ಡಾ. ಡಿ.ಸಿ. ರಾಮಚಂದ್ರ
ಹಿಂದೂಗಳ ಪವಿತ್ರ ಹಬ್ಬ ಮಕರ ಸಂಕ್ರಾಂತಿ (Makar Sankranti 2023). ಸೂರ್ಯನು ತನ್ನ ಪಥವನ್ನು ಬದಲಿಸುವ ಈ ದಿನವನ್ನು ದೇಶದಾದ್ಯಂತ ವಿವಿಧ ಹೆಸರುಗಳಿಂದ ಆಚರಿಸುತ್ತಾರೆ. ಈ ಹಬ್ಬವು ಸೂರ್ಯದೇವನ ಹಬ್ಬವೆಂದು ಪರಿಗಣಿಸಲಾಗಿದ್ದು, ಈ ಹಬ್ಬವನ್ನು ಪ್ರತಿವರ್ಷ ಜನವರಿ14 ಅಥವಾ 15 ರಂದು ಆಚರಣೆ ಮಾಡಲಾಗುತ್ತದೆ.
ಮಕರ ಸಂಕ್ರಾಂತಿ ಹಬ್ಬ ಒಂದು ಭೌಗೋಳಿಕ ಹಿನ್ನೆಲೆಯನ್ನು ಹೊಂದಿದೆ. ಸೂರ್ಯನು ತನ್ನ ಸ್ಥಾನವನ್ನು ಬದಲಾಯಿಸುವ ಮತ್ತು ಉತ್ತರ ಗೋಳಾರ್ಧದ ಕಡೆಗೆ ಚಲಿಸಲು ಪ್ರಾರಂಭಿಸುವ ದಿನವನ್ನು ಗುರುತಿಸುತ್ತದೆ. ಈ ದಿನಾಂಕದಿಂದ ಜನರು ಹೆಚ್ಚು ಹಗಲುಗಳು ಮತ್ತು ಕಡಿಮೆ ರಾತ್ರಿಗಳನ್ನು ಕಾಣಬಹುದು.
ದೇಶದ ವಿವಿಧ ಭಾಗಗಳಲ್ಲಿ ಹಬ್ಬವನ್ನು ವಿಭಿನ್ನರೀತಿಯಲ್ಲಿ ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಜನರು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ ಮತ್ತು ಅದನ್ನು ತಮ್ಮ ಸ್ನೇಹಿತರಿಗೆ ಹಂಚುತ್ತಾರೆ, ಈ ಮೂಲಕ ತಮ್ಮ ಸ್ನೇಹಿತರಿಗೆ ಸಿಹಿ ತಿನ್ನಲು ಮತ್ತು ಸಿಹಿಯಾಗಿ ಮಾತನಾಡಲು ಹೇಳುತ್ತಾರೆ. ಅಂದರೆ ಅವರು ಮಕರ ಸಂಕ್ರಾಂತಿಯನ್ನು ಸೌಹಾರ್ದದ ಹಬ್ಬವೆಂದು ಪರಿಗಣಿಸುತ್ತಾರೆ.
ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಗಾಳಿಪಟಗಳನ್ನು ಹಾರಿಸುವ ಮೂಲಕ ಆಚರಿಸಲಾಗುತ್ತದೆ. ವಾಸ್ತವವಾಗಿ ಇದು ಗಾಳಿಪಟ ಹಾರಿಸುವ ಹಬ್ಬ. ವಿವಿಧ ಗಾಳಿಪಟಗಳ ನಡುವಿನ ಕಾದಾಟವನ್ನು ವೀಕ್ಷಿಸಲುಜನರು ಛಾವಣಿಯ ಮೇಲೆ ಸೇರುತ್ತಾರೆ. ಒಂದು ಗಾಳಿಪಟ ಇನ್ನೊಂದನ್ನು ಕತ್ತರಿಸಿದಾಗ, ಅಲ್ಲಿನ ಜನರಿಂದ ದೊಡ್ಡ ಸಂತೋಷ ಮತ್ತು ಚಪ್ಪಾಳೆ ಮೊಳಗುತ್ತದೆ. ಈ ದಿನವು ಆಕಾಶದಲ್ಲಿ ಎಲ್ಲಾ ಬಣ್ಣಗಳು ಗಾಳಿಪಟಗಳಿಂದ ತುಂಬಿರುತ್ತದೆ. ಮುಖ್ಯವಾಗಿ ಮಕ್ಕಳು ಕೂಡ ಗಾಳಿಪಟಗಳನ್ನು ಹಾರಿಸುವ ಮೂಲಕ ಮತ್ತು ತಿಳಿ ಹಾಗೂ ಬೆಲ್ಲದಿಂದ ಮಾಡಿದ ಭಕ್ಷ್ಯಗಳನ್ನು ತಿನ್ನುವ ಮೂಲಕ ಈ ಸಂದರ್ಭವನ್ನು ಆನಂದಿಸುತ್ತಾರೆ. ಈ ಹಬ್ಬಕ್ಕೆ ಧಾರ್ಮಿಕ ಮಹತ್ವವೂ ಇದೆ. ಜನರು ಹೊಸ ಬಟ್ಟೆ ಧರಿಸಿ, ಬಡವರಿಗೆ ದಾನ ಮಾಡಿ ಜೊತೆಗೆ ಸಿಹಿ ಹಂಚಿತಿನ್ನುತ್ತಾರೆ. ಈ ದಿನದಂದು ಯುವಕರು ಮತ್ತು ಹಿರಿಯರು ಸಮಾನವಾಗಿ ಕುಳಿತು ಸಂಭ್ರಮಿಸುವ ಸುಸಂದರ್ಭವಾಗಿದೆ.
