Site icon Vistara News

Mahalaya 2022 | ಮನೆಯಲ್ಲಿಯೇ ಪಿತೃತರ್ಪಣ ನೀಡಬಹುದೇ? ಗಯಾ ಶ್ರಾದ್ಧ ಮಾಡಿದ್ದರೂ ಶ್ರಾದ್ಧ ಮಾಡಬೇಕೆ?

Mahalaya 2022

ಶ್ರೀ ಶ್ರೀ ರಂಗಪ್ರಿಯ ಶ್ರೀ ಶ್ರೀಃ
ಮಹಾಲಯ ಅಮಾವಾಸ್ಯೆ (Mahalaya 2022) ಬಂದಿದೆ. ಈ ಸಂದರ್ಭದಲ್ಲಿ ಪಿತೃದೇವತೆಗಳ ಪೂಜೆಯನ್ನು ವಿಶೇಷವಾಗಿ ಮಾಡಲಾಗುತ್ತದೆ. ಪಿತೃದೇವತೆಗಳಿಗೆ ಪ್ರಿಯವಾಗಿರುವ ಪದಾರ್ಥಗಳಾದ ಜೇನುತುಪ್ಪ, ಎಳ್ಳು, ತಣ್ಣಗಿರುವ ನೀರು, ಇವುಗಳಿಂದ ತರ್ಪಣವನ್ನು ನೀಡುತ್ತಾರೆ. ಕೆಲವರು ವಿಶೇಷವಾಗಿ ಶ್ರಾದ್ಧಾವನ್ನೂ ಮಾಡುತ್ತಾರೆ. ಮಹಾಲಯದಲ್ಲಿ ಉಳಿದ ಅಮಾವಾಸ್ಯೆ, ಸಂಕ್ರಮಣ ತರ್ಪಣಕ್ಕಿಂತಲೂ ವಿಶೇಷವಾದ ತರ್ಪಣ ಇದೆ. ಇಲ್ಲಿ ಬರುವ ಪಿತೃದೇವತೆಗಳೂ, ಅಮಾವಾಸ್ಯೆಯಲ್ಲಿ ಬರುವ ಪಿತೃದೇವತೆಗಳೂ ಬೇರೆ ಬೇರೆ. ಇಲ್ಲಿರುವ ವಿಶ್ವೇದೇವರುಗಳೂ ಕೂಡ ಬೇರೆ ಬೇರೆ. 

ಈ ಹಬ್ಬದ ವಿಶೇಷತೆ, ಮಹತ್ವವನ್ನು ತಿಳಿಸುವ ಪ್ರಶ್ನೋತ್ತರ ಮಾದರಿಯ ಲೇಖನ ಮಾಲಿಕೆಯ ಕೊನೆಯ ಭಾಗ ಇಲ್ಲಿದೆ.

ಮಹಾಲಯ ಶ್ರಾದ್ಧವನ್ನು ವಾರ್ಷಿಕ ಶ್ರಾದ್ಧದಂತೆ ಮಾಡಬಹುದೇ?
ಉತ್ತರ : ಇದರಲ್ಲಿ ಮಹಾಲಯ ತರ್ಪಣವನ್ನು, ಸಾಂವತ್ಸರಿಕ ಶ್ರಾದ್ಧ ಮಾಡುವಂತೆಯೇ ಪೂರ್ತಿ ಮಾಡುವವರಿದ್ದಾರೆ. ಉತ್ತಮ ಕಲ್ಪ ಅದು. ಕಾರುಣ್ಯ ಪಿತೃಗಳನ್ನು ವರಣ ಮಾಡಿ ಅವರನ್ನು ಪೂಜಿಸಿ ನಂತರದಲ್ಲಿ ಬ್ರಹ್ಮ ಭೋಜನವನ್ನು ಮಾಡಿಸತಕ್ಕದ್ದು ಉತ್ತಮ ಕಲ್ಪ. ಅದು ಕಷ್ಟವಾಗುತ್ತದೆಯೆಂದು ಸಂಕ್ಷೇಪ ಮಾಡಿ ಆ ಮಹಾಲಯ ಶ್ರಾದ್ಧವನ್ನು ಪಿತೃತರ್ಪಣ ರೂಪದಲ್ಲಿ ಮಾಡಿ ಸತ್ಪಾತ್ರರನ್ನು ಕರೆದು ಬ್ರಾಹ್ಮಣ ಭೋಜನವನ್ನು ಮಾಡಿಸುವುದು ಅಥವಾ ಆಮಶ್ರಾದ್ಧ ಮಾಡಿ ಅವರಿಗೆ ಆಮ ಪದಾರ್ಥಗಳನ್ನು ದಾನ ಮಾಡುವುದು. ಇದೆಲ್ಲಾ ರೂಢಿಯಲ್ಲಿದೆ. ಇಷ್ಟೆಲ್ಲಾ ಮಾಡುವುದಕ್ಕಾಗದೆ ಇರುವವರು ಬಹು ಮಟ್ಟಿಗೆ ತರ್ಪಣ ಕೊಟ್ಟು, ಭೋಜನ ಮಾಡಿಸಿ ದಕ್ಷಿಣೆ ಕೊಡುತ್ತಾರೆ. ಅನುಕೂಲ ಇದ್ದರೆ ಶ್ರಾದ್ಧದಂತೆಯೇ ಎಲ್ಲವನ್ನೂ ಮಾಡಬಹುದು.

