Site icon Vistara News

Mahavir Jayanti 2023: ನೆಮ್ಮದಿಯ ಬದುಕಿಗೆ ಭಗವಾನ್‌ ಮಹಾವೀರರು ತೆರೆದಿಟ್ಟ ಪಂಚ ಸೂತ್ರಗಳು

Mahavir

#image_title

ನಿರಂಜನ್ ಜೈನ್ ಕುದ್ಯಾಡಿ, ಅಧ್ಯಾತ್ಮ ಚಿಂತಕರು

ಅದು ಕ್ರಿ.ಪೂ 599ರ ಕಾಲ. ಬಿಹಾರ ರಾಜ್ಯದ ಕುಂಡಲಪುರದ ಅರಮನೆಯಲ್ಲಿ ಸಂಭ್ರಮವೋ ಸಂಭ್ರಮ. ರಾಜಾ ಸಿದ್ಧಾರ್ಥ ಸಿಂಹಾಸನದಲ್ಲಿ ಆಸೀನನಾಗಿದ್ದ. ಅದರೆ ಆತ ಯಾವುದೋ ಅವ್ಯಕ್ತ ಭಾವದಿಂದ ಆ ದಿನದ ಸಭೆ ನಡೆಸುತ್ತಿದ್ದ. ಯಾವುದೋ ಸಂದೇಶಕ್ಕಾಗಿ ಕಾಯುತ್ತಿದ್ದ. ದಾಸಿಯೊಬ್ಬಳು ಸಂತೋಷದಿಂದ ಓಡಿ ಬಂದು ರಾಜನಿಗೆ ಸುದ್ದಿಯೊಂದನ್ನು ಅರುಹಿದಳು. ʻʻಮಹಾಪ್ರಭು ಮಹಾರಾಣಿ ತ್ರಿಶಲಾ ದೇವಿಯವರಿಗೆ ಜಗವನ್ನೇ ಬೆಳಗುವ ಪುತ್ರನ ಜನನವಾಗಿದೆ, ತಾವೇ ಮಹಾ ಭಾಗ್ಯಶಾಲಿʼ ಎಂದಳು. ದಾಸಿಗೆ ಯಥೋಚಿತ ಸತ್ಕಾರವನ್ನು ಮಾಡಿ ರಾಜ ಸಿದ್ಧಾರ್ಥ ತ್ರಿಶಲೆಯನ್ನು ಅಭಿನಂದಿಸಿ ಲೋಕೋದ್ಧಾರಕನಾದ ಪುತ್ರನಿಗೆ ಮುತ್ತಿಕ್ಕಿದನು. ಆ ಪುತ್ರನೇ ಮಹಾವೀರ.

ಸುಖಭೋಗದಲ್ಲಿ ಮಹಾವೀರನ ಉದಾಸೀನತೆ

ಸಕಲ ರಾಜಭೋಗಗಳೊಡನೆ ಮಹಾವೀರ ಬೆಳೆಯಲಾರಂಭಿಸಿದನು. ಆದರೆ ಮಹಾವೀರ ಆ ಸುಖಭೋಗಗನ್ನು ನೆಚ್ಚಿಕೊಳ್ಳದೇ ಯಾವುದೋ ಒಂದು ಅನುಭೂತಿಯ ಅನ್ವೇಷಣೆಯಲ್ಲಿರುವಂತೆ ತೋರಿತು. ಹೌದು ಯುವರಾಜ ಮಹಾವೀರ ಬಾಹ್ಯ ಸಂಪತ್ತಿಗೆ ಅಂಟಿಯೂ ಅಂಟದಂತೆ ಇದ್ದನು.