ಇದು ಋತುವಿನ ಅತ್ಯಂತ ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ. ಈ ದಿನದಂದು ನದಿಗಳಲ್ಲಿ ಪವಿತ್ರ ಸ್ನಾನ ಮತ್ತು ಸೂರ್ಯ ದೇವರಿಗೆ ಕೃತಜ್ಞತಾ ಪ್ರಾರ್ಥನೆಗಳೊಂದಿಗೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ವಾರಣಾಸಿ ಅಥವಾ ಪ್ರಯಾಗ್‌ರಾಜ್‌ನಲ್ಲಿ ಪವಿತ್ರವಾದ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ನಮ್ಮ ಎಲ್ಲಾ ಪಾಪಗಳನ್ನು ತೊಳೆದುಕೊಳ್ಳುತ್ತೇವೆ ಎಂಬ ನಂಬಿಕೆಯಿದೆ.
ಮಕರ ಸಂಕ್ರಾಂತಿಯನ್ನು ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಭಕ್ತರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ಸೂರ್ಯದೇವರನ್ನು ಪ್ರಾರ್ಥಿಸುತ್ತಾರೆ. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿಯನ್ನು ಪೊಂಗಲ್ ಎಂದು ಕರೆಯಲಾಗುತ್ತದೆ. ಪಂಜಾಬ್‌ನಲ್ಲಿ ಇದನ್ನು ಮಾಘಿ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಇದನ್ನು ಸಂಕ್ರಾಂತಿ ಎಂದು ಕರೆದು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಅಸ್ಸಾಂನಲ್ಲಿ ಇದನ್ನು ಭೋಗಾಲಿ ಬಿಹು ಎಂದು ಆಚರಿಸಲಾಗುತ್ತದೆ. ಇದೊಂದು ಸುಗ್ಗಿಯ ಹಬ್ಬವಾಗಿದೆ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಸಂಕ್ರಾಂತಿ ಅಥವಾ ಸಕ್ರತ್ ಅಥ ವಾಖಿಚಡಿ ಮತ್ತು ಟೀಲ್ ಬರ್ಫಿ ಎಂದು ಕರೆಯಲಾಗುತ್ತದೆ.
ದೆಹಲಿ ಮತ್ತು ಹರಿಯಾಣದಲ್ಲಿ ಸಹೋದರರು ವಿವಾಹಿತ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾರೆ. ಗುಜರಾತ್‌ನಲ್ಲಿ ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ. ಇದನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಇದು ಅವರಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಪತಂಗಿ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ಗುಜರಾತಿಯರು ಗಾಳಿಪಟಗಳನ್ನು ಹಾರಿಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದನ್ನು ಮಾಘ ಸಾಜಿ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಮಕ್ಕಳು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಸಂಕ್ರಾಂತಿ ನೈವೇದ್ಯಗಳೊಂದಿಗೆ ಹತ್ತಿರದ ಆತ್ಮೀಯರನ್ನು ಭೇಟಿ ಮಾಡುತ್ತಾರೆ. ಈ ದಿನ ಅನೇಕ ಮೇಳಗಳನ್ನು ನಡೆಸಲಾಗುತ್ತದೆ.
ಎಳ್ಳು ಬೀರುವುದೇಕೆ?