ಶ್ರಾದ್ಧವನ್ನು ಎಷ್ಟು ದಿನಗಳು ಮಾಡಬೇಕು?
ಉತ್ತರ : ೧೫ ದಿನ ಪೂರ್ತಿ ಮಾಡಬೇಕು. ಅಷ್ಟೂ ಮಹಾಲಯವೇ. ಆ ೧೫ ದಿವಸ ಆಗದಿದ್ದಲ್ಲಿ, ಮೊದಲನೇ ೪ ದಿನ ಬಿಟ್ಟು ಪಂಚಮ್ಯಾದಿ, ಎಂದರೆ ೫ನೇ ದಿನದಿಂದ ಅಮಾವಾಸ್ಯೆ ಪೂರ್ತಿ ಮಾಡಬೇಕು. ಆ ಮೊದಲನೇ ೪ ದಿವಸ ಏಕೆ ಬಿಡುತ್ತಾರೆಂದರೆ, ಮೊದಲನೇ ೪ ದಿನದಲ್ಲಿ ಆ ಹಿಂದಿನ ತಿಂಗಳ ಅಂಶ ಸ್ವಲ್ಪ ಸೇರಿಕೊಂಡಿರುತ್ತದೆ. ಆಷಾಢ ಮಾಸಕ್ಕೆ ಹಿಂದಿನ ಮಾಸ ಯಾವುದು ಇದೆಯೋ ಅದರ ಧರ್ಮವೇ ಮೊದಲ ೪ ದಿನ ಇರುತ್ತದೆಂದು. ಪಂಚಮ್ಯಾದಿ ಅಗದೆ ಹೋದರೆ, ಅಷ್ಟಮ್ಯಾದಿ ಮಾಡಿ, ಅದೂ ಇಲ್ಲದೆ ಇದ್ದರೆ ತ್ರಯೋದಶಿಯಿಂದ ೩ ದಿವಸ ಮಾಡಿ. ಅಷ್ಟು ದಿವಸವೂ ಮಾಡಲಾಗದಿದ್ದಲ್ಲಿ ಒಂದು ದಿವಸವಾದರೂ ಸಕೃತ್ ಮಹಾಲಯ ಶ್ರಾದ್ಧ ಎಂದು ಮಾಡಬೇಕು. ಸಕೃತ್, ಒಂದೇ ದಿವಸ ಮಾಡುತ್ತೇನೆ, ಜಾಸ್ತಿ ಮಾಡುವುದಕ್ಕೆ ಆಗುವುದಿಲ್ಲ ಎಂದರೆ, ಆವಾಗ ನಿಯಮಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಆ ಪಕ್ಷದಲ್ಲಿ ಒಂದೇ ದಿನ ಮಾಡುವುದಾಗಿದ್ದರೆ, ಅವನ ಮನೆಯ ಶ್ರಾದ್ಧದ ತಿಥಿ ಜ್ಞಾಪಿಸಿಕೊಳ್ಳಬೇಕು. ಅವನ ತಂದೆ ಅಥವಾ ತಾಯಿಯದು, ತಾತನದು, ಮುತ್ತಾತನದು ಯಾರಾದರೂ ಮೃತರಾದ ತಿಥಿ ಆ ಮಹಾಲಯ ಪಕ್ಷದಲ್ಲಿ ಯಾವ ದಿನ ಬರುತ್ತದೆಯೋ ಆ ದಿನ ಆಚರಿಸಬೇಕು. ಕೆಲವು ವಿಶೇಷ ಸನ್ನಿವೇಶಗಳಲ್ಲಿ ಮಹಾವ್ಯತೀಪಾತ ಮಹಾಭರಣಿ, ಗಜಪ್ರಾಯ ಯೋಗ ಎಂದು ಬರುತ್ತದೆ, ಮಹಾಲಯ ಪಕ್ಷದಲ್ಲಿ. ಅಂತಹ ದಿವಸಗಳಲ್ಲಿ ಬೇರೆ ಯಾವುದನ್ನೂ ನೋಡದೆ ಮಾಡಬಹುದು. ತ್ರಯೋದಶಿ ದಿನ ಮಹಾನಕ್ಷತ್ರ ಸೇರಿಕೊಂಡರೆ ಆ ದಿನ ಮಾಡಬಾರದು. ಈ ನಿಯಮಗಳೆಲ್ಲಾ ಒಂದೇ ಒಂದು ದಿವಸ ಮಾಡುವವರಿಗೆ. ಹೇಗಾದರೂ ಮಹಾಲಯ ಪಕ್ಷದಲ್ಲಿ ಒಂದು ದಿವಸವಾದರೂ ಮಾಡಿ.