ಮಹಾವೀರ ಹೊರಗಿನ ಪ್ರಪಂಚವನ್ನು ಸೂಕ್ಷ್ಮವಾಗಿ ಅವಲೋಕಿಸಿದ. ರಾಜ್ಯದ ಆಡಳಿತವೇನೋ ಚೆನ್ನಾಗಿದೆ. ಮೇಲ್ನೋಟಕ್ಕೆ ಎಲ್ಲವೂ ಸುಂದರವಾಗಿ ಕಾಣುತ್ತಿತ್ತು. ಪ್ರಜೆಗಳೆಲ್ಲರೂ ಸುಖ ಸಂತೋಷದಿಂದ ಇರುವಂತೆ ತೋರುತ್ತಿತ್ತು. ಆದರೆ, ಎಲ್ಲೋ ಏನೋ ಒಂದು ಕೊರತೆ ಕಾಣುತ್ತಿದೆ ಎಂದೆನಿಸಿತು ಮಹಾವೀರನಿಗೆ. ಆದರೆ ಅದೇನೆಂದು ಅರ್ಥವಾಗುತ್ತಿಲ್ಲವಲ್ಲ. ಕೆಲವು ಕಡೆ ಮನುಷ್ಯರು ಅಲ್ಪ ಸುಖಕ್ಕಾಗಿ ಪಾಪ ಕ್ರಿಯೆಗಳನ್ನು ನಡೆಸುವುದನ್ನು ಕಂಡನು. ಹಾಗಾದರೆ ಜನ ಸುಖಿಯಾಗಿರುವುದು ಸುಳ್ಳೇ. ಯಜ್ಞ ಯಾಗಾದಿಗಳು ಐಹಿಕ ಸುಖಭೋಗಗಳ ಅಪೇಕ್ಷೆಗಾಗಿ ನಡೆಯುತ್ತಿತ್ತು‌. ಅದಕ್ಕಿಂತಲೂ ಘನಘೋರವಾದ ದೃಶ್ಯವನ್ನು ಕಂಡು ಮಹಾವೀರ ಹೌಹಾರಿದನು.

ಯಜ್ಞ ಯಾಗಾದಿಗಳಲ್ಲಿ ಮೂಕ ಪ್ರಾಣಿಗಳನ್ನು ಬಲಿ ಕೊಟ್ಟು ರಣಕೇಕೆ ಹಾಕುವವರನ್ನು ಕಂಡು ಮಹಾವೀರನಿಗೆ ಜಿಗುಪ್ಸೆ ಉಂಟಾಯಿತು. ಮನುಷ್ಯ ಇರುವ ಸುಖವನ್ನು ಉಂಡು ನೆಮ್ಮದಿಯಾಗಿರುವುದು ಬಿಟ್ಟು ಮತ್ತಷ್ಟೂ ಸುಖ ಬೇಕೆಂಬ ಅತಿಯಾಸೆಯಿಂದ ಮೂಕ ಪ್ರಾಣಿಗಳ ಬಲಿ ಕೊಟ್ಟು ಅಲ್ಪ ಸುಖವನ್ನು ಬಯಸುತ್ತಿರುವನೇ ಎಂದೆನಿಸಿತು ಅವನಿಗೆ. ಅಣ್ಣ ತಮ್ಮಂದಿರಿಬ್ಬರು ಆಸ್ತಿಗಾಗಿ ಕಾದಾಡುವುದನ್ನು ಕಂಡು ಒಂದೇ ತಾಯಿಯ ಮಕ್ಕಳು ಸಹೋದರರಂತೆ ಬಾಳುವುದು ಬಿಟ್ಟು ಹೊಡೆದಾಡುವ ಮಟ್ಟಕ್ಕೆ ಬಂದ ಪರಿಸ್ಥಿಯನ್ನು ನೋಡಿ ಕಂಗೆಟ್ಟನು. ಸಾಕಿ ಬೆಳೆಸಿದ ಮಕ್ಕಳೇ ವೃದ್ಧ ತಂದೆ ತಾಯಿಗಳನ್ನು ಬೀದಿ ಪಾಲು ಮಾಡಿ ಹೊರಟ ದೃಶ್ಯವನ್ನು ಕಂಡು ಮಹಾವೀರನ ಮನಸ್ಸು ಮಮ್ಮಲ ಮರುಗಿತು.