ಮಕರ ಸಂಕ್ರಾಂತಿಯಿಂದಾಗಿ ಸೂರ್ಯನ ಪ್ರಭಾವವು ಹೆಚ್ಚಾಗುವುದರಿಂದ ಈ ಹವಾ ಬದಲಾವಣೆಯ ಪರಿಣಾಮ ಎಳೆ ಮಕ್ಕಳ ಮೇಲೆ ಕೆಟ್ಟಪರಿಣಾಮ ಬೀರಬಹುದು. ಹಾಗಾಗಿ ಮಕ್ಕಳ ಹೃದಯ ಬಡಿತ ಮತ್ತು ರಕ್ತ ಚಲನೆಯನ್ನು ಜೀವನಾಡಿಯು ಚುರುಕುಗೊಳಿಸುತ್ತದೆ. ಇದನ್ನು ಹತೋಟಿಯಲ್ಲಿಡಲು ಮತ್ತು ಸಂಬಂಧಿಸಿದ ಗ್ರಹಚಾರಗಳು, ಕೆಟ್ಟ ಪರಿಣಾಮಗಳು ಎಲಚಿ ಹಣ್ಣು (ಬೋರೆಹಣ್ಣು) ಹಾಗೂ ಎಳ್ಳಿನ ಸ್ಪರ್ಶದಿಂದ ಕಳೆಯುತ್ತವೆ. ಮಕ್ಕಳ ಬೆಳವಣಿಗೆಗೆ ಬೇಕಾದ ಕೇಂದ್ರಗಳು ವಿಕಾಸಗೊಳ್ಳುತ್ತದೆ. ಆದುದರಿಂದ ಸಂಕ್ರಾಂತಿಯಂದು ಮಕ್ಕಳನ್ನು ಹಸೆಮೇಲೆ ಕೂರಿಸಿ, ಆರತಿ ಮಾಡಿ ಎಳ್ಳು, ಬೆಲ್ಲ, ಎಲಚಿಹಣ್ಣು, ಕಬ್ಬಿನ ಚೂರುಗಳು ಮತ್ತು ನಾಣ್ಯಗಳನ್ನು ಅವರ ತಲೆ ಮೇಲೆ ಅಭಿಷೇಕದ ರೀತಿ ಎರೆಯುತ್ತಾರೆ. ಎಲಚಿ ಹಣ್ಣಿನಲ್ಲಿ ಅನುದ್ವೇಗಪಡಿಸುವಗುಣವಿದೆ, ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯಾಗುತ್ತದೆ. ಸಂಕ್ರಾಂತಿಯ ಹೆಸರಿನಲ್ಲಿ ಹೀಗೆ ಎಳ್ಳು ಬೀರುವುದರಿಂದ ಇಷ್ಟೆಲ್ಲಾ ಉಪಯೋಗಿವಿದೆ ಎಂಬುದನ್ನು ನಮ್ಮ ಹಿರಿಯರು ಅನಾದಿಕಾಲ ದಿಂದಲೇ ಅರಿತಿದ್ದು, ಈಗಲೂ ಮುಂದುವರೆಸಿ ಕೊಂಡು ಬರುತ್ತಿರುವುದೇ ಸಂಕ್ರಾಂತಿಯ ವಿಶೇಷ.
ಮಕರ ಸಂಕ್ರಾಂತಿಯಂದು ಮಾಘ ಮೇಳವನ್ನು (ಜಾತ್ರೆ) ಭಾರತದಾದ್ಯಂತ ವಿವಿಧಯಾತ್ರಾ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಮಕರ ಸಂಕ್ರಾಂತಿಯು ಸೂರ್ಯ ದೇವರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ. ಮಕರ ಸಂಕ್ರಾಂತಿಯ ದಿನದಂದು ಸೂರ್ಯನು ತನ್ನ ಮಗನಾದ ಶನಿಯನ್ನು ಭೇಟಿ ಯಾಗುತ್ತಾನೆ. ವೈದಿಕ ಜ್ಯೋತಿಷದ ಪ್ರಕಾರ ಸೂರ್ಯ ಮತ್ತು ಶನಿ ದೇವರಿಗೆ ಆಗಿ ಬರುವುದಿಲ್ಲ. ಆದ್ದರಿಂದ ಮಕರ ಸಂಕ್ರಾಂತಿಯಂದು ಕಹಿ ಭೂತಕಾಲವನ್ನು ಮರೆತು ಹೊಸ ಆರಂಭವನ್ನು ಪ್ರಾರಂಭಿಸಲಾಗುತ್ತದೆ.
