Site icon Vistara News

Maha Shivaratri 2024: ಶಿವರಾತ್ರಿಯಂದು ಶಿವಾರಾಧನೆಗೆ ಯಾವ ಸಮಯ ಸೂಕ್ತ? ಯಾವ ನೈವೇದ್ಯ ಮಾಡಬಹುದು?

Maha Shivaratri 2024 Shiva worship

ಶಿವನ ಆರಾಧನೆಗೊಂದು ಹಗಲು-ರಾತ್ರಿ ಮೀಸಲಿಡುವ ಸಂದರ್ಭವಿದು. ನಿರಾಹಾರದ ಮೂಲಕ ದೇಹ-ಮನಸ್ಸುಗಳನ್ನು ಶುದ್ಧೀಕರಿಸಿ, ಜಾಗರಣೆಯ ಮೂಲಕ ಚೇತನವನ್ನು ಜಾಗೃತಗೊಳಿಸುವ ಸಂದೇಶವನ್ನು ಈ ಹಬ್ಬ ನಮಗೆಲ್ಲ ನೀಡುತ್ತದೆ. ಏನು ವೈಶಿಷ್ಟ್ಯ ಶಿವರಾತ್ರಿಯ ಆಚರಣೆಯದ್ದು (Maha Shivaratri 2024) ಎಂದು ನಾವು ಅರಿಯಲೇಬೇಕಿದೆ. ಧರ್ಮ ಯಾವುದೇ ಆದರೂ ಉಪವಾಸಕ್ಕೊಂದು ಮಹತ್ವವಿದೆ. ಲೌಕಿಕ ಸೌಖ್ಯಗಳನ್ನು ತ್ಯಜಿಸಿದಾಗಲೇ ಪರಮಾರ್ಥದ ಸಾಧನೆ ಸಿದ್ಧಿಸಲು ಸಾಧ್ಯ ಎನ್ನುವ ಭಾವ ಇಂಥ ಉಪಾಸನಾ ಮಾರ್ಗಗಳ ಹಿಂದಿರುವುದು. ಶಿವರಾತ್ರಿಯ ದಿನದಂದು ಉಪವಾಸ ಮಾತ್ರವಲ್ಲ, ಜಾಗರಣೆಗೂ ಅಂಥದ್ದೇ ಮಹತ್ವವಿದೆ. ಇದು ಕೇವಲ ನಿದ್ದೆ ಕಳೆದು ಎಚ್ಚರ ಇರುವುದಲ್ಲ, ಮನಸ್ಸನ್ನೇ ಜಾಗೃತ ಸ್ಥಿತಿಯಲ್ಲಿ ಇರಿಸುವುದು. ಹೀಗೆ ಉಪವಾಸ, ಜಾಗರಣೆಗಳೇ ಔಪಾಸಕನ ಮುಖ್ಯ ಮಾರ್ಗವಾದ ಹಬ್ಬದ ಬಗ್ಗೆ ಕುತೂಹಲಗಳಿದ್ದರೆ, ಅದು ಸಹಜ.

ಫಾಲ್ಗುಣ ಅಮವಾಸ್ಯೆಯ ಹಿಂದಿನ ದಿನ

ಫಾಲ್ಗುಣ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು, ಅಂದರೆ ಫಾಲ್ಗುಣ ಅಮವಾಸ್ಯೆಯ ಹಿಂದಿನ ದಿನ ಶಿವನ ಆರಾಧನೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತದೆ. ಈ ಪ್ರಕಾರ, ಈ ವರ್ಷ ಮಾರ್ಚ್‌ ತಿಂಗಳ ಎಂಟನೇ ತಾರೀಕು ಶಿವರಾತ್ರಿ. 8ನೇ ತಾರೀಕಿನ ರಾತ್ರಿ 9.57ರಿಂದ 9ನೇ ತಾರೀಕಿನ ಸಂಜೆ 6.17ರವರೆಗೆ ಚತುರ್ದಶಿಯ ತಿಥಿ ಇರಲಿದ್ದು, ಶಿವಾರಾಧನೆಗೆ ಪ್ರಶಸ್ತವಾಗಿದೆ.

ಕಾರಣಗಳು ಹಲವು

ಶಿವರಾತ್ರಿಯನ್ನು ಆಚರಿಸುವುದಕ್ಕೆ ಹಲವು ಕಾರಣಗಳಿವೆ. ಜಗದೀಶ್ವರ ಮತ್ತು ಜಗನ್ಮಾತೆ ಶಿವಾಣಿ ಒಂದಾದ ದಿನವದು ಎಂದು ಗುರುತಿಸಲಾಗಿದೆ. ಜೊತೆಗೆ ಈಶ್ವರನ ತಾಂಡವಕ್ಕೂ ಈ ದಿನದೊಂದಿಗೆ ನಂಟಿದೆ. ಇದಲ್ಲದೆ, ಅಸುರ ನಿರ್ಮಿತ ತ್ರಿಪುರವನ್ನು ನಾಶಪಡಿಸಿ, ತ್ರಿಪುರಾಂತಕ ಎನಿಸಿದ್ದಕ್ಕೂ ಈ ದಿನ ಸಂಬಂಧಿಸಿದ್ದು ಎನ್ನಲಾಗುತ್ತದೆ. ಈ ಮೂಲಕ, ಅಹಂಕಾರ ಮತ್ತು ಅಜ್ಞಾನದ ಲಯಕ್ಕೂ, ತ್ರಿಮೂರ್ತಿಗಳಲ್ಲಿ ಒಬ್ಬನಾದ ಈಶ ಕಾರಣನಾದ ಕಥೆಯಿದು. ಇನ್ನು ಭಗೀರಥನ ತಪಸ್ಸಿಗೆ ಒಲಿದು ಧರೆಗಿಳಿದ ಭಾಗೀರಥಿಯನ್ನು ಶಿರದಲ್ಲಿ ಧರಿಸಿ, ಗಂಗಾಧರ ಕಥೆಗಳನ್ನೂ ಹೇಳಲಾಗುತ್ತದೆ. ಕಥೆಗಳು ಯಾವುದೇ ಇದ್ದರೂ, ಮನಸ್ಸನ್ನು ಸತ್ಸಂಗದಲ್ಲಿ ತೊಡಗಿಸಿಕೊಳ್ಳುವ ದಿನವಂತೂ ಇದು ಹೌದು.

ದೈಹಿಕ, ಮಾನಸಿಕ ಶುದ್ಧಿ

ಶಿವರಾತ್ರಿಯಂದು ದೈಹಿಕ ಮತ್ತು ಮಾನಸಿಕ ಶುದ್ಧಿಯ ಅಗತ್ಯವನ್ನು ಪ್ರಾಚೀನ ಕಾಲದಿಂದಲೂ ಹೇಳುತ್ತಾ ಬರಲಾಗಿದೆ. ಅಂದಿನ ದಿನ ಪ್ರಾತರ್ವಿಧಿಗಳನ್ನು ಮುಗಿಸಿ, ದಿನವಿಡೀ ಉಪವಾಸವಿದ್ದು, ಪೂಜೆ ಮತ್ತು ಧ್ಯಾನದಲ್ಲಿ ಇರಲಾಗುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಶ್ವರನಿಗೆ ಪ್ರಿಯವಾದ ಬಿಲ್ವಾರ್ಚನೆಯಿಂದ ಹಿಡಿದು, ಪಂಚಾಮೃತದ ಅಭಿಷೇಕದವರೆಗೆ ಹಲವು ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತದೆ. ಭಸ್ಮ, ವಿಭೂತಿ, ಭೂಪ, ಬಿಳಿಯ ಹೂಗಳಿಂದಲೂ ಪರಮೇಶ್ವರನನ್ನು ಪೂಜಿಸಲಾಗುತ್ತದೆ.

ಪೂಜೆಯ ವಿಧಾನಗಳು ಭಿನ್ನ

ಭಾರತದಲ್ಲೇ ಪ್ರಾಂತೀಯವಾಗಿ ಈಶ್ವರನ ಪೂಜೆಯ ವಿಧಾನಗಳು ಭಿನ್ನವಾಗಿವೆ. ಆದರೆ ಹೆಚ್ಚಿನ ಕಡೆಗಳಲ್ಲಿ ಉಪವಾಸ ಮತ್ತು ರಾತ್ರಿಯ ಜಾಗರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಇಡೀ ದಿನದ ನಿರಾಹಾರದ ನಂತರ ಚತುರ್ದಶಿಯ ತಿಥಿಯಲ್ಲಿ ಶಿವನನ್ನು ಪೂಜಿಸಿ, ಪ್ರಸಾದ ಸೇವಿಸಲಾಗುತ್ತದೆ. ನಂತರ ರಾತ್ರಿಡೀ ಭಜನೆ ಮಾಡುವ ಕ್ರಮವಿದೆ.

ಹಲವು ರೀತಿಯ ನೈವೇದ್ಯ

ಈಶ್ವರನ ಪೂಜೆಯ ಭಾಗವಾಗಿ ಹಲವು ರೀತಿಯ ನೈವೇದ್ಯಗಳನ್ನೂ ತಯಾರಿಸಲಾಗುತ್ತದೆ. ಅದರಲ್ಲಿ ಕರ್ನಾಟಕದಲ್ಲಿ ಪ್ರಧಾನವಾಗಿ ತಯಾರಿಸಲಾಗುವುದು ತಂಬಿಟ್ಟು. ಕೆಲವೆಡೆ ತಂಬಿಟ್ಟಿನ ಆರತಿಯನ್ನೂ ಮಾಡಲಾಗುತ್ತದೆ. ಅಕ್ಕಿ ಹಿಟ್ಟು, ಶೇಂಗಾ, ಬೆಲ್ಲ, ಕೊಬ್ಬರಿ, ಏಲಕ್ಕಿ ಮತ್ತು ತುಪ್ಪದ ಈ ಸಿಹಿ ಆರೋಗ್ಯಕ್ಕೂ ಹಿತವಾಗುವಂಥದ್ದು. ಇದಲ್ಲದೆ ಗೋಧಿ ಉಂಡೆ, ಸಿಹಿ ಅವಲಕ್ಕಿ, ಅಕ್ಕಿ ಪಾಯಸ, ಪಂಚಾಮೃತಗಳ ನೈವೇದ್ಯವನ್ನೂ ಮಾಡಲಾಗುತ್ತದೆ.

Exit mobile version