ಈ ಕನ್ಯಾಗತ ಸವಿತರಿ ನಿಜವಾಗಿದ್ದರೂ ಆಷಾಢಾದಿ ಪಂಚಮ್ಯಾದಿ ಬಂದರೂ ಕೂಡ ಅದು ಮಲಮಾಸವಾಗಿದ್ದರೆ, ಆಗ ಮಹಾಲಯ ಮಾಡಬಾರದು. ಶುದ್ಧ ಮಾಸದಲ್ಲೇ ಮಾಡಬೇಕು. ಮತ್ತು ಮಹಾಲಯಪಕ್ಷದಲ್ಲಿ ತಂದೆಯ ಪ್ರತ್ಯಾಬ್ದಿಕಶ್ರಾದ್ಧ ಎಂದರೆ ಆ ಶ್ರಾದ್ಧವನ್ನು ಮುಂದಿಟ್ಟುಕೊಂಡು ಮಹಾಲಯ ತರ್ಪಣ ಮಾಡಬಾರದು. ಅಂದರೆ ೧೫ ದಿನಗಳಲ್ಲಿ ಒಂದು ಪಕ್ಷ ೧೪ನೇ ದಿನ ತಂದೆಯ ವಾರ್ಷಿಕಶ್ರಾದ್ಧ ಬಂದಾಗ, ಮುಂದೆ ಸಾಂವತ್ಸರಿಕಶ್ರಾದ್ಧ ಇರುವುದರಿಂದ ಮಹಾಲಯಶ್ರಾದ್ಧ cancelled.

ಇಲ್ಲಿ ಮುಂದೆಂದಿಗೂ ಇಲ್ಲವೆಂದರ್ಥವಲ್ಲ. ಅವನು ಅದನ್ನು ಮುಂದಿನ ತಿಂಗಳು ಮಾಡಬೇಕು. ಈ ಪಕ್ಷದಲ್ಲಿಲ್ಲ. ಮುಂದಿನ ಪಕ್ಷದಲ್ಲಿ. ವೃಶ್ಚಿಕ ಮಾಸದವರೆಗೂ ಅವನಿಗೆ ಅವಕಾಶವಿದೆ. ಆ ವೃಶ್ಚಿಕ ಮಾಸದವರೆಗೂ ತರ್ಪಣ ಮಾಡದೆಹೋದರೆ “ವೃಶ್ಚಿಕೇ ಸಮನು ಪ್ರಾಪ್ತೇ ನಿರಾಶಾಃ ಪಿತರೋಗತಾಃ” ವೃಶ್ಚಿಕ ಮಾಸದವರೆಗೂ ಕಾದು, ಮಾಡದೆ ಇದ್ದರೆ ನಿರಾಶರಾಗಿ ಶಾಪವನ್ನು ಕೊಟ್ಟು ಹೊರಟು ಹೋಗುತ್ತಾರೆ. ತೊಂದರೆಗಳಿಂದ ಮಾಡದಿದ್ದ ಪಕ್ಷದಲ್ಲಿ ಅದನ್ನು ಮುಂದಿನ ತಿಂಗಳ ವೃಶ್ಚಿಕ ಮಾಸದವರೆಗೂ ಅಪರಪಕ್ಷ ಮಹಾಪಕ್ಷ ಮಾಡುವುದಕ್ಕೆ ಅವಕಾಶವಿದೆ.