ಮಹಾಭಾರತದ ಪ್ರಕಾರ ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದರು. ಅವರು ಉತ್ತರಾಯಣ ಆರಂಭವಾದ ನಂತರವೇ ಅಂದರೆ ಸಂಕ್ರಾಂತಿಯಂದು ಇಚ್ಛಾಮರಣ ಹೊಂದಿದರು. ಉತ್ತರಾಯಣದಲ್ಲಿ ಮರಣ ಹೊಂದುವವರು ಮೋಕ್ಷ ಪಡೆಯುತ್ತಾರೆಂಬ ನಂಬಿಕೆ ಇದೆ.
ಜ್ಯೋತಿಷ ಶಾಸ್ತ್ರದ ಪ್ರಕಾರ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ ಮತ್ತು ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದಇದನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ. ಬೆಳೆಗಳ ಉತ್ತಮ ಫಸಲುಗಳನ್ನು ಪಡೆದ ಸಂತೋಷದಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ.
ಕಿಚ್ಚು ಹಾಯಿಸುವ ಆಚರಣೆ
ಹೇಳಿ ಕೇಳಿ ಸಂಕ್ರಾಂತಿ ಸುಗ್ಗಿ ಹಬ್ಬ. ರೈತಾಪಿಗಳ ಹಿಗ್ಗಿನ ಹಬ್ಬ, ಇಂಥ ಸುಗ್ಗಿಗೆ ಆತ ಆಶ್ರಯಿಸಿರುವ ಜಾನುವಾರುಗಳೇ ಮೂಲ ಕಾರಣ. ಹಾಗಾಗಿ ಹೊಲ-ಗದ್ದೆಗಳಲ್ಲಿ ಬೆಳೆ ಬೆಳೆದು ಫಸಲೆಲ್ಲಾ ಮನೆ ತುಂಬಿ ತುಳುಕುವಾಗ ತನ್ನ ಸಮಕ್ಕೂ ದುಡಿದ ಮೂಕ ಪ್ರಾಣಿಗಳಾದ ಜಾನುವಾರುಗಳನ್ನು ಅಂದು ವಿಶೇಷವಾಗಿ ಬಹಳ ಕಾಳಜಿಯಿಂದ, ಪ್ರೀತಿಯಿಂದ ಕಾಣುವುದು ಸಂಕ್ರಾಂತಿ ಕೊಟ್ಟ ಉಡುಗೊರೆಯಾಗಿದೆ. ಅಂದು ವಿಶೇಷವಾಗಿ ಹಳ್ಳಿಗಾಡುಗಳಲ್ಲಿ ಗೋ ಪೂಜೆಮಾಡಿ ಸಂಭ್ರಮಿಸುತ್ತಾರೆ.
ಅಂದು ಮುಂಜಾನೆಯೇ ಅವುಗಳನ್ನೆಲ್ಲಾ ಕೆರೆಕಟ್ಟೆಗಳಲ್ಲಿ ಚೆನ್ನಾಗಿ ಮೈ ತೊಳೆಯುತ್ತಾರೆ. ನಂತರ ಮೈಗೆಲ್ಲಾ ಅರಿಶಿಣ ಬಳಿಯುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ವಿವಿಧ ರೀತಿಯಿಂದ ಅಲಂಕಾರ ಮಾಡಿ ಊರಿನಲ್ಲೆಲ್ಲಾ ಮೆರವಣಿಗೆ ಮಾಡುತ್ತಾರೆ. ನಂತರ ಬೀದಿಯಲ್ಲಿ ಭತ್ತದ ಹುಲ್ಲನ್ನು ಹರಡಿ ಅದಕ್ಕೆ ಬೆಂಕಿಹಾಕಿ ಹಸು-ಎತ್ತುಗಳನ್ನು ಅದರ ಮೇಲೆ ಹಾರಿಸುತ್ತಾರೆ. ಇದನ್ನೇ ಕಿಚ್ಚುಹಾಯಿಸುವುದು ಎನ್ನುವುದು. ಹೀಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಹಲವಾರು ಆರೋಗ್ಯಕರ ಆಚರಣೆಗಳಿದ್ದು ವಿಶೇಷವಾಗಿ ರೈತರು ಸಂಭ್ರಮಿಸುತ್ತಾರೆ.
ಇದನ್ನೂ ಓದಿ | Vivekananda Jayanti 2023 | ವಿವೇಕಾನಂದ ಜಯಂತಿ ಅಂಗವಾಗಿ ಜ.13ರಂದು ವಿಸ್ತಾರ ನ್ಯೂಸ್‌ನಿಂದ ವಿವೇಕ ವಂದನೆ ಕಾರ್ಯಕ್ರಮ