ವೈರಾಗಿಯಾದ ಮಹಾವೀರ

ಮಹಾವೀರ ಅರಮನೆಯ ಪ್ರಾಂಗಣದಲ್ಲಿ ಅತ್ತಿಂದಿತ್ತ ನಡೆದಾಡಿದ. ಈ ಎಲ್ಲಾ ಅವಾಂತರಗಳಿಗೆ ಕಾರಣವೇನು? ಮನುಷ್ಯರು ಯಾಕೆ ಸುಖವಾಗಿಲ್ಲ? ಅಲ್ಪಸುಖಕ್ಕಾಗಿ ಹಿಂಸೆ, ಸುಳ್ಳು, ಕಳ್ಳತನ, ಮೋಹಗಳಿಗೆ ಬಲಿ ಬಿದ್ದು ಮತ್ತಷ್ಟೂ ಬೇಕೆನಿಸುವ ಸುಖ ಸಾಮಗ್ರಿಗಳ ಹೊತೊರೆಯುವಿಕೆ ಕಂಡು ಚಿಂತಾಕ್ರಾಂತನಾದ. ಶಾಶ್ವತ ಸುಖವನ್ನು ನಾನೇಕೆ ಅರಸಬಾರದು ಎಂದು ಅರಮನೆಯ ಹೆಬ್ಬಾಗಿಲಿನಿಂದ ಹೊರನಡೆದು ಧ್ಯಾನಲೋಕವನ್ನು ಪ್ರವೇಶಿಸಿದ.

ಕಠಿಣ ವ್ರತ ನಿಯಮಗಳ ಮೂಲಕ ಧ್ಯಾನಾಸಕ್ತನಾದ ಮಹಾವೀರ ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹಗಳ ಧಾರಣೆ ಮಾಡಿ ತಪಗೈದನು. ಸರ್ವೋತ್ಕೃಷ್ಟ ಜ್ಞಾನವನ್ನು ಪಡೆಯಲೋಸುಗ ನಿರ್ಗ್ರಂಥನಾಗಿ ಘೋರ ಕಾನನದೊಳು ಏಕಾಂಗಿಯಾಗಿ ತಪಮುದ್ರೆಯಲ್ಲಿ ಲೀನನಾದ. ಶಾಂತ ಮುದ್ರೆಯಲ್ಲಿ ಕುಳಿತು ಶಾಶ್ವತ ಸುಖದ ಅನ್ವೇಷಣೆಗೆ ತನ್ನನ್ನು ತಾನು ತೊಡಗಿಸಿಕೊಂಡ ಪರಿಣಾಮವಾಗಿ ಕೇವಲ ಜ್ಞಾನವೆಂಬ ಮಹಾ ಜ್ಞಾನದ ದೊರೆಯಾಗಿ ಜನರಿಗೆ ಧರ್ಮೋಪದೇಶದ ಧಾರೆಯೆರೆದರು.

ಭಗವಾನ್‌ ಮಹಾವೀರ

ನೆಮ್ಮದಿಯ ಬದುಕಿಗೆ ಮಹಾವೀರರು ತೆರೆದಿಟ್ಟ ಪಂಚ ಚಿಂತನೆಗಳು

ಶಾಶ್ವತ ಸುಖ ಸಾಮ್ರಾಜ್ಯದ ದಾರಿಯನ್ನು ಅರಿತ ಭಗವಾನ್ ಮಹಾವೀರರು ಲೋಕದ ಹಿತಕ್ಕಾಗಿ ಧರ್ಮಸಭೆಯ ಪೀಠವನ್ನೇರಿದರು. ನೆರೆದಿರುವ ಸಕಲರಿಗೂ ಧರ್ಮದ ತಿರುಳನ್ನು ಪ್ರಚುರಪಡಿಸಿದರು. ಅದರಲ್ಲೂ ಬದುಕಿನ ಸುಖಮಯ ಸೂತ್ರಕ್ಕಾಗಿ ಐದು ಚಿಂತನೆಗಳನ್ನು ಪ್ರಧಾನವಾಗಿ ಸಾರಿ ಮನುಕುಲಕ್ಕೆ ಉಪಕಾರ ಮಾಡಿದರು.