ಪ್ರತಿ ಅಮಾವಾಸ್ಯೆ ತರ್ಪಣ ಮಾಡಿದ ಬಳಿಕ ಈ ಮಹಾಲಯ ತರ್ಪಣವನ್ನೂ ಮಾಡಬೇಕೆ?
ಉತ್ತರ : ಪ್ರತಿ ಅಮಾವಾಸ್ಯೆ ತರ್ಪಣ ಎಂದರೆ ನಿತ್ಯಕರ್ಮ ಮಾಡಿದ ಮೇಲೆ ಮಹಾಲಯ ಅಮಾವಾಸ್ಯೆ ತರ್ಪಣ ಮಾಡಬೇಕು. ಒಂದು ಪಕ್ಷ ಸಕೃತ್ ಮಹಾಲಯ ಹಿಂದೆ ಮಾಡಿಬಿಟ್ಟಿದ್ದರೆ ಅಂದು ಸಾಧಾರಣ ಹೇಗೋ ಹಾಗೆ ಅಮಾವಾಸ್ಯೆ ಮಾಡಬೇಕು. ಉತ್ತರಭಾರತದಲ್ಲಿ ಮಹಾಲಯ ತರ್ಪಣವನ್ನು ಪಿತೃಮೋಕ್ಷಧಾಮ ಎಂದು ಕರೆಯುತ್ತಾರೆ. ಗಯಾ ಕ್ಷೇತ್ರ ಬಹಳ ಪವಿತ್ರವಾದದ್ದು. ಅಲ್ಲಿ ಯಾವಾಗ ಬೇಕಾದರೂ ಶ್ರಾದ್ಧವನ್ನು ಆಚರಿಸಬಹುದು.

ಪಿತೃ, ಮಾತೃ ಬೇರೆ ಬೇರೆ ತಿಥಿಯಲ್ಲಿ ಮರಣ ಹೊಂದಿದ್ದಾಗ ಯಾವುದನ್ನು ಆಚರಿಸಬೇಕು?
ಉತ್ತರ : ಯಾವುದನ್ನಾದರೂ ಆರಿಸಿಕೊಳ್ಳಬಹುದು. ಎಲ್ಲಾ ಪಿತೃಗಳನ್ನೂ ಸೇರಿಸಿಯೇ ತರ್ಪಣ ಕೊಡಬೇಕಾಗುತ್ತದೆ.

ಪಿತೃಷಟ್ಕ, ಮಾತೃಷಟ್ಕಗಳು ಯಾವುವು?
ಉತ್ತರ : ಅವು ಯಾವುದೆಂದರೆ, ಪ್ರತಿ ಅಮಾವಾಸ್ಯೆಯಲ್ಲಿಯೂ ಪಿತೃಷಟ್ಕಂ ೬ ಜನ, ಎಂದರೆ ಪಿತೃ, ಪಿತಾಮಹ, ಪ್ರಪಿತಾಮಹ ಮತ್ತು ಅವರ ಪತ್ನಿಯರು. ಅದೇ ತರಹ ಮಾತೃ ಷಟ್ಕಂ ಎಂದರೆ ಮಾತೃವರ್ಗಕ್ಕೆ ಸೇರಿದ ಮಾತಾಮಹ, ಮಾತುಃ ಪಿತಾಮಹ, ಮಾತುಃ ಪ್ರಪಿತಾಮಹ ಮತ್ತು ಅವರ ಪತ್ನಿಯರು. ಎಂದರೆ ಒಟ್ಟು ೧೨ ಜನ.

