ್ನು ಸೋಲಿಸಲು ಬಂದರು. ವಿಷ್ಣು ಜಲಂಧರನ ರೂಪವನ್ನು ತಾಳಿ ವೃಂದಾಳ ಪಾತಿವ್ರತ್ಯವನ್ನು ಭಂಗಗೊಳಿಸಿದನು. ಶಿವನು ಜಲಂಧರನನ್ನು ಸಾಯಿಸಿದನು. ತುಳಸಿಯ ಅವತಾರವಾದ ವೃಂದಾ ಶಿವನನ್ನು ಪೂಜಿಸುವಾಗ ತನ್ನ ಎಲೆಯನ್ನು ಬಳಸಬಾರದು ಎಂದು ಶಾಪ ನೀಡಿದಳು. ಹಾಗಾಗಿ ಶಿವನ ಪೂಜೆಗೆ ತುಳಸಿ ಬಳಸುವುದಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಕುಂಕುಮ ಮತ್ತು ಕೆಂಪು ಹೂವು ಬೇಡ

ಸೌಂದರ್ಯ ಮತ್ತು ಸೌಭಾಗ್ಯದ ಸಂಕೇತವಾಗಿರುವ ಕುಂಕುಮವನ್ನು ಸಹ ಶಿವ ಲಿಂಗಕ್ಕೆ ಅರ್ಪಿಸಬಾರದೆಂದು ಹೇಳಲಾಗುತ್ತದೆ. ಶಿವನಿಗೂ ಲೌಖಿಕ ಜಗತ್ತಿಗೂ ಸಂಬಂಧ ಇಲ್ಲದಿರುವುದೇ ಇದಕ್ಕೆ ಕಾರಣ. ಶಿವ ಪುರಾಣದಲ್ಲಿ ಲಯ ಕರ್ತನಾದ ಶಿವನಿಗೆ ಸೌಭಾಗ್ಯ ಸ್ಥಿರಗೊಳಿಸುವ ಕುಂಕುಮವನ್ನು ಅರ್ಪಿಸುವುದು ಒಳ್ಳೆಯದಲ್ಲವೆಂದೇ ಹೇಳಲಾಗಿದೆ.

ಜೊತೆಗೆ ಕೆಂಪು ಹೂವುಗಳನ್ನು, ಕಣಗಿಲೆ ಹೂವನ್ನು ಸಹ ಶಿವನಿಗೆ ಅರ್ಪಿಸಿವುದು ನಿಷಿದ್ಧವಾಗಿದೆ. ಕಣಗಿಲೆ ಪುಷ್ಪವು ಶಿವನಿಗೆ ಸುಳ್ಳು ಹೇಳಿದ್ದರ ಪರಿಣಾಮವಾಗಿ ಶಿವ ಪೂಜೆಗೆ ಈ ಹೂವು ಸಲ್ಲಬಾರದೆಂದು ಶಿವನಿಂದ ಶಾಪಕ್ಕೆ ಒಳಗಾಗಿತ್ತು. ಹೀಗಾಗಿ ಈ ಹೂವನ್ನು ಶಿವನ ಪೂಜೆಗೆ ಬಳಸಾಗುವುದಿಲ್ಲ.

ಇದನ್ನೂ ಓದಿ : Maha Shivaratri 2023 : ಶಿವನನ್ನು ಆರಾಧಿಸುವ ಮಹಾ ಶಿವರಾತ್ರಿಗೆ ಶುರುವಾಗಿದೆ ದಿನಗಣನೆ

Exit mobile version