  1. ಅಹಿಂಸೆ: ಮಾನವ ತನ್ನ ಸ್ವಾರ್ಥಕ್ಕಾಗಿ, ಸಂತೋಷಕ್ಕಾಗಿ ಇತರ ಜೀವಿಗಳ ಮೇಲೆ ಕ್ರೌರ್ಯವನ್ನು ಮೆರೆದು ಹಿಂಸಾ ಪ್ರವೃತ್ತಿಯವನಾಗಿ ತಾನೂ ಸುಖ ಪಡೆಯದೇ ಇತರರ ಸಂತೋಷವನ್ನು ಕಸಿದುಕೊಂಡು ಪಾಪಕೃತ್ಯವನ್ನು ಮಾಡುತ್ತಿದ್ದಾನೆ. ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಕಸಿದುಕೊಳ್ಳದೆ ನಾವು ನಿರ್ಮಲ ಭಾವದಿಂದ ಬಾಳಿ ಬದುಕುವುದೇ ಪರಮೋಚ್ಚ ಅಹಿಂಸೆಯಾಗಿದೆ. ನೀನು ಖಂಡಿತವಾಗಿ ಬದುಕಲೇ ಬೇಕು, ಆದರೆ ನೀನು ಬದುಕುವ ಭರಾಟೆಯಲ್ಲಿ ಇತರರ ಬದುಕಿಗೆ ಸಂಚಕಾರ ತರದೇ ಇದ್ದಾಗ ನಿನ್ನ ಬದುಕು ನೆಮ್ಮದಿಯಾಗಿರುತ್ತದೆ ಎಂದು ಮಹಾವೀರರು ಅಹಿಂಸಾ ಸಂದೇಶವನ್ನು ಜಗದಗಲ ಸಾರಿದರು.
  2. ಸತ್ಯ: ತನಗೆ ಹಾಗೂ ಪರರಿಗೂ ಸಂಚಕಾರ ತರುವಲ್ಲಿ ಕಾರಣೀಭೂತವಾಗಿರುವ ಸುಳ್ಳು ಮಹಾ ಪಾಪವಾಗಿದೆ. ಇದು ಒಂದು ಜೀವಿಯ ಪ್ರಾಣಕ್ಕೆ ಗೌರವಕ್ಕೆ ಧಕ್ಕೆಯುಂಟು ಮಾಡುತ್ತದೆ. ಸುಶೀಲ ಜನರ ಘಾಸಿಗೊಳಿಸುತ್ತದೆ. ಪರಸ್ಪರ ಕಲಹಕ್ಕೆ ನಾಂದಿಯಾಗುತ್ತದೆ. ಆದರೆ ಸತ್ಯ ನಡವಳಿಕೆ ಮನುಷ್ಯನನ್ನು ಔನ್ನತ್ಯಕ್ಕೇರಿಸುತ್ತದೆ. ಒಬ್ಬರನ್ನು ಮೋಸಗೊಳಿಸದೇ ಸತ್ಯದ ಮಾರ್ಗದಲ್ಲಿ ನಡೆದವನನ್ನು ಜಗತ್ತು ಕೊಂಡಾಡುತ್ತದೆ ಎಂದು ಭಗವಾನ್ ಮಹಾವೀರರು ಜಗದಗಲ ಸಾರಿದರು.
  3. ಅಚೌರ್ಯ: ವಿವೇಕವಂತರು ಚೋರತನದ ಭಾವನೆಯಿಂದ ದೂರವಿರುತ್ತಾರೆ. ಹಾಗಾಗಿ ಸಮಾಜದಲ್ಲಿ ಇವರ ಗೌರವವು ಮಾದರಿಯದ್ದಾಗಿರುತ್ತದೆ. ಕಳ್ಳತನವು ದುರಾಸೆಯನ್ನು ಹೆಚ್ಚಿಸುತ್ತದೆ. ಕಳ್ಳನಿಗೆ ಸಮಾಜದಲ್ಲಿ ಬಹಿಷ್ಕಾರವಿರುತ್ತದೆ ಹಾಗೂ ಕಳ್ಳತನಕ್ಕೆ ಶಿಕ್ಷೆಯಿರುತ್ತದೆ. ದುಃಖಕ್ಕೆ ಮೂಲವಾಗಿರುವ ಕಳ್ಳತನವು ನಮ್ಮನ್ನು ಪಾಪಕೂಪಕ್ಕೆ ತಳ್ಳುತ್ತದೆ. ಇರುವ ಸುಖ ಸಾಧನಗಳನ್ನೇ ಉಪಯೋಗಿಸಿಕೊಂಡು ಸುಖದ ಅನುಭವವನ್ನು ಪಡೆದುಕೊಂಡು ಬದುಕುವುದು ಜ್ಞಾನಿ ವ್ಯಕ್ತಿಗಳ ಲಕ್ಷಣವಾಗಿದೆ ಎಂದು ಭಗವಾನ್ ವರ್ಧಮಾನರು ಜಗದಗಲ ಸಾರಿದರು.