ಸಂನ್ಯಾಸಿಗೆ ಶ್ರಾದ್ಧವನ್ನು ಮಾಡುವುದುಂಟೇ?
ಉತ್ತರ: ದ್ವಾದಶಿ ದಿವಸ ಸಂನ್ಯಾಸಿಯನ್ನು ಕುರಿತು ಶ್ರಾದ್ಧ ಮಾಡುವುದು. ಸಂನ್ಯಾಸಿಗೆ ಯಾವುದೂ ಅನ್ವಯಿಸುವುದಿಲ್ಲ. ಎಲ್ಲವನ್ನೂ ಮೀರಿ ಹೋದವನು. ಆದರೆ ವಿವಾಹದ ನಂತರ ಸಂನ್ಯಾಸವನ್ನು ತೆಗೆದುಕೊಂಡಿದ್ದರೆ, ಅವನ ಪೂರ್ವಾಶ್ರಮದ ಪುತ್ರ, ಬ್ರಹ್ಮೀಭೂತ ಪಿತೃ ಎಂದು ತನ್ನ ತಂದೆಯನ್ನು ಕುರಿತು ಶ್ರಾದ್ಧ ಮಾಡತಕ್ಕದ್ದು. ಮಗನಾದ ಅವನಿಗೆ ಶ್ರೇಯಸ್ಸು. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಅವರ ಪೂರ್ವಾಶ್ರಮದ ಸಂನ್ಯಾಸಿ ಬದುಕಿದ್ದರೆ ಅವರು ಯಾರನ್ನು ಕುರಿತು ತರ್ಪಣ ಮಾಡುತ್ತಿದ್ದರೋ ಅವರನ್ನೂ ಪುತ್ರ, ತಾವು ಮಾಡುವ ತರ್ಪಣದ ಜೊತೆಗೆ ಸೇರಿಸಿ ಮಾಡಬೇಕು. ಸಂನ್ಯಾಸಿಗೆ ಯಾವ ಅಪೇಕ್ಷೆಯೂ ಇಲ್ಲ ಬ್ರಹ್ಮೀಭೂತನಾದ ಬಳಿಕ. ಆದರೆ ಅವನ ಅಂಶ ಅವನ ಮಗನಲ್ಲಿ ಇರುವುದರಿಂದ ಅವನನ್ನು ಕುರಿತು ಕೃತಜ್ಞತೆಯಿಂದ ಮಾಡುವುದು.

ಗಯಾ ಶ್ರಾದ್ಧ ಮಾಡಿದ ಬಳಿಕ ಮತ್ತೆ ಶ್ರಾದ್ಧ ಮಾಡುವ ಅವಶ್ಯಕತೆ ಇಲ್ಲ ಎಂಬ ಪ್ರತೀತಿ ಇದೆ. ಆದರೆ ಶಾಸ್ತ್ರಗಳು ಏನು ಹೇಳುತ್ತವೆ?
ಉತ್ತರ : ಈ ವಿಷಯ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು- ಮಹಾಧರ್ಮಿಷ್ಠರು, ಶಾಸ್ತ್ರಗಳಲ್ಲಿ ನಿಷ್ಣಾತರಾದವರು. ಅವರು ಗಯಾಶ್ರಾದ್ಧ ಮಾಡಿದ ನಂತರ ಮುಂದೆ ಶ್ರಾದ್ಧ ಮಾಡಬೇಕೇ, ಬೇಡವೇ ಎನ್ನುವ ದ್ವಂದ್ವ ಬಂದಿತು. ಈ ವಿಷಯದಲ್ಲಿ ಪರಿಪೂರ್ಣ ಜ್ಞಾನವಿರುವವರ ಬಳಿ ಸತ್ಯಾರ್ಥವನ್ನು ತಿಳಿದು ಕೊನೆಗೆ ಶ್ರಾದ್ಧ ಮಾಡಲೇ ಬೇಕೆಂದು ತೀರ್ಮಾನಿಸಿದರು.

ಗಯಾಶ್ರಾದ್ಧ ಮಾಡುವುದು ಪಿತೃಗಳು ಏನಾದರೂ ದುರ್ಗತಿ ಹೊಂದಿದ್ದರೆ ಸದ್ಗತಿ ಉಂಟು ಮಾಡುವುದ ಕ್ಕೋಸ್ಕರವಾಗಿ. ಸಾಂವತ್ಸರಿಕ ಶ್ರಾದ್ಧ ಮಾಡುವುದು ಕರ್ತೃವಿನ ಏಳಿಗೆಗೆ. ಎರಡೂ ಮಾಡಬೇಕು. ಹೊಟ್ಟೆಯಲ್ಲಿ ಹುಟ್ಟಿದ ಮಾತ್ರಕ್ಕೆ ಪುತ್ರನಾಗುವುದಿಲ್ಲ. ಪುತ್ರ ಎಂದರೆ ’ಜೀವತೋರ್ವಾಕ್ಯಕರಣಾತ್’ ಎಂದರೆ ತಂದೆ ತಾಯಿಗಳ ಜೀವಿತ ಕಾಲಪೂರ್ತಿ, ವಿಧೇಯನಾಗಿದ್ದು, ಚೆನ್ನಾಗಿ ನೋಡಿಕೊಂಡು, ಅವರ ಮಾತನ್ನು ನಡೆಸಿಕೊಡಬೇಕು. “ಗಯಾಯಾಂ ಪಿಂಡದಾನಾತ್” ಅವರ ಮೃತ್ಯುವಿನ ಅನಂತರ ಗಯೆಯಲ್ಲಿ ಪಿಂಡಪ್ರದಾನ ಮಾಡಬೇಕು.

ಗಯಾದಲ್ಲಿ ಶ್ರಾದ್ಧ

ನಂತರ “ಪ್ರತ್ಯಬ್ದಂ ಭೂರಿಭೋಜನಾತ್” ಶ್ರಾದ್ಧದ ಅಂಗವಾಗಿ ಪ್ರತಿವರ್ಷ ಭೂರಿಭೋಜನ ಮಾಡಿಸ ಬೇಕು. ಇವೆಲ್ಲ ಇದ್ದರೆ “ಪುತ್ರಸ್ಯ ಪುತ್ರಃ” ಎಂದು ಹೆಸರು. ಇವನು ಮಾಡುವುದು ಪಿತೃಮುಕ್ತಿಗಾಗಿ. ಕರ್ತೃ ಅವನ ಕೃತಜ್ಞತೆಯನ್ನು ತೋರಿಸಲು. ಮೊದಲು ಪ್ರಯಾಗದಲ್ಲಿ, ನಂತರ ಗಯೆಯಲ್ಲಿ, ಕೊನೆಯಲ್ಲಿ ಬದರೀಕ್ಷೇತ್ರದಲ್ಲಿ ಶ್ರಾದ್ಧವನ್ನು ಮಾಡಬೇಕೆಂದು ಗುರುಭಗವಂತರು ಅಪ್ಪಣೆ ಕೊಡಿಸಿದ್ದರು. ಈ ಮೂರು ಕಡೆಯಲ್ಲೂ ವಿಷ್ಣು ಪಾದವಿದೆ. ಓಂ ಭೂಃ ಭುವಃ ಸುವಃ ಬದರೀ ಕ್ಷೇತ್ರದಲ್ಲಿ ಕಪಾಲಮೋಕ್ಷ. ಬ್ರಹ್ಮಕಪಾಲವಿದೆ. ಅಲ್ಲಿ ಪಿತೃಪಿಂಡವನ್ನು ಕೊಟ್ಟ ಬಳಿಕ ಬೇರೆಕಡೆ ಮಾಡಬಾರದು. ಉತ್ತಮವಾದುದು ಹೊರಟು ಹೊಯಿತು ನೊಡಿ ಅಲ್ಲಿಗೆ. ಸಾಕ್ಷಾತ್ ಶಿವನಿಗೆ ಬ್ರಹ್ಮಕಪಾಲ ಮೋಕ್ಷವಾಯಿತು, ಈ ಬದರೀಕ್ಷೇತ್ರದಲ್ಲಿ. ಬದರಿಯಲ್ಲಿ ಪಿಂಡಪ್ರದಾನ ಮಾಡುವ ರೀತಿಯೆಂದರೆ ಬದರೀ ನಾರಾಯಣನಿಗೆ ನಿವೇದನವಾಗಿರುವ ನೈವೇದ್ಯವನ್ನು ತೆಗೆದುಕೊಂಡು ಪಿಂಡಪ್ರದಾನ ಮಾಡುವುದು.