  4. ಬ್ರಹ್ಮಚರ್ಯ: ವಿಕಲ್ಪದ ಕಾಮವಾಸನೆಯು ವ್ಯಕ್ತಿಯ ಚಾರಿತ್ರ್ಯವನ್ನು ಹರಣ ಮಾಡುತ್ತದೆ. ಸಂಸಾರದ ಹಿತದ ದೃಷ್ಟಿಯಿಂದ ಕಾಮವು ಧರ್ಮದ ಪರಿಧಿಯೊಳಗೆ ವಿಹರಿಸುವುದನ್ನು ಬ್ರಹ್ಮಚರ್ಯ ಎನ್ನುತ್ತಾರೆ. ಇದು ಮುಂದಕ್ಕೆ ಬೆಳೆದಂತೆ ತನ್ನಾತ್ಮನಲ್ಲಿ ಲೀನವಾಗುವುದು ಪರಿಶುದ್ಧ ಬ್ರಹ್ಮಚರ್ಯವಾಗಿದೆ. ಕಾಮಾತುರರು ಕಳಂಕ ಬಾಧೆಯಿಂದ ನರಳುತ್ತಾರೆ ಹಾಗೂ ದುಃಖವನ್ನು ಪಡುತ್ತಾರೆ. ಪಶುಗಳಲ್ಲೂ ಕೂಡ ಕಾಮವು ಸಂಸಾರದ ಅಭಿವೃದ್ಧಿಗೆ ನಿಮಿತ್ತವಾಗಿದೆಯೇ ಹೊರತು ಅನ್ಯ ಉದ್ದೇಶವಿರುವುದಿಲ್ಲ. ಆದರೆ ಮನುಷ್ಯ ಪಶುವಿಗಿಂತಲೂ ಹೀನನಾಗಿ ಕಾಮ ಸೆರೆಯಲ್ಲಿ ಬಂಧಿಯಾಗಿ ನಿರ್ಲಜ್ಜನಾಗಿ ಬದುಕಲ್ಲಿ ಯಾತನೆಯನ್ನು ಅನುಭವಿಸುತ್ತಾನೆ. ಸುವಿಚಾರಗಳಿಂದ ಆವೃತ್ತವಾದ ಶೀಲತನವೇ ಬದುಕಿನ ದಾರಿಯಾಗಿದೆ ಎಂದು ಭಗವಾನ್ ಮಹಾವೀರರು ಜಗದಗಲ ಸಾರಿದರು.
  5. ಅಪರಿಗ್ರಹ: ಅಂತರಂಗದಲ್ಲಿ ಮಮತ್ವ ಭಾವ, ಸ್ನೇಹಶೀಲತೆ ಹಾಗೂ ಬಾಹ್ಯ ಸಂಪತ್ತಿನ ಅನುರಾಗವನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವುದೇ ಅಪರಿಗ್ರಹವಾಗಿದೆ. ಮನುಷ್ಯ ಎಂದೂ ಸಂತೃಪ್ತಿಯಲ್ಲ. ಎಷ್ಟು ಇದ್ದರೂ ಮತ್ತಷ್ಟೂ ಬೇಕು ಬೇಕು ಎನ್ನುವ ದುರಾಸೆ ಮನುಷ್ಯನನ್ನು ತಪ್ಪು ದಾರಿಗೆಳೆಯುತ್ತದೆ. ಪಾಪ ಕೂಪದ ವಶನಾಗಿ ಮಾಡಬಾರದ ಪಾಪಗಳನ್ನು ಮಾಡುತ್ತಾ ವಾಮಮಾರ್ಗದಿಂದ ಸಂಪತ್ತಿನ ಕ್ರೋಢೀಕರಣ ಮಾಡುತ್ತಾನೆ. ಸಮಾಜದಲ್ಲಿ ಈರ್ಷ್ಯೆ ಅಸೂಯೆಗಳಿಗೆ ಗುರಿಯಾಗಿ ಇರುವ ಸಂಪದವನ್ನು ಅನುಭವಿಸಲಾರದೇ ರೋಗರುಜಿನಗಳಿಂದ ಬಸವಳಿದು ಪರಿಗ್ರಹದ ಕ್ಷೋಭೆಯೊಳಗೆ ಜೀವನವನ್ನು ಕಳೆಯಬೇಕಾಗುತ್ತದೆ. ಬದುಕಲು ಎಷ್ಟು ಪರಿಗ್ರಹಗಳು ಬೇಕೋ ಅಷ್ಟನ್ನೇ ಒಟ್ಟುಮಾಡಿ ನೆಮ್ಮದಿಯಿಂದ ಬದುಕುವುದು ಯೋಗ್ಯರ ಲಕ್ಷಣವಾಗಿದೆ ಎಂದು ಭಗವಾನ್ ಮಹಾವೀರರು ಜಗದಗಲ ಸಾರಿದರು.

ನಿರಾತಂಕವಾಗಿರಲಿ ಜೀವನದ ಅಂತಿಮ ಮುದ್ರೆ

ಸುಖೀ ಪುರುಷನು ಧರ್ಮವಂತನಾಗಿರುತ್ತಾನೆ, ಅಹಿಂಸೆಯ ಆಭರಣವನ್ನು ತೊಟ್ಟು ಸತ್ಯದ ಅರಮನೆಯಲ್ಲಿ ಜೀವಿಸುತ್ತಾ ಮೋಸ ವಂಚನೆಯ ಅರಿವಿಲ್ಲದೇ ಬ್ರಹ್ಮಚರ್ಯದ ಸೇವನೆಯನ್ನು ಮಾಡುತ್ತಾ ಜೀವನಕ್ಕೆ ಅವಶ್ಯವಿರುವಷ್ಟೇ ಸಂಪತ್ತನ್ನು ಕೇಂದ್ರಿತಗೊಳಿಸಿ ಪಾಪರಹಿತನಾಗಿ ಬಾಳಿ ಬದುಕುವುದೇ ಯೋಗ್ಯ ಜ್ಞಾನಿಗಳ ಲಕ್ಷಣವಾಗಿದೆ. ಜೀವನದ ಉದ್ದಕ್ಕೂ ಸುವಿಚಾರಗಳನ್ನು ಚಿಂತನೆ ಮಾಡುತ್ತ ಪರೋಪಕಾರದ ವೃತ್ತಿಯನ್ನು ಮಾಡಿ ಪರರಿಗೆ ಕಂಟಕನಾಗದೇ ಇರುವುದು ಹಾಗೂ ಕರ್ಮ ಪುರುಷಾರ್ಥಗಳನ್ನು ನಿರ್ಮಲಗೊಳಿಸುತ್ತಾ ಅಂತ್ಯದಲ್ಲಿ ಮನುಷ್ಯ ಜನ್ಮದ ಸಾರ್ಥಕತೆಯೊಡನೆ ನಿಜವಾದ ಸುಖದಲ್ಲಿ ರಮಣ ಮಾಡುವುದೇ ನಮ್ಮೆಲ್ಲರ ಅಂತಿಮ ಮುದ್ರೆಯಾಗಬೇಕೆಂದು ಭಗವಾನ್ ಮಹಾವೀರರು ಜಗದಗಲ ಸಾರಿ ಶಾಶ್ವತ ಸುಖದ ಮೋಕ್ಷಪುರದ ನಿವಾಸಿಯಾದರು. ನಾವೂ ಕೂಡ ಮಹಾವೀರರಾಗೋಣ ಎಂದು ತಮ್ಮಲ್ಲಿ ಬಿನ್ನಹ ಮಾಡಿಕೊಳ್ಳುತ್ತಾ ಈ ಲೇಖನವನ್ನು ಮುಕ್ತಾಯದ ಚುಕ್ಕಿಯೊಂದಿಗೆ ಸಿಂಗರಿಸುತ್ತಿದ್ದೇನೆ.

ಇದನ್ನೂ ಓದಿ : Mahavir Jayanti 2023 : ನಯನ ಪಥಗಾಮಿ ಭವತು ಮೇ

Exit mobile version