ಪಿತೃತರ್ಪಣವನ್ನು ಮನೆಯಲ್ಲಿ ಮಾಡಬಾರದೆಂದು ಹೇಳುತ್ತಾರೆ. ಏಕೆ?
ಉತ್ತರ : ಮನೆಯಲ್ಲಿ ಮಾಡದಿರುವ ರೂಢಿ ಏಕೆ ಬಂತೆಂದರೆ ಇತರರ ದೃಷ್ಟಿ ಬೀಳದಿರಲೆಂದು. ತುಳಸೀಕಟ್ಟೆ, ಭೂಮಿಯ ಹತ್ತಿರ, ಮಹಾನದಿಗಳು, ಸರೋವರಗಳು, ಬಯಲು, ಹಲಸಿನ ಮರದ ಬುಡ, ಇವೆಲ್ಲ ಪಿತೃ ದೇವತೆಗಳಿಗೆ ಬಹಳ ಪ್ರಿಯವಾದದ್ದು.

ಮಹಾಲಯದಲ್ಲಿ ಮಧುವನ್ನು ಹೇಗೆ ಸಮರ್ಪಿಸುವುದು?
ಉತ್ತರ : ಶುದ್ಧ ಮನಸ್ಸಿನಿಂದ ಎಳ್ಳು ತಣ್ಣೀರು ಅದರ ಜೊತೆಗೆ ತರ್ಪಣ ಕೊಡುವಾಗ ಮಧುವನ್ನು ಸೇರಿಸಬಹುದು. ಅದಿಲ್ಲದಿದ್ದರೆ ಬ್ರಾಹ್ಮಣರಿಗೆ ಭೋಜನ ಬಡಿಸುವಾಗ ಅವರ ಎಲೆಗೆ ಶುದ್ಧವಾದ ಜೇನುತುಪ್ಪವನ್ನು ಬಡಿಸಬೇಕು. ಹಾಗೆಯೇ ಮಧುಬ್ರಾಹ್ಮಣ ಮಂತ್ರವನ್ನು ಅಭಿಶ್ರವಣದಲ್ಲಿ ಹೇಳಬೇಕು. ಈ ಎರೆಡು ಮಧುಗಳು ಸೇರಿ ಪಿತೃಗಳಿಗೆ ತೃಪ್ತಿ ಉಂಟಾಗುತ್ತದೆ. ಪರಮಾತ್ಮನಿಗೆ ಮಧು ಎಂದು ಹೆಸರು. ಏಕೆಂದರೆ ಅವನು ಅತ್ಯಂತ ಮಧುರನಾದವನು. ಭೋಗ್ಯನಾದವನು. ಮಹನೀಯ ನಾದವನು. ಆ ಮಧುವಿನ ಜ್ಞಾಪಕಕ್ಕೋಸ್ಕರವಾಗಿ ಈ ಮಧು. ಪಿತೃದೇವತೆಗಳಿಗೆ ಪ್ರಿಯವಾದದ್ದು.

ಲೇಖಕರು: ಆಧ್ಯಾತ್ಮ ಚಿಂತಕರು ಮತ್ತು ಪ್ರವಚನಕಾರರು,
 ಅಷ್ಟಾಂಗಯೋಗ ವಿಜ್ಞಾನಮಂದಿರಂ

ಈ ಪ್ರಶ್ನೋತ್ತರ ಲೇಖನವು ಒಟ್ಟು ಮೂರು ಭಾಗದಲ್ಲಿ ಪ್ರಕಟವಾಗಿದೆ. ಇನ್ನೆರಡು ಲೇಖನಗಳ ಲಿಂಕ್‌ ಇಲ್ಲಿದೆ.
1 . Mahalaya 2022 | ಮಹಾಲಯದ ವಿಶೇಷವೇನು? ಶ್ರಾದ್ಧಕ್ಕೆ ಪ್ರಶಸ್ತವಾದ ದಿನ ಯಾವುದು?
2 . Mahalaya 2022 | ಮಹಾಲಯದಲ್ಲಿ ತರ್ಪಣ ನೀಡುವುದು ಹೇಗೆ? ಕಾರುಣ್ಯಪಿತೃಗಳು ಎಂದರೆ ಯಾರು?

ಇದನ್ನೂ ಓದಿ | Mahalaya 2022 | ಪಿತೃಕಾರ್ಯಗಳಿಗೆ ಹೆಸರಾದ ರಾಜ್ಯದ ತೀರ್ಥಕ್ಷೇತ್ರಗಳು ಯಾವವು ಗೊತ್ತೇ?

Exit